ಸಾರಾಂಶ
ಕನ್ನಡಪ್ರಭ ವಾರ್ತೆ ಬೀಳಗಿ
ಪುನರ್ವಸತಿ ಕೇಂದ್ರದ ಎಲ್ಲ ಕಾಮಗಾರಿಗಳು ಯೋಜನಾ ವರದಿ ಪ್ರಕಾರವೇ ನಡೆಯಬೇಕು. ಗುಣಮಟ್ಟದಲ್ಲಿ ಯಾವುದೇ ರಾಜಿ ಇಲ್ಲ. ಯೋಜನಾ ವರದಿ ಪ್ರಕಾರ ಕಾಮಗಾರಿಗಳು ನಡೆಯದಿದ್ದರೆ ಪೇಮೆಂಟ್ ಮಾಡುವುದಿಲ್ಲ ಎಂದು ಗುತ್ತಿಗೆದಾರರಿಗೆ ಹಟ್ಟಿ ಚಿನ್ನದ ಗಣಿ ನಿಗಮದ ಅಧ್ಯಕ್ಷರು ಹಾಗೂ ಶಾಸಕ ಜೆ.ಟಿ. ಪಾಟೀಲ ತಾಕೀತು ಮಾಡಿದರು.ತಾಲೂಕಿನ ಕೊಪ್ಪ (ಎಸ್.ಕೆ.) ಗ್ರಾಮದ ಪುನರ್ವಸತಿ ಕೇಂದ್ರದಲ್ಲಿ ಜಲ ಸಂಪನ್ಮೂಲ ಇಲಾಖೆ, ಕೃಷ್ಣಾ ಮೇಲ್ದಂಡೆ ಯೋಜನೆ, ಪುನರ್ವಸತಿ ಉಪವಿಭಾಗ ಬೀಳಗಿಯಿಂದ ಮಂಜೂರಾದ ಯುಕೆಪಿ ಹಂತ 2, 3, 5ರ ಅನುದಾನದ ಅಡಿಯಲ್ಲಿ ಆಂತರಿಕ ರಸ್ತೆಗಳ ಬದಿ ಚರಂಡಿ, ಅಡ್ಡ ಚರಂಡಿ ನಿರ್ಮಾಣ ಕಾಮಗಾರಿಗೆ ಭೂಮಿಪೂಜೆ ನೆರವೇರಿಸಿ ಮಾತನಾಡಿದ ಅವರು, ಬೇಸಿಗೆಯಿಂದಾಗಿ ಬಿಸಿಲಿನ ಪ್ರಖರತೆ ಹೆಚ್ಚಿದೆ. ಒಂದು ಪಾಳೀಯ ನೀರು ಹೊಡೆಯುವುದನ್ನು ತಪ್ಪಿಸಿದರೂ ಗುಣಮಟ್ಟದ ಕಾಮಗಾರಿ ಆಗುವುದಿಲ್ಲ. ಇದರ ಪರಿಣಾಮ ಕಾಮಗಾರಿಗಳು ತಾಳಿಕೆ ಬಾಳಿಕೆ ಬರುವುದಿಲ್ಲ. ಯಾವುದೇ ಕಾರಣಕ್ಕೂ ಕಳಪೆ ಕಾಮಗಾರಿಗಳಿಗೆ ಅಧಿಕಾರಿಗಳು ಆಸ್ಪದ ಕೊಡಬಾರದು.ಪುನರ್ವಸತಿ ಕೇಂದ್ರದ ಕಾಮಗಾರಿಗಳು ನಡೆಯುವ ಸ್ಥಳಕ್ಕೆ ಗ್ರಾಮಸ್ಥರು ಭೇಟಿ ನೀಡಿ ಪರಿಶೀಲಿಸಬೇಕು. ಅಲ್ಲದೇ ಮುಂದೆ ನಿಂತು ಉತ್ತಮ ಗುಣಮಟ್ಟದ ಕಾಮಗಾರಿ ಮಾಡಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.
ಕೃಷ್ಣಾ ಮೇಲ್ದಂಡೆ ಯೋಜನೆ, ಪುನರ್ವಸತಿ ಉಪವಿಭಾಗ ಬೀಳಗಿಯ ಎಇಇ ಕಲ್ಲೊಳೇಶ ಹಾದಿಮನಿ ಮಾತನಾಡಿ, ಗ್ರಾಮದ ಪುನರ್ವಸತಿಗಾಗಿ 184 ಎಕರೆ ಪ್ರದೇಶ ಗುರ್ತಿಸಲಾಗಿದೆ. ಸರ್ಕಾರ ಬಂದ ಬಳಿಕ ಪುನರ್ವಸತಿ ಕೇಂದ್ರಗಳ ಕಾಮಗಾರಿಗಳಿಗೆ ಆದ್ಯತೆ ಮೇರೆಗೆ ಒತ್ತು ಕೊಟ್ಟು ಅನುದಾನ ಬಿಡುಗಡೆ ಮಾಡಿದ್ದರಿಂದ ಪ್ರಸ್ತುತ ಆಂತರಿಕ ರಸ್ತೆ, ಚರಂಡಿಗಳು, ರಸ್ತೆಗೆ ಮೊಹರಂ ಹಾಕುವ ಕಾಮಗಾರಿಗಳಿಗೆ ಶಾಸಕರು ಚಾಲನೆ ನೀಡಿದ್ದಾರೆ. ಈ ಕಾಮಗಾರಿಗಳು ಮುಗಿದ ಬಳಿಕ ನೀರು ಸರಬರಾಜು, ರಸ್ತೆ ಡಾಂಬರೀಕರಣ, ವಿದ್ಯುತ್ ಪೂರೈಕೆ ಕಾಮಗಾರಿಗಳು ನಡೆಯಲಿವೆ. ಗ್ರಾಮದ ಜನರು ಕಾಮಗಾರಿಗಳ ಮೇಲೆ ನಿಗಾವಹಿಸುವುದರಿಂದ ಗುತ್ತಿಗೆದಾರರ ತಪ್ಪು ಗಮನಕ್ಕೆ ಬರಲು ಸಾಧ್ಯವಾಗುತ್ತದೆ ಎಂದರು.ಈ ವೇಳೆ ಜಿಲ್ಲಾ ಪಂಚಾಯತಿ ಮಾಜಿ ಅಧ್ಯಕ್ಷ ಎಂ.ಎಲ್.ಕೆಂಪಲಿಂಗಣ್ಣವರ, ಎಲ್.ಜಿ.ಮಲಘಾಣ, ಪಾಂಡು ಪೊಲೀಸ್, ರುದ್ರಗೌಡ ಗೌಡರ, ಎಸ್.ಡಿ.ಗೌಡರ, ಎಸ್.ವಿ.ಜೀರಗಾಳ, ಎಇ ಎಸ್.ಬಿ.ಶೇಗುಣಶಿ, ಕೃಷ್ಣಾ ಮಲಘಾಣ, ಹನಮಂತ ಬಿರೋಜಿ, ಮಲ್ಲಣ್ಣ ಪರಡ್ಡಿ, ಹನಮಂತ ಆಸೋದಿ, ಬಿ.ಜಿ.ಮಲಘಾಣ, ಎಂ.ಎಚ್.ಕೆಂಪಲಿಂಗಣ್ಣವರ, ಎಚ್.ಎಸ್.ಪಾಟೀಲ, ಎಂ.ವಿ.ಹೋಳಿ, ಪಿ.ಬಿ.ಮೇಟಿ, ರಜಾಕ್ ನೂರಪ್ಪನವರ, ಬಿ.ಟಿ.ಪಾಟೀಲ, ನಾರಾಯಣ ಕಂಬಾರ ಮತ್ತಿತರಿದ್ದರು. ಅಮರ ಪಾಟೀಲ ನಿರೂಪಿಸಿದರು. ಈರಣ್ಣ ಒಣರೊಟ್ಟಿ ಸ್ವಾಗತಿಸಿದರು. ಎಚ್.ಆರ್.ಚಿಂಚಲಿ ವಂದಿಸಿದರು.ಯಾವುದೇ ಕಾರಣಕ್ಕೂ ಕಳಪೆ ಕಾಮಗಾರಿಗಳಿಗೆ ಅಧಿಕಾರಿಗಳು ಆಸ್ಪದ ಕೊಡಬಾರದು. ಪುನರ್ವಸತಿ ಕೇಂದ್ರದ ಕಾಮಗಾರಿಗಳು ನಡೆಯುವ ಸ್ಥಳಕ್ಕೆ ಗ್ರಾಮಸ್ಥರು ಭೇಟಿ ನೀಡಿ ಪರಿಶೀಲಿಸಬೇಕು. ಅಲ್ಲದೇ ಮುಂದೆ ನಿಂತು ಉತ್ತಮ ಗುಣಮಟ್ಟದ ಕಾಮಗಾರಿ ಮಾಡಿಸಿಕೊಳ್ಳಬೇಕು.
- ಜೆ.ಟಿ.ಪಾಟೀಲ, ಶಾಸಕರು.