ಸಂವಿಧಾನ ವಿರೋಧಿ ಹೇಳಿಕೆ ಖಂಡಿಸಿ ಪ್ರತಿಭಟನೆ

| Published : Mar 15 2024, 01:21 AM IST

ಸಾರಾಂಶ

ಪ್ರತಿಭಟನಾ ಮೆರವಣಿಗೆ ನಡೆಸಿದ ದಲಿತ ಸಂಘಟನೆಗಳ ಒಕ್ಕೂಟದ ಮುಖಂಡರು ಹಾಗೂ ಸದಸ್ಯರು ಗಡಗಿಚನ್ನಪ್ಪ ವೃತ್ತದ ಮೂಲಕ ಜಿಲ್ಲಾಧಿಕಾರಿ ಕಚೇರಿಗೆ ತೆರಳಿ ಮನವಿ ಸಲ್ಲಿಸಿದರು.

ಬಳ್ಳಾರಿ: ಸಂವಿಧಾನ ಬದಲಾಯಿಸುವುದಾಗಿ ಹೇಳಿಕೆ ನೀಡುತ್ತಿರುವ ಸಂಸದ ಅನಂತಕುಮಾರ ಹೆಗಡೆ ಅವರನ್ನು ಕೂಡಲೇ ಬಂಧಿಸಬೇಕು ಎಂದು ಆಗ್ರಹಿಸಿ ದಲಿತ ಸಂಘಟನೆಗಳ ಒಕ್ಕೂಟದಿಂದ ನಗರದಲ್ಲಿ ಗುರುವಾರ ಪ್ರತಿಭಟನೆ ಹಮ್ಮಿಕೊಳ್ಳಲಾಯಿತು.ಸಂವಿಧಾನ ವಿರೋಧಿ ಹೇಳಿಕೆಗಳನ್ನು ನೀಡುತ್ತಿರುವ ಸಂಸದ ಅನಂತಕುಮಾರ ಹೆಗಡೆ ಅವರಿಗೆ ಚುನಾಯಿತ ಪ್ರತಿನಿಧಿಯಾಗುವ ಯಾವುದೇ ಅರ್ಹತೆ ಇಲ್ಲ. ಸಂವಿಧಾನದ ಬಗ್ಗೆ ಮಾತನಾಡುವ ನೈತಿಕತೆಯೂ ಅವರಿಗಿಲ್ಲ. ಬಿಜೆಪಿ ನಾಯಕರು ಸಹ ಸಂಸದರ ಸಂವಿಧಾನ ವಿರೋಧಿ ಹೇಳಿಕೆ ಖಂಡಿಸುತ್ತಿಲ್ಲ ಎಂದು ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು.ಚುನಾಯತ ಪ್ರತಿನಿಧಿಯಾಗಿ ಸಂಸತ್ ನಲ್ಲಿ ಸಂವಿಧಾನದ ಹೆಸರಿನಲ್ಲಿ ಪ್ರಮಾಣ ಮಾಡಿರುವ ಸಂಸದ ಅನಂತಕುಮಾರ ಹೆಗಡೆ ಅವರು, ಪದೇಪದೇ ಸಂವಿಧಾನ ಬದಲಾಯಿಸುವ ಹೇಳಿಕೆ ನೀಡುತ್ತಿದ್ದಾರೆ. ಈಚೆಗಷ್ಟೇ ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ 400 ಸ್ಥಾನಗಳಲ್ಲಿ ಗೆಲುವು ಪಡೆದರೆ, ಸಂವಿಧಾನ ಬದಲಾಯಿಸಲಾಗುವುದು ಎಂದು ಹೇಳಿದ್ದಾರೆ. ಈ ರೀತಿಯ ಹೇಳಿಕೆಗಳನ್ನು ನೀಡುವ ಮೂಲಕ ಸಮಾಜದಲ್ಲಿ ಅಶಾಂತಿಯನ್ನು ಸೃಷ್ಟಿಸುತ್ತಿದ್ದಾರೆ. ಸಮಾಜದಲ್ಲಿ ಶಾಂತಿ ಕಾಪಾಡಲು ಕೂಡಲೇ ಸಂಸದರನ್ನು ಬಂಧಿಸಬೇಕು. ಬಿಜೆಪಿಯ ಹೈಕಮಾಂಡ್ ನಾಯಕರು ಹೆಗಡೆ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.ನಗರದಲ್ಲಿ ಪ್ರತಿಭಟನಾ ಮೆರವಣಿಗೆ ನಡೆಸಿದ ದಲಿತ ಸಂಘಟನೆಗಳ ಒಕ್ಕೂಟದ ಮುಖಂಡರು ಹಾಗೂ ಸದಸ್ಯರು ಗಡಗಿಚನ್ನಪ್ಪ ವೃತ್ತದ ಮೂಲಕ ಜಿಲ್ಲಾಧಿಕಾರಿ ಕಚೇರಿಗೆ ತೆರಳಿ ಮನವಿ ಸಲ್ಲಿಸಿದರು. ದಲಿತ ಸಂಘರ್ಷ ಸಮಿತಿಯ ರಾಜ್ಯ ಸಂಘಟನಾ ಸಂಚಾಲಕ ಎ.ಮಾನಯ್ಯ, ಸಿಪಿಎಂ ಪಕ್ಷದ ಜಿಲ್ಲಾ ಮುಖಂಡ ವಿ.ಎಸ್.ಶಿವಶಂಕರ್, ಮುಖಂಡರಾದ ಬಿಸಿಲಹಳ್ಳಿ ರಮೇಶ್, ಗೋನಾಳ್ ಅಂಜಿನಪ್ಪ, ಮಲ್ಲಪ್ಪ, ದುರುಗಪ್ಪ ತಳವಾರ್, ಭೀಮಾ ಶಂಕರ್ ಸೇರಿದಂತೆ ಸಂಘಟನೆಯ ಜಿಲ್ಲಾ ಹಾಗೂ ತಾಲೂಕು ಸಮಿತಿ ಸದಸ್ಯರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.