ಪಟ್ಟಣದ ಜನರ ಪ್ರಮುಖ ಬೇಡಿಕೆಯಾಗಿದ್ದ ಮುಖ್ಯರಸ್ತೆ ಅಗಲೀಕರಣ ಕಾಮಗಾರಿಗೆ ಟೆಂಡರ್ ಪ್ರಕ್ರಿಯೆ ಪೂರ್ಣಗೊಂಡಿದ್ದು, ಕಾಮಗಾರಿಗೆ ಭೂಮಿಪೂಜೆ ನೆರವೇರಿಸಲಾಗಿದೆ. ಕಾಮಗಾರಿ ಗುಣಮಟ್ಟದಲ್ಲಿ ಯಾವುದೇ ರಾಜಿ ಇಲ್ಲ, ಕಳಪೆಯಾದರೆ ಹೋರಾಟ ನಿಶ್ಚಿತ ಎಂದು ಹೋರಾಟ ಸಮಿತಿ ಅಧ್ಯಕ್ಷ ಸುರೇಶ ಛಲವಾದಿ ಎಚ್ಚರಿಸಿದರು.
ಬ್ಯಾಡಗಿ: ಪಟ್ಟಣದ ಜನರ ಪ್ರಮುಖ ಬೇಡಿಕೆಯಾಗಿದ್ದ ಮುಖ್ಯರಸ್ತೆ ಅಗಲೀಕರಣ ಕಾಮಗಾರಿಗೆ ಟೆಂಡರ್ ಪ್ರಕ್ರಿಯೆ ಪೂರ್ಣಗೊಂಡಿದ್ದು, ಕಾಮಗಾರಿಗೆ ಭೂಮಿಪೂಜೆ ನೆರವೇರಿಸಲಾಗಿದೆ. ಕಾಮಗಾರಿ ಗುಣಮಟ್ಟದಲ್ಲಿ ಯಾವುದೇ ರಾಜಿ ಇಲ್ಲ, ಕಳಪೆಯಾದರೆ ಹೋರಾಟ ನಿಶ್ಚಿತ ಎಂದು ಹೋರಾಟ ಸಮಿತಿ ಅಧ್ಯಕ್ಷ ಸುರೇಶ ಛಲವಾದಿ ಎಚ್ಚರಿಸಿದರು.
ಪಟ್ಟಣದ ಪ್ರವಾಸಿಮಂದಿರದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಮುಖ್ಯರಸ್ತೆ ಕುರಿತು ನಡೆದಿರುವ ಹೋರಾಟ ಇದು ಕೇವಲ ರಸ್ತೆ ಅಗಲೀಕರಣಕ್ಕಾಗಿ ನಡೆದ ಹೋರಾಟವಲ್ಲ, ಬದಲಾಗಿ ಪಟ್ಟಣದ ಸಮಗ್ರ ಅಭಿವೃದ್ಧಿ ಮೇಲಿರುವ ಜನಪರ ಕಾಳಜಿ ಹಾಗೂ ಇಲ್ಲಿನ ಜನರ ಬಹು ದಿನಗಳ ಕನಸಿನ ಪ್ರತಿಬಿಂಬ ಎಂದರು.ಸಮರ್ಪಕ ಕಾಮಗಾರಿ: ಕಾಮಗಾರಿ ವೇಳೆ ಗುತ್ತಿಗೆದಾರರು ಯಾರದೇ ಒತ್ತಡಕ್ಕೆ ಮಣಿಯದೇ ಎಸ್ಟಿಮೇಟ್ ಹಾಗೂ ತಾಂತ್ರಿಕ ಮಾನದಂಡಗಳ ಪ್ರಕಾರ ಗುಣಮಟ್ಟದ ಕಾಮಗಾರಿ ಕೈಗೊಳ್ಳಬೇಕು ಇದರ ಭಾಗವಾಗಿ ಕೈಗೊಳ್ಳಬೇಕಿರುವ ಒಳಚರಂಡಿ ನಿರ್ಮಾಣ, ಕುಡಿಯುವ ನೀರಿನ ಪೈಪ್‌ಲೈನ್ ಸೇರಿದಂತೆ ಸಂಬಂಧಿತ ಕಾಮಗಾರಿ ಸಮರ್ಪಕವಾಗಿ ಹಾಗೂ ವೈಜ್ಞಾನಿಕವಾಗಿ ಪೂರ್ಣಗೊಳಿಸಬೇಕು, ಎಲ್ಲ ಕಾಮಗಾರಿಗಳನ್ನು ಸಮನ್ವಯದಿಂದ ಪೂರ್ಣಗೊಳಿಸಿ ಸಾರ್ವಜನಿಕರಿಗೆ ದೀರ್ಘಕಾಲ ಅನುಕೂಲವಾಗುವಂತೆ ರಸ್ತೆ ನಿರ್ಮಾಣ ಮಾಡಬೇಕು ಎಂದರು.
ಕಳಪೆಯಾದರೆ ಹೋರಾಟ: ಕಾಮಗಾರಿ ಕೇವಲ ಒಂದು ರಸ್ತೆ ನಿರ್ಮಾಣದ ಯೋಜನೆಯಲ್ಲ. ಇದರಲ್ಲಿ ಬ್ಯಾಡಗಿ ಜನರ ಭಾವನೆಗಳು ಹಾಗೂ 15 ವರ್ಷಗಳ ನಿರೀಕ್ಷೆ ಅಡಗಿದೆ, ಆದ್ದರಿಂದ ಕಾಮಗಾರಿ ಕಳಪೆಯಾಗಿದ್ದರೆ ಅಥವಾ ಅಂದಾಜು ಪಟ್ಟಿಯಲ್ಲಿರುವ ಕೆಲಸ ಕೈಬಿಟ್ಟರೆ ಯಾವುದೇ ಕಾರಣಕ್ಕೂ ಹೋರಾಟ ಸಮಿತಿ ಸುಮ್ಮನಿರಲು ಸಾಧ್ಯವಿಲ್ಲ, ಅಗತ್ಯವಿದ್ದರೆ ಮತ್ತೆ ಹೋರಾಟದ ಹಾದಿ ಹಿಡಿಯಬೇಕಾಗುತ್ತದೆ ಎಂದು ಎಚ್ಚರಿಸಿದರು.ನಕಲಿಗಳ ಹಾವಳಿ ಎಚ್ಚರ: ಹೋರಾಟ ಸಮಿತಿಯ ಗೌರವಾಧ್ಯಕ್ಷ ಗಂಗಣ್ಣ ಎಲಿ ಮಾತನಾಡಿ, ಮುಖ್ಯರಸ್ತೆ ಅಗಲೀಕರಣ ಕಾಮಗಾರಿ ಗುಣಮಟ್ಟದ ವಿಚಾರದಲ್ಲಿ ಯಾವುದೇ ರಾಜೀಇಲ್ಲ, ಸರ್ಕಾರದ ಎಸ್ಟಿಮೇಟ್‌ನಲ್ಲಿ ನಮೂದಿಸಿರುವ ಎಲ್ಲ ಕಾಮಗಾರಿ ಅಚ್ಚುಕಟ್ಟಾಗಿ ಹಾಗೂ ಗುಣಮಟ್ಟದಿಂದ ಪೂರ್ಣಗೊಳಿಸಬೇಕು, ಕಾಮಗಾರಿ ವೇಳೆ ಗುತ್ತಿಗೆದಾರರಿಗೆ ಯಾರಾದರೂ ಕಾಮಗಾರಿ ನಡೆಸಲು ಅಡ್ಡಿಪಡಿಸುವುದು, ಹಣಕ್ಕೆ ಬೇಡಿಕೆ ಇಡುವುದು ಅಥವಾ ತಮ್ಮನ್ನು ಪತ್ರಕರ್ತರು, ಹೋರಾಟಗಾರರು, ವಿವಿಧ ಸಂಘಟನೆ ಹೆಸರಿನಿಂದ ಪರಿಚಯಿಸಿಕೊಂಡು ಒತ್ತಡ ಹೇರುವುದು ಕಂಡುಬಂದಲ್ಲಿ ಅಂತಹ ವಿಚಾರವನ್ನು ತಕ್ಷಣವೇ ಹೋರಾಟ ಸಮಿತಿಯ ಗಮನಕ್ಕೆ ತನ್ನಿ, ಅಗತ್ಯವಿದ್ದರೆ ಅಂತಹ ವ್ಯಕ್ತಿಗಳ ವಿರುದ್ಧ ಕಾನೂನು ಹೋರಾಟಕ್ಕೆ ನಾವು ಸಿದ್ಧರಾಗಿದ್ದೇವೆ ಎಂದರು.
ರಸ್ತೆ ಇನ್ನೊಬ್ಬರಿಗೆ ಮಾದರಿಯಾಗಲಿ: ವಿನಾಯಕ ಕಂಬಳಿ ಮಾತನಾಡಿ, ಬ್ಯಾಡಗಿ ಪಟ್ಟಣಕ್ಕೆ ಮಾದರಿಯಾಗುವ ರೀತಿಯಲ್ಲಿ ರಸ್ತೆ ಹಾಗೂ ಸಮಗ್ರ ಮೂಲಸೌಕರ್ಯ ನಿರ್ಮಾಣ ಮಾಡಬೇಕು, ಕಾಮಗಾರಿ ಪೂರ್ಣಗೊಳ್ಳುವವರೆಗೆ ಸಾರ್ವಜನಿಕರಿಗೆ ತೊಂದರೆಯಾಗದಂತೆ ಸಂಚಾರ ನಿರ್ವಹಣೆ, ಸುರಕ್ಷತಾ ಕ್ರಮಗಳು, ಧೂಳು ನಿಯಂತ್ರಣ ಹಾಗೂ ಕಾಮಗಾರಿ ಪ್ರದೇಶದಲ್ಲಿ ಸೂಕ್ತ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಬೇಕು, ಕಾಮಗಾರಿ ಮುಗಿಯುವವರೆಗೂ ಹೋರಾಟ ಸಮಿತಿ ಹಾಗೂ ಸಾರ್ವಜನಿಕರು ಗುಣಮಟ್ಟದ ಮೇಲೆ ನಿಗಾ ವಹಿಸಲಿದ್ದಾರೆ ಎಂದರು.ಮಾತು ಉಳಿಸಿಕೊಳ್ಳಿ:ಹೋರಾಟ ಸಮಿತಿ ಉಪಾಧ್ಯಕ್ಷ ಹರೀಶಕುಮಾರ ರಿತ್ತಿ ಮಾತನಾಡಿ, ಮುಖ್ಯರಸ್ತೆ ವರ್ತಕರ ಸಹಕಾರದಿಂದ ರಸ್ತೆ ನಿರ್ಮಾಣವಾಗುತ್ತಿದೆ ಇದನ್ನರಿತು, ಭೂಮಿಪೂಜೆ ವೇಳೆ ಮಾತು ಕೊಟ್ಟಂತೆ ಸಂಪೂರ್ಣವಾಗಿ ಜಾಗ ಕಳೆದುಕೊಂಡವರಿಗೆ ಪುರಸಭೆ ವತಿಯಿಂದ ಮಳಿಗೆ ಹಾಗೂ ಜಾಗ ಕೊಡುವುದಕ್ಕೆ ಮೊದಲು ಆದ್ಯತೆ ಕೊಡಬೇಕು ಎಂದು ಆಗ್ರಹಿಸಿದರು. ಈ ಸಂದರ್ಭದಲ್ಲಿ ಫರೀದಾಬಾನು ನದೀಮುಲ್ಲಾ, ಪಾಂಡುರಂಗ ಸುತಾರ, ಮಹೇಶ ಗಿರಣಿ, ಪ್ರವೀಣ ಶಿಲ್ಪಿ, ಲಕ್ಷ್ಮಣ ಆಯನೂರ, ಮಂಜುನಾಥ ಮುದುಕಮ್ಮನವರ ಸೇರಿದಂತೆ ಹೋರಾಟ ಸಮಿತಿಯ ಹಲವು ಸದಸ್ಯರು ಹಾಗೂ ಸಾರ್ವಜನಿಕರು ಉಪಸ್ಥಿತರಿದ್ದರು.