ಸಾರಾಂಶ
ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಖಂಡ್ರೆ ಹೇಳಿಕೆ
ಕನ್ನಡಪ್ರಭ ವಾರ್ತೆ ಭಾಲ್ಕಿಬಸವಣ್ಣನವರ ಕರ್ಮಭೂಮಿ ಬಸವಕಲ್ಯಾಣದಲ್ಲಿ ನಿರ್ಮಾಣವಾಗುತ್ತಿರುವ ಆಧುನಿಕ ಅನುಭವ ಮಂಟಪ ಕಟ್ಟಡಕ್ಕೆ ಸರ್ಕಾರದಲ್ಲಿ ಅನುದಾನದ ಕೊರತೆಯಿಲ್ಲ. ಕಾಲ ಮಿತಿಯಲ್ಲಿ ಕಟ್ಟಡ ಕಾಮಗಾರಿ ಪೂರ್ಣಗೊಳ್ಳಲಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಖಂಡ್ರೆ ಹೇಳಿದರು.
ಇಲ್ಲಿನ ಚನ್ನಬಸವಾಶ್ರಮ ಪರಿಸರದಲ್ಲಿ ಹಿರೇಮಠ ಸಂಸ್ಥಾನದ ವತಿಯಿಂದ ನಡೆದ ಶತಾಯಷಿ ಡಾ.ಚನ್ನಬಸವ ಪಟ್ಟದ್ದೇವರ 135ನೇ ಜಯಂತ್ಯುತ್ಸವ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಈ ಹಿಂದೆ ಕಾಂಗ್ರೆಸ್ ಸರ್ಕಾರದ ಆಡಳಿತಾವದಿಯಲ್ಲಿ ಅನುಭವ ಮಂಟಪಕ್ಕೆ ಗೊರುಚ ನೇತೃತ್ವದಲ್ಲಿ ನೀಲ ನಕಾಶೆ ಸಿದ್ಧಪಡಿಸಿ ಸುಮಾರು ₹650 ಕೋಟಿ ವೆಚ್ಚದ ಪ್ರಸ್ತಾವನೆ ಸಲ್ಲಿಸಲಾಗಿತ್ತು. ಈಗಾಗಲೇ ₹300 ಕೋಟಿ ಅನುದಾನ ಬಿಡುಗಡೆಯಾಗಿದ್ದು, ಕಟ್ಟಡ ಕಾಮಗಾರಿ ಅರ್ಧ ಪೂರ್ಣಗೊಂಡಿದೆ ಎಂದರು.ಇತ್ತೀಚೆಗೆ ಕಲಬುರಗಿಯ ಜಯದೇವ ಆಸ್ಪತ್ರೆ ಕಟ್ಟಡ ಉದ್ಘಾಟನೆಗೆ ಸಿಎಂ ಸಿದ್ದರಾಮಯ್ಯ ಆಗಮಿಸಿದ ಸಂದರ್ಭದಲ್ಲಿ ಅನುಭವ ಮಂಟಪ ಕಟ್ಟಡ ಕಾಮಗಾರಿಗೆ ಉಳಿದ ಅನುದಾನ ಬಿಡುಗಡೆಗೆ ಮನವಿ ಮಾಡಲಾಗಿದೆ. ಸಿಎಂ ಅವರು ಕಾಲ ಕಾಲಕ್ಕೆ ಅನುದಾನ ಬಿಡುಗಡೆ ಮಾಡುವುದಾಗಿ ಭರವಸೆ ನೀಡಿದ್ದಾರೆ ಎಂದು ತಿಳಿಸಿದರು.
ಈ ಆಧುನಿಕ ಅನುಭವ ಮಂಟಪ ಕಟ್ಟಡ ನಿರ್ಮಾಣದಲ್ಲಿ ನಾಡೋಜ ಡಾ.ಬಸವಲಿಂಗ ಪಟ್ಟದ್ದೇವರ, ಗುರುಬಸವ ಪಟ್ಟದ್ದೇವರ ಶ್ರಮವೂ ದೊಡ್ಡದಿದೆ. ಅಗತ್ಯ ಸಂದರ್ಭದಲ್ಲಿ ಇರುವ ನ್ಯೂನತೆ ಸರಿಪಡಿಸುವುದರ ಜತೆಗೆ ಸೂಕ್ತ ಸಲಹೆ ಸೂಚನೆ ನೀಡುತ್ತ ಬಂದಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.ಯುವ ಮುಖಂಡ ಚನ್ನಬಸವಣ್ಣ ಬಳತೆ ಬಸವ ಗುರುವಿನ ಪೂಜೆ ನೆರವೇರಿಸಿದರು. ಡಾ.ಜಿ.ವಿ.ಮಂಜುನಾಥ ಅನುಭಾವ ನೀಡಿದರು. ಬಸವಕಲ್ಯಾಣ ತಾಲೂಕು ಶರಣ ಸಾಹಿತ್ಯ ಪರಿಷತ್ತು ಅಧ್ಯಕ್ಷ ಗುರುನಾಥ ಗಡ್ಡೆ ಅಧ್ಯಕ್ಷತೆ ವಹಿಸಿದರು.
ನಾಡೋಜ ಡಾ.ಬಸವಲಿಂಗ ಪಟ್ಟದ್ದೇವರು, ಗುರುಬಸವ ಪಟ್ಟದ್ದೇವರು ಸಾನ್ನಿಧ್ಯ ವಹಿಸಿದ್ದರು. ಹೆಡಗಾಪೂರ ಮಠದ ದಾರುಕಲಿಂಗ ಶಿವಾಚಾರ್ಯರು, ಕೊಡ್ಲಾ ಮಠದ ಶಂಭುಲಿಂಗೇಶ್ವರ ಸ್ವಾಮೀಜಿ, ಕೊಡ್ಲಾ ಮಠದ ಮಹಾದೇವಮ್ಮ ತಾಯಿ, ಚಾಂಬೋಳದ ಅಭಿನವ ರುದ್ರಮುನಿ ಪಟ್ಟದ್ದೇವರು, ಶಿವಾನಂದ ಸ್ವಾಮಿ, ಮಹಾಲಿಂಗ ಸ್ವಾಮಿ, ಬಸವಲಿಂಗ ಸ್ವಾಮಿ, ಪ್ರಭುಲಿಂಗ ಸ್ವಾಮಿ, ಶಿವಬಸವ ಸ್ವಾಮಿ, ಶಂಕರಲಿಂಗ ಸ್ವಾಮಿ ಸಮ್ಮುಖ ವಹಿಸಿದರು.ಕಾರ್ಯಕ್ರಮದಲ್ಲಿ ಜಯರಾಜ ಖಂಡ್ರೆ, ಬಸವರಾಜ ಧನ್ನೂರು, ಚಂದ್ರಶೇಖರ ಹೆಬ್ಬಾಳೆ, ಚಂದ್ರಶೇಖರ ಬನ್ನಾಳೆ, ರಾಜಕುಮಾರ ಪಾಟೀಲ್ ಇದ್ದರು.