ಸಾರಾಂಶ
ಸೊರಬ ಪಟ್ಟಣದ ಸಾರ್ವಜನಿಕ ಆಸ್ಪತ್ರೆಯಲ್ಲಿ ವಿಶ್ವ ಆತ್ಮಹತ್ಯೆ ತಡೆಗಟ್ಟುವ ದಿನಾಚರಣೆ ಕಾರ್ಯಕ್ರಮಕ್ಕೆ ಡಾ.ಪ್ರಭು ಕೆ. ಸಾಹುಕಾರ್ ಚಾಲನೆ ನೀಡಿ, ಮಾತನಾಡಿದರು.
ಕನ್ನಡಪ್ರಭ ವಾರ್ತೆ ಸೊರಬ
ಬದುಕನ್ನು ಅತ್ಯಂತ ಕೀಳಾಗಿ ಕಾಣುವುದು ಸರಿಯಲ್ಲ. ಮನುಷ್ಯ ಹುಟ್ಟುವುದೇ ಬದುಕಿನ ಸಾಧನೆಗಾಗಿ. ಆದ್ದರಿಂದ ಭರವಸೆಯ ಮೂಲಕ ಆತ್ಮವಿಶ್ವಾಸ ಬೆಳೆಸಿಕೊಂಡಾಗ ಸಾಧನೆಯ ಹೆಜ್ಜೆಗಳು ಹತ್ತಿರಾಗುತ್ತವೆ ಎಂದು ಸಾರ್ವಜನಿಕ ಆಸ್ಪತ್ರೆಯ ಆಡಳಿತ ವೈದ್ಯಾಧಿಕಾರಿ ಡಾ.ಪ್ರಭು ಕೆ.ಸಾಹುಕಾರ್ ನುಡಿದರು.ಪಟ್ಟಣದ ಸಾರ್ವಜನಿಕ ಆಸ್ಪತ್ರೆಯಲ್ಲಿ ಜಿಲ್ಲಾಡಳಿತ, ಜಿ.ಪಂ. ಹಾಗೂ ಜಿಲ್ಲಾ ಆರೋಗ್ಯ ಕುಟುಂಬ ಕಲ್ಯಾಣ ಇಲಾಖೆ ಮತ್ತು ತಾಲೂಕು ಆರೋಗ್ಯ ಇಲಾಖೆ ಇವರ ಸಹಭಾಗಿತ್ವದಲ್ಲಿ ಹಮ್ಮಿಕೊಂಡಿದ್ದ ವಿಶ್ವ ಆತ್ಮಹತ್ಯೆ ತಡೆ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಬದುಕು ನಾವು ಅನುಭವಿಸುವ ರೀತಿಯಲ್ಲಿ ಚಲಿಸುತ್ತದೆ. ನಿಶ್ಚಲತೆ ಎನ್ನುವುದನ್ನು ನಾವು ಎಂದಿಗೂ ಆಹ್ವಾನಿಸಬಾರದು. ಭರವಸೆ ತೋರಿಸುವ ದಾರಿಯಲ್ಲಿ ಸಾಗಿದಾಗ ಸೋಲು ಇಲ್ಲವಾಗುತ್ತದೆ ಎಂದರು.ಜಗತ್ತಿನಲ್ಲಿ ಜನರು ಸಣ್ಣಪುಟ್ಟ ವಿಷಯಗಳಿಗೆ ಆತ್ಮಹತ್ಯೆಗೆ ಒಳಗಾಗುತ್ತಿದ್ದಾರೆ. ಸಾಲದ ಬಾಧೆಯಿಂದ, ಪರೀಕ್ಷೆಯಲ್ಲಿ ಉತ್ತಮ ಅಂಕ ಗಳಿಸಿದ್ದರೆ, ಸಂಸಾರದ ಕಲಹದಿಂದ, ಒಂಟಿತನದ ಖಿನ್ನತೆಯಿಂದ ಜನರು ಆತ್ಮಹತ್ಯೆಗೆ ಶರಣಾಗುತ್ತಿದ್ದಾರೆ. ಹೀಗೆ ಸಣ್ಣ ಪುಟ್ಟ ವಿಷಯಗಳಿಗೆ ಆತ್ಮಹತ್ಯೆ ಪ್ರಕರಣಗಳನ್ನು ಕೇಳುತ್ತಿದ್ದೇವೆ. ಅದನ್ನು ತಡೆಗಟ್ಟುವುದೇ ಮೂಲ ಉದ್ದೇಶವಾಗಿರುತ್ತದೆ ಎಂದರಲ್ಲದೆ, ಪ್ರಸಕ್ತ ಸಾಲಿನಲ್ಲಿ ಆತ್ಮಹತ್ಯೆಯ ನಿರೂಪಣೆಯನ್ನು ಬದಲಾಯಿಸೋಣ ಎಂಬ ಘೋಷ ವಾಕ್ಯದೊಂದಿಗೆ ಭರವಸೆಯನ್ನು ಸೃಷ್ಟಿಸುವುದು ಕಾರ್ಯಕ್ರಮದ ಉದ್ದೇಶವೂ ಆಗಿದೆ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಜಿಲ್ಲಾ ಮನೋವೈದ್ಯ ಡಾ.ಸಿ.ಹೆಚ್.ಸಂಜಯ, ಮನಶಾಸ್ತ್ರಜ್ಞ ಹೆಚ್.ರಾಮನಾಯ್ಕ, ಡಾ.ಭರತ್, ಯುವ ರಾಜ್, ಶಬ್ಬೀರ್ ಖಾನ್, ಚನ್ನಪ್ಪ, ಶಿಲ್ಪಾ ಬೋರ್ಕರ್ ಹಾಗೂ ಸಾರ್ವಜನಿಕ ಆಸ್ಪತ್ರೆಯ ಸಿಬ್ಬಂದಿ ಹಾಜರಿದ್ದರು.