ಸಾರಾಂಶ
ಆನಂದ ಬುಡ್ಡಾಗೋಳ
ಕನ್ನಡಪ್ರಭ ವಾರ್ತೆ ರಾಮದುರ್ಗಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಜನರ ಆರೋಗ್ಯ ಕಾಪಾಡಲು ಸಾಕಷ್ಟು ಅನುದಾನ ನೀಡಿ ಆಸ್ಪತ್ರೆ ನಿರ್ಮಾಣ ಮಾಡಿವೆ. ಆದರೆ, ಆಸ್ಪತ್ರೆಗೆ ವೈದ್ಯರನ್ನು ನೇಮಕ ಮಾಡಿದರೆ ಮಾತ್ರ ಸರ್ಕಾರಿ ಅನುದಾನ ಸದ್ಬಳಕೆಯಾಗಲು ಸಾಧ್ಯ. ಆದರೆ, ರಾಮದುರ್ಗದಲ್ಲಿ ಮಾತ್ರ ಸರ್ಕಾರ ಆರೋಗ್ಯದ ವಿಷಯದಲ್ಲಿ ವಿಫಲವಾಗಿದೆ ಎನ್ನಲು ಇಲ್ಲಿಯ ರಾಮದುರ್ಗದ ಸರ್ಕಾರಿ ಆಸ್ಪತ್ರೆಯೇ ಉದಾಹರಣೆಯಂತಿದೆ.ಸಾಮಾನ್ಯವಾಗಿ ಸರ್ಕಾರಿ ಆಸ್ಪತ್ರೆ ಎಂದರೆ ಬಡವರೆ ಹೆಚ್ಚಿನ ಸಂಖ್ಯೆಯಲ್ಲಿ ಚಿಕಿತ್ಸೆ ಬರುತ್ತಾರೆ. ಆದರೆ, ಬರುವ ರೋಗಿಗಳಿಗೆ ಚಿಕಿತ್ಸೆ ನೀಡಲು ಇಲ್ಲಿ ವೈದ್ಯರೇ ಇಲ್ಲ. ಈ ಬಗ್ಗೆ ಕಾಳಜಿ ವಹಿಸಬೇಕಿದ್ದ ಜನಪ್ರತಿನಿಧಿಗಳು ಮತ್ತು ಜಿಲ್ಲಾ ಆರೋಗ್ಯಾಧಿಕಾರಿಗಳು ಮಾತ್ರ ತಲೆಕೆಡಿಸಿಕೊಂಡಿಲ್ಲ. ಸುಮಾರು ಒಂದೂವರೆ ಕೋಟಿ ವೆಚ್ಚದಲ್ಲಿ ಆಸ್ಪತ್ರೆಯನ್ನು ಪುನರ್ ನಿರ್ಮಾಣ ಮಾಡುವ ಮೂಲಕ ಅಗತ್ಯ ಸಲಕರಣೆಗಳನ್ನು ವ್ಯವಸ್ಥೆ ಮಾಡಲಾಗಿದೆ. ತಾಲೂಕಾ ಸಾರ್ವಜನಿಕ ಆಸ್ಪತ್ರೆಯು ವೈದ್ಯರ ಕೊರತೆಯಿಂದ ಸೊರಗಿದ್ದು, ತಾಲೂಕ ಮಟ್ಟದ ಆಸ್ಪತ್ರೆಗೆ ಮಂಜೂರಾದ ವೈದ್ಯರ ಸಂಖ್ಯೆಯ ಅರ್ಧದಷ್ಟು ಹುದ್ದೆಗಳು ಇಲ್ಲಿ ಖಾಲಿ ಇವೆ. ಇದರಿಂದ ಈ ಆಸ್ಪತ್ರೆಯಲ್ಲಿ ಬಡವರಿಗೆ ಸಮರ್ಪಕ ಚಿಕತ್ಸೆ ಸಿಗದೇ ಬಡವರು ಖಾಸಗಿ ಆಸ್ಪತ್ರೆಗಗಳಿಗೆ ಅಲೆಯಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ.ಕಳೇದ 2007ರ ಏ.1ರಿಂದ ನೂರು ಹಾಸಿಗೆಯ ಆಸ್ಪತ್ರೆಯಾಗಿ ಮೇಲ್ದರ್ಜೆಗೇರಿದ ಈ ಆಸ್ಪತ್ರೆಗೆ 14 ಮಂಜೂರಾತಿ ವೈದ್ಯರು ಇರಬೇಕಿತ್ತು. ಆಸ್ಪತ್ರೆಯ ಉಸ್ತುವಾರಿ ನೋಡಿಕೊಳ್ಳಬೇಕಾದ ಮುಖ್ಯವೈದ್ಯಾಧಿಕಾರಿ ಸೇರಿದಂತೆ 7 ವೈದ್ಯರು ಮಾತ್ರ ಕಾರ್ಯನಿರ್ವಹಿಸುತ್ತಿದ್ದಾರೆ. ತಾಲೂಕಾ ವೈದ್ಯಾಧಿಕಾರಿಗೆ ಸಾರ್ವಜನಿಕ ಆಸ್ಪತ್ರೆಯ ಮುಖ್ಯವೈದ್ಯಾಧಿಕಾರಿಯ ಜವಾಬ್ದಾರಿ ಇದೆ. ಮುಖ್ಯವಾಗಿ ಆಸ್ಪತ್ರೆಯಲ್ಲಿ ಪ್ರಸೂತಿ ತಜ್ಞೆಯೇ ಗುತ್ತಿಗೆ ಆಧಾರದಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. ಸಾಮಾನ್ಯ ಕರ್ತವ್ಯವದ ಮೂರು ವೈದ್ಯರು, ಪಿಜಿಶಿಯನ್, ಕಿವಿ ಮತ್ತು ಗಂಟಲು ತಜ್ಞರು, ಇಬ್ಬರು ಇರಬೇಕಾದ ದಂತ ವೈದ್ಯರ ಪೈಕಿ ಒಬ್ಬರೆ ಕಾರ್ಯನಿರ್ವಹಿಸುತ್ತಿದ್ದಾರೆ.ಈ ಆಸ್ಪತ್ರೆಯಲ್ಲಿ ಹೆರಿಗೆ ಸಮಯದಲ್ಲಿ ಸಿಜಿರಿಯನ್ ಮೂಲಕ ಹೇರಿಗೆ ಮಾಡಿಸುವಾಗ ಪ್ರಮುಖ ಸಂದರ್ಭದಲ್ಲಿ ಅವಶ್ಯವಾಗಿ ಇರಬೇಕಾದ ಅರವಳಿಕೆ ತಜ್ಞರು 2023ರ ಮಾರ್ಚ ತಿಂಗಳಿಂದ ಗೈರಾಗಿದ್ದಾರೆ. ಹೆರಿಗೆ ಅರವಳಿಕೆ ತಜ್ಞರು ಬೇಕಾದರೆ ಸಂಬಂಧಿಸಿದ ರೋಗಿಗಳಿಂದ ಹಣ ಪಡೆದು ಖಾಸಗಿ ಅರವಳಿಕೆ ತಜ್ಞರನ್ನು ಕರೆಸುತ್ತಾರೆ ಎನ್ನುವ ಮಾತುಗಳು ದಾಖಲಾದವರಿಂದ ಕೇಳಿ ಬರುತ್ತಿವೆ.ಒಟ್ಟಿನಲ್ಲಿ ರಾಮದುರ್ಗ ನಗರ ಸೇರಿದಂತೆ ಸುತ್ತಲಿನ ಗ್ರಾಮಗಳ ಜನರ ಆರೋಗ್ಯದ ಜವಾಬ್ದಾರಿ ಹೊತ್ತಿರುವ ಸರ್ಕಾರಿ ಆಸ್ಪತ್ರೆಯಲ್ಲಿ ವೈದ್ಯರಿಲ್ಲದೇ ರೋಗಗ್ರಸ್ಥವಾದಂತಾಗಿದೆ ಎನ್ನುವುದು ಸಾರ್ವಜನಿಕರ ಬೇಸರ. ಉಳ್ಳವರು ಸರ್ಕಾರಿ ಆಸ್ಪತ್ರೆಗೆ ಹೋಗಿ ಚಿಕಿತ್ಸೆ ಪಡೆದುಕೊಳ್ಳುತ್ತಾರೆ. ಆದರೆ ಹಣ ಇಲ್ಲದ ಬಡವರು ಸರ್ಕಾರಿ ಆಸ್ಪತ್ರೆಗೆ ಹೋದರೆ ಸಣ್ಣಪುಟ್ಟ ರೋಗಕ್ಕೆ ಮಾತ್ರ ಚಿಕಿತ್ಸೆ ಸಿಗುತ್ತದೆ. ದೊಡ್ಡ ಪ್ರಮಾಣದ ಆರೋಗ್ಯ ಸಮಸ್ಯೆಗಳಾದರೆ ಖಾಸಗಿ ಆಸ್ಪತ್ರೆಗಳಿಗೆ ಹೋಗಬೇಕಿದೆ.ತುರ್ತು ಚಿಕತ್ಸೆಗೆ ನೂರು ಕಿ.ಮೀ ತೆರಳಬೇಕು: ಅಪಘಾತ, ಹೃದಯಾಘಾತ ಸೇರಿದಂತೆ ತುರ್ತು ಚಿಕಿತ್ಸೆ ರಾಮದುರ್ಗ ಆಸ್ಪತ್ರೆಯಲ್ಲಿ ಲಭ್ಯವಿಲ್ಲದ್ದರಿಂದ ಅನಿವಾರ್ಯವಾಗಿ ದೂರದ ಬೆಳಗಾವಿ, ಬಾಗಲಕೋಟೆ ಅಥವಾ ಹುಬ್ಬಳ್ಳಿಗೆ ಹೋಗುವುದು ಅನಿವಾರ್ಯವಾಗಿದೆ. ಬೆಳಗಾವಿ ಜಿಲ್ಲೆಯ ತಾಲೂಕಾ ಕೇಂದ್ರ ಸವದತ್ತಿ, ಬೈಲಹೊಂಗಲ, ಗೋಕಾಕದಲ್ಲಿ ಪೂರ್ಣ ಪ್ರಮಾಣದ ವೈದ್ಯರಿದ್ದಾರೆ. ಯಾವ ರೋಗಕ್ಕೆ ಯಾವ ವೈದ್ಯರು ಎಂದು ಕಾಣ ಸಿಗುತ್ತಾರೆ. ಆದರೆ, ರಾಮದುರ್ಗದ ಸರ್ಕಾರಿ ಆಸ್ಪತ್ರೆ ಮಾತ್ರ ಸಮರ್ಪಕ ವೈದ್ಯಕೀಯ ಸೇವೆ ನೀಡುವಲ್ಲಿ ವಿಫಲವಾಗಿದೆ.ಕಚೇರಿ ಕೆಲಸಕ್ಕೂ ಸಿಬ್ಬಂದಿಗಳಿಲ್ಲ: ಈ ಆಸ್ಪತ್ರೆಯಲ್ಲಿ ಕೇವಲ ವೈದ್ಯರ ಕೊರತೆ ಮಾತ್ರವಲ್ಲ, ಕಾರ್ಯಾಲಯದ ಕೆಲಸಕ್ಕೂ ಜನ ಇಲ್ಲ. ಅಂದರೆ ಇರುವ ವೈದ್ಯರ ಬಿಲ್ ತೆಗೆಯಲು ಅವರಿವರನ್ನು ದುಂಬಾಲು ಬೀಳಬೇಕಿದೆ ಎನ್ನುತ್ತಾರೆ ಸಿಬ್ಬಂದಿ.
----ನೂರು ಹಾಸಿಗೆಯ ಆಸ್ಪತ್ರೆಯಲ್ಲಿ ವೈದ್ಯರ ಕೊರತೆ ಇದೆ. ಇಲ್ಲಿ ಇರುವ ವೈದ್ಯರಷ್ಟೆ ಸೇರಿ ಆಸ್ಪತ್ರೆಗೆ ಬರುವ ರೋಗಿಗಳಿಗೆ ಗುಣ ಮಟ್ಟದ ಸೇವೆಯನ್ನು ನೀಡುತ್ತಿದ್ದೇವೆ. ಮುಂದೆ ವೈದ್ಯರ ಸಂಖ್ಯೆ ಹೆಚ್ಚಾದರೆ ಇನ್ನೂ ಉತ್ತಮ ಸೇವೆ ನೀಡಲು ಸಾಧ್ಯವಾಗುತ್ತದೆ.
-ಡಾ.ನವೀನ ನಿಜಗುಲಿ, ತಾಲೂಕು ವೈದ್ಯಾಧಿಕಾರಿ ರಾಮದುರ್ಗ (ರೆಡ್ ಶರ್ಟ್)ಜನಪ್ರತಿನಿಧಿಗಳ ಇಚ್ಛಾಶಕ್ತಿಯ ಕೊರತೆಯಿಂದ ತಾಲೂಕಿನ ಸರ್ಕಾರಿ ಆಸ್ಪತ್ರೆಗೆ ವೈದ್ಯರಿಲ್ಲದೇ ಬಡವರ ಆರೋಗ್ಯದತ್ತ ಗಮನ ಹರಿಸಲು ಜಿಲ್ಲೆಯ ಜನಪ್ರತಿನಿಧಿಗಳು ಹಾಗೂ ಜಿಲ್ಲಾ ಮಟ್ಟದ ಅಧಿಕಾರಿಗಳು ಗಮನ ಹರಿಸುವ ಮೂಲಕ ಬಡವರ ಆರೋಗ್ಯ ಕಾಪಾಡಲು ಶ್ರಮಿಸುವ ಅವಶ್ಯಕತೆ ಇದೆ.-ಸುಭಾಷಚಂದ್ರ ಘೋಡಕೆ,
ಅಧ್ಯಕ್ಷರು, ಜನಪರ ಟ್ರಸ್ಟ್ ರಾಮದುರ್ಗ ( ಬಿಳಿ ಅಂಗಿ).ರಾಜ್ಯದ ಬಹುತೇಕ ಸರ್ಕಾರಿ ಆಸ್ಪತ್ರೆಗಳಲ್ಲಿ ವೈದ್ಯರ ಕೊರತೆ ಇದೆ, ರಾಮದುರ್ಗ ತಾಲೂಕಿನಲ್ಲಿ ಕೂಡಾ ಪ್ರಾಥಮಿಕ ಆರೋಗ್ಯ ಕೇಂದ್ರ ಸೇರಿದಂತೆ ತಾಲೂಕಾ ಆಸ್ಪತ್ರೆಯಲ್ಲಿ ವೈದ್ಯರ ಕೊರತೆಯಿದೆ. ವೈದ್ಯರ ವರ್ಗಾವಣೆ ಕೌನ್ಸಲಿಂಗ್ ಮೂಲಕ ನಡೆಯುತ್ತಿರುವುದರಿಂದ ಆಸ್ಪತ್ರೆಗೆ ವೈದ್ಯರನ್ನು ನೇಮಕ ಮಾಡಲು ಕಷ್ಟವಾಗುತ್ತದೆ.-ಅಶೋಕ ಮ.ಪಟ್ಟಣ ಸರ್ಕಾರದ ಮುಖ್ಯಸಚೇತಕರು, ಶಾಸಕರು.