ಪರಿಸರ ಉಳಿಸಲು ಪರಿಣಾಮಕಾರಿ ಪ್ರಯತ್ನ ನಡೆಯುತ್ತಿಲ್ಲ

| Published : Apr 14 2025, 01:24 AM IST

ಪರಿಸರ ಉಳಿಸಲು ಪರಿಣಾಮಕಾರಿ ಪ್ರಯತ್ನ ನಡೆಯುತ್ತಿಲ್ಲ
Share this Article
  • FB
  • TW
  • Linkdin
  • Email

ಸಾರಾಂಶ

ಸಾಗರ: ಪರಿಸರಕ್ಕೆ ಸಂಬಂಧಪಟ್ಟ ಮಾತುಗಳು ತೋರಿಕೆಯದ್ದಾಗುತ್ತಿದ್ದು, ಪರಿಸರ ಉಳಿಸಿ ಬೆಳೆಸಿಕೊಂಡು ಹೋಗುವಲ್ಲಿ ಪರಿಣಾಮಕಾರಿ ಪ್ರಯತ್ನಗಳು ನಡೆಯುತ್ತಿಲ್ಲ ಎಂದು ಬೆಂಗಳೂರು ಅದಮ್ಯ ಚೇತನಾ ಸಂಸ್ಥೆ ಅಧ್ಯಕ್ಷೆ ತೇಜಸ್ವಿನಿ ಅನಂತ ಕುಮಾರ್ ಅಭಿಪ್ರಾಯಪಟ್ಟರು.

ಸಾಗರ: ಪರಿಸರಕ್ಕೆ ಸಂಬಂಧಪಟ್ಟ ಮಾತುಗಳು ತೋರಿಕೆಯದ್ದಾಗುತ್ತಿದ್ದು, ಪರಿಸರ ಉಳಿಸಿ ಬೆಳೆಸಿಕೊಂಡು ಹೋಗುವಲ್ಲಿ ಪರಿಣಾಮಕಾರಿ ಪ್ರಯತ್ನಗಳು ನಡೆಯುತ್ತಿಲ್ಲ ಎಂದು ಬೆಂಗಳೂರು ಅದಮ್ಯ ಚೇತನಾ ಸಂಸ್ಥೆ ಅಧ್ಯಕ್ಷೆ ತೇಜಸ್ವಿನಿ ಅನಂತ ಕುಮಾರ್ ಅಭಿಪ್ರಾಯಪಟ್ಟರು.

ಪಟ್ಟಣದ ಶೃಂಗೇರಿ ಶಂಕರಮಠದಲ್ಲಿ ಶಂಕರಮಠ ಮತ್ತು ಬೆಂಗಳೂರಿನ ಅದಮ್ಯ ಚೇತನಾ ಸಂಸ್ಥೆ ವತಿಯಿಂದ ಶ್ರೀ ಭಾರತೀತೀರ್ಥ ಸ್ವಾಮಿಗಳ ವಜ್ರೋತ್ಸವ ಅಂಗವಾಗಿ ಹಮ್ಮಿಕೊಳ್ಳಲಾಗಿದ್ದ ಅನಂತ ಪ್ಲೇಟ್ ಬ್ಯಾಂಕ್ ಉದ್ಘಾಟಿಸಿ, ಅಭಿನಂದನೆ ಸ್ವೀಕರಿಸಿ ಮಾತನಾಡಿದ ಅವರು, ನಾವು ಪ್ರತಿನಿತ್ಯ ಬಳಸುತ್ತಿರುವ ಎಲ್ಲ ವಸ್ತುಗಳು ಪರಿಸರಕ್ಕೆ ಧಕ್ಕೆ ತರುತ್ತಿವೆ ಎಂದರು.

ಬೆಳ್ಳಗೆ ಕಾಣಬೇಕು ಎನ್ನುವ ಉದ್ದೇಶದಿಂದ ಸಾಬೂನು ಬಳಸುತ್ತಿದ್ದೇವೆ. ಆದರೆ ಸಾಬೂನಿನ ಕೆಮಿಕಲ್ ನೊರೆಯಿಂದ ಭೂಮಿ ಸಾಕಷ್ಟು ಸಮಸ್ಯೆಯನ್ನು ಎದುರಿಸುತ್ತಿದೆ. ಮುಂಬೈ, ದೆಹಲಿ, ಬೆಂಗಳೂರು ಸೇರಿದಂತೆ ದೊಡ್ಡದೊಡ್ಡ ನಗರಗಳಲ್ಲ ಪ್ಲಾಸ್ಟಿಕ್ ಪೆಡಂಭೂತವಾಗಿ ಪರಿಣಮಿಸಿದೆ. ಇದನ್ನು ನಿಯಂತ್ರಿಸಲು ಸಾಧ್ಯವಾಗುತ್ತಿಲ್ಲ ಎಂದು ಹೇಳಿದರು. ಪಶ್ಚಿಮಘಟ್ಟದ ಮಲೆನಾಡಿನಲ್ಲಿಯೂ ಪ್ಲಾಸ್ಟಿಕ್ ಅತಂಕ ಸೃಷ್ಟಿಸಿದೆ. ಪಶುಪಕ್ಷಿ, ಪ್ರಾಣಿಗಳು ಪ್ಲಾಸ್ಟಿಕ್ ಸೇವಿಸಿ ಸಾವನ್ನಪ್ಪುತ್ತಿವೆ. ಇಂಥದ್ದಕ್ಕೆ ಪರಿಹಾರ ಕಂಡು ಹಿಡಿಯಲು ಯಾವುದೇ ಒಂದು ಸಂಸ್ಥೆ, ವ್ಯಕ್ತಿಯಿಂದ ಸಾಧ್ಯವಿಲ್ಲ. ಎಲ್ಲರೂ ಇದರ ವಿರುದ್ಧ ನಿಂತಾಗ ಮಾತ್ರ ನಿಯಂತ್ರಣ ಸಾಧ್ಯ ಎಂದು ಹೇಳಿದರು.ಒಂದು ದಿನಕ್ಕೆ ನಮ್ಮ ಸಂಸ್ಥೆಯಿಂದ ೧೬೪೦೦೦ ಮಕ್ಕಳಿಗೆ ಊಟ ನೀಡುತ್ತೇವೆ. ಸರ್ಕಾರ ಸಹಕರಿಸಿದರೂ ದಾನಿಗಳು ಮತ್ತು ನಮ್ಮ ಸಂಸ್ಥೆಯ ನಿರಂತರ ಪ್ರಯತ್ನದಿಂದ ಯೋಜನೆ ಯಶಸ್ವಿಯಾಗಿ ನಡೆಯುತ್ತಿದೆ. ಕಳೆದ ೨೭ ವರ್ಷಗಳಿಂದ ನಮ್ಮ ಸಂಸ್ಥೆಯು ಪರಿಸರ ಸಂಬಂಧಿ ಕೆಲಸವನ್ನು ಮಾಡಿಕೊಂಡು ಬರುತ್ತಿದೆ. ಇದಕ್ಕೆ ಈತನಕ ಸುಮಾರು ೭೪ ಕೋಟಿ ರು ಹಣ ಬಳಸಲಾಗಿದೆ. ದಿನಕ್ಕೆ ಸುಮಾರು ೨೦೦ ಜನರಿಗೆ ಬೆಂಗಳೂರಿನ ಐದು ಕೇಂದ್ರಗಳಲ್ಲಿ ಉಚಿತವಾಗಿ ಊಟವನ್ನು ನೀಡುತ್ತಿದ್ದೇವೆ. ಈ ಯೋಜನೆಯನ್ನು ಹುಬ್ಬಳ್ಳಿ, ಕಲ್ಬುರ್ಗಿ ಮಾತ್ರವಲ್ಲದೆ ರಾಜಸ್ತಾನದ ಜೋಧ್‌ಪುರ್‌ವರೆಗೂ ವಿಸ್ತರಿಸಿದ್ದೇವೆ. ನಮ್ಮೆಲ್ಲ ಸಾಮಾಜಿಕ ಕೆಲಸಗಳಿಗೆ ಶೃಂಗೇರಿಯ ಶಂಕರಮಠ ಪ್ರೇರಣೆಯಾಗಿದೆ ಎಂದು ತಿಳಿಸಿದರು.

ನಮ್ಮ ಸಂಸ್ಥೆ ಮರುಬಳಸಬಹುದಾದ ತಟ್ಟೆ ಲೋಟವನ್ನು ಸ್ವಲ್ಪ ಭದ್ರತಾ ಠೇವಣಿ ಇರಿಸಿಕೊಂಡು ಶುಭ ಸಮಾರಂಭಗಳಿಗೆ ನೀಡುತ್ತಾ ಬರುತ್ತಿದೆ. ಈ ಕಾಯಕ ಸಂಪೂರ್ಣ ಉಚಿತವಾಗಿದೆ. ಇದರಿಂದ ಪ್ಲಾಸ್ಟಿಕ್ ಬಳಕೆ ಕಡಿಮೆ ಮಾಡುವ ಜೊತೆಗೆ ಎಲ್ಲೆಂದರಲ್ಲಿ ಎಸೆದು ಹೋಗುವ ಪ್ಲಾಸ್ಟಿಕ್ ತಟ್ಟೆಲೋಟವನ್ನು ನಿಯಂತ್ರಿಸಲು ಸಾಧ್ಯವಿದೆ ಎಂದರು.

ಪರಿಸರತಜ್ಞ ಪ್ರೊ.ಎಂ.ಬಿ.ಕುಮಾರಸ್ವಾಮಿ ಮಾತನಾಡಿ, ಪ್ಲಾಸ್ಟಿಕ್ ಬಳಕೆಯಿಂದ ಮತ್ತು ಅದನ್ನು ಸುಡುವ ಗಾಳಿಯಿಂದ ಹೊಸ ರೀತಿಯ ರೋಗಗಳು ಬರುತ್ತಿವೆ. ಈ ಕಾಯಿಲೆ ಯಾವುದೆಂದು ಕಂಡು ಹಿಡಿಯಲು ವೈದ್ಯರಿಗೆ ಸಹ ಸವಾಲು ಎನ್ನುವಂತೆ ಆಗಿದೆ. ಪರಿಸರ ವಿಜ್ಞಾನಿಗಳ ಪ್ರಕಾರ ೨೦೫೦ ಹೊತ್ತಿಗೆ ಸಮುದ್ರದಲ್ಲಿರುವ ಜಲಚರ ಪ್ರಾಣಿಗಳಿಗಿಂತಲೂ ಪ್ಲಾಸ್ಟಿಕ್‌ನ ತೂಕವೇ ಸಮುದ್ರದಲ್ಲಿ ಹೆಚ್ಚಾಗುತ್ತದೆ ಎನ್ನುವ ಸಮೀಕ್ಷೆ ಇದೆ. ಈ ನಿಟ್ಟಿನಲ್ಲಿ ಪ್ಲಾಸ್ಟಿಕ್ ನಿಷೇಧಿಸುವ ಕುರಿತು ಎಲ್ಲರೂ ಗಮನ ಹರಿಸಬೇಕು ಎಂದು ಹೇಳಿದರು.

ಶೃಂಗೇರಿ ಶಂಕರಮಠದ ಧರ್ಮದರ್ಶಿ ಅಶ್ವಿನಿಕುಮಾರ್ ಮಾತನಾಡಿದರು. ಪರಿಸರವಾದಿ ಅನಂತ ಹೆಗಡೆ ಅಶೀಸರ, ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಶಾಂತಾ ನಾಯ್ಕ್, ಡಾ.ರಾಜೇಶ್, ಕವಲಕೋಡು ವೆಂಕಟೇಶ್, ಮ.ಸ.ನಂಜುಂಡಸ್ವಾಮಿ, ಸವಿತಾ ವೆಂಕಟೇಶ್, ಪ್ರಭಾ ವೆಂಕಟೇಶ್ ಇನ್ನಿತರರು ಹಾಜರಿದ್ದರು.