ಪಂಚನದಿಗಳ ನಾಡಲ್ಲಿ ಸಿಗ್ತಿಲ್ಲ ಎಳನೀರು!

| Published : Aug 17 2024, 12:53 AM IST

ಸಾರಾಂಶ

ಕಳೆದ ಬಾರಿ ಸರಿಯಾಗಿ ಮಳೆ ಬಾರದ್ದರ ಎಫೆಕ್ಟ್ ಈ ಬಾರಿ ಎಳನೀರಿನ ಮೇಲೆ ಬೀರಿದ್ದು, ಕಳೆದ 15 ದಿನಗಳಿಂದ ರಾಜ್ಯಾದ್ಯಂತ ಎಳನೀರು ಸಿಗದೆ ರೋಗಿಗಳು ಪರದಾಡುವಂತಾಗಿದೆ.

ಶಶಿಕಾಂತ ಮೆಂಡೆಗಾರ

ಕನ್ನಡಪ್ರಭ ವಾರ್ತೆ ವಿಜಯಪುರಕಳೆದ ಬಾರಿ ಸರಿಯಾಗಿ ಮಳೆ ಬಾರದ್ದರ ಎಫೆಕ್ಟ್ ಈ ಬಾರಿ ಎಳನೀರಿನ ಮೇಲೆ ಬೀರಿದ್ದು, ಕಳೆದ 15 ದಿನಗಳಿಂದ ರಾಜ್ಯಾದ್ಯಂತ ಎಳನೀರು ಸಿಗದೆ ರೋಗಿಗಳು ಪರದಾಡುವಂತಾಗಿದೆ.

ರಾಜ್ಯದಲ್ಲಿಯೇ ಅತೀ ಹೆಚ್ಚು ವಹಿವಾಟು ನಡೆಯುತ್ತಿದ್ದ ಮದ್ದೂರು ಎಳನೀರು ಮಾರ್ಕೆಟ್‌ನಲ್ಲಿಯೇ ಎಳನೀರು ಬಾರದ ಕಾರಣ ಇದ್ದಕ್ಕಿದ್ದಂತೆ ಎಳನೀರು ಬೆಲೆ ದುಪ್ಪಟ್ಟಾಗಿದೆ. ಅದರಲ್ಲೂ ಮಳೆಗಾಲದಲ್ಲೂ ಬೇಸಿಗೆಯಂತಾಗಿರುವ ವಿಜಯಪುರ ಜಿಲ್ಲೆಯಲ್ಲಿ ಎಳನೀರಿಗೆ ಬೇಡಿಕೆ ಹೆಚ್ಚಾಗಿದ್ದು, ಪೂರೈಕೆ ಮಾತ್ರ ನಿಂತುಹೋಗಿದೆ.ಎಲ್ಲಿ ಹುಡುಕಿದರೂ ಸಿಗ್ತಿಲ್ಲ ಎಳನೀರು:

ಕಳೆದ ಬಾರಿ ಮಳೆ ಬಾರದ ಕಾರಣ ಈ ಬಾರಿ ಇಳುವರಿಯಲ್ಲಿ ಹೊಡೆತ ಬಿದ್ದಿದ್ದರಿಂದ ವಿಜಯಪುರ, ಬಾಗಲಕೋಟೆ, ಕಲಬುರಗಿ, ಯಾದಗಿರಿ, ರಾಯಚೂರು ಭಾಗಗಳಲ್ಲಿ ಭಾಗಗಳಿಗೆಲ್ಲ ಪೂರೈಕೆಯಾಗುತ್ತಿದ್ದ ತೆಂಗಿನ ಕಾಯಿಯ ಎಳನೀರು ಇದೀಗ ಬರುತ್ತಿಲ್ಲ. ಹೀಗಾಗಿ ಆಸ್ಪತ್ರೆಯಲ್ಲಿರುವ ಒಳ ರೋಗಿಗಳು, ಹೊರರೋಗಿಗಳು ಗೋಳಾಡುವಂತಾಗಿದೆ. ವಾಂತಿ, ಭೇದಿ, ಜ್ವರ ಸೇರಿದಂತೆ ಬಹುತೇಕ ಅನಾರೋಗ್ಯಕ್ಕೆ ಪ್ರಾಥಮಿಕ ಹಂತದಲ್ಲಿ ಎಳನೀರು ಮದ್ದಾಗಿದೆ. ಅಷ್ಟೆ ಅಲ್ಲದೆ ಉಷ್ಣದೇಹ (ಹೀಟ್ ಬಾಡಿ) ಹೊಂದಿದವರು ಎಳನೀರು ಕುಡಿದರೇ ದೇಹವನ್ನು ತಂಪಾಗಿರಿಸಬಹುದಾಗಿದೆ. ಆದರೆ, ದೇಹವನ್ನು ತಂಪಾಗಿಸುವ ಎಳನೀರು ಬೆಲೆ ಕೇಳಿದರೆ ಮೈಯೆಲ್ಲ ಬಿಸಿಯಾಗುತ್ತಿದೆ. ಆದರೂ ಸಹ ಹೆಚ್ಚಿನ ಜನರು ಎಳನೀರನ್ನೇ ಹುಡುಕುತ್ತಿದ್ದು, ಎಲ್ಲೂ ಎಳನೀರು ಸಿಗದಂತಾಗಿದೆ.

ಬೆಲೆ ಜಾಸ್ತಿ ಅಂಗಡಿಗಳೆಲ್ಲ ಬಂದ್:

ಮೊದಲೆಲ್ಲ ಸಗಟು ವ್ಯಾಪಾರಸ್ಥರಿಗೆ ಮುಖ್ಯ ಮಾರುಕಟ್ಟೆಯಲ್ಲಿ ತೆಂಗಿನ ಒಂದು ಎಳನೀರಿಗೆ ₹18 ರಿಂದ 20 ಖರೀದಿ ಬೆಲೆ ಸಿಗುತ್ತಿತ್ತು. ಅದನ್ನು ಖರೀದಿಸಿ ರವಾನೆ ಹಾಗೂ ಹಮಾಲಿ ವೆಚ್ಚ ಹಾಗೂ ಲಾಭ ಸೇರಿಸಿ ಅವುಗಳನ್ನು ₹30 ಗೆ ಮಾರಟ ಮಾಡುತ್ತಿದ್ದರು. ಆದರೆ, ಇದೀಗ ಖರೀದಿಯಲ್ಲೇ ₹45 ಅಂದರೆ ಎರಡುಪಟ್ಟು ಬೆಲೆ ಹೆಚ್ಚಾಗಿದ್ದು, ಕಡಿಮೆ ಎಂದರೂ ₹60 ಗೆ ಒಂದು ಎಳನೀರು ಮಾರಾಟ ಮಾಡಬೇಕಿದೆ. ಅಷ್ಟು ಹಣ ಹೂಡಿಕೆ ಮಾಡಿ ಎಳನೀರು ತಂದಾಗ ಅದನ್ನು ಯಾರೂ ಖರೀದಿಸದಿದ್ದರೇ ವ್ಯಾಪಾರ ನಷ್ಟ ಆಗುತ್ತದೆ ಎಂದು ಯಾರೂ ತರುತ್ತಿಲ್ಲ. ನಗರದ ಬಡಿಕಮಾನ್ ರಸ್ತೆ, ಬಸ್‌ನಿಲ್ದಾಣ ರಸ್ತೆ, ಬಿಎಲ್‌ಡಿಇ ಆಸ್ಪತ್ರೆ ರಸ್ತೆ, ಧನ್ವಂತರಿ ಆಸ್ಪತ್ರೆ ರಸ್ತೆ, ಚೌಧರಿ ಆಸ್ಪತ್ರೆ ರಸ್ತೆ ಸೇರಿದಂತೆ ಬಹುತೇಕ ಮುಖ್ಯ ರಸ್ತೆಗಳಲ್ಲಿ ಕಾಣಸಿಗುತ್ತಿದ್ದ ಎಳನೀರು ಅಂಗಡಿಗಳೆಲ್ಲ ಬಂದ್ ಆಗಿವೆ. ಆಗುತ್ತಿದ್ದ ವಹಿವಾಟು:

ಬೇಸಿಗೆ ಸಮಯದಲ್ಲಿ ಹೆಚ್ಚಾಗಿ ಎಳನೀರು ಮಾರಾಟ ಆಗುತ್ತಿದ್ದರೂ ಸಹ ಈ ಸಮಯದಲ್ಲೂ ಮಳೆ ಇಲ್ಲದ ಕಾರಣ ಮೈ ಸುಡುವಷ್ಟು ಬಿಸಿಲು ಈ ಭಾಗದಲ್ಲಿದೆ. ಹೀಗಾಗಿ ಈಗಲೂ ಎಳನೀರಿಗೆ ಬೇಡಿಕೆ ಇದ್ದೇ ಇದೆ. ಹೀಗಾಗಿ ವಿಜಯಪುರ ನಗರವೊಂದರಲ್ಲೇ ಪ್ರತಿನಿತ್ಯ ಒಂದು ಲಾರಿ ಲೋಡ್ ಎಳನೀರು ವಹಿವಾಟು ಆಗುತ್ತಿತ್ತು. ಜಿಲ್ಲೆಯಾದ್ಯಂತ ಸೇರಿ ವಾರಕ್ಕೆ ಒಂದು ಲಕ್ಷ ಎಳನೀರಿನ ಕಾಯಿಗಳ ಮಾರಾಟವಾಗುತ್ತಿತ್ತು. ಮದ್ದೂರಲ್ಲೇ ಕಾಯಿ ಇಲ್ಲ:

ನಿತ್ಯ 50 ರಿಂದ 60 ಲೋಡ್ ನಷ್ಟು ಎಳನೀರಿನ ಕಾಯಿಗಳು ಮಂಡ್ಯ ಜಿಲ್ಲೆಯ ಮದ್ದೂರು ಮಾರುಕಟ್ಟೆಗೆ ಬರುತ್ತಿತ್ತು. ಇದೀಗ ಅಲ್ಲಿಯೇ ಕಡಿಮೆ ಆಗಿರುವುದರಿಂದ ಪೂರೈಕೆ ಕಡಿಮೆಯಾಗಿದ್ದು, ಬೇಡಿಕೆ ಹೆಚ್ಚಾಗಿದೆ. ಹೀಗಾಗಿ ನಂಬರ್ ಒನ್ ಗುಣಮಟ್ಟದ ಎಳನೀರು ಸಿಗುತ್ತಿದ್ದ ಮಾರುಕಟ್ಟೆಯಲ್ಲೀಗ ಬಿಸಿಬಿಸಿ ಅನುಭವ ಆಗುತ್ತಿದೆ.ಕೃತಕ ಪಾನಿಯಗಳ ಮೊರೆ:

ನ್ಯಾಚುರಲ್ ಹಾಗೂ ಫ್ರೆಶ್ ವಾಟರ್ ಎಂದು ಹೆಸರಾಗಿರುವ ಎಳನೀರು ಇಲ್ಲದ ಕಾರಣ ದೊಡ್ಡದೊಡ್ಡ ಮಾರ್ಟ್‌ಗಳಲ್ಲಿ ಸಿಗುವ ಸಿದ್ಧಪಡಿಸಿದ ಎಳನೀರು ಬಾಟಲಿಗಳು ಹಾಗೂ ಎಳನೀರಿನ ಫ್ಲೇವರ್ ಇರುವ ಪೌಡರ್ ಬಳಕೆ ಮಾಡಲಾಗುತ್ತಿದೆ. ರೋಗಿಗಳಿಗೆ ಎಳನೀರು ಇಲ್ಲದ ಸಂದರ್ಭದಲ್ಲಿ ಇದನ್ನೇ ಒಯ್ದು ಕುಡಿಸುತ್ತಿರುವುದರಿಂದ ಇದರಿಂದಲೂ ದುಷ್ಟಪರಿಣಾಮಗಳು ಬೀರುವ ಸಾಧ್ಯತೆ ಇದೆ.

ಇಡಿ ವಿಜಯಪುರ ಹುಡುಕಿದರೂ ಎಲ್ಲೂ ಒಂದೇ ಒಂದು ಎಳನೀರು ಸಿಗುತ್ತಿಲ್ಲ, ಯಾರನ್ನು ಕೇಳಿದರು ಲಾರಿ ಲೋಡ್ ಬಂದಿಲ್ಲ ಎನ್ನುತ್ತಿದ್ದಾರೆ. ಅನಿವಾರ್ಯಕ್ಕಾಗಿ ನಮ್ಮ ಸಂಭಂದಿಕರಿಗೆ ಕೃತಕ ಎಳನೀರು ಹಾಗೂ ಗ್ಲೂಕೋಸ್ ಕುಡಿಸುವ ಸ್ಥಿತಿ ಬಂದಿದೆ.

-ಸುನೀಲ ಗೊಡೇನವರ, ನಗರ ನಿವಾಸಿ.ಮೊದಲೆಲ್ಲ ಲಾರಿಗಟ್ಟಲೆ ಎಳನೀರು ತಂದು ನಾವು ವಿಜಯಪುರ ಸೇರಿದಂತೆ ಉತ್ತರ ಕರ್ನಾಟಕ ಭಾಗದಲ್ಲಿ ಮಾರಾಟ ಮಾಡುತ್ತಿದ್ದೆವು. ಆದರೆ, ಮಳೆ ಇಲ್ಲದ ಕಾರಣ ಮದ್ದೂರು ಮಾರುಕಟ್ಟೆಯಲ್ಲೇ ಎಳನೀರಿನ ಕೊರತೆ ಎದುರಾಗಿದೆ. ಕಳೆದ ಹದಿನೈದು ದಿನಗಳಿಂದ ಸಮಸ್ಯೆ ಎದುರಾಗಿದ್ದು, ಇನ್ನೂ ಒಂದು ತಿಂಗಳು ಇದೇ ರೀತಿ ಇರಲಿದ್ದು, ಅಕ್ಟೋಬರ್ ವೇಳೆಗೆ ಮತ್ತೆ ಮಾರುಕಟ್ಟೆಗೆ ಹೆಚ್ಚಿನ ಪ್ರಮಾಣದಲ್ಲಿ ಎಳನೀರು ಬರಲಿದೆ.

-ರಮೇಶ ಹಿರಿಯೂರು,

ಎಳನೀರು ವ್ಯಾಪಾರಿ.