ರಾಜ್ಯದಲ್ಲಿ ಪೂರ್ಣಾವಧಿ ಶಿಕ್ಷಣ ಸಚಿವರಿಲ್ಲ: ಸುರೇಶ್‌

| Published : May 18 2024, 12:38 AM IST / Updated: May 18 2024, 11:02 AM IST

Suresh Kumar

ಸಾರಾಂಶ

ರಾಜ್ಯದಲ್ಲಿ ಪೂರ್ಣಾವಧಿ ಶಿಕ್ಷಣ ಸಚಿವರಿಲ್ಲ ಎಂದು ಮಾಜಿ ಶಿಕ್ಷಣ ಸಚಿವ ಹಾಗೂ ಬಿಜೆಪಿ ಶಾಸಕ ಎಸ್‌.ಸುರೇಶ್‌ಕುಮಾರ್ ತೀಕ್ಷ್ಣವಾಗಿ ಹೇಳಿದ್ದಾರೆ.

 ಬೆಂಗಳೂರು: ರಾಜ್ಯದಲ್ಲಿ ಪೂರ್ಣಾವಧಿ ಶಿಕ್ಷಣ ಸಚಿವರಿಲ್ಲ ಎಂದು ಮಾಜಿ ಶಿಕ್ಷಣ ಸಚಿವ ಹಾಗೂ ಬಿಜೆಪಿ ಶಾಸಕ ಎಸ್‌.ಸುರೇಶ್‌ಕುಮಾರ್ ತೀಕ್ಷ್ಣವಾಗಿ ಹೇಳಿದ್ದಾರೆ.ಶುಕ್ರವಾರ ಪತ್ರಿಕಾಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು, ಅತ್ಯಂತ ವೈಜ್ಞಾನಿಕವಾಗಿ ರೂಪುಗೊಂಡ ರಾಷ್ಟ್ರೀಯ ಶಿಕ್ಷಣ ನೀತಿಗೆ (ಎನ್‍ಇಪಿ) ರಾಜಕೀಯ ಮೇಲಾಟದ ಕಾರಣ ತಿಲಾಂಜಲಿ ಕೊಟ್ಟು, ರಾಜ್ಯ ಶಿಕ್ಷಣ ನೀತಿ ಜಾರಿಗೊಳಿಸುವುದಾಗಿ ತಿಳಿಸಿದ ಈ ರಾಜ್ಯ ಸರ್ಕಾರ ಇವತ್ತಿನವರೆಗೂ ಯಾವುದೇ ಪ್ರಗತಿಯನ್ನು ಮಾಡದೆ ಇರುವುದು ಒಂದು ಸಾಧನೆ ಎಂದರು.

ಪ್ರಾಥಮಿಕ, ಪ್ರೌಢ ಶಾಲಾ ವಿದ್ಯಾರ್ಥಿಗಳ ಭವಿಷ್ಯವನ್ನೇ ಸರ್ಕಾರ ಮಸಕು ಮಾಡುತ್ತಿದೆ. ನಮ್ಮಲ್ಲಿ ಸಿಬಿಎಸ್‍ಇ, ಐಸಿಎಸ್‍ಇ ಸೇರಿದಂತೆ ಕೇಂದ್ರ ಪಠ್ಯಕ್ರಮದ ಶಾಲೆಗಳು, ಜೊತೆಗೆ ಸ್ವಾಯತ್ತ ವಿಶ್ವವಿದ್ಯಾಲಯಗಳು ಇವೆ. ಆ ವಿದ್ಯಾರ್ಥಿಗಳಿಗೆ ಒಂದು ನೀತಿಯಾದರೆ, ಸರಕಾರಿ ಶಾಲೆಗೆ ಇನ್ನೊಂದು ನೀತಿ. 

ನಮ್ಮ ಸರ್ಕಾರಿ ಶಾಲೆಯ ಮಕ್ಕಳಿಗೆ ಯಾರು ಕೌಶಲ್ಯ ಕಲಿಸುತ್ತಾರೆ? ಇವರು ಒಂದು ಶಿಕ್ಷಣ ನೀತಿ ಸಮಿತಿ ರಚಿಸಿದ್ದರು. ಆ ಸಮಿತಿಯನ್ನು ಸಮರ್ಥವಾಗಿ ಮುನ್ನಡೆಸಲೂ ಈ ರಾಜ್ಯ ಸರ್ಕಾರಕ್ಕೆ ಆಗುತ್ತಿಲ್ಲ. ರಾಜ್ಯ ಸರ್ಕಾರದಲ್ಲಿ ಪೂರ್ಣಾವಧಿ ಶಿಕ್ಷಣ ಸಚಿವರೇ ಇಲ್ಲದಿರುವುದೇ ಇದಕ್ಕೆ ಕಾರಣ ಎಂದು ಆಕ್ರೋಶ ವ್ಯಕ್ತಪಡಿಸಿದರು.

5, 8, 9ನೇ ತರಗತಿಗಳ ಮೌಲ್ಯಮಾಪನ, ಬೋರ್ಡ್ ಪರೀಕ್ಷೆ ಮಾಡಲು ಸರ್ಕಾರ ಹೊರಟಿದೆ. ಮಕ್ಕಳು, ಪೋಷಕರು, ಶಾಲಾ ಮುಖ್ಯಸ್ಥರ ಜೊತೆ ಸಂವಾದ ಮಾಡಿ ಉದ್ದೇಶ ಸ್ಪಷ್ಟಗೊಳಿಸದೇ ನ್ಯಾಯಾಲಯದವರೆಗೆ ಪ್ರಕರಣ ಹೋಗಿತ್ತು. ನ್ಯಾಯಾಲಯದ ತಡೆಯಾಜ್ಞೆ, ಅದರ ತೆರವು, ಪರೀಕ್ಷೆ ದಿನ ಪ್ರಕಟಿಸುವುದು ಹೀಗೆ ನಡೆದು ಈಗ ಫಲಿತಾಂಶ ಪ್ರಕಟಿಸಿಲ್ಲ. 

ಎಳೆ ಮಕ್ಕಳ ಮನಸ್ಥಿತಿ, ಪೋಷಕರ ಆತಂಕವನ್ನು ಗಣನೆಗೇ ತೆಗೆದುಕೊಂಡಿಲ್ಲ. ಈ ಮಕ್ಕಳಿಗೆ ಮತ ಇಲ್ಲದ ಕಾರಣ ಹೀಗೆ ಮಾಡುತ್ತಿದ್ದಾರೆ. ವಿದ್ಯಾರ್ಥಿಗಳ ಜೊತೆ ಚೆಲ್ಲಾಟ, ಅವರ ಜೀವನವನ್ನು ಅಂಧಕಾರಕ್ಕೆ ಒಯ್ಯುತ್ತಿದ್ದಾರೆ. ವಿದ್ಯಾರ್ಥಿ ಜೀವನ ಮಸಕು ಮಾಡುವುದೂ ಒಂದು ಗ್ಯಾರಂಟಿ ಎಂದು ಈ ಸರ್ಕಾರ ಭಾವಿಸಿದೆ ಎಂದು ಟೀಕಿಸಿದರು.ಮಕ್ಕಳ ಆತಂಕ ನಿವಾರಣೆ, ವಿಷಾದ ವ್ಯಕ್ತಪಡಿಸುವುದು, ಮಕ್ಕಳಲ್ಲಿ ಆತ್ಮವಿಶ್ವಾಸ ತುಂಬುವ ಕೆಲಸ ಈ ಸರ್ಕಾರದ ಶಿಕ್ಷಣ ಸಚಿವರಿಂದ ಆಗಿಲ್ಲ.

 ನಮ್ಮ ರಾಜ್ಯದ ಸಿಇಟಿ (ಸಾಮಾನ್ಯ ಪ್ರವೇಶ ಪರೀಕ್ಷೆ) ಅತ್ಯಂತ ಚೆನ್ನಾಗಿದೆ ಎಂದು ಹಿಂದೆ ಹೆಸರು ಪಡೆದಿತ್ತು. ಇವತ್ತು ಸಿಇಟಿಯನ್ನು ಹಾಳುಗೆಡಹಿದ ಕೀರ್ತಿ ಈ ಸರ್ಕಾರಕ್ಕೆ ಸಲ್ಲುತ್ತದೆ. ಸರ್ವರ್ ಡೌನ್ ಕಾರಣಕ್ಕೆ ಪ್ರವೇಶಪತ್ರ ಪಡೆಯಲು ವಿದ್ಯಾರ್ಥಿಗಳಿಗೆ ಆಗಲಿಲ್ಲ. ಪರೀಕ್ಷಾ ಅಕ್ರಮ ತಡೆ ನೆಪವೊಡ್ಡಿ ಒಂದು ಜಿಲ್ಲೆಯ ಹುಡುಗ ಇನ್ನೊಂದು ಜಿಲ್ಲೆಯಲ್ಲಿ ಪರೀಕ್ಷೆ ಬರೆಯುವಂತೆ ಮಾಡಿದ್ದರು ಎಂದು ತಿಳಿಸಿದರು.

ಸುರೇಶ್‌ ಸರಿಯಾಗಿ ವಿಪಕ್ಷದಲ್ಲಿ ಕೂರಲಿ: ಸಚಿವ ಮಧು ತಿರುಗೇಟು

ಶಿಕ್ಷಣ ಇಲಾಖೆಯನ್ನು ಹೇಗೆ ನಡೆಸಿಕೊಂಡು ಹೋಗಬೇಕೆಂಬುದು ಹಾಲಿ ಸಚಿವನಾದ ನನಗೆ ಗೊತ್ತಿದೆ. ಅದನ್ನು ನಾನು ಮಾಡುತ್ತೇನೆ. ಮಾಜಿ ಸಚಿವರಾದ ಎಸ್‌.ಸುರೇಶ್‌ ಕುಮಾರ್‌ ಅವರು ಮೊದಲು ಪ್ರತಿಪಕ್ಷದಲ್ಲಿ ಸರಿಯಾಗಿ ಕೂತು ಕೆಲಸ ಮಾಡಲಿ ಎಂದು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಸಚಿವ ಮಧು ಬಂಗಾರಪ್ಪ ತಿರುಗೇಟು ನೀಡಿದ್ದಾರೆ.

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಶುಕ್ರವಾರ ವಿಧಾನಸೌಧದಲ್ಲಿ ನಡೆಸಿದ ವಿವಿಧ ಇಲಾಖಾ ಸಚಿವರು ಮತ್ತು ಅಧಿಕಾರಿಗಳ ಸಭೆಯಲ್ಲಿ ಭಾಗವಹಿಸಿದ ಬಳಿಕ ಮಧು ಸುದ್ದಿಗಾರರೊಂದಿಗೆ ಮಾತನಾಡಿದರು.ರಾಜ್ಯದಲ್ಲಿ ಪೂರ್ಣಾವಧಿ ಶಿಕ್ಷಣ ಸಚಿವರಿಲ್ಲ ಎಂದು ಮಾಜಿ ಶಿಕ್ಷಣ ಸಚಿವ ಸುರೇಶ್‌ ಕುಮಾರ್‌ ಟೀಕಿಸಿದ್ದಾರಲ್ಲಾ ಎಂದು ಪ್ರಶ್ನಿಸಿದಾಗ, ಯಾರು ಹಾಗೆ ಹೇಳಿದ್ದು ಮಾಜಿ ಶಿಕ್ಷಣ ಸಚಿವರಾ? ಈಗ ಹಾಲಿ ಶಿಕ್ಷಣ ಸಚಿವ ನಾನು ತಾನೆ. ನನಗೆ ಗೊತ್ತಿದೆ ಇಲಾಖೆಯನ್ನು ಹೇಗೆ ನಡೆಸಿಕೊಂಡು ಹೋಗಬೇಕು ಎನ್ನುವುದು. ಈ ಬಗ್ಗೆ ಸಿಎಂ ನನಗೆ ನಿರ್ದೇಶನ ನೀಡಿದ್ದಾರೆ. 

ಅವರಿಗೆ ನಾನು ಕಾಣಿಸುತ್ತಿಲ್ಲ ಅಷ್ಟೆ. ಏಕೆಂದರೆ ಅವರು ವಿರೋಧ ಪಕ್ಷದಲ್ಲಿ ಸರಿಯಾಗಿ ಕೂತೇ ಇಲ್ಲ. ಮೊದಲು ವಿಪಕ್ಷದಲ್ಲಿ ಸರಿಯಾಗಿ ಕೂತು ಕೆಲಸ ಮಾಡೋಕೆ ಹೇಳಿ ಎಂದರು.ಮುಂದಿನ ವರ್ಷದಿಂದ ಗ್ರೇಸ್‌ ಅಂಕ ಇಳಿಕೆ:ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಶೇ.20ರಷ್ಟು ಗ್ರೇಸ್‌ ಅಂಕ ನೀಡಿರುವುದು 2023-24ನೇ ಸಾಲಿಗೆ ಮಾತ್ರ ಸೀಮಿತ. ಮುಂದಿನ ಸಾಲಿನಿಂದ ಇದನ್ನು ಈ ಹಿಂದಿನ ವರ್ಷಗಳಲ್ಲಿ ಇದ್ದ ಮಟ್ಟಕ್ಕೆ ಇಳಿಸಲಾಗುವುದು ಎಂದು ಇದೇ ವೇಳೆ ಸಚಿವ ಮಧು ಬಂಗಾರಪ್ಪ ಸ್ಪಷ್ಟಪಡಿಸಿದ್ದಾರೆ.

ಇಂದಿನ ಸಭೆಯಲ್ಲಿ ಗ್ರೇಸ್‌ ಅಂಕದ ವಿಚಾರ ಪ್ರಮುಖವಾಗಿ ಚರ್ಚೆಯಾಗಿದ್ದು, ಸ್ವತಃ ಮುಖ್ಯಮಂತ್ರಿಗಳೇ ಗ್ರೇಸ್‌ ಅಂಕದ ಪ್ರಮಾಣವನ್ನು ಯಾವ ಮಾನದಂಡದಲ್ಲಿ ಶೇ.20ಕ್ಕೆ ಹೆಚ್ಚಿಸಿದಿರಿ ಎಂದು ತರಾಟೆಗೆ ತೆಗೆದುಕೊಂಡರಂತಲ್ಲ ಎಂಬ ಪ್ರಶ್ನೆಗೆ, ಈಗಾಗಲೇ ಫಲಿತಾಂಶ ಪ್ರಕಟಿಸುವ ವೇಳೆಯಲ್ಲೇ ನಮ್ಮ ಅಧಿಕಾರಿಗಳು ಸ್ಪಷ್ಟವಾಗಿ ಹೇಳಿದ್ದಾರೆ. ಶೇ.20ರಷ್ಟು ಗ್ರೇಸ್‌ ಅಂಕ ನೀಡಿರುವುದು ಈ ಸಾಲಿಗೆ ಮಾತ್ರ ಸೀಮಿತ. ಮುಂದಿನ ಸಾಲಿನಲ್ಲಿ ಬಹಶಃ ಇದು ಕಳೆದ ಸಾಲಿನಲ್ಲಿ ಇದ್ದಂತೆ ಶೇ.10ಕ್ಕೆ ಇಳಿಕೆಯಾಗಬಹುದು ಎಂದರು. ಮುಂದಿನ ವರ್ಷಗಳಲ್ಲಿ ಗ್ರೇಸ್‌ದರು ಅಂಕ ಪ್ರಮಾಣ ಮತ್ತೆ ಇಳಿಕೆಯಾಗಲಿದೆ.

ಅಲ್ಲದೆ, ವರ್ಷದಿಂದ ವರ್ಷಕ್ಕೆ ಎಸ್ಸೆಸ್ಸೆಲ್ಸಿ ಫಲಿತಾಂಶ ಯಾವ ರೀತಿ ಉತ್ತಮಗೊಳ್ಳುತ್ತದೋ ಅದರ ಆಧಾರದ ಮೇಲೆ ಮುಂದಿನ ವರ್ಷಗಳಲ್ಲಿ ಶೇ.10ಕ್ಕಿಂತಲೂ ಕಡಿಮೆಯಾಗಬಹುದು ಎಂದು ಹೇಳಿದರು.