ಸಮಾಜಕ್ಕೆ ಯಾವುದೇ ಘಾಸಿ ಮಾಡದ, ತಪ್ಪು ಮಾಡದ ಸಮುದಾಯ ಹವ್ಯಕ ಸಮುದಾಯವಾಗಿದೆ.

ಕನ್ನಡಪ್ರಭ ವಾರ್ತೆ ಶಿರಸಿ

ಸಮಾಜಕ್ಕೆ ಯಾವುದೇ ಘಾಸಿ ಮಾಡದ, ತಪ್ಪು ಮಾಡದ ಸಮುದಾಯ ಹವ್ಯಕ ಸಮುದಾಯವಾಗಿದೆ ಎಂದು ಶಾಸಕ ಶಿವರಾಮ ಹೆಬ್ಬಾರ ಹೇಳಿದರು.

ಭಾನುವಾರ ನಗರದ ತೋಟಗಾರ್ಸ್ ಕಲ್ಯಾಣ ಮಂಟಪದಲ್ಲಿ ಅಖಿಲ ಹವ್ಯಕ ಮಹಾಸಭಾ ವತಿಯಿಂದ ಶಿರಸಿ ಶೈಕ್ಷಣಿಕ ಜಿಲ್ಲೆಯ ಹವ್ಯಕ ಶಿಕ್ಷಕರ ವೇದಿಕೆ ಮತ್ತು ಹವ್ಯಕ ವೈದಿಕ ಸಂಘಟನೆ ಆಶ್ರಯದಲ್ಲಿ ಆಯೋಜಿಸಿದ್ದ ಸಂಸ್ಕಾರೋತ್ಸವ ಉದ್ಘಾಟಿಸಿ ಮಾತನಾಡಿದರು.

ವಿಶ್ವದ ಎಲ್ಲೆಡೆ ತನ್ನ ಸ್ವಂತ ಸಾಮರ್ಥ್ಯದ ಮೇಲೆ ಪ್ರತಿಭಾವಂತ ಸಮಾಜ ಕಟ್ಟಿರುವ ಸಮುದಾಯ ಹವ್ಯಕ ಸಮುದಾಯವಾಗಿದೆ. ಇಂಥ ಸಮುದಾಯ ತಳದಿಂದ ಗಟ್ಟಿಯಾಗಲು ಹಲವರ ಕೊಡುಗೆಯಿದೆ. ಎಲ್ಲರೂ ಜಾತಿ ಹೇಳಲು ಗೌರವ ಪಟ್ಟರೆ ಹವ್ಯಕರು ಸ್ವಲ್ಪ ಭಯಪಡುತ್ತಾರೆ. ಸರ್ವೇ ಜನಾ ಸುಖೀನೋ ಭವಂತು ಹೇಳುವ ಸಮಾಜ ಹವ್ಯಕ ಸಮಾಜವಾಗಿದ್ದು, ಹವ್ಯಕರಾಗಿ ಹುಟ್ಟಿರುವುದಕ್ಕೆ ಗೌರವ, ಹೆಮ್ಮೆ ಇದೆ. ಹವ್ಯಕರ ಭೋಜನ ಪ್ರಿಯ ಎಂದು ಅಪಹಾಸ್ಯ ಮಾಡಲಾಗುತ್ತದೆ. ಆದರೆ ಅದು ಬಹುಜನ ಪ್ರಿಯ ಸಮಾಜವಾಗಿದೆ. ವ್ಯಕ್ತಿಯ ಬದುಕಿನಲ್ಲಿ ಮಾತ್ರ ಸಂಸ್ಕಾರ ಇದ್ದರೆ ಸಾಲದು, ನಡೆ, ನುಡಿ, ಪ್ರತಿ ಚಟುವಟಿಕೆಯಲ್ಲಿ ಅದು ಪ್ರತಿಫಲಿಸಬೇಕು. ರಾಷ್ಟ್ರೀಯತೆ, ದೇಶಭಕ್ತಿಯ ಜತೆ ನಾವು ಹುಟ್ಟಿದ ಜಾತಿ, ಸಮುದಾಯದ ಬಗೆಗೂ ಹೆಮ್ಮೆ ಇರಬೇಕು. ಸಮಾಜ ಸರ್ವಸ್ಪರ್ಷಿ, ಸರ್ವ ವ್ಯಾಪಿಯೂ ಆಗಬೇಕು. ಆಗ ಸಮಾಜದ ಆಶೋತ್ತರ ಈಡೇರಲು ಸಾಧ್ಯ. ಸಮಾಜಕ್ಕೆ ಬೇಕಾದ ಸಂಸ್ಕಾರ ನೆನಪಿಸುವ ಹಾಗೂ ನೀಡುವ ವೇದಿಕೆ ಇದಾಗಿದೆ ಎಂದರು.

ಸಾಮಾಜಿಕ ಕಾರ್ಯಕರ್ತ ಅನಂತಮೂರ್ತಿ ಹೆಗಡೆ ಮಾತನಾಡಿ, ಸ್ಥಾನಿಕವಾಗಿ ಉದ್ಯೋಗ ಸೃಷ್ಟಿಯಾದರೆ ಮಾತ್ರ ಯುವ ಸಮೂಹ ಸ್ಥಳೀಯವಾಗಿ ಉಳಿಯಲು ಸಾಧ್ಯ. ಸಂಘಸಂಸ್ಥೆಗಳು ಈ ನಿಟ್ಟಿನಲ್ಲಿ ಹೆಚ್ಚಿನ ಆದ್ಯತೆ ನೀಡಿದರೆ ಮಾತ್ರ ಹವ್ಯಕ ಸಮುದಾಯದ ಉಳಿವು ಸಾಧ್ಯ. ಹವ್ಯಕರಲ್ಲಿ ಇಂದು ರಾಜಕೀಯ ಪ್ರಾತಿನಿಧ್ಯ ಕಡಿಮೆಯಾಗುತ್ತಿದೆ. ಇದರಿಂದ ಸಮುದಾಯಕ್ಕೆ ತೊಂದರೆಯಾಗುತ್ತಿದೆ. ರಾಜಕೀಯವಾಗಿ ಸಂಘಟಿತವಾಗುವ ಅಗತ್ಯವಿದೆ ಎಂದು ಹೇಳಿದರು.

ಅಖಿಲ ಹವ್ಯಕ ಮಹಾಸಭಾ ಉಪಾಧ್ಯಕ್ಷರಾದ ಶ್ರೀಧರ ಭಟ್ ಕೆಕ್ಕಾರ, ಆರ್.ಎಂ. ಹೆಗಡೆ ಬಾಳೇಸರ, ಹವ್ಯಕ ಶಿಕ್ಷಕ ವೇದಿಕೆ ಸಂಚಾಲಕ ಡಿ.ಪಿ. ಹೆಗಡೆ, ಅಖಿಲ ಹವ್ಯಕ ಮಹಾಸಭಾ ನಿರ್ದೇಶಕ ಶಶಾಂಕ ಹೆಗಡೆ ಶಿಗೇಹಳ್ಳಿ, ಸಮಾವೇಶದ ಸಂಚಾಲಕ ವಿ. ರಾಮಚಂದ್ರ ಭಟ್ಟ ಮತ್ತಿತರರಿದ್ದರು. ಕಾರ್ಯಕ್ರಮದ ಭಾಗವಾಗಿ ವಿವಿಧ ವಿಷಯಗಳ ಕುರಿತು ಚಿಂತನಾ ಗೋಷ್ಠಿ ಜರುಗಿತು.