ಕಾಂಗ್ರೆಸ್‌ಗೆ ಜನಾದೇಶ ಆಗಿಲ್ಲ.. ವಿಧಾನಸಭೆಗೂ ಸ್ಪರ್ಧಿಸುವೆ

| Published : Jun 13 2024, 12:45 AM IST

ಸಾರಾಂಶ

ದಾವಣಗೆರೆ ಲೋಕಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಪಕ್ಷ ಗೆದ್ದಿದ್ದರೂ, ಅದನ್ನು ನಾನು ಪಕ್ಷದ ಗೆಲುವಾಗಿ ಭಾವಿಸುವುದಿಲ್ಲ. ಮುಂಬರುವ ವಿಧಾನಸಭೆ ಚುನಾವಣೆಯಲ್ಲೂ ಸ್ಪರ್ಧಿಸುತ್ತೇನೆ ಎಂದು ಪರಾಜಿತ ಪಕ್ಷೇತರ ಅಭ್ಯರ್ಥಿ, ಬೆಂಗಳೂರಿನ ಇನ್‌ಸೈಟ್ಸ್ ಐಎಎಸ್‌ ತರಬೇತಿ ಸಂಸ್ಥೆ ಸಂಸ್ಥಾಪಕ ಜಿ.ಬಿ.ವಿನಯಕುಮಾರ ದಾವಣಗೆರೆಯಲ್ಲಿ ಹೇಳಿದ್ದಾರೆ.

- ಲೋಕಸಭೆ ಚುನಾವಣೆ ಪರಾಜಿತ ಪಕ್ಷೇತರ ಅಭ್ಯರ್ಥಿ ವಿನಯಕುಮಾರ ಘೋಷಣೆ । 1.5 ಲಕ್ಷ ಮತಗಳ ನಿರೀಕ್ಷಿಸಿದ್ದೆ ಎಂದ ಜಿಬಿವಿ - - - ಕನ್ನಡಪ್ರಭ ವಾರ್ತೆ, ದಾವಣಗೆರೆ

ದಾವಣಗೆರೆ ಲೋಕಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಪಕ್ಷ ಗೆದ್ದಿದ್ದರೂ, ಅದನ್ನು ನಾನು ಪಕ್ಷದ ಗೆಲುವಾಗಿ ಭಾವಿಸುವುದಿಲ್ಲ. ಮುಂಬರುವ ವಿಧಾನಸಭೆ ಚುನಾವಣೆಯಲ್ಲೂ ಸ್ಪರ್ಧಿಸುತ್ತೇನೆ ಎಂದು ಪರಾಜಿತ ಪಕ್ಷೇತರ ಅಭ್ಯರ್ಥಿ, ಬೆಂಗಳೂರಿನ ಇನ್‌ಸೈಟ್ಸ್ ಐಎಎಸ್‌ ತರಬೇತಿ ಸಂಸ್ಥೆ ಸಂಸ್ಥಾಪಕ ಜಿ.ಬಿ.ವಿನಯಕುಮಾರ ಹೇಳಿದರು.

ನಗರದಲ್ಲಿ ಬುಧ‍ವಾರ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ದಾವಣಗೆರೆ ಲೋಕಸಭೆ ಕ್ಷೇತ್ರ ಚುನಾವಣೆಯಲ್ಲಿ ಕಾಂಗ್ರೆಸ್ ಗೆಲುವು ಜನಾದೇಶವೂ ಅಲ್ಲ, ಬದಲಾಗಿ ಪ್ರಜಾಪ್ರಭುತ್ವದ ಕಗ್ಗೊಲೆಯಾಗಿದೆ ಎಂದರು.

ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್‌-ಬಿಜೆಪಿ ಎರಡೂ ಪಕ್ಷಗಳು ಹಣದ ಹೊಳೆಯನ್ನೇ ಹರಿಸಿ, ಮತಗಳನ್ನು ಖರೀದಿಸಿದವು. ಹಣಬಲ, ತೋಳ್ಬಲದಿಂದ ನನಗೆ ಸಿಗಬೇಕಾಗಿದ್ದ ಕಾಂಗ್ರೆಸ್‌ ಟಿಕೆಟ್‌ ತಪ್ಪಿಸಿದರು. ನಾನು ಪಕ್ಷೇತರನಾಗಿ ಚುನಾವಣೆಗೆ ನಿಂತಾಗ ನನ್ನ ಜೊತೆಗಿದ್ದ ಕೆಲ ಮುಖಂಡರು, ಕಾರ್ಯಕರ್ತರನ್ನು ಹೆದರಿಸಿ, ಬೆದರಿಸಿ, ಹಣ ಕೊಟ್ಟು ನನ್ನನ್ನು ಬೆಂಬಲಿಸದಂತೆ, ಮತ ಹಾಕದಂತೆ ನೋಡಿಕೊಂಡರು ಎಂದು ಆರೋಪಿಸಿದರು.

ಕ್ಷೇತ್ರದಲ್ಲಿ ಪ್ರಜಾಪ್ರಭುತ್ವದ ಉ‍ಳಿವಿಗಾಗಿ, ಪಾಳೇಗಾರಿಕೆಯ ವಿರುದ್ಧ ನಾನು ಪಕ್ಷೇತರನಾಗಿ ಸ್ಪರ್ಧೆ ಮಾಡಿದ್ದೆ. ನಾನು ಹಣ ಹಂಚದಿದ್ದರೂ, ಕ್ಷೇತ್ರದಲ್ಲಿ 42 ಸಾವಿರಕ್ಕೂ ಅಧಿಕ ಮತಗಳನ್ನು ಜನರು ನೀಡಿ, ಆಶೀರ್ವಾದ ಮಾಡಿದ್ದಾರೆ. ಕನಿಷ್ಠ 1.5 ಲಕ್ಷ ಮತಗಳು ಬರುವ ನಿರೀಕ್ಷೆ ಇತ್ತು. ಆದರೆ, ಕಡಿಮೆ ಮತ ಬಂದಿದ್ದು ನನಗೆ ಅಚ್ಚರಿ ಜೊತೆಗೆ ತೀವ್ರ ನೋವನ್ನಂಟು ಮಾಡಿದೆ ಎಂದು ವಿನಯಕುಮಾರ ತಿಳಿಸಿದರು.

ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ಸಹ ನಾನು ಸ್ಪರ್ಧೆ ಮಾಡುತ್ತೇನೆ. ದಾವಣಗೆರೆ ಉತ್ತರ ಕ್ಷೇತ್ರ, ದಕ್ಷಿಣ ಕ್ಷೇತ್ರ, ಹರಿಹರ ಅಥವಾ ಹೊನ್ನಾಳಿ ಕ್ಷೇತ್ರ ಇವುಗಳ ಪೈಕಿ ಯಾವುದಾದರೂ ಒಂದು ವಿಧಾನಸಭಾ ಕ್ಷೇತ್ರದಲ್ಲಿ ಸ್ಪರ್ಧಿಸುವುದು ನಿಶ್ಚಿತ. ಸದ್ಯದ ಪರಿಸ್ಥಿತಿಯಲ್ಲಿ ನಾನು ರಾಜಕೀಯ ಅಲೆಮಾರಿಯಾಗಿದ್ದೇನೆ. ಈಗಿನ ರಾಜಕಾರಣದಲ್ಲಿ ಅನಾಥನಾಗಿದ್ದೇನಷ್ಟೇ. ಆದರೆ, ರಾಜಕಾರಣದಲ್ಲಿಯೇ ಮುಂದುವರಿಯುತ್ತೇನೆ ಎಂದು ಹೇಳಿದರು.

ನನ್ನ ಕನಸು, ಗುರಿಗಳು ದೊಡ್ಡದಿವೆ. ಯಾವುದೇ ಕಾರಣಕ್ಕೂ, ಎಂತಹದ್ದೇ ಪರಿಸ್ಥಿತಿಯಲ್ಲೂ ನನ್ನ ಕನಸು ಕಮರಿಲ್ಲ. ನನ್ನ ಹೋರಾಟವನ್ನೂ ನಿಲ್ಲಿಸುವುದಿಲ್ಲ. ಮತ್ತೆ ಬರುತ್ತೇನೆ, ಮುಂದಿನ ಸಲ ಗೆದ್ದೇ ಗೆಲ್ಲುತ್ತೇನೆ. ನಾನು ಹಠವಾದಿ. ಜನರ ಸೇವೆ ಮಾಡುವುದೇ ನನ್ನ ಗುರಿ ಹಾಗೂ ಆಸೆಯಾಗಿದೆ. ಎಂತಹ ಕಾರಣಕ್ಕೂ ರಾಜಕಾರಣದಿಂದ ಹಿಂದೆ ಸರಿಯುವ ಪ್ರಶ್ನೆಯೇ ಇಲ್ಲ. ದಾವಣಗೆರೆ ಲೋಕಸಭಾ ಕ್ಷೇತ್ರದ ಸದಸ್ಯನಾಗದಿದ್ದರೇನಂತೆ, ಮುಂದಿನ ದಿನಗಳಲ್ಲಿ ಈ ಜಿಲ್ಲೆಯ ಯಾವುದಾದರೂ ಒಂದು ಕ್ಷೇತ್ರಕ್ಕೆ ಶಾಸಕನಂತೂ ಆಗುತ್ತೇನೆಂಬ ಭರವಸೆ ಇದೆ ಎಂದು ಜಿ.ಬಿ.ವಿನಯಕುಮಾರ ವಿಶ್ವಾಸದಿಂದ ನುಡಿದರು.

ಸುದ್ದಿಗೋಷ್ಠಿಯಲ್ಲಿ ಮುಖಂಡರಾದ ರಂಗಸ್ವಾಮಿ, ಜಯಣ್ಣ ಇತರರು ಇದ್ದರು.

- - -

ಕೋಟ್‌ ನನ್ನ ಹೋರಾಟಕ್ಕೆ ಸದ್ಯ ತಾತ್ಕಾಲಿಕವಾಗಿ ಹಿನ್ನಡೆಯಾಗಿದೆ ಅಷ್ಟೇ. ಯಾವುದೇ ಕಾರಣಕ್ಕೂ ನಾನು ದಾವಣಗೆರೆ ನಗರ, ಜಿಲ್ಲೆಯನ್ನು ಬಿಟ್ಟು ಎಲ್ಲಿಯೂ ಹೋಗುವುದಿಲ್ಲ. ಇಲ್ಲಿಯೇ ಐಎಎಸ್, ಕೆಎಎಸ್‌ ಕೋಚಿಂಗ್, ನವೋದಯ ಕೋಚಿಂಗ್‌ ತರಬೇತಿಯನ್ನೂ ಆರಂಭಿಸಲಿದ್ದೇನೆ

- ಜಿ.ಬಿ.ವಿನಯಕುಮಾರ, ಇನ್‌ಸೈಟ್‌ ಸಂಸ್ಥೆ ಸಂಸ್ಥಾಪಕ

- - - -12ಕೆಡಿವಿಜಿ1, 2:

ದಾವಣಗೆರೆಯಲ್ಲಿ ಲೋಕಸಭಾ ಕ್ಷೇತ್ರದ ಪರಾಜಿತ ಪಕ್ಷೇತರ ಅಭ್ಯರ್ಥಿ ಜಿ.ಬಿ.ವಿನಯಕುಮಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.