ಸಾರಾಂಶ
ಎನ್‌ಡಿಎ ಇಲ್ಲದ ಕಾಂಗ್ರೆಸ್ ನೇತೃತ್ವದ ಇಂಡಿಯಾ ಕೂಟ ಸುಭದ್ರ ಸರ್ಕಾರ ಕೇಂದ್ರದಲ್ಲಿ ಅಧಿಕಾರಕ್ಕೆ ಬರಲಿದೆ.
ಕನ್ನಡಪ್ರಭ ವಾರ್ತೆ ಯಲಬುರ್ಗಾ
ದೇಶದಲ್ಲಿ ಎಲ್ಲೂ ಪ್ರಧಾನಿ ನರೇಂದ್ರ ಮೋದಿಯವರ ಅಲೆಯಿಲ್ಲ. ಇದೀಗ ಕಾಂಗ್ರೆಸ್ ಅಲೆ ಪ್ರಾರಂಭವಾಗಿದ್ದು, ಎನ್‌ಡಿಎ ಇಲ್ಲದ ಕಾಂಗ್ರೆಸ್ ನೇತೃತ್ವದ ಇಂಡಿಯಾ ಕೂಟ ಸುಭದ್ರ ಸರ್ಕಾರ ಕೇಂದ್ರದಲ್ಲಿ ಅಧಿಕಾರಕ್ಕೆ ಬರಲಿದೆ ಎಂದು ಮುಖ್ಯಮಂತ್ರಿ ಆರ್ಥಿಕ ಸಲಹೆಗಾರ, ಶಾಸಕ ಬಸವರಾಜ ರಾಯರೆಡ್ಡಿ ಹೇಳಿದರು.ಪಟ್ಟಣದ ಕಾಂಗ್ರೆಸ್ ಕಚೇರಿಯಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನರೇಂದ್ರ ಮೋದಿಯವರ ಬಿಜೆಪಿ ಸರ್ಕಾರ ಹತ್ತು ವರ್ಷದಲ್ಲಿ ಬರೀ ಸುಳ್ಳು ಹೇಳುವುದನ್ನು ಬಿಟ್ಟರೆ ಯಾವ ಅಭಿವೃದ್ಧಿಯನ್ನೂ ಮಾಡಲಿಲ್ಲ. ಹೀಗಾಗಿ ಈ ಲೋಕಸಭಾ ಚುನಾವಣೆಯಲ್ಲಿ ದೇಶದ ಜನತೆ ಬಿಜೆಪಿ ಸರ್ಕಾರಕ್ಕೆ ತಕ್ಕ ಪಾಠ ಕಲಿಸಿದ್ದಾರೆ ಎಂದರು.
ಪ್ರಧಾನಿ ನರೇಂದ್ರ ಮೋದಿಯವರು ೪೦೦ ಸ್ಥಾನಗಳನ್ನು ಪಡೆಯುತ್ತೇವೆ ಎಂದು ಅಬ್ಬರದ ಪ್ರಚಾರ ಕೈಗೊಂಡಿದ್ದರು. ಆದರೆ, ಅವರ ಆಡಳಿತ ವೈಖರಿಯನ್ನು ಗಮನಿಸಿದ ದೇಶದ ಜನತೆ ಸರಳ ಬಹುಮತಕ್ಕೆ ಬೇಕಾಗುವಷ್ಟು ಸ್ಥಾನಗಳನ್ನು ಕೊಡಲಿಲ್ಲ. ಮೋದಿಯವರು ತಮ್ಮ ಅತಿಯಾದ ಸುಳ್ಳಿನಿಂದ ಜನಪ್ರಿಯತೆ ಕಳೆದುಕೊಂಡು ಬಿಹಾರ ಮುಖ್ಯಮಂತ್ರಿ ನಿತೀಶಕುಮಾರ ಹಾಗೂ ಆಂಧ್ರದ ಮಾಜಿ ಸಿಎಂ ಚಂದ್ರುಬಾಬು ನಾಯ್ಡು ಅವರಿಗೆ ಸರ್ಕಾರ ರಚನೆಗಾಗಿ ಅಂಗಲಾಚುವ ಪರಿಸ್ಥಿತಿಗೆ ಬಂದಿದ್ದಾರೆ. ಈ ಲೋಕಸಭಾ ಚುನಾವಣೆ ಮತದಾನೋತ್ತರ ಸಮೀಕ್ಷೆಗಳೆಲ್ಲವೂ ಸುಳ್ಳಾಗಿವೆ. ಎಲ್ಲ ಮಾಧ್ಯಮಗಳು ಮೋದಿಯವರನ್ನು ವೈಭವಿಕರಿಸಿ ಸಮೀಕ್ಷೆ ನೀಡಿರುವುದು ಸರಿಯಲ್ಲ. ದೇಶದ ಜನತೆ ಮೋದಿ ಸರ್ಕಾರದ ವಿರುದ್ಧ ನೀಡಿದ ತೀರ್ಪು ಇದಾಗಿದೆ. ಟಿವಿ ಮಾಧ್ಯಮಗಳ ಸಮೀಕ್ಷೆ ಕುರಿತು ಆಕ್ರೋಶ ವ್ಯಕ್ತಪಡಿಸಿದರು.ರಾಜ್ಯದಲ್ಲಿ ಸಿಎಂ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಜನಮೆಚ್ಚುವಂಥ ಆಡಳಿತ ನೀಡುತ್ತಿರುವುದನ್ನು ಗಮನಿಸಿ ಈ ಲೋಕಸಭಾ ಚುನಾವಣೆಯಲ್ಲಿ ೯ ಸ್ಥಾನಗಳನ್ನು ಪಡೆದುಕೊಂಡಿದೆ. ಕಳೆದ ಚುನಾವಣೆಯಲ್ಲಿ ಕಾಂಗ್ರೆಸ್ ೧ ಸ್ಥಾನವನ್ನು ಪಡೆದಿತ್ತು. ಇದೀಗ ೮ ಹೆಚ್ಚು ಸ್ಥಾನ ಪಡೆದಿರುವುದಕ್ಕೆ ಸಿದ್ದರಾಮಯ್ಯನವರ ಜನಪರ ಆಡಳಿತವೇ ಸಾಕ್ಷಿ ಎಂದರು.
ಈ ಸಂದರ್ಭ ಬ್ಲಾಕ್ ಕಾಂಗ್ರೆಸ್ ತಾಲೂಕಾಧ್ಯಕ್ಷ ಬಸವರಾಜ ಉಳ್ಳಾಗಡ್ಡಿ, ವೀರನಗೌಡ ಬಳೂಟಗಿ, ಮಹಾಂತೇಶ ಗಾಣಿಗೇರ, ಡಾ. ಶಿವನಗೌಡ ದಾನರೆಡ್ಡಿ, ಆನಂದ ಉಳ್ಳಾಗಡ್ಡಿ, ಅಂದಾನಗೌಡ ಪೊಲೀಸ್ ಪಾಟೀಲ, ಶರಣಪ್ಪ ಗಾಂಜಿ, ರೇವಣೆಪ್ಪ ಹಿರೇಕುರಬರ, ಹನುಮಂತ ಭಜಂತ್ರಿ, ಹುಲಗಪ್ಪ ಬಂಡಿವಡ್ಡರ, ಮಲ್ಲು ಜಕ್ಕಲಿ, ಹಂಪಯ್ಯ ಹಿರೇಮಠ, ನಿಂಗಪ್ಪ ಕಮತರ, ರಾಜು ಹಡಪದ ಮತ್ತಿತರರು ಇದ್ದರು.