ಕೊಪ್ಪಳ ನಗರಸಭೆ ಖಜಾನೆಯಲ್ಲಿ ಕಾಸು ಇಲ್ಲ, ಫೈಲು ಇಲ್ಲ!

| Published : Oct 28 2025, 12:36 AM IST

ಕೊಪ್ಪಳ ನಗರಸಭೆ ಖಜಾನೆಯಲ್ಲಿ ಕಾಸು ಇಲ್ಲ, ಫೈಲು ಇಲ್ಲ!
Share this Article
  • FB
  • TW
  • Linkdin
  • Email

ಸಾರಾಂಶ

ಕೊಪ್ಪಳ ನಗರಸಭೆಯಲ್ಲಿ ನಯಾ ಪೈಸೆ ಇಲ್ಲ, ಇದ್ದ ₹28.96 ಕೋಟಿಯನ್ನು ಸಂಪೂರ್ಣ ಖರ್ಚು ಮಾಡಲಾಗಿದೆ. ಆದರೆ ಮಾಡಿದ ಖರ್ಚಿಗೆ ಲೆಕ್ಕವೂ ಇಲ್ಲ, ಅದರ ದಾಖಲೆಯೂ ಇಲ್ಲ!

ಕೊಪ್ಪಳ: ಕೊಪ್ಪಳ ನಗರಸಭೆಯಲ್ಲಿ ನಯಾ ಪೈಸೆ ಇಲ್ಲ, ಇದ್ದ ₹28.96 ಕೋಟಿಯನ್ನು ಸಂಪೂರ್ಣ ಖರ್ಚು ಮಾಡಲಾಗಿದೆ. ಆದರೆ ಮಾಡಿದ ಖರ್ಚಿಗೆ ಲೆಕ್ಕವೂ ಇಲ್ಲ, ಅದರ ದಾಖಲೆಯೂ ಇಲ್ಲ!

ಹೌದು, ಕೊಪ್ಪಳ ನಗರಸಭೆ ಖಜಾನೆ ಖಾಲಿ ಖಾಲಿ. ಕಾರ್ಮಿಕರ ವೇತನ ಪಾವತಿಗೂ ಹಣ ಇಲ್ಲ, ಬೀದಿ ದೀಪ ನಿರ್ವಹಣೆಗೆ ದುಡ್ಡಿಲ್ಲ. ಅಷ್ಟೇ ಅಲ್ಲ, ಜೆಸ್ಕಾಂ ಬಿಲ್ ಸಹ ಪಾವತಿಸದೇ ಇರುವುದರಿಂದ ನಗರ ಸಂಪೂರ್ಣ ಕತ್ತಲುಮಯವಾದರೂ ಅಚ್ಚರಿ ಇಲ್ಲ.

ಇದು, ವಿರೋಧ ಪಕ್ಷದವರು ಮಾಡುವ ಆರೋಪವೂ ಅಲ್ಲ ಅಥವಾ ಸೋಷಿಯಲ್ ಮೀಡಿಯಾದಲ್ಲಿ ಹರಿದಾಡುವ ಸುದ್ದಿಯೂ ಅಲ್ಲ. ನಗರಸಭೆಯ ಸಾಮಾನ್ಯ ಸಭೆಯಲ್ಲಿ ಅಧಿಕೃತವಾಗಿ ಚರ್ಚೆಯಾಗಿರುವ ಮಾಹಿತಿ. ಖುದ್ದು ಇದನ್ನು ಪೌರಾಯುಕ್ತ ವೆಂಕನಗೌಡ ನಾಗನೂರು ಅವರು ಸಹ ಒಪ್ಪಿಕೊಂಡಿದ್ದಾರೆ.

ಖಜಾನೆಯಲ್ಲಿ ಹಣ ಇಲ್ಲ ಎನ್ನುವುದು ಆಘಾತಕಾರಿ ಎನಿಸಿದರೆ ಖರ್ಚು ಮಾಡಿದ ಹಣಕ್ಕೆ ಲೆಕ್ಕಾಚಾರವೇ ಇಲ್ಲ ಎನ್ನುವ ಮಾಹಿತಿ ಅಚ್ಚರಿ ಮೂಡಿಸುತ್ತದೆ. ಕಳೆದೊಂದು ತಿಂಗಳಿಂದ ಬಂದಿರುವ ನೂತನ ಪೌರಾಯುಕ್ತ ವೆಂಕನಗೌಡ ನಾಗನೂರು ಅವರು ಇಟ್ಟಿರುವ ಲೆಕ್ಕಾಚಾರ ಮಾತ್ರ ಲಭ್ಯ. ಉಳಿದಂತೆ ಹಿಂದೆ ಆದ ಖರ್ಚಿಗೆ ಲೆಕ್ಕವೂ ಇಲ್ಲ, ಅವುಗಳ ದಾಖಲೆಯೂ ಇಲ್ಲ. ಅದನ್ನು ಕೊಡಲು ಹಿಂದಿನ ಪೌರಾಯುಕ್ತರೇ ಬರಬೇಕಂತೆ.

ನಗರಸಭೆಯಲ್ಲಿ 2024 ನವೆಂಬರ್ ತಿಂಗಳಿಂದ ಸೆಪ್ಟೆಂಬರ್ 2025ರ ವರೆಗೂ ಆರಂಭಿಕ ಶಿಲ್ಕು ₹13.14 ಕೋಟಿ ಸೇರಿ ₹28.96 ಕೋಟಿ ಜಮೆಯಾಗಿದೆ. ಇದರಲ್ಲಿ ಇದುವರೆಗೂ 28.95 ಕೋಟಿ ವೆಚ್ಚ ಮಾಡಲಾಗಿದೆ. ವೆಚ್ಚ ಮಾಡಿದ್ದಕ್ಕೆ ಬ್ಯಾಂಕ್ ಖಾತೆಯ ವಿವರ ಇದೆಯೇ ಹೊರತು ಯಾವುದಕ್ಕೆ ಎಷ್ಟು ಖರ್ಚು ಮಾಡಲಾಗಿದೆ ಎನ್ನುವ ದಾಖಲೆಯ ವಿವರವೇ ಇಲ್ಲ.

ಸದಸ್ಯರಾದ ವಿರೂಪಾಕ್ಷಪ್ಪ ಮೋರನಾಳ, ಸೋಮಣ್ಣ ಹಳ್ಳಿ, ಚನ್ನಪ್ಪ ಕೋಟಿಹಾಳ ಅವರು ಕೇಳಿದ ಲೆಕ್ಕಪತ್ರದ ಪ್ರಶ್ನೆಗೆ ನಡೆದ ಚರ್ಚೆಯಲ್ಲಿ ಇದೆಲ್ಲವೂ ಬೆಳಕಿಗೆ ಬಂದಿದೆ.

ತಮ್ಮ ಅವಧಿಯಲ್ಲಿ ಇಷ್ಟೊಂದು ಹಣ ಖರ್ಚಾಗಿದೆಯೇ ಎಂದು ಸ್ವತಃ ಅಧ್ಯಕ್ಷ ಅಮ್ಜದ್ ಪಟೇಲ್ ಅಚ್ಚರಿ ವ್ಯಕ್ತಪಡಿಸಿದ್ದಾರೆ. ಅಷ್ಟೇ ಅಲ್ಲ, ನಾನು ಪ್ರತಿ ತಿಂಗಳು ಲೆಕ್ಕ ಕೊಡಿ ಎಂದು ಎಂದು ಹತ್ತಾರು ಬಾರಿ ಕೇಳಿದರೂ ಇದುವರೆಗೂ ನೀಡಿಲ್ಲ. ಅಷ್ಟೇ ಅಲ್ಲ, ನನ್ನಿಂದ ಯಾವುದೇ ಅನುಮತಿಯನ್ನೂ ಪಡೆದಿಲ್ಲ. ಅಧಿಕಾರಿಗಳೇ ಎಲ್ಲವನ್ನು ಮಾಡಿದ್ದಾರೆ. ತಾವೇ ಜಮೆ ಮಾಡಿಕೊಂಡಿದ್ದಾರೆ. ತಾವೇ ಖರ್ಚು ಮಾಡಿದ್ದಾರೆ ಎಂದು ಹೇಳಿದ್ದಾರೆ. ಮಾಡಿರುವ ಖರ್ಚಿಗೆ ಯಾರ ಅನುಮತಿ ಪಡೆದಿದ್ದೀರಿ ಎಂದು ಖುದ್ದು ನಗರಸಭೆ ಅಧ್ಯಕ್ಷ ಅಮ್ಜದ್ ಪಟೇಲ್ ಅವರು ಪ್ರಶ್ನೆ ಮಾಡಿದ್ದಾರೆ.

ಎಇ ಸೋಮಣ್ಣ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ ಕೆಲವರು, ನಗರಸಭೆಯಲ್ಲಿ ಏನು ನಡೆಯುತ್ತಿದೆ ಎಂದು ಪ್ರಶ್ನೆ ಮಾಡಿದ್ದಾರೆ. ಸದಸ್ಯೆ ಶಿವಗಂಗಾ ಭೂಮಕ್ಕನವರು ಸಹ ಅಳಲು ತೋಡಿಕೊಂಡರು. ನಮ್ಮ ವಾರ್ಡಿನಲ್ಲಿ ಬೀದಿ ದೀಪ ಹಾಕಿಸಲು ಆಗುತ್ತಿಲ್ಲ, ರಸ್ತೆ ರಿಪೇರಿ ಮಾಡಿಸಲು ಆಗುತ್ತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು. ಕರೆ ಮಾಡಿದರೆ ಅಧ್ಯಕ್ಷರು, ಅಧಿಕಾರಿಗಳು ಯಾರೂ ಕರೆಯನ್ನೇ ಸ್ವೀಕಾರ ಮಾಡುವುದಿಲ್ಲ ಎಂದು ಕಿಡಿಕಾರಿದರು.

ಅಷ್ಟೇ ಅಲ್ಲ, ತಾವು ಅಧ್ಯಕ್ಷರಾಗಿದ್ದ ವೇಳೆಯಲ್ಲಿ ನನ್ನ ಸಹಿ ಮಾಡುವ ಜಾಗಕ್ಕೆ ವೈಟ್ನರ್‌ ಹಚ್ಚಿ, ಸಹಿಯನ್ನೇ ದುರ್ಬಳಕೆ ಮಾಡಿಕೊಂಡಿದ್ದರು. ನಾನಿನ್ನು ಆ ದಾಖಲೆ ಇಟ್ಟುಕೊಂಡಿದ್ದೇನೆ ಎಂದರು.

ಸದಸ್ಯ ಮಹೇಂದ್ರ ಛೋಪ್ರಾ ಮಾತನಾಡಿ, 19ನೇ ವಾರ್ಡಿನಲ್ಲಿ ಅಂಬೇಡ್ಕರ್‌ ಭವನವೇ ಇಲ್ಲ. ಆದರೂ ₹11 ಲಕ್ಷ ನವೀಕರಣಕ್ಕಾಗಿ ಖರ್ಚು ಮಾಡಲಾಗಿದೆಯಲ್ಲ ಎಂದು ಪ್ರಶ್ನೆ ಮಾಡಿದರು. ಆಗ ತಬ್ಬಿಬ್ಬಾದ ಅಧಿಕಾರಿಗಳು, 19ನೇ ವಾರ್ಡ್ ಅಲ್ಲ, 11ನೇ ವಾರ್ಡ್ ಎಂದರು. ಆ ವಾರ್ಡಿನಲ್ಲಿಯೂ ಮಾಡಿರುವ ಮಾಹಿತಿ ಇಲ್ಲದಿರುವುದು ಆಕ್ರೋಶಕ್ಕೆ ಕಾರಣವಾಯಿತು.

ಸದಸ್ಯ ರಾಜಶೇಖರ ಆಡೂರು ಅವರು ಪ್ರಶ್ನೆ ಮಾಡಿ, ₹28 ಕೋಟಿ ವೆಚ್ಚ ಮಾಡಿದ್ದೀರಿ, ಆದರೆ, ಗುತ್ತಿಗೆ ಆಧಾರದ ಕಾರ್ಮಿಕರಿಗೆ, ಡ್ರೈವರ್‌ಗೆ ಯಾಕೆ ವೇತನ ಪಾವತಿ ಮಾಡಿಲ್ಲ ಎಂದು ಬಿಗಿಪಟ್ಟು ಹಿಡಿದರು. ಇದಕ್ಕೆ ಸದಸ್ಯ ಅಕ್ಬರ್ ಪಾಶಾ ಪಲ್ಟನ್ ಬೆಂಬಲ ಸೂಚಿಸಿದರು. ಕೊನೆಗೆ ಬಾಕಿ ಇರುವ ವೇತನ ಪಾವತಿ ಮಾಡಿ, ಅವರನ್ನು ಮುಂದುವರಿಸಲು ತೀರ್ಮಾನಿಸಲಾಯಿತು.

ಗಣೇಶ ಚತುರ್ಥಿಯಲ್ಲಿ ಸಿಸಿ ಕ್ಯಾಮೆರಾ ಅಳವಡಿಸಲು ₹20 ಲಕ್ಷ ವೆಚ್ಚ ಮಾಡಲಾಗಿದೆ. ಅದರ ಅರ್ಧ ದುಡ್ಡು ಹಾಕಿದ್ದರೆ ಹೊಸ ಕ್ಯಾಮೆರಾಗಳೇ ಬರುತ್ತಿದ್ದವು. ಇದಕ್ಕೆ ಯಾರು ಅನುಮತಿ ನೀಡಿದರು? ಇದರ ಲೆಕ್ಕಾಚಾರವೇನು? ಎಂದಾಗ ಎಇ ಸೋಮಣ್ಣ ವಿವರಣೆ ನೀಡಲು ಮುಂದಾದರು. ಆಗ ಸದಸ್ಯರೆಲ್ಲಾ ಆಕ್ರೋಶ ವ್ಯಕ್ತಪಡಿಸಿದರು.

ಪುಟ್‌ಪಾತ್‌ ತೆರವಿಗೆ ಆಗ್ರಹ: ಸದಸ್ಯ ಮುಚ್ಚು ಕುಷ್ಟಗಿ ಮಾತನಾಡಿ, ನಗರದಲ್ಲಿ ಫುಟ್‌ಪಾತ್‌ ಒತ್ತುವರಿ ವಿಪರೀತವಾಗಿದೆ. ಸಂಚಾರಕ್ಕೆ ಸಮಸ್ಯೆಯಾಗುತ್ತಿದ್ದು, ಕೂಡಲೇ ತೆರವು ಮಾಡುವಂತೆ ಆಗ್ರಹಿಸಿದರು. ಅಧ್ಯಕ್ಷ ಅಮ್ಜದ್ ಪಟೇಲ್ ಅವರು ಮಧ್ಯೆ ಪ್ರವೇಶ ಮಾಡಿ, ಕೂಡಲೇ ಕ್ರಮವಹಿಸಿ ಎಂದು ಸೂಚಿಸಿದರು.

ಉಪಾಧ್ಯಕ್ಷೆ ಅಕ್ಕಮಹಾದೇವಿ ಗದುಗಿನಮಠ, ಇದ್ದರು.