ಸಾರಾಂಶ
ಕೊಪ್ಪಳ: ನಮ್ಮ ವಾರ್ಡಿಗೆ ನಯಾ ಪೈಸೆ ಕೆಲಸವನ್ನು ನಗರಸಭೆ ಮಾಡುತ್ತಿಲ್ಲ. ಅಧಿಕಾರಿಗಳು ನಮ್ಮ ಫೋನ್ ರಿಸೀವ್ ಮಾಡುತ್ತಿಲ್ಲ ಎಂದು ಆರೋಪಿಸಿ ಸದಸ್ಯ ಸೋಮಣ್ಣ ಹಳ್ಳಿ ತಲೆಮೇಲೆ ಕಲ್ಲು ಹೊತ್ತು ಪ್ರತಿಭಟನೆ ಮಾಡಿದ್ದು ಆಯಿತು. ಈಗ ಸದಸ್ಯರೊಬ್ಬರು ತಮ್ಮ ವಾರ್ಡಿನಲ್ಲಿ ಬೀದಿ ದೀಪಕ್ಕಾಗಿ ಕಳೆದ ಮೂರು ತಿಂಗಳಿಂದ ಬೇಡಿಕೊಂಡರೂ ಹಾಕದೆ ಇದ್ದಾಗ ವಿಧಿಯಿಲ್ಲದೇ ತಮ್ಮ ಸ್ವಂತ ಖರ್ಚಿನಲ್ಲಿ ಬೀದಿ ದೀಪ ಹಾಸಿಕಿದ್ದಾರೆ.
ನಗರದ 14ನೇ ವಾರ್ಡಿನ ಸದಸ್ಯೆ ನಾಗರತ್ಮಾ ಶಿವಕುಮಾರ ಕುಕನೂರು ಅವರೇ ಈಗ ಸ್ವಂತ ಖರ್ಚಿನಲ್ಲಿ ಮೂರು ಬೀದಿ ದೀಪ ಹಾಕಿಸಿದ್ದಾರೆ.ಇದನ್ನು ಅವರ ಪತಿ ಶಿವಕುಮಾರ ಕುಕನೂರು ಅವರ ಫೇಸ್ ಬುಕ್ ವಾಲ್‌ನಲ್ಲಿ ಬರೆದುಕೊಂಡಿದ್ದಾರೆ. ನನ್ನ ವಾರ್ಡ್ 14ರಲ್ಲಿ ಬೀದಿ ದೀಪ ಹಾಕುವಂತೆ ಕಳೆದ ಮೂರು ತಿಂಗಳಿಂದ ಕೇಳಿ ಕೇಳಿ ಸಾಕಾಗಿ ಸ್ವಂತ ಹಣದಿಂದ ಬೀದಿದೀಪಗಳನ್ನು ಹಾಕಿಸಲಾಯಿತು ಎಂದು ಬರೆದುಕೊಳ್ಳುವ ಮೂಲಕ ಕೊಪ್ಪಳ ನಗರಸಭೆಯಲ್ಲಿ ಬೀದಿ ದೀಪಕ್ಕೂ ಗತಿ ಇಲ್ಲ ಎನ್ನುವುದನ್ನು ಸಾರಿ ಸಾರಿ ಹೇಳಿದ್ದಾರೆ.
ಇದು, ಇವರೊಬ್ಬರ ಸಮಸ್ಯೆಯಲ್ಲ. ಬಹುತೇಕ ಸದಸ್ಯರು ಇಂಥ ಸಮಸ್ಯೆ ಎದುರಿಸುತ್ತಿದ್ದಾರೆ. ನಗರಸಭೆಯಲ್ಲಿ ಸದಸ್ಯರ ಮಾತನ್ನೇ ಅಧಿಕಾರಿಗಳು ಕೇಳುವುದಿಲ್ಲ. ನಗರಸಭೆಯ ಸಾಮಾನ್ಯ ಸಭೆಯಲ್ಲಿಯೂ ಬಹುತೇಕ ಸದಸ್ಯರು ಹೇಳುವುದು ಇದನ್ನೇ. ನಮ್ಮ ವಾರ್ಡಿನಲ್ಲಿ ಚರಂಡಿ ಸ್ವಚ್ಛವಿಲ್ಲ. ಯಾರಿಗೆ ಹೇಳಿದರೂ ಕೇಳುವುದಿಲ್ಲ. ನೀರು ಬರುತ್ತಿಲ್ಲ ಎಂದರೂ ನೀರು ಬೀಡುವ ನೀರಗಂಟಿಯೂ ನಮ್ಮ ಕರೆ ಸ್ವೀಕರಿಸುವುದಿಲ್ಲ ಎಂದು ಮಹಿಳಾ ಸದಸ್ಯರು ಅಳಲು ತೋಡಿಕೊಳ್ಳುತ್ತಲೇ ಇರುತ್ತಾರೆ. ಈಗ ಸದಸ್ಯೆಯೋರ್ವರು ಬೀದಿ ದೀಪಕ್ಕಾಗಿ ಸುತ್ತಾಡಿ ಸುಸ್ತಾಗಿ ಕೊನೆಗೆ ತಾವೇ ಸ್ವಂತ ಖರ್ಚಿನಲ್ಲಿ ಹಾಕಿಸಿದ್ದಾರೆ.ಬೀದಿ ದೀಪ ಹಾಕಿಸುವಂತೆ ಕೇಳಿ ಕೇಳಿ ಸಾಕಾಗಿದ್ದರಿಂದ ಜನರಿಗಾಗಿ ಸ್ವಂತ ಖರ್ಚಿನಲ್ಲಿಯೇ ಬೀದಿ ದೀಪ ಹಾಕಿಸಿದ್ದೇನೆ ಎಂದು ನಗರಸಭೆ ಸದಸ್ಯೆ ನಾಗರತ್ನಾ ಶಿವಕುಮಾರ ಕುಕನೂರು ತಿಳಿಸಿದ್ದಾರೆ.
;Resize=(128,128))
;Resize=(128,128))