ಸರ್ಕಾರಿ ನೌಕರರ ಸಂಬಳಕ್ಕೂ ಈ ಸರ್ಕಾರದಲ್ಲಿ ಹಣ ಇರಲ್ಲ

| Published : Apr 09 2024, 12:54 AM IST / Updated: Apr 09 2024, 05:19 AM IST

ಸಾರಾಂಶ

ತವರು ಕ್ಷೇತ್ರ ಶಿವಮೊಗ್ಗದ ಶಿಕಾರಿಪುರದಲ್ಲಿ ಸತತ 2ನೇ ದಿನವಾದ ಸೋಮವಾರವೂ ಅಣ್ಣ, ಶಿವಮೊಗ್ಗ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಬಿ.ವೈ.ರಾಘವೇಂದ್ರ ಪರ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಭರ್ಜರಿ ಪ್ರಚಾರ ನಡೆಸಿದರು.

 ಶಿಕಾರಿಪುರ/ಬೆಂಗಳೂರು/ಮೈಸೂರು :  ತವರು ಕ್ಷೇತ್ರ ಶಿವಮೊಗ್ಗದ ಶಿಕಾರಿಪುರದಲ್ಲಿ ಸತತ 2ನೇ ದಿನವಾದ ಸೋಮವಾರವೂ ಅಣ್ಣ, ಶಿವಮೊಗ್ಗ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಬಿ.ವೈ.ರಾಘವೇಂದ್ರ ಪರ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಭರ್ಜರಿ ಪ್ರಚಾರ ನಡೆಸಿದರು.

ಪಟ್ಟಣದ ಮಾಳೆರಕೇರಿಯಲ್ಲಿನ ಬಿಜೆಪಿ ಕಚೇರಿಯಲ್ಲಿ ಕಾರ್ಯಕರ್ತರ ಸಭೆ ಉದ್ದೇಶಿಸಿ ಮಾತನಾಡಿದರು. ಈ ಸರ್ಕಾರದಲ್ಲಿ ಮುಂದೆ ಎರಡು ತಿಂಗಳ ನಂತರ ಸರ್ಕಾರಿ ನೌಕರರಿಗೆ ಸಂಬಳ ಕೊಡಲು ಹಣ ಇರುವುದಿಲ್ಲ. ಮತ್ತೆ ಲಕ್ಷ ಕೋಟಿಗಳಷ್ಟು ಸಾಲ ತೆಗೆಯಲು ಸನ್ನದ್ಧರಾಗಿದ್ದಾರೆ. ರಾಜ್ಯವನ್ನು ಸಾಲದ ದವಡೆಗೆ ನೂಕುತಿದ್ದಾರೆ ಎಂದು ಆರೋಪಿಸಿದರು.

ಈ ಚುನಾವಣೆ ದೇಶದ ಭವಿಷ್ಯವನ್ನು ನಿರ್ಧರಿಸುವ ಚುನಾವಣೆಯಾಗಿದೆ. ಪ್ರತಿ ಮತದಾರರು ಕೇಂದ್ರ ಸರ್ಕಾರದ ಒಂದಲ್ಲ ಒಂದು ಯೋಜನೆಯ ಫಲಾನುಭವಿಗಳಾಗಿದ್ದಾರೆ. ಅವರಿಗೆ ಸರ್ಕಾರದ ಯೋಜನೆಗಳ ಬಗ್ಗೆ ವಿವರಿಸಿ ಎಂದು ಕಾರ್ಯಕರ್ತರಿಗೆ ಸೂಚಿಸಿದರು. ಆರ್ಥಿಕವಾಗಿ ದೇಶ 50ನೇ ಸ್ಥಾನದಲ್ಲಿ ಇತ್ತು. ಕಳೆದ ಹತ್ತು ವರ್ಷದ ಈಚೆಗೆ ಮೋದಿ ಅವರ ಶ್ರಮದಿಂದಾಗಿ ಆರ್ಥಿಕ ಪ್ರಗತಿಯಲ್ಲಿ ಐದನೇ ಸ್ವಾವಲಂಬಿ ದೇಶವಾಗಿದೆ ಎಂದರು.

ಶಿಕಾರಿಪುರ ತಾಲೂಕಿನ ಹಾಗೂ ಶಿವಮೊಗ್ಗ ಜಿಲ್ಲೆಯ ಅಭಿವೃದ್ಧಿ ಹಿಂದೆ ಬಿ.ಎಸ್. ಯಡಿಯೂರಪ್ಪ ಹಾಗೂ ಸಂಸದರಾದ ಬಿ.ವೈ.ರಾಘವೇಂದ್ರರ ಶ್ರಮವಿದೆ. ರಾಜ್ಯದಲ್ಲಿ ಹಿಂದೆಂದೂ ಕಾಣದಂತಹ ತೀವ್ರ ಬರ ಪರಿಸ್ಥಿತಿ ಇದ್ದರೂ ರಾಜ್ಯ ಸರ್ಕಾರ ಪರಿಹಾರ ಧನವನ್ನು ಬಿಡುಗಡೆ ಮಾಡದೆ ಕೇಂದ್ರದ ಕಡೆ ಬೊಟ್ಟು ಮಾಡಿ ತೋರಿಸುತ್ತಿದೆ. ತನ್ನ ಆರ್ಥಿಕ ದಿವಾಳಿತನವನ್ನು ಮುಚ್ಚಿಕೊಳ್ಳಲು ಕೇಂದ್ರದ ವಿರುದ್ಧ ಮಾತನಾಡುತ್ತಾ ಮುಖ್ಯಮಂತ್ರಿ ಸಿದ್ದರಾಮಯ್ಯ ಕಾಲಹರಣ ಮಾಡುತ್ತಿದ್ದಾರೆ ಎಂದರು.

ಈ ಹಿಂದೆ ಯಡಿಯೂರಪ್ಪನವರು ಮುಖ್ಯಮಂತ್ರಿ ಆಗಿದ್ದಾಗ ಪ್ರವಾಹ ಪರಿಸ್ಥಿತಿ ಉಂಟಾಗಿತ್ತು. ಆಗ ಮಂತ್ರಿಮಂಡಲ ವಿಸ್ತರಣೆಯೂ ಆಗಿರಲಿಲ್ಲ. ಇಡೀ ರಾಜ್ಯವನ್ನು ಒಬ್ಬಂಟಿಯಾಗಿ ಸುತ್ತಿ ಪರಿಹಾರ ಧನವನ್ನು ಕೂಡಲೇ ಒದಗಿಸಿ ನೊಂದವರಿಗೆ ಸಾಂತ್ವನ ಹೇಳಿದ್ದರು ಎಂದು ನೆನಪಿಸಿದರು.

ಇದೇ ಸಂದರ್ಭದಲ್ಲಿ ಜಿಲ್ಲಾ ಹಾಲುಮತ ಮಹಾಸಭಾ ಸಂಚಾಲಕರಾದ ಡಿ.ಡಿ.ಶಿವಕುಮಾರ್ ,ಹೊಲಗಾವಲು ತೇಜಸ್ ಮುಂತಾದವರು ಬಿಜೆಪಿ ಪಕ್ಷಕ್ಕೆ ಸೇರ್ಪಡೆಗೊಂಡರು. ಬಳಿಕ, ಮನೆ, ಮನೆಗೆ ತೆರಳಿ, ಬಿಜೆಪಿ ಪರ ಮತಯಾಚಿಸಿದರು.

ಬಿಜೆಪಿಯಲ್ಲಿ ಒಕ್ಕಲಿಗರಿಗೆ ಅನ್ಯಾಯ ಆಗಲು ಬಿಡಲ್ಲ: ಸಿ.ಟಿ.ರವಿ

ಬಿಜೆಪಿಯಲ್ಲಿ ಒಕ್ಕಲಿಗರಿಗೆ ಅನ್ಯಾಯ ಆಗಲು ಬಿಡಲ್ಲ ಎಂದು ಮಾಜಿ ಸಚಿವ ಸಿ.ಟಿ.ರವಿ ಹೇಳಿದರು. ಮೈಸೂರಿನ ಬಿಜೆಪಿ ಕಚೇರಿಯಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಒಂದು ಅವಕಾಶ ತಪ್ಪಿದ್ದರೆ ಮುಂದೆ ಹತ್ತು ಅವಕಾಶಗಳು ಸಿಗುತ್ತದೆ. ಒಕ್ಕಲಿಗರು ರಾಷ್ಟ್ರವಾದಿಗಳು ಮತ್ತು ರಾಷ್ಟ್ರವಾದಿಗಳಿಗೆ ಮತ ಹಾಕುವವರು ಎಂದರು. ಜತೆಗೆ, ಬಿಜೆಪಿಗೆ ಯಾರೇ ಬಂದರೂ ಹಿಂದುತ್ವದ ಅಜೆಂಡಾದ ಅಡಿಯಲ್ಲೇ ಕೆಲಸ ಮಾಡಬೇಕು ಎಂದು ತಿಳಿಸಿದರು.

ಪ್ರೀತಮ್ ಗೌಡ-ಪ್ರಜ್ವಲ್ ರೇವಣ್ಣ ನಡುವೆ ಮುನಿಸು ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು, ಪ್ರೀತಮ್ ಗೌಡ ಹೇಳಿಕೆಯನ್ನು ನಾನು ನೋಡಿದ್ದೇನೆ. ಮೋದಿ ಪ್ರಧಾನಿ ಮಾಡಲು ನಾನು ದುಡಿಯುತ್ತೇನೆ ಎಂದು ಹೇಳಿದ್ದಾರೆ. 28 ಕ್ಷೇತ್ರಗಳಲ್ಲಿ ಎನ್.ಡಿ.ಎ ಅಭ್ಯರ್ಥಿ ಗೆಲ್ಲಿಸುವಂತಹ ಕೆಲಸ ಮಾಡುತ್ತೇನೆ ಎಂದು ಹೇಳಿದ್ದಾರೆ. 28 ಕ್ಷೇತ್ರಗಳಲ್ಲಿ ಹಾಸನ ಕೂಡ ಒಂದು. ಎನ್‌ಡಿಎ ಭಾಗವಾಗಿ ಜೆಡಿಎಸ್ ಇದೆ. ಹಾಸನದಲ್ಲೂ ಕೂಡ ಎನ್‌ಡಿಎ ಅಭ್ಯರ್ಥಿ ಗೆಲ್ಲಲಿದ್ದಾರೆ ಎಂದರು.

ಫಲಿತಾಂಶ ಬಂದಾಗ ನೋಡಿ, ಹಾಸನದಲ್ಲಿ ಮೈತ್ರಿ ಅಭ್ಯರ್ಥಿ ಗೆಲುವಿನಲ್ಲಿ ಬಿಜೆಪಿ ಮತಗಳು ಮಹತ್ವದ್ದಾಗಿರಲಿವೆ. ಬಿಜೆಪಿ ಮತದಾರರು ಯಾವುದೇ ಕಾರಣಕ್ಕೂ ಕಾಂಗ್ರೆಸ್ ಗೆ ಮತ ಹಾಕಲ್ಲ. ಮುಂದಿನ ದಿನಗಳಲ್ಲಿ ಪ್ರಜ್ವಲ್‌- ಪ್ರೀತಂಗೌಡ ಇಬ್ಬರನ್ನೂ ಕೂರಿಸಿ ಮಾತನಾಡಿಸುವ ಕೆಲಸ ಮಾಡುತ್ತೇವೆ ಎಂದು ಸಿ.ಟಿ.ರವಿ ಹೇಳಿದರು.ಇದೇ ವೇಳೆ ಕಾಂಗ್ರೆಸ್‌ ವಿರುದ್ಧ ಹರಿಹಾಯ್ದ ಅವರು, ದೇಶಕ್ಕೆ ಸ್ವಾತಂತ್ರ್ಯ ಕೊಡಿಸುವ ಉದ್ದೇಶ ಕಾಂಗ್ರೆಸ್ ಪಕ್ಷದ್ದಾಗಿರಲಿಲ್ಲ. ಒಂದೇ ಕುಟುಂಬದ ಕಪಿಮುಷ್ಟಿಯಿಂದ ಆ ಪಕ್ಷ ಇಂದಿಗೂ ಕಾಂಗ್ರೆಸ್ ಹೊರಬಂದಿಲ್ಲ. ಸತತ ಸೋಲುಗಳ ನಂತರವೂ ರಾಹುಲ್ ಗಾಂಧಿ ಅವರನ್ನು ಬಿಂಬಿಸುವ ಕೆಲಸ ಕಡಿಮೆ ಆಗಿಲ್ಲ. ಈ ಚುನಾವಣೆ ಬಳಿಕ ದೇಶದ ಜನರೇ ರಾಹುಲ್ ಗಾಂಧಿ ಅವರಿಗೆ ನಿವೃತ್ತಿ ನೀಡಲಿದ್ದಾರೆ ಎಂದು ವ್ಯಂಗ್ಯವಾಡಿದರು.

ಎಸ್‌ಎಂಕೆ ಭೇಟಿಯಾಗಿ ಆಶೀರ್ವಾದ ಪಡೆದ ಎಚ್‌ಡಿಕೆ

ಮಂಡ್ಯ ಲೋಕಸಭೆ ಕ್ಷೇತ್ರದ ಅಭ್ಯರ್ಥಿಯೂ ಆಗಿರುವ ಜೆಡಿಎಸ್‌ ರಾಜ್ಯಾಧ್ಯಕ್ಷ ಎಚ್‌.ಡಿ.ಕುಮಾರಸ್ವಾಮಿ ಅವರು ಮಾಜಿ ಮುಖ್ಯಮಂತ್ರಿ ಎಸ್‌.ಎಂ.ಕೃಷ್ಣ ಅವರನ್ನು ಸೌಹಾರ್ದಯುತವಾಗಿ ಭೇಟಿ ಮಾಡಿ ಮಾತುಕತೆ ನಡೆಸಿದರು.

ಸೋಮವಾರ ಬೆಂಗಳೂರಿನ ಸದಾಶಿವನಗರದಲ್ಲಿನ ಕೃಷ್ಣ ಅವರ ನಿವಾಸಕ್ಕೆ ಭೇಟಿ ನೀಡಿದರು. ಈ ಸಂದರ್ಭದಲ್ಲಿ ವಿಧಾನಸಭೆಯ ಪ್ರತಿಪಕ್ಷದ ನಾಯಕ ಆರ್.ಅಶೋಕ್, ಮಾಜಿ ಸಚಿವರಾದ ಡಾ.ಸಿ.ಎನ್.ಅಶ್ವತ್ಥನಾರಾಯಣ, ಪುಟ್ಟರಾಜು, ಯುವ ಜನತಾದಳ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಸೇರಿದಂತೆ ಇತರರು ಉಪಸ್ಥಿತರಿದ್ದರು. ಲೋಕಸಭಾ ಚುನಾವಣೆ ಮತ್ತು ರಾಜ್ಯ ರಾಜಕೀಯ ಕುರಿತು ಉಭಯ ಮುಖಂಡರು ಸಮಾಲೋಚನೆ ನಡೆಸಿದರು.

ಕೃಷ್ಣ ಭೇಟಿ ಬಳಿಕ ಸುದ್ದಿಗಾರರ ಜತೆ ಮಾತನಾಡಿದ ಕುಮಾರಸ್ವಾಮಿ, ರಾಜ್ಯದ ಮುಖ್ಯಮಂತ್ರಿಗಳಾಗಿ, ಕೇಂದ್ರ ಸಚಿವರಾಗಿ ಎಸ್‌.ಎಂ.ಕೃಷ್ಣ ಅವರು ನಾಡಿಗೆ ಉತ್ತಮ ಸೇವೆ ಸಲ್ಲಿಸಿದ್ದಾರೆ. ಅವರು ನಮ್ಮ ತಂದೆಯವರ ಸಮಕಾಲೀನರು. ತಂದೆಯವರಿಗಿಂತ ಆರು ತಿಂಗಳು ದೊಡ್ಡವರು. ನಾನು ನಾಮಪತ್ರ ಸಲ್ಲಿಸುವ ಮುನ್ನವೇ ಅವರ ಆಶೀರ್ವಾದ ಪಡೆಯಬೇಕಿತ್ತು. ಇವತ್ತು ಅವರನ್ನು ಭೇಟಿ ಮಾಡಿ ಆಶೀರ್ವಾದ ಪಡೆದಿದ್ದೇನೆ ಎಂದರು.

ಪ್ರಥಮವಾಗಿ ರಾಜಕೀಯಕ್ಕೆ ಸ್ಪರ್ಧೆ ಮಾಡಿದಾಗ ಕೃಷ್ಣ ಅವರು ಆಶೀರ್ವಾದ ಮಾಡಿದ್ದರು. ಆ ಸಂಗತಿಯನ್ನು ಮಾತುಕತೆಯ ವೇಳೆ ಹಿರಿಯರಾದ ಕೃಷ್ಣ ಅವರೇ ನೆನೆಸಿಕೊಂಡರು. ನನ್ನನ್ನು ಆಶೀರ್ವಾದ ಮಾಡಿ ನಾಡಿನ ಅಭಿವೃದ್ಧಿಗಾಗಿ ಕೆಲಸ ಮಾಡಿ ಎಂದಿದ್ದಾರೆ ಎಂದರು.

ಇದೇ ವೇಳೆ ಮಂಡ್ಯ ಕ್ಷೇತ್ರದಲ್ಲಿ ಕಾಂಗ್ರೆಸ್ ನವರು ಅಪಪ್ರಚಾರ ನಡೆಸುತ್ತಿದ್ದಾರೆ. ಅವರು ಸಾಮಾಜಿಕ ಜಾಲತಾಣದಲ್ಲಿ ಕೆಲ ಪ್ರಶ್ನೆಗಳನ್ನು ಕೇಳಿದ್ದಾರೆ. ಅವರಿಗೆ ಉತ್ತರ ನೀಡಲು ನಾವು ಸಮರ್ಥನಿದ್ದೇನೆ. ನಾನು ಎಲ್ಲೂ ಕಾಣೆ ಆಗಿಲ್ಲ, ಇಲ್ಲೇ ಇದ್ದೇನೆ. ಈ ರೀತಿ ಅಪಪ್ರಚಾರ ಮಾಡಿ ಚುನಾವಣೆ ಯಶಸ್ವಿಯಾಗಲ್ಲ. ಈ ರೀತಿ ಪರೋಕ್ಷವಾಗಿ ಸೆಣಸುವ ಬದಲು ನೇರವಾಗಿ ಚುನಾವಣೆ ಮಾಡಲಿ ಎಂದು ವಾಗ್ದಾಳಿ ನಡೆಸಿದರು.

14ರಂದು ಪ್ರಧಾನಿ ಮೋದಿ ಮಂಗಳೂರಿಗೆ

ಪ್ರಧಾನಿ ನರೇಂದ್ರ ಮೋದಿ ಅವರು ಚುನಾವಣಾ ಪ್ರಚಾರಕ್ಕೆ ಏ.14ರಂದು ಮಂಗಳೂರಿಗೆ ಆಗಮಿಸಲಿದ್ದಾರೆ. ಅಂದು ಮಧ್ಯಾಹ್ನ 3 ಗಂಟೆಗೆ ನಗರದ ಬಂಗ್ರಕೂಳೂರಿನ ಗೋಲ್ಡ್‌ ಫಿಂಚ್ ಸಿಟಿ ಮೈದಾನದಲ್ಲಿ ಬೃಹತ್ ಸಾರ್ವಜನಿಕ ಸಭೆಯನ್ನುದ್ದೇಶಿಸಿ ಮಾತನಾಡಲಿದ್ದಾರೆ.ಈ ಕುರಿತು ಸೋಮವಾರ ಮಂಗಳೂರಿನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಹಾಗೂ ಮಾಜಿ ಸಚಿವ ವಿ.ಸುನಿಲ್ ಕುಮಾರ್, ದ.ಕ. ಜಿಲ್ಲೆಗೆ ಈ ಹಿಂದೆ ಮೋದಿ ಭೇಟಿ ನೀಡಿದಾಗ ಸೇರಿದ ಜನಸಂಖ್ಯೆಯ ದಾಖಲೆ ಮೀರಿ ಈ ಬಾರಿ ಒಂದು ಲಕ್ಷಕ್ಕೂ ಅಧಿಕ ಜನ ಪಾಲ್ಗೊಳ್ಳಲಿದ್ದಾರೆ ಎಂದು ಹೇಳಿದರು.

ಚುನಾವಣೆ ಪ್ರಚಾರಕ್ಕೆ ವೇಗ: ಮೋದಿ ಭೇಟಿಯಿಂದ ಚುನಾವಣಾ ಪ್ರಚಾರ ಕಾರ್ಯಕ್ಕೆ ದೊಡ್ಡಮಟ್ಟದ ವೇಗ ದೊರೆಯಲಿದೆ. ಕಾರ್ಯಕರ್ತರ ಉತ್ಸಾಹ ಇಮ್ಮಡಿಯಾಗಲಿದೆ. ನಂತರ ಮೂರು ದಿನಗಳ ಕಾಲ ಏ.15,16,17ರಂದು ನಡೆಯುವ ಮನೆ ಮನೆ ಸಂಪರ್ಕ ಹಾಗೂ ಪ್ರಚಾರ ಕಾರ್ಯಕ್ಕೆ ಇದು ಸ್ಫೂರ್ತಿ ತುಂಬಲಿದೆ ಎಂದು ಹೇಳಿದರು. ಮಂಗಳೂರಿನ ಪ್ರಚಾರ ಸಭೆ ಮುಗಿಸಿ ಮೋದಿ ಅವರು ಸಂಜೆ 5.30ಕ್ಕೆ ಬೆಂಗಳೂರು ಉತ್ತರ ಕ್ಷೇತ್ರದಲ್ಲಿ ಬೃಹತ್‌ ರೋಡ್‌ ಶೋ ನಡೆಸಲಿದ್ದಾರೆ. ಇಡೀ ರಾಜ್ಯದಲ್ಲಿ ಮೋದಿ ಭೇಟಿ ಸಂಚಲನ ಸೃಷ್ಟಿಸಲಿದೆ ಎಂದು ಸುನಿಲ್‌ ಕುಮಾರ್‌ ಹೇಳಿದರು.10,11ರಂದು ಮಹಾ ಪ್ರಚಾರ ಅಭಿಯಾನ: ಏ.10,11ರಂದು ಪಕ್ಷವು ಬೂತ್ ಮಟ್ಟದ ಮಹಾ ಪ್ರಚಾರ ಅಭಿಯಾನ ಕೈಗೊಳ್ಳಲಿದ್ದು, ರಾಜ್ಯದ 58 ಸಾವಿರ ಬೂತ್‌ಗಳಲ್ಲಿ ಏಕಕಾಲದಲ್ಲಿ ಬೂತ್‌ ಸಮಿತಿ ಸಭೆ ನಡೆಯಲಿದೆ. ನಂತರ ಮೊದಲ ಹಂತದ ಚುನಾವಣೆ ನಡೆಯುವ ಕ್ಷೇತ್ರಗಳ ವ್ಯಾಪ್ತಿಯಲ್ಲಿ ಏ.15, 16, 17ರಂದು ಮನೆ ಮನೆ ಸಂಪರ್ಕ ಅಭಿಯಾನ ನಡೆಯುತ್ತದೆ. ರಾಜ್ಯಾಧ್ಯಕ್ಷರಾದಿಯಾಗಿ ಎಲ್ಲ ನಾಯಕರು ತಮ್ಮ ತಮ್ಮ ಬೂತ್‌ಗಳಲ್ಲಿ ಮನೆ ಮನೆ ಪ್ರಚಾರದಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದು ತಿಳಿಸಿದರು.

ಮೋದಿ ಅಧಿಕಾರಕ್ಕೆ ಬಂದ ಕಳೆದ 10 ವರ್ಷಗಳಲ್ಲಿ ಆಗಿರುವ ಸುರಕ್ಷಿತ ಭಾರತ, ಸಾಂಸ್ಕೃತಿಕ ಭಾರತ ಮತ್ತು ವಿಕಸಿತ ಭಾರತ ಎಂಬ ಮೂರು ಪ್ರಮುಖ ವಿಚಾರಗಳನ್ನು ಇಟ್ಟುಕೊಂಡು ಜನರ ಬಳಿಗೆ ಹೋಗಲಿದ್ದೇವೆ ಎಂದು ಸುನಿಲ್ ಕುಮಾರ್ ವಿವರಿಸಿದರು.

ನಕ್ಸಲ್‌ ಬಗ್ಗೆ ಮೃದು ಧೋರಣೆ: ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಬಂದ ನಂತರ ನಕ್ಸಲರಿಗೆ ಹೆಚ್ಚಿನ ಹುಮ್ಮಸ್ಸು ಬಂದಿದ್ದು, ನಕ್ಸಲ್‌ ಚಟುವಟಿಕೆ ಗರಿಗೆದರಿದೆ. ಕಾಂಗ್ರೆಸ್‌ ಸರ್ಕಾರದ ಧೋರಣೆಯೂ ಈ ಶಕ್ತಿಗಳನ್ನು ಪೋಷಿಸುವಂತೆಯೇ ಇದೆ ಎಂದು ಆರೋಪಿಸಿದ ಅವರು, ಸಮಾಜದ ಭದ್ರತೆ ದೃಷ್ಟಿಯಿಂದ ಇಂಥ ವಿಧ್ವಂಸಕ ಕೃತ್ಯಗಳನ್ನು ಮಟ್ಟ ಹಾಕುವ ದಿಟ್ಟತನವನ್ನು ಸರ್ಕಾರ ತೋರಿಸಬೇಕು ಎಂದು ಒತ್ತಾಯಿಸಿದರು.

ಸಿದ್ದರಾಮಯ್ಯ ಬರೀ ಸೌಂಡ್‌ ಬಾಕ್ಸ್ : ಅಶ್ವತ್ಥ ನಾರಾಯಣ್

ಒಬ್ಬ ವ್ಯಕ್ತಿಯಾಗಿ ಮೋದಿ ನಮಗೆ ಎದುರಾಳಿಯೇ ಅಲ್ಲ ಎಂಬ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿಕೆಗೆ ಮಾಜಿ ಸಚಿವ ಅಶ್ವತ್ಥ ನಾರಾಯಣ್‌ ಕಿಡಿಕಾರಿದ್ದಾರೆ. ಸಿದ್ದರಾಮಯ್ಯ ಅವರು ಬರೀ ಸೌಂಡ್ ಬಾಕ್ಸ್, ಸೌಂಡ್ ಬಾಕ್ಸ್ ಬರೀ ಅಬ್ಬರ ಮಾಡುತ್ತೆ ಅಷ್ಟೆ ಎಂದು ಆರೋಪಿಸಿದ್ದಾರೆ.ಸೋಮವಾರಪೇಟೆಯಲ್ಲಿ ಬಿಜೆಪಿ ಅಭ್ಯರ್ಥಿ ಯದುವೀರ್ ಪರ ಮತಯಾಚನೆ ಕಾರ್ಯಕ್ರಮದಲ್ಲಿ ಸೋಮವಾರ ಮಾತನಾಡಿ, ಸೌಂಡ್ ಬಾಕ್ಸ್ ಬರೀ ಅಬ್ಬರ ಮಾಡುತ್ತೆ ಅಷ್ಟೆ. ಆದರೆ ಕೆಲಸ ಮಾಡುವ ಅನುಭವ, ಕಾಳಜಿ ಸಿದ್ದರಾಮಯ್ಯನವರಿಗೆ ಇಲ್ಲ. ಬರೀ ದ್ವೇಷ, ಅಧಿಕಾರ ದುರ್ಬಳಕೆ ಅಷ್ಟೇ ಇವರ ಕೆಲಸ. ಈಗ ಲೂಟಿ ಮಾಡಿರುವ ಹಣವನ್ನು ಚುನಾವಣೆಯಲ್ಲಿ ದುರ್ಬಳಕೆ ಮಾಡಲು ಹೊರಟಿದ್ದಾರೆ. ಹಣ ಬಲದ ಮೇಲೆ ಗೆಲ್ಲುತ್ತೇವೆ ಎನ್ನುವ ಹುಚ್ಚು ವಿಶ್ವಾಸದಲ್ಲಿದ್ದಾರೆ. ಆದರೆ ಅವರು ಸೋಲುತ್ತಾರೆ ಎಂದರು.ಕಳೆದ ಬಾರಿ ಒಂದೇ ಒಂದು ಸ್ಥಾನ ಗೆದ್ದಿದ್ದರು. ಆದರೆ ಈ ಬಾರಿ ಅದನ್ನೂ ಕಳೆದುಕೊಳ್ಳುತ್ತಾರೆ. ಬೆಂಗಳೂರು ಗ್ರಾಮಾಂತರ ಕ್ಷೇತ್ರದಲ್ಲಿ ಹೃದಯವಂತ ಡಾ.ಮಂಜುನಾಥ್ ಗೆಲ್ಲುತ್ತಾರೆ. ಆ ಮೂಲಕ ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ್‌ ಟೀಂಗೆ ಜನ ಬುದ್ಧಿ ಕಲಿಸಲಿದ್ದಾರೆ. ಕಾಂಗ್ರೆಸ್ ರಾಜ್ಯಕ್ಕೆ ಒಂದು ಶಾಪವಿದ್ದಂತೆ. ಈ ಶಾಪ ಮುಕ್ತ ಮಾಡಲು ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಅನ್ನು ಜನ ಸೋಲಿಸಲಿದ್ದಾರೆ ಎಂದು ಕಿಡಿಕಾರಿದರು.