ರಂಗಭೂಮಿಯಲ್ಲಿ ಚಳವಳಿ ಇಲ್ಲವಾಗಿದೆ: ಡಾ. ಜನಾರ್ದನ

| Published : Nov 24 2025, 03:15 AM IST

ಸಾರಾಂಶ

ಉಡುಪಿ ಎಂಜಿಎಂ ಕಾಲೇಜಿನ ನೂತನ ರವೀಂದ್ರ ಮಂಟಪದಲ್ಲಿ ಭಾನುವಾರಸ್‌ ರಂಗ ಪ್ರಯೋಗಗಳ ಸಮಕಾಲೀನತೆಯ ಸವಾಲುಗಳು ಕುರಿತ ವಿಚಾರ ಸಂಕಿರಣ ನೆರವೇರಿತು.

ಉಡುಪಿ: ಇಂದು ರಂಗಭೂಮಿ ತಂಡಗಳಿಗೆ ನಿಯಮಿತ ದೃಷ್ಟಿಕೋನದ ಚಳವಳಿ ಇಲ್ಲವಾಗಿದೆ. ರಂಗಭೂಮಿ ವಿಶ್ವಪ್ರಜ್ಞೆ ಬೆಳೆಸಲು ಹೆದ್ದಾರಿಯಾಗಿದೆ. ಅಲ್ಲಿ ನಿಂತು ನಾವು ದೊಡ್ಡ ಮಟ್ಟದಲ್ಲಿ ಸದ್ದು ಮಾಡಬೇಕಾಗಿದೆ. ರಂಗ ಕಲಾವಿದ ಸಾಮಾಜಿಕ ಚಳವಳಿ, ವಿಚಾರ ಸಂಕಿರಣ, ಸಂವಾದದ ಮೂಲಕ ತನ್ನನ್ನು ತಾನು ತಿದ್ದಿಕೊಂಡು ಹೊಸ ರೂಪವಾಗಿ ದಾಟಿ ಹೋಗಬೇಕಾಗಿದೆ ಎಂದು ಹಿರಿಯ ರಂಗಕರ್ಮಿ ಡಾ.ಜನಾರ್ದನ (ಸನ್ನಿ) ಮೈಸೂರು ಹೇಳಿದ್ದಾರೆ. ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಕರ್ನಾಟಕ ನಾಟಕ ಅಕಾಡೆಮಿ ಬೆಂಗಳೂರು, ರಥಬೀದಿ ಗೆಳೆಯರು ವತಿಯಿಂದ ಉಡುಪಿ ಎಂಜಿಎಂ ಕಾಲೇಜಿನ ನೂತನ ರವೀಂದ್ರ ಮಂಟಪದಲ್ಲಿ ಭಾನುವಾರ ಆಯೋಜಿಸಲಾದ ರಂಗ ಪ್ರಯೋಗಗಳ ಸಮಕಾಲೀನತೆಯ ಸವಾಲುಗಳು ಕುರಿತ ವಿಚಾರ ಸಂಕಿರಣ ಉದ್ಘಾಟಿಸಿ ಮಾತನಾಡಿದರು.

ಸಿನಿಮಾದಲ್ಲಿ ಸಣ್ಣ ಮನುಷ್ಯರನ್ನು ದೊಡ್ಡದಾಗಿ ತೋರಿಸುತ್ತಾರೆ. ಆದರೆ ರಂಗಭೂಮಿ ಮನುಷ್ಯರನ್ನು ಇದ್ದ ಹಾಗೆ ತೋರಿಸುತ್ತದೆ. ಅಂದರೆ ಸತ್ಯವನ್ನು ತೋರಿಸುವ ಮಾಧ್ಯಮವಾಗಿದೆ. ಕಣ್ಣಿಗೆ ಕಣ್ಣಿಟ್ಟು ಮಾತನಾಡುವ ಏಕೈಕ ಮಾಧ್ಯಮ ರಂಗಭೂಮಿಯಾಗಿದೆ ಎಂದರು.

ನಾಟಕ ಅಕಾಡೆಮಿ ಜಿಲ್ಲಾ ಸಂಚಾಲಕ ಸಂತೋಷ್ ನಾಯಕ್ ಪಟ್ಲ ಪ್ರಾಸ್ತಾವಿಕವಾಗಿ, ರಂಗಭೂಮಿ ಇಂದು ಕೇವಲ ಮನರಂಜನೆಗೆ ಮಾತ್ರ ಸೀಮಿತವಾಗಿಲ್ಲ. ಅದು ನಮ್ಮ ಚಿಂತನೆಗಳನ್ನು ನಾವೆ ಒರೆಹಚ್ಚಿ ನಿರ್ಧರಿಸುವ ಮತ್ತು ನಮ್ಮ ಸುತ್ತಲಿನ ಜಗತ್ತನ್ನು ಅರ್ಥೈಸಿಕೊಳ್ಳುವ ಮನರಂಜನೆಯನ್ನು ದಾಟಿದ ಅರಿವಿನ ಮಾಧ್ಯಮವಾಗಿದೆ. ಹಾಗಾಗಿ ನಾಟಕ ಇವತ್ತು ಆ ಮನರಂಜನೆಯ ಮಾಧ್ಯಮವಾಗಬೇಕಾದ ಅಗತ್ಯ ಇಲ್ಲ ಎಂದು ಅಭಿಪ್ರಾಯಪಟ್ಟರು.ರಥಬೀದಿ ಗೆಳೆಯರು ಅಧ್ಯಕ್ಷ ಉದ್ಯಾವರ ನಾಗೇಶ್ ಕುಮಾರ್ ಅಧ್ಯಕ್ಷತೆ ವಹಿಸಿದ್ದರು. ಮುಖ್ಯ ಅತಿಥಿಯಾಗಿ ಉಡುಪಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕಿ ಪೂರ್ಣಿಮಾ, ಕರ್ನಾಟಕ ನಾಟಕ ಅಕಾಡೆಮಿ ಸದಸ್ಯ ಸಂಚಾಲಕ ಡಾ.ಟಿ.ಎಚ್.ಲವ ಕುಮಾರ್ ಉಪಸ್ಥಿತರಿದ್ದರು. ರಥಬೀದಿ ಗೆಳೆಯರು ಕಾರ್ಯದರ್ಶಿ ಪ್ರೊ.ಸುಬ್ರಹ್ಮಣ್ಯ ಜೋಶಿ ವಂದಿಸಿದರು. ನಾಟಕ ವಿಭಾಗದ ಸಂಚಾಲಕ ಸಂತೋಷ್ ಶೆಟ್ಟಿ ಹಿರಿಯಡ್ಕ ನಿರೂಪಿಸಿದರು.