ಕೊಪ್ಪಳದಲ್ಲಿ ಬೃಹತ್ ಕಾರ್ಖಾನೆ ಬೇಡ: ಕೊಪ್ಪಳ ಜಿಲ್ಲಾ ಬಚಾವೋ ಆಂದೋಲನ ಸಮಿತಿ ಆಗ್ರಹ

| Published : Feb 15 2025, 12:32 AM IST

ಕೊಪ್ಪಳದಲ್ಲಿ ಬೃಹತ್ ಕಾರ್ಖಾನೆ ಬೇಡ: ಕೊಪ್ಪಳ ಜಿಲ್ಲಾ ಬಚಾವೋ ಆಂದೋಲನ ಸಮಿತಿ ಆಗ್ರಹ
Share this Article
  • FB
  • TW
  • Linkdin
  • Email

ಸಾರಾಂಶ

ಬೃಹತ್ ಉಕ್ಕು ಕಾರ್ಖಾನೆ ಸ್ಥಾಪನೆ ಬೇಡವೆಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಕೊಪ್ಪಳ ಜಿಲ್ಲಾ ಬಚಾವೋ ಆಂದೋಲನ ಸಮಿತಿಯಿಂದ ಜಿಲ್ಲಾಧಿಕಾರಿ ಮೂಲಕ ಮನವಿ ಪತ್ರ ರವಾನಿಸಲಾಗಿದೆ.

ಕೊಪ್ಪಳ: ಬೃಹತ್ ಉಕ್ಕು ಕಾರ್ಖಾನೆ ಸ್ಥಾಪನೆ ಬೇಡವೆಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಕೊಪ್ಪಳ ಜಿಲ್ಲಾ ಬಚಾವೋ ಆಂದೋಲನ ಸಮಿತಿಯಿಂದ ಜಿಲ್ಲಾಧಿಕಾರಿ ಮೂಲಕ ಮನವಿ ಪತ್ರ ರವಾನಿಸಲಾಗಿದೆ.

ಕೊಪ್ಪಳ ತಾಲೂಕಿನ ಗಿಣಿಗೇರಿ, ಕನಕಾಪುರ, ಬಸಾಪುರ, ಅಲ್ಲಾನಗರ, ಕಿಡದಾಳ, ಬೇವಿನಹಳ್ಳಿ, ಹಿರೇಕಾಸನಕಂಡಿ, ಹಿರೇಬಗನಾಳ, ಅಲ್ಲಾನಗರ, ಚಿಕ್ಕಬಗನಾಳ, ಹಾಲವರ್ತಿ, ಕುಣಿಕೇರಿ, ಕುಣಿಕೇರಿ ತಾಂಡಾ, ಹಾಗೂ ಕೊಪ್ಪಳ ನಗರಕ್ಕೆ ಹೊಂದಿಕೊಂಡು ಸುಮಾರು ೫೦ ಸ್ಪಾಂಜ್ ಐರನ್, ಉಕ್ಕು, ಸಿಮೆಂಟು, ರಾಸಾಯನಿಕ ಗೊಬ್ಬರ ತಯಾರಿಸುವ ಬೃಹತ್ ಕಾರ್ಖಾನೆಗಳು ಸ್ಥಾಪನೆಯಾಗಿವೆ. ಅದರಿಂದಾಗಿ ಇಲ್ಲಿಯ ವಾತಾವರಣದಲ್ಲಿ ಧೂಳು, ಹೊಗೆ, ಶಬ್ದ ಮಾಲಿನ್ಯ, ಜಲ ಮಾಲಿನ್ಯ ಸೇರಿ ಜನರ ಆರೋಗ್ಯಕ್ಕೆ ಕುತ್ತು ಉಂಟಾಗಿದೆ. ಪ್ರತಿಯೊಬ್ಬರೂ ಉಸಿರಾಟದ ತೊಂದರೆಗೆ ಒಳಗಾಗಿ ಅಸ್ತಮಾ, ಟಿಬಿ, ಹೃದಯ ರೋಗ, ಕರಳು ಬೇನೆ ಮುಂತಾದ ರೋಗಕ್ಕೆ ತುತ್ತಾಗುತ್ತಿದ್ದಾರೆ. ಅಲ್ಲದೆ ಕೃಷಿಬೆಳೆ ಧೂಳಿನಿಂದ ಹಾನಿಗೊಳಗಾಗಿ ಜಾನುವಾರುಗಳಿಗೆ ಮೇವು ತಿನ್ನಲು ಸಾಧ್ಯವಾಗುತ್ತಿಲ್ಲ. ಇಂಥ ದಾರುಣವಾದ ಪರಿಸ್ಥಿತಿ ಈಗಾಗಲೇ ಇರುವಾಗ ಕೊಪ್ಪಳಕ್ಕೆ ಹೊಂದಿಕೊಂಡಂತೆ ಬಲ್ಡೋಟಾ ಮಾಲೀಕತ್ವದ ಎಂಎಸ್‌ಪಿಎಲ್‌ ಕಂಪನಿ ಕಾರ್ಖಾನೆ ₹೫೪ ಸಾವಿರ ಕೋಟಿಗಳ ವಿಸ್ತರಣೆ ಮತ್ತಷ್ಟು ಆತಂಕವನ್ನುಂಟು ಮಾಡಿದೆ. ಈಗಾಗಲೇ ಒಂದು ಚಿಮಣಿಯಿಂದ ಹೊರಸೂಸುತ್ತಿರುವ ಧೂಳು, ಹೊಗೆ ಕೊಪ್ಪಳ ನಗರವನ್ನು ಸಂಪೂರ್ಣ ಆವರಿಸಿದೆ. ಈ ಘಟಕ ಬಂದ್ ಮಾಡುವ ಒತ್ತಾಯವನ್ನು ಕೊಪ್ಪಳದ ಜನರು ಮಾಡುತ್ತಿದ್ದಾರೆ. ಇದನ್ನು ಗಂಭೀರವಾಗಿ ಪರಿಗಣಿಸದ ಸರ್ಕಾರ ವಿಸ್ತರಣೆಗೆ ನೀಡಿದ ಅನುಮತಿ ಸಾಕಷ್ಟು ಸಂಶಯವನ್ನುಂಟು ಮಾಡಿದೆ ಎಂದು ಮನವಿಯಲ್ಲಿ ವಿವರಿಸಲಾಗಿದೆ.

ಮತ್ತೊಂದು ಕಡೆ ಅಣುಸ್ಥಾವರದಿಂದ ವಿದ್ಯುತ್ ಉತ್ಪಾದನೆ ಯೋಜನೆ ಕೊಪ್ಪಳ ನಗರ ಹಾಗೂ ಜಿಲ್ಲೆಯ ಜನರ ಮೇಲೆ ಅಪಾಯದ ತೂಗುಕತ್ತಿ ನೇತಾಡುತ್ತಿದೆ. ಕೊಪ್ಪಳ ನಗರ ಪೂರ್ವಭಾಗದ ಕುವೆಂಪು ನಗರ, ಗವಿಮಠ, ಗವಿಶ್ರೀ ನಗರ, ಅಂಬೇಡ್ಕರ್ ನಗರ, ಹಮಾಲರ ಕಾಲನಿ, ನಿರ್ಮಿತಿ ಕೇಂದ್ರ, ಡಾಲರ್ಸ್‌ ಕಾಲನಿ, ಸಿದ್ಧೇಶ್ವರ ನಗರ, ಕಾಳಿದಾಸ ನಗರ, ಬೇಲ್ದಾರ ಕಾಲನಿ, ಬಿ.ಟಿ. ಪಾಟೀಲ ನಗರ, ಜೆ.ಪಿ. ಮಾರ್ಕೆಟ್, ದೇವರಾಜ ಅರಸ ಕಾಲನಿ, ಕವಲೂರ ಓಣಿ, ಬೆಳವಿನಾಳ, ಎಪಿಎಂಸಿ ಹಾಗೂ ಜಿಲ್ಲಾಧಿಕಾರಿ ಕಚೇರಿ ಇನ್ನೂ ಮುಂತಾದ ನಗರದ ವಾರ್ಡ್‌ಗಳಲ್ಲಿ ಎಂಎಸ್‌ಪಿಎಲ್‌ ಮತ್ತು ಇತರ ಕಂಪನಿಗಳ ಧೂಳು, ಹೊಗೆ ಆವರಿಸಿ ಜನರ ಆರೋಗ್ಯಕ್ಕೆ ಆಪತ್ತನ್ನುಂಟು ಮಾಡಿದೆ ಎಂದು ಹೇಳಿದ್ದಾರೆ.

ಕಲ್ಯಾಣ ಕರ್ನಾಟಕದಲ್ಲಿ ಸೂರ್ಯಶಕ್ತಿ ಅಪಾರವಾಗಿದ್ದು, ವಿದ್ಯುತ್ ಉತ್ಪಾದನೆಗೆ ಸೌರ ವಿದ್ಯುತ್ ಘಟಕಗಳನ್ನು ಸ್ಥಾಪಿಸಬೇಕೆ ಹೊರತು ಮಾನವ, ಪರಿಸರ ವಿನಾಶಕಾರಿಯಾದ ಅಣುಸ್ಥಾವರ ಬೇಡ ಎಂದು ಮನವಿ ಮಾಡಿದ್ದಾರೆ.

ಕೊಪ್ಪಳದಲ್ಲಿನ ಈ ವಿಸ್ತರಣೆ ಮತ್ತು ಸ್ಥಾಪನೆಯಿಂದ ಮುಂದಿನ ಪೀಳಿಗೆಗೆ ಇನ್ನಷ್ಟು ಅಪಾಯ ಎದುರಾಗಿದೆ. ಇಲ್ಲಿನ ನಗರ ಹಾಗೂ ಗ್ರಾಮೀಣ ಬಾಧಿತರು ಭಯಭೀತರಾಗಿದ್ದು ಪ್ರಸ್ತುತ ಎದುರಾಗಿರುವ ಅನಾರೋಗ್ಯದ ಸಮಸ್ಯೆಗಳಿಗೆ ಕಾರಣವಾಗಿರುವ ಬಲ್ಡೋಟ ಎಂಎಸ್‌ಪಿಎಲ್‌ ವಿಸ್ತರಣೆ ಹಾಗೂ ಅಣುಸ್ಥಾವರ ಸ್ಥಾಪನೆ ನಿಲ್ಲಿಸಬೇಕು ಎಂದು ಜನಾಂದೋಲನಕ್ಕೆ ಸಮಿತಿ ಮುಂದಾಗಿದೆ. ಇದನ್ನು ಗಂಭೀರವಾಗಿ ಪರಿಗಣಿಸಿ ಎಂಎಸ್‌ಪಿಎಲ್‌ ವಿಸ್ತರಣೆ ಕೈಬಿಡಬೇಕು. ಈಗ ಕಾರ್ಖಾನೆಯಿಂದ ಆಗುತ್ತಿರುವ ಪರಿಸರ ಹಾನಿ ತಡೆಗಟ್ಟಬೇಕು. ಅಲ್ಲದೇ ವಿದ್ಯುತ್ ಅಣುಸ್ಥಾವರ ಘಟಕವನ್ನು ಕೈಬಿಡಬೇಕೆಂದು ಮನವಿ ಮಾಡಿದ್ದಾರೆ.

ಗಂಭೀರವಾಗಿ ಪರಿಗಣಿಸದೆ ಹೋದರೆ ಸರ್ಕಾರದ ಜನವಿರೋಧಿ ಈ ನೀತಿ ವಿರುದ್ಧ ಬೀದಿಗಿಳಿದು ಪ್ರತಿಭಟನೆಯನ್ನು ಮಾಡಬೇಕಾಗುತ್ತದೆ ಎಂದು ಎಚ್ಚರಿಸಿದ್ದಾರೆ.