ಸಾರಾಂಶ
- ಚನ್ನಗಿರಿಯಲ್ಲಿ ಮಡಿವಾಳ ಮಾಜಿದೇವ ಜಯಂತ್ಯುತ್ಸವದಲ್ಲಿ ಅಧ್ಯಕ್ಷ ಗುಡ್ಡಪ್ಪ ಸಲಹೆ - - - ಕನ್ನಡಪ್ರಭ ವಾರ್ತೆ ಚನ್ನಗಿರಿ
ಮಡಿವಾಳ ಸಮಾಜ ಆರ್ಥಿಕ, ಶೈಕ್ಷಣಿಕ, ರಾಜಕೀಯವಾಗಿ ತೀರಾ ಹಿಂದುಳಿದ ಸಣ್ಣ ಸಮಾಜವಾಗಿದೆ. ಈ ಸಮಾಜದ ಸಭೆ-ಸಮಾರಂಭಗಳನ್ನು ನಡೆಸಲು ಸಮುದಾಯ ಭವನದ ಅವಶ್ಯಕತೆ ಇದೆ. 10 ವರ್ಷಗಳಿಂದ ಕ್ಷೇತ್ರದ ಜನಪ್ರತಿನಿಧಿಗಳಿಗೆ, ಅಧಿಕಾರಿಗಳಿಗೆ ಮನವಿ ಸಲ್ಲಿಸುತ್ತಲೇ ಬರುತ್ತಿದ್ದರೂ ಯಾವುದೇ ಪ್ರಯೋಜನವಾಗಿಲ್ಲ ಎಂದು ತಾಲೂಕು ಮಡಿವಾಳ ಸಮಾಜದ ಅಧ್ಯಕ್ಷ ಗುಡ್ಡಪ್ಪ ಬೇಸರ ವ್ಯಕ್ತಪಡಿಸಿದರು.ಶನಿವಾರ ಪಟ್ಟಣದ ತಾಲೂಕು ಕಚೇರಿ ಸಭಾಂಗಣದಲ್ಲಿ ತಾಲೂಕು ಆಡಳಿತ ವತಿಯಿಂದ ಹಮ್ಮಿಕೊಂಡಿದ್ದ ವೀರಶರಣ ಮಡಿವಾಳ ಮಾಚಿದೇವ ಜಯಂತ್ಯುತ್ಸವ ಸಮಾರಂಭದಲ್ಲಿ ಅವರು ಮಾತನಾಡಿದರು. ಮಡಿವಾಳ ಸಮಾಜವನ್ನು ಎಲ್ಲ ರಾಜಕೀಯ ಪಕ್ಷಗಳ ನಾಯಕರು ತಾತ್ಸಾರ ಮನೋಭಾವದಿಂದಲೇ ನೋಡಿಕೊಂಡು ಬರುತ್ತಿದ್ದಾರೆ. ಸಮುದಾಯಕ್ಕೆ ಇಂದಿಗೂ ಪರಿಶಿಷ್ಟ ಜಾತಿಯ ಮೀಸಲಾತಿ ನೀಡಿಲ್ಲ. ನಮ್ಮ ಸಮುದಾಯ ಸಣ್ಣ ಜನಸಂಖ್ಯೆಯನ್ನು ಹೊಂದಿರಬಹುದು. ಚುನಾವಣೆಗಳಲ್ಲಿ ಒಬ್ಬರನ್ನು ಗೆಲ್ಲಿಸುವ ಶಕ್ತಿ ಇಲ್ಲದೇ ಇದ್ದರೂ, ಸೋಲಿಸುವ ಶಕ್ತಿ ನಮ್ಮ ಸಮುದಾಯಕ್ಕೆ ಇದೆ ಎಂದರು.
ಅಧ್ಯಕ್ಷತೆ ವಹಿಸಿದ್ದ ತಹಸೀಲ್ದಾರ್ ಜಿ.ಎಸ್.ಶಂಕರಪ್ಪ ಮಾತನಾಡಿ ಸಮಾಜ ಬಾಂಧವರು ಸಮುದಾಯ ಭವನ ನಿರ್ಮಾಣಕ್ಕೆ ನಿವೇಶನದ ಬೇಡಿಕೆ ಇಟ್ಟಿದ್ದಾರೆ. ಚನ್ನಗಿರಿ ಪಟ್ಟಣ ಸೇರಿದಂತೆ ತಾಲೂಕಿನಾದ್ಯಂತ ಲಭ್ಯವಿರುವ ಸರ್ಕಾರದ ಜಮೀನನ್ನು ಗುರುತಿಸಿ, ಮಡಿವಾಳ ಸಮಾಜಕ್ಕೆ ನೀಡಲಾಗುವುದು. ಸಮಾಜ ಬಾಂಧವರು ಈ ದಿನವೇ ನನ್ನ ಕಚೇರಿಗೆ ಮತ್ತು ಪುರಸಭೆಗೆ ನಿವೇಶನ ಕೋರಿ ಅರ್ಜಿ ಸಲ್ಲಿಸಿ ಎಂದು ಸಲಹೆ ನೀಡಿದರು.ಸಮಾರಂಭದಲ್ಲಿ ಮಡಿವಾಳ ಸಮಾಜದ ಗೌರವ ಅಧ್ಯಕ್ಷ ದತ್ತಪ್ಪ, ಮಹಿಳಾ ಘಟಕದ ಅಧ್ಯಕ್ಷೆ ಪುಟ್ಟಲಕ್ಷ್ಮಮ್ಮ, ನಗರ ಘಟಕದ ಅಧ್ಯಕ್ಷ ಜಯಣ್ಣ, ರಮೇಶ್, ಮೂರ್ತಿ, ದೇವರಾಜ್, ರಂಗನಾಥ್, ಪುರಸಭೆಯ ಹಿರಿಯ ಆರೋಗ್ಯ ನಿರೀಕ್ಷಕ ಶಿವರುದ್ರಪ್ಪ, ತೋಟಗಾರಿಕಾ ಇಲಾಖೆಯ ಸಹಾಯಕ ನಿರ್ದೇಶಕ ಶ್ರೀಕಾಂತ್, ಹಿಂದುಳಿದ ವರ್ಗಗಳ ಕಲ್ಯಾಣಾಧಿಕಾರಿ ರವೀಂದ್ರಕುಮಾರ್ ಆಥರ್ಗ, ಸಮಾಜ ಕಲ್ಯಾಣಾಧಿಕಾರಿ ಮಲ್ಲಿಕಾರ್ಜುನ್, ಸಮಾಜ ಬಾಂಧವರು ಹಾಜರಿದ್ದರು.
- - - -2ಕೆಸಿಎನ್‌ಜಿ1.ಜೆಪಿಜಿ:ಚನ್ನಗಿರಿ ಪಟ್ಟಣದ ತಾಲೂಕು ಕಚೇರಿ ಸಭಾಂಗಣದಲ್ಲಿ ತಾಲೂಕು ಆಡಳಿತ ವತಿಯಿಂದ ಹಮ್ಮಿಕೊಂಡಿದ್ದ ಮಡಿವಾಳ ಮಾಚಿದೇವ ಜಯಂತ್ಯುತ್ಸವ ಸಮಾರಂಭದಲ್ಲಿ ಶರಣ ಮಾಚಿದೇವ ಭಾವಚಿತ್ರಕ್ಕೆ ಗಣ್ಯರು ಪುಪ್ಪನಮನ ಸಲ್ಲಿಸಿದರು.