ಸಾರಾಂಶ
ಖಾಸಗಿ ಶಿಕ್ಷಣ ಸಂಸ್ಥೆಗಳ ಮುಂದೆ ಮಂಡಿಯೂರಿತೇ ಶಿಕ್ಷಣ ಇಲಾಖೆ । ಸಚಿವ ಡಿ.ಸುಧಾಕರ್ ಕ್ಷೇತ್ರದಲ್ಲಿ ನಿಯಮಾವಳಿ ಉಲ್ಲಂಘನೆ ಬಿದರಕೆರೆ ರಮೇಶ್
ಕನ್ನಡಪ್ರಭ ವಾರ್ತೆ ಹಿರಿಯೂರುವಿದ್ಯಾರ್ಥಿಗಳಿಗೆ ಪ್ರವೇಶ ನೀಡಲು ಲಭ್ಯವಿರುವ ಸೀಟುಗಳ ಸಂಖ್ಯೆ, ಶಿಕ್ಷಕರು, ಮೀಸಲು ಸೀಟು, ಶುಲ್ಕದ ಪ್ರಮಾಣ ಸೇರಿದಂತೆ ಪ್ರಮುಖ ಮಾಹಿತಿಗಳ ಶಾಲೆಗಳ ನೋಟೀಸ್ ಬೋರ್ಡ್‌ನಲ್ಲಿ ಪ್ರಕಟಿಸಬೇಕು.
ಪ್ರವೇಶಕ್ಕೆ ಪಾರದರ್ಶಕ ನಿಯಮ ಅನುಸರಿಸಬೇಕೆಂಬ ನಿಯಮಾವಳಿಗಳಿವೆ. ಆದರೆ ಜಿಲ್ಲಾ ಉಸ್ತುವಾರಿ ಸಚಿವ ಡಿ.ಸುಧಾಕರ್ ಅವರ ತವರು ಕ್ಷೇತ್ರ ಹಿರಿಯೂರಿನಲ್ಲಿ ಮಾತ್ರ ನಿಯಮಾವಳಿಗಳು ಪಾಲನೆ ಆದಂತಿಲ್ಲ. ನಾವು ಆಡಿದ್ದೇ ಆಟ ಎಂಬಂತೆ ವರ್ತಿಸುವ ಖಾಸಗಿ ವಿದ್ಯಾಸಂಸ್ಥೆಗಳು. ರಾಜ್ಯಮಟ್ಟದಲ್ಲಿ ಎರಡು ರ್ಯಾಂಕ್ ಪಡೆದ ರಾಷ್ಟ್ರೀಯ ಅಕಾಡೆಮಿ ಶಾಲೆಗೆ ನೋಟೀಸ್ ಬೋರ್ಡೇ ಇಲ್ಲ. ಸಾಲದೆಂಬಂತೆ ಶಾಲೆ ಮುಂಭಾಗದಲ್ಲಿ ಕೂಡಾ ನಾಮಫಲಕ ಇಲ್ಲ. ಅಷ್ಟರ ಮಟ್ಟಿಗೆ ಕದ್ದು ಮುಚ್ಚಿ ಶೈಕ್ಷಣಿಕ ವಹಿವಾಟು ಇಲ್ಲಿ ನಡೆಯುತ್ತಿದೆ.ಶಾಲಾ ಪ್ರವೇಶಾತಿಗೆ ಸಂಬಂಧಿಸಿದಂತೆ ಕ್ಷೇತ್ರ ಶಿಕ್ಷಣಾಧಿಕಾರಿಗಳು ಕಳೆದ ಏ.1ರಂದೇ ಶಾಲಾ ಆಡಳಿತ ಮಂಡಳಿ ಹಾಗೂ ಪ್ರಾಂಶುಪಾಲರ ಸಭೆ ಕರೆದು ಚರ್ಚಿಸಿದ್ದಾರೆ. ಸರ್ಕಾರದ ನಿಯಮಾವಳಿಗಳ ಹರವಿದ್ದಾರೆ. ಅಚ್ಚರಿ ಎಂದರೆ ಸರ್ಕಾರಿ ಸುತ್ತೋಲೆ ಹಾಗೂ ನಿಯಮಾವಳಿಗಳ ಗಾಳಿಗೆ ತೂರಿ ವಿದ್ಯಾರ್ಥಿಗಳಿಗೆ ಪ್ರವೇಶ ಕಲ್ಪಿಸಲಾಗಿದೆ. ಶುಲ್ಕ ಹಾಗೂ ಡೊನೇಷನ್ ವಸೂಲಾತಿಗೆ ಶಿಕ್ಷಣ ಇಲಾಖೆ ಅನುಮತಿ ಪಡೆದು ಕೊಂಡಿಲ್ಲ. ಚಿತ್ರದುರ್ಗದಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿ ಸಭೆ ಕರೆದು ಮೂರು ದಿನಗಳ ಒಳಗಾಗಿ ಶುಲ್ಕದ ಮಾಹಿತಿಯ ನೋಟೀಸ್ ಬೋರ್ಡ್ ನಲ್ಲಿ ಪ್ರಕಟಿಸಬೇಕೆಂದು ತಿಳಿಸಿದ್ದಾರೆ. ಆದರೆ ಹಿರಿಯೂರಿನಲ್ಲಿ 40ದಿನ ಸಮೀಪಿಸಿದರೂ ಶಿಕ್ಷಣ ಇಲಾಖೆ ಅಧಿಕಾರಿಗಳ ಸೂಚನೆಗೆ ಕ್ಯಾರೇ ಅಂದಿಲ್ಲ. ಖಾಸಗಿ ಶಿಕ್ಷಣ ಸಂಸ್ಥೆಗಳ ಮುಂದೆ ಮಂಡಿಯೂರಿತೇ ಶಿಕ್ಷಣ ಇಲಾಖೆ ಎಂಬ ಅನುಮಾನಗಳು ಮೂಡಿವೆ.
ಹಿರಿಯೂರು ತಾಲೂಕಿನಲ್ಲಿ 30ಕ್ಕೂ ಹೆಚ್ಚು ಖಾಸಗಿ ಶಾಲೆಗಳಿದ್ದು ಅವುಗಳಲ್ಲಿ 17 ಪ್ರಾಥಮಿಕ ಶಾಲೆಗಳಿವೆ.18 ಶಾಲೆಗಳಲ್ಲಿ ಶುಲ್ಕದ ಮಾಹಿತಿ ನೋಟೀಸ್ ಬೋರ್ಡ್‌ಗೆ ಹಾಕದೆ ಅಡ್ಮಿಷನ್ ಮುಗಿಸಲಾಗಿದೆ. ಕೆಲವು ಶಾಲೆಗಳಲ್ಲಿ ಡಿಸೆಂಬರ್, ಜನವರಿಯಲ್ಲೇ ಅಡ್ಮಿಷನ್‌ಗೆ ಹೆಸರು ಬರೆಸಬೇಕು ಎಂದು ಪೋಷಕರು ಗೋಳಿಡುತ್ತಿದ್ದಾರೆ.
ತಾಲೂಕಿನ ಮತ್ತೊಂದು ಶಾಲೆಯಲ್ಲಿ ಮನೆ ಲೀಸ್‌ಗೆ ಹಾಕಿಸಿಕೊಳ್ಳುವ ರೀತಿ ಇಂತಿಷ್ಟು ಲಕ್ಷ ಹಣ ಕಟ್ಟಿದರೆ ಅದರ ಬಡ್ಡಿಯ ಹಣಕ್ಕೆ ಮಕ್ಕಳನ್ನು ಓದಿಸುವ ಪ್ರಕ್ರಿಯೆ ಚಾಲ್ತಿಯಲ್ಲಿದೆ. ಮಕ್ಕಳು ಶಾಲೆ ಬಿಟ್ಟಾಗ ಪೋಷಕರ ಹಣ ವಾಪಸ್ ಬರುತ್ತದೆ.ನಗರದ ರ್‍ಯಾಂಕ್ ಪಡೆದ ಶಾಲೆಯೊಂದು ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಸೇರಿದ ಮಕ್ಕಳ ಪೋಷಕರಿಂದ ಬಟ್ಟೆ, ಅಲಂಕಾರ, ಬಣ್ಣ ಎಂದು ಹಣ ವಸೂಲು ಮಾಡುತ್ತಿದೆ. ನಿಮ್ಮ ಮಗುವಿಗೆ ಕೃಷ್ಣನ ಡ್ರೆಸ್ ಹಾಕಬೇಕು ಎಂದು ಹಣ ಪಡೆಯುತ್ತದೆ. ಕಾರ್ಯಕ್ರಮ ಮುಗಿದ ಮೇಲೆ ಹಣವೂ ಇಲ್ಲ, ಕೃಷ್ಣನ ಡ್ರೆಸ್ ಇಲ್ಲ. ಮಗು ಮಾತ್ರ ಮನೆಗೆ ಬರುತ್ತದೆ. ಗುಣಮಟ್ಟದ ಶಿಕ್ಷಣ ನೀಡುವ ನೆಪದಲ್ಲಿ ಪೋಷಕರ ಆರ್ಥಿಕ ವ್ಯವಸ್ಥೆ ಮೇಲೆ ಇನ್ನಿಲ್ಲದಂತೆ ದಾಳಿ ನಡೆಸಲಾಗುತ್ತಿದೆ. ಎಲ್‌ಕೆಜಿ, ಯುಕೆಜಿಗೂ ಸಹ ದುಬಾರಿ ಶುಲ್ಕ ವಸೂಲು ಮಾಡಿ ಬಡ ಪೋಷಕರ ಸುಲಿಗೆ ಮಾಡಲಾಗಿದೆ.
ಖಾಸಗಿ ಶಾಲೆಗಳು ಅರ್ಹ ವಿದ್ಯಾರ್ಹತೆ ಹೊಂದಿರುವ ಶಿಕ್ಷಕರನ್ನು ನೇಮಿಸಿಕೊಳ್ಳಬೇಕು. ಶಿಕ್ಷಕರಿಗೆ ಬ್ಯಾಂಕ್ ಮೂಲಕವೇ ಮಾಸಿಕ ವೇತನ ಪಾವತಿಸಬೇಕು. ಖಾಸಗಿ ಶಾಲೆಗಳವರು ನೇಮಿಸಿಕೊಂಡ ಶಿಕ್ಷಕರ ಪಟ್ಟಿಯನ್ನು ಬಿಇಓ ಕಚೇರಿಗೆ ತಲುಪಿಸಬೇಕು. ಆದರೆ ಹಿರಿಯೂರಿನಲ್ಲಿ ಇಂತಹ ನಿಯಮಾವಳಿಗಳು ಪಾಲನೆ ಆದಂತಿಲ್ಲ.ಶಾಲಾ ಆವರಣದಲ್ಲಿ ನವೋದಯ, ಮೊರಾರ್ಜಿ ಸೇರಿದಂತೆ ಕೋಚಿಂಗ್ ಸೆಂಟರ್ ನಡೆಸಲಾಗುತ್ತಿದೆ. ನಗರದ ಕೆಲ ಶಾಲೆಗಳು ಕೋಚಿಂಗ್ ಸೆಂಟರ್ ನಡೆಸುತ್ತಿರುವುದು ನಮ್ಮ ಗಮನಕ್ಕೆ ಬಂದಿದ್ದು ಇಲಾಖೆಯಿಂದ ಅಧಿಕೃತ ಅನುಮತಿ ಪಡೆದು ನಡೆಸಬೇಕು. ಆರ್‌ಟಿಇ ವಿದ್ಯಾರ್ಥಿಗಳನ್ನು ಹಣ ಕಟ್ಟಿದ ವಿದ್ಯಾರ್ಥಿಗಳಂತೆಯೇ ಸಮಾನವಾಗಿ ಕಾಣಬೇಕು ಎನ್ನುತ್ತಾರೆ ಶಿಕ್ಷಣ ಇಲಾಖೆ ಅಧಿಕಾರಿಗಳು.