ಸಾರಾಂಶ
ಸೋಮರಡ್ಡಿ ಅಳವಂಡಿ
ಕೊಪ್ಪಳ : ವಿಪರೀತ ಗಾಳಿ, ಆಗಾಗ ಜಿಟಿ ಜಿಟಿ ಮಳೆ ಇದ್ದರೂ ಕಟಾವು ಮಾಡಿಕೊಂಡು ಮದ್ಯ ರಾತ್ರಿಯೇ ಬಂದಿದ್ದೇನೆ, ಆದರೂ ಮಾರುಕಟ್ಟೆಯಲ್ಲಿ ಟೊಮೇಟೋ ಕೇಳೋರೇ ಇಲ್ಲ...
ಇದು ತಾಲೂಕಿನ ಕಾಟ್ರಳ್ಳಿಯಿಂದ ಟೊಮೇಟೋ ತಂದಿದ್ದ ರೈತ ಬಸಪ್ಪನ ದುಃಖದ ಮಾತು.
10 ಬಾಕ್ಸ್ ತಂದಿದ್ದೇನೆ, ಒಂದೂ ಬಾಕ್ಸ್‌ನ್ನು ಯಾರೂ ಕೇಳುತ್ತಿಲ್ಲ. ಎಷ್ಟಕ್ಕಾದರು ಕೇಳಿದರೂ ಕೊಟ್ಟು ಹೋಗುತ್ತೇನೆ ಎಂದು ಗದ್ಗದಿತರಾದರು ಬಸಪ್ಪ.
ಹೌದು, ಮಾರುಕಟ್ಟೆಯಲ್ಲಿ ಟೊಮೇಟೋ ಕೇಳುವವರೇ ಇಲ್ಲ. ದಿಢೀರ್ ಎಂದು ಮಾರುಕಟ್ಟೆಯಲ್ಲಿ ಟೊಮೇಟೋ ದರ ಕುಸಿದಿದೆ. ಎಷ್ಟು ಕುಸಿದಿದೆ ಎಂದರೇ 20 ಕೆಜಿ ಬಾಕ್ಸ್ ಕೇವಲ ₹80-100 ರುಪಾಯಿಗೆ ಸವಾಲು ಆಗುತ್ತಿದೆ. ಅಂದರೇ ಕೆಜಿಗೆ ₹4-5 ಸಹ ಆಗುವುದಿಲ್ಲ. ಒಂದು ಬಾಕ್ಸ್ ಕಟಾವು ಮಾಡಿಕೊಂಡು ಮಾರುಕಟ್ಟೆಗೆ ತರಲು ನೂರಾರು ರುಪಾಯಿ ಬೇಕಾಗುತ್ತದೆ. ಹಮಾಲಿ, ಕೂಲಿಯೂ ಸಹ ಆಗುವುದಿಲ್ಲ. ಹೀಗಾಗಿ, ರೈತರು ಪಾಡು ದೇವರಿಗೆ ಪ್ರೀತಿ ಎನ್ನುವಂತೆ ಇದೆ.
ಕಳೆದ ಕೆಲವು ದಿನಗಳ ಹಿಂದೆ ಟೊಮೇಟೋ ದರ ಆಕಾಶಕ್ಕೆ ಹೋಗಿತ್ತು. ನೂರು ರುಪಾಯಿ ದರದಲ್ಲಿ ಮಾರಾಟವಾಗುತ್ತಿತ್ತು. ಈಗ ದಿಢೀರ್ ಎಂದು ದರ ಕುಸಿತವಾಗಿದೆ.
ಕೇಳುವವರೇ ಇಲ್ಲ: ಮಾರುಕಟ್ಟೆಯಲ್ಲಿ ಟೊಮೇಟೋ ಬರುವ ಪ್ರಮಾಣ ದಿಢೀರ್ ಹೆಚ್ಚಳವಾಗಿರುವುದೇ ಟೊಮೇಟೋ ದರ ಹೆಚ್ಚಳಕ್ಕೆ ಕಾರಣ ಎನ್ನಲಾಗಿದೆ. ಎಷ್ಟರಮಟ್ಟಿಗೆ ಎಂದರೇ ಮಾರುಕಟ್ಟೆ ಬಂದಿರುವ ಅರ್ಧದಷ್ಟು ಟೊಮೇಟೋವನ್ನು ಯಾರು ಕೇಳುವವರೇ ಇಲ್ಲ. ಮೊದಲು ಸವಾಲು ಆಗಿದ್ದು ಆಯಿತು. ನಂತರ ಸವಾಲು ಮಾಡುವವರು ಇರುವುದಿಲ್ಲ. ಕೊಪ್ಪಳ ಮಾರುಕಟ್ಟೆಯಲ್ಲಿಯೇ ಸುಮಾರು 100 ಬಾಕ್ಸ್‌ಗೂ ಅಧಿಕ ಟೊಮೇಟೋ ಗುರುವಾರ ಖರೀದಿಯಾಗದೆ ಹಾಗೆ ಉಳಿಯಿತು.
ಕಳದೆ ವರ್ಷ ಇದೇ ವೇಳೆಯಲ್ಲಿ ಟೊಮೇಟೋಗೆ ಭಾರಿ ಬೇಡಿಕೆ ಇದ್ದಿದ್ದರಿಂದ ರೈತರು ಆ ಲೆಕ್ಕಾಚಾರದಲ್ಲಿ ಬೆಳೆದಿದ್ದಾರೆ. ಆದರೆ, ಈ ವರ್ಷ ಮಾತ್ರ ಟೊಮೇಟೋ ದರ ಕುಸಿದು, ಪಾತಾಳಕ್ಕೆ ಸೇರಿದ್ದರಿಂದ ರೈತರು ಕಂಗಾಲಾಗಿದ್ದಾರೆ.
ಬೆಳೆದಿದ್ದ ಖರ್ಚು ಬಾರದಂತೆ ಆಗಿದೆ. ಅಷ್ಟೇ ಅಲ್ಲ, ಕಟಾವು ಮಾಡಿಸುವುದು ಹೊರೆಯಾಗುತ್ತಿದೆ. ಹೀಗಾಗಿ, ಅನೇಕರು ಟೊಮೇಟೋ ಕಟಾವು ಮಾಡಲು ಹಿಂದೇಟು ಹಾಕುತ್ತಿದ್ದಾರೆ.
ಕನಿಷ್ಠ ₹500ಕ್ಕೆ ಬಾಕ್ಸ್ ಮಾರಿದರೆ ಒಂದಷ್ಟು ಲಾಭವಾಗುತ್ತದೆ. ಆದರೆ, ಈ ರೀತಿ ನೂರು ರುಪಾಯಿಗೆ ಬಾಕ್ಸ್ ಮಾರಾಟ ಮಾಡಿದರೆ ಕಟಾವು ಮಾಡುವುದು ಸಾಧ್ಯವೇ ಇಲ್ಲ ಎನ್ನುತ್ತಾರೆ ಮಾರುಕಟ್ಟೆಗೆ ಬಂದಿದ್ದ ರೈತರು.
ಟೊಮೇಟೋ ವಿಪರೀತ ಬರುತ್ತಿರುವುದರಿಂದ ದರ ಕುಸಿದಿದೆ. ಅಷ್ಟೇ ಅಲ್ಲ, ಬೇರೆಡೆಗೂ ಟೊಮೇಟೋ ಕಳುಹಿಸಬೇಕು ಎಂದರೆ ಆಗುತ್ತಿಲ್ಲ. ಹೀಗಾಗಿ ಕೇಳುವವರೇ ಇಲ್ಲ ಎನ್ನುತ್ತಾರೆ ತರಕಾರಿ ವ್ಯಾಪಾರಿ ಖಾಜಾಸಾಬ.
ಹೊಲದಲ್ಲಿ ಬೆಳೆದಿದ್ದ ಟೊಮೇಟೋ ಮಾರುಕಟ್ಟೆಯಲ್ಲಿ ಕೇಳುವವರೇ ಇಲ್ಲದಂತೆ ಆಗಿದೆ. ಕಳೆದ ವಾರದಿಂದ ದಿನೇ ದಿನೇ ದರ ಕುಸಿಯುತ್ತಿದ್ದು, ಈಗಂತೂ ಕೇಳುವವರೇ ಇಲ್ಲ ಎನ್ನುತ್ತಾರೆ ರೈತ ಮರಿಯಪ್ಪ ವಡ್ಡರ.