ಸಾರಾಂಶ
ಎಕ್ಸ್‌ಪ್ರೆಸ್ ಕೆನಾಲ್ ಕಾಮಗಾರಿ ಮತ್ತೊಮ್ಮೆ ಆರಂಭವಾಗಿದ್ದು ಯಾವುದೇ ಕಾರಣಕ್ಕೂ ವಿರೋಧ ಮಾಡಬೇಡಿ ಎಂದು ಹಸಿರು ಸೇನೆ ರೈತ ಸಂಘದ ತಾಲೂಕು ಅಧ್ಯಕ್ಷ ಹೊಸಪಾಳ್ಯ ಲೋಕೇಶ್ ಮನವಿ ಮಾಡಿದರು.
ಮಾಗಡಿ: ರೈತ ಸಂಘಟನೆ ಒಂದು ತಾಲೂಕಿಗೆ ಸೀಮಿತವಲ್ಲ, ಸ್ವಾಮೀಜಿಗಳು ಒಂದು ಜಿಲ್ಲೆಗೆ ಸೀಮಿತರಾಗಿ ಮತ್ತೊಂದು ಜಿಲ್ಲೆಗೆ ನೀರು ಕೊಡುವುದಿಲ್ಲ ಎಂದು ಹೇಳುತ್ತಿರುವುದು ಸರಿಯಲ್ಲ. ಎಕ್ಸ್‌ಪ್ರೆಸ್ ಕೆನಾಲ್ ಕಾಮಗಾರಿ ಮತ್ತೊಮ್ಮೆ ಆರಂಭವಾಗಿದ್ದು ಯಾವುದೇ ಕಾರಣಕ್ಕೂ ವಿರೋಧ ಮಾಡಬೇಡಿ ಎಂದು ಹಸಿರು ಸೇನೆ ರೈತ ಸಂಘದ ತಾಲೂಕು ಅಧ್ಯಕ್ಷ ಹೊಸಪಾಳ್ಯ ಲೋಕೇಶ್ ಮನವಿ ಮಾಡಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾವು ನೀವು ಕಟ್ಟಿರುವ ತೆರಿಗೆ ಹಣದಲ್ಲಿ ಸರ್ಕಾರ ಎಕ್ಸ್‌ಪ್ರೆಸ್ ಕೆನಾಲ್ ಹೇಮಾವತಿ ಕಾಮಗಾರಿ ಮಾಡಲಾಗುತ್ತಿದೆ. ಈ ಕಾಮಗಾರಿಗೆ ವಿರೋಧ ಮಾಡಿದರೆ ನಮ್ಮ ನಿಮ್ಮ ತೆರಿಗೆ ಹಣವೇ ನಷ್ಟವಾಗುತ್ತದೆ. ರಾಜಕೀಯ ಲಾಭ ಪಡೆಯಲು ತುಮಕೂರಿನಲ್ಲಿ ಅಲ್ಲಿನ ಜನಪ್ರತಿನಿಧಿಗಳು ಸಾರ್ವಜನಿಕರಲ್ಲಿ ಭಿನ್ನಾಭಿಪ್ರಾಯ ಮೂಡಿಸುತ್ತಿದ್ದಾರೆ. ನಾವು ಹೆಚ್ಚುವರಿ ನೀರು ಕೇಳುತ್ತಿಲ್ಲ. ನಮಗೆ ಮೀಸಲಾಗಿರುವ ನೀರನ್ನು ಕೇಳುತ್ತಿದ್ದೇವೆ. ಕಳೆದ 10 ವರ್ಷಗಳಿಂದಲೂ ನಮ್ಮ ಪಾಲಿನ ನೀರನ್ನೇ ತುಮಕೂರು ಜಿಲ್ಲೆಯ ಜನಗಳು ಬಳಸುತ್ತಿದ್ದಾರೆ.
ಈಗ ಎಕ್ಸ್‌ಪ್ರೆಸ್ ಕೆನಾಲ್ ಕಾಮಗಾರಿ ಮೂಲಕ ನಮಗೆ ಸಿಗಬೇಕಾದ ಮುಕ್ಕಾಲು ಟಿಎಂಸಿ ನೀರನ್ನು ಮಾತ್ರ ಪಡೆಯುತ್ತಿದ್ದು ಹೆಚ್ಚುವರಿ ನೀರು ನಮಗೆ ಬೇಡ ಎಂದು ಹೇಳಿದರು.ನಿಮ್ಮ ತಾಲೂಕಿನಲ್ಲಿ ಎಕ್ಸ್ ಪ್ರೆಸ್ ಕೆನಾಲ್ ಗೇಟ್ ವಾಲ್ ಇರುವುದರಿಂದ ಕುಣಿಗಲ್ ಮತ್ತು ಮಾಗಡಿಗೆ ಸೇರಿ 3 ಟಿಎಂಸಿ ನೀರು ಬಿಟ್ಟ ನಂತರ ನೀವು ಗೇಟ್ ವಾಲ್ ಮುಚ್ಚಿಕೊಳ್ಳಿ, ನಮ್ಮದೇನು ಅಭ್ಯಂತರವಿಲ್ಲ. ಕುಡಿಯುವ ನೀರಿನ ಬಗ್ಗೆ ಸ್ವಾಮೀಜಿಗಳು ಮತ್ತು ಅಲ್ಲಿನ ಜನಪ್ರತಿನಿಧಿಗಳು ವಿರೋಧ ಮಾಡುವುದು ಸರಿಯಲ್ಲ. ನಾವು ನಮಗೆ ಬರಬೇಕಾದ ನೀರನ್ನು ಟ್ರ್ಯಾಕ್ಟರ್, ಲಾರಿಯಲ್ಲಾದರೂ ತುಂಬಿಕೊಳ್ಳುತ್ತೇವೆ ಎಂದರು.
ನಮ್ಮ ರೈತರಿಗೆ ತೊಂದರೆ ಕೂಡ ನಾವು ಕೂಡ ಹೋರಾಟಕ್ಕೆ ಆ ಜಿಲ್ಲೆಯವರು ಈ ಜಿಲ್ಲೆಯವರು ಅನ್ನದೇ ಒಗ್ಗಟ್ಟಾಗಿ ಬಂದು ಹೋರಾಟ ಮಾಡಿ ರೈತರ ಪರ ನಿಲ್ಲುತ್ತೇವೆ. ಈಗ ರೈತರಿಗೆ ಹಾಗೂ ನಮ್ಮ ಭಾಗದ ಜನಗಳಿಗೆ ಕುಡಿಯುವ ನೀರಿಗೆ ಯೋಜನೆ ಮಾಡಿದರೆ ಅದನ್ನು ವಿರೋಧ ಮಾಡುವುದು ಸರಿಯಲ್ಲ. ನಾವು ಕೆನಾಲ್ ಮೂಲಕ ನೀರು ಪಡೆಯುತ್ತಿದ್ದು ನೀವು ಕೂಡ ನಾಲೆ ಬೇಡ ಎಕ್ಸ್‌ಪ್ರೆಸ್ ಕೆನಾಲ್ ರೀತಿಯಲ್ಲಿ ಕಾಮಗಾರಿ ಮಾಡಬೇಕು ಎಂದರೆ ನಿಮ್ಮ ಪರ ನಾವು ಕೂಡ ಸರ್ಕಾರವನ್ನು ಒತ್ತಾಯಿಸುತ್ತೇವೆ. ಯಾವುದೇ ಕಾರಣಕ್ಕೂ ಆ ಭಾಗದ ಸ್ವಾಮೀಜಿಗಳು ಜನಪ್ರತಿನಿಧಿಗಳು ಎಕ್ಸ್‌ಪ್ರೆಸ್ ಕೆನಾಲ್ ಕಾಮಗಾರಿಗೆ ವಿರೋಧ ಮಾಡಬಾರದು. ವಿರೋಧಿಸಿದರೆ ನಾವು ತಾಳ್ಮೆ ಕಳೆದುಕೊಂಡು ಉಗ್ರ ಹೋರಾಟ ಮಾಡುತ್ತೇವೆ ಎಂದು ಲೋಕೇಶ್ ಎಚ್ಚರಿಕೆ ನೀಡಿದರು.
ದಲಿತ ಮುಖಂಡ ಮಾಡಬಾಳ್ ಜಯರಾಂ ಮಾತನಾಡಿ, ಹಲವು ವರ್ಷಗಳ ಹೋರಾಟದ ಫಲವಾಗಿ ನಮ್ಮ ತಾಲೂಕಿಗೆ ಹೇಮಾವತಿ ನೀರು ಬರುತ್ತಿದೆ. ಅದಕ್ಕೆ ಆ ಭಾಗದ ಜನಗಳು ವಿರೋಧ ಮಾಡುವುದು ಸರಿಯಲ್ಲ. ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಮೇಲಿನ ದ್ವೇಷಕ್ಕಾಗಿ ಆ ಭಾಗದ ಜನಪ್ರತಿನಿಧಿಗಳು ರಾಮನಗರ, ಕನಕಪುರ ಕ್ಷೇತ್ರಕ್ಕೆ ನೀರನ್ನು ತೆಗೆದುಕೊಂಡು ಹೋಗುತ್ತಿದ್ದಾರೆ. ಆ ಭಾಗದ ಜನಗಳಿಗೆ ತಪ್ಪು ಸಂದೇಶ ಹೇಳಿ ಹೋರಾಟ ಮಾಡುತ್ತಿದ್ದಾರೆ. ಹೇಮಾವತಿ ನದಿಯಲ್ಲಿ ಎಷ್ಟು ನೀರಿದೆ ಎಂಬುದರ ಮೇಲೆ ತುಮಕೂರು ಹಾಸನ ಮಾಗಡಿಗೆ ಸೇರಿ ನೀರನ್ನು ಹಂಚಿಕೆ ಮಾಡಿದೆ. ಬೇರೆ ತಾಲೂಕಿಗೆ ನೀರು ಹಂಚಿಕೆ ಆಗಿಲ್ಲ. ಯಾವುದೇ ಕಾರಣಕ್ಕೂ ಮಾಗಡಿ ತಾಲೂಕು ಬಿಟ್ಟು ಈ ನೀರನ್ನು ತೆಗೆದುಕೊಂಡು ಹೋಗುತ್ತಿಲ್ಲ. ತಾವು ಇದೇ ರೀತಿ ಪ್ರತಿಭಟನೆ ಮುಂದುವರಿಸಿದರೆ ನಾವು ತುಮಕೂರಿನಲ್ಲೇ ಬಂದು ಜನಪ್ರತಿನಿಧಿಗಳ ವಿರುದ್ಧ ಉಗ್ರ ಪ್ರತಿಭಟನೆ ಮಾಡಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.
ರೈತ ಸಂಘದ ತಾಲೂಕು ಯುವ ಘಟಕದ ಅದ್ಯಕ್ಷ ರವಿಕುಮಾರ್, ಹಳ್ಳಿಕಾರ್ ಹನುಮಂತರಾಜು, ಶಿವಲಿಂಗಯ್ಯ, ಹನುಮಂತಯ್ಯ, ರಾಮಣ್ಣ, ಬುಡನ್ಸಾಬ್, ನಾರಾಯಣಪ್ಪ, ಕೃಷ್ಣಪ್ಪ, ಸಿದ್ದಪ್ಪ, ವೆಂಕಟೇಶ್, ಕರಿಯಪ್ಪ, ನಿಂಗಣ್ಣ, ಚಂದ್ರಪ್ಪ, ನಾಗರಾಜು, ಚಿಕ್ಕಣ್ಣ ಮತ್ತಿತರರು ಭಾಗವಹಿಸಿದ್ದರು.