ಕನಕಪುರದಲ್ಲಿ ನಡೆದ ಕನಕೋತ್ಸವದಲ್ಲಿ ಕಾಂಗ್ರೆಸ್ ಶಾಸಕರನ್ನು ಆಹ್ವಾನಿಸಿ ಸನ್ಮಾನ ಮಾಡಲಾಗಿದೆ. ಇದನ್ನು ಶಕ್ತಿ ಪ್ರದರ್ಶನ ಎಂಬ ಅರ್ಥ ಕಲ್ಪಿಸುವುದು ಬೇಡ. ಡಿ.ಕೆ.ಶಿವಕುಮಾರ್ ರವರು ಎಲ್ಲ ಶಾಸಕರನ್ನು ಕನಕೋತ್ಸವಕ್ಕೆ ಆಹ್ವಾನ ನೀಡಿದ್ದರು. ಅದರಲ್ಲಿ ಕೆಲವರು ಬಂದು ಹೋಗಿದ್ದಾರೆ.

ಕನ್ನಡಪ್ರಭ ವಾರ್ತೆ ರಾಮನಗರ

ಅಬಕಾರಿ ಇಲಾಖೆ ಸಚಿವ ಆರ್.ಬಿ.ತಿಮ್ಮಾಪುರ ಕಮಿಷನ್ ಕೇಳಿರುವ ಆಡಿಯೋ ಅಥವಾ ವಿಡಿಯೋ ಏನೂ ಇಲ್ಲ. ಯಾರೋ ಮಾತನಾಡಿಕೊಂಡಿದ್ದಕ್ಕೆ ಸಚಿವರನ್ನು ಹೊಣೆಗಾರರನ್ನಾಗಿ ಮಾಡಿ ರಾಜೀನಾಮೆ ಕೇಳುವುದರಲ್ಲಿ ಅರ್ಥವಿಲ್ಲ ಎಂದು ವಿರೋಧ ಪಕ್ಷದ ವಿರುದ್ಧ ಮಾಗಡಿ ಕ್ಷೇತ್ರ ಶಾಸಕ ಎಚ್.ಸಿ.ಬಾಲಕೃಷ್ಣ ಕಿಡಿಕಾರಿದರು.

ಬಿಡದಿ ಹೋಬಳಿಯಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳನ್ನು ಲೋಕಾರ್ಪಣೆಗೊಳಿಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಅಬಕಾರಿ ಇಲಾಖೆ ಸಚಿವರಾಗಿ ಇಲ್ಲಿವರೆಗೆ ಯಾರೆಲ್ಲ ಕಾರ್ಯನಿರ್ವಹಿಸಿದ್ದಾರೋ ಅವರ ಮೇಲೆಲ್ಲ ಭ್ರಷ್ಟಾಚಾರದ ಆರೋಪ ಕೇಳಿ ಬಂದಿದೆ. ಹಾಗಂತ ರಾಜೀನಾಮೆ ನೀಡಿದ ಉದಾಹರಣೆಯೂ ಇಲ್ಲ. ಈಗಿನ ಸಚಿವರ ಮೇಲು ಅಂತಹದೇ ಆರೋಪ ಮಾಡಲಾಗಿದೆ ಎಂದರು.

ಅಬಕಾರಿ ಸಚಿವರು ಹಣಕ್ಕಾಗಿ ಬೇಡಿಕೆ ಇಟ್ಟಿರುವಂತಹ ಆಡಿಯೋವಾಗಲಿ ಅಥವಾ ವಿಡಿಯೋವಾಗಲಿ ಇಲ್ಲ. ಯಾರೋ ಅಬಕಾರಿ ಸಚಿವರ ಹೆಸರು ಬಳಸಿಕೊಂಡು ಮಾತನಾಡಿದ ಕಾರಣಕ್ಕೆ ರಾಜೀನಾಮೆ ನೀಡಬೇಕು ಎಂದು ಹೇಳುವುದರಲ್ಲಿ ಅರ್ಥವಿಲ್ಲ. ನಾನು ಕಮಿಷನ್ ಕೇಳಿದೆ ಅಂತ ಯಾರೋ ಮಾತನಾಡಿಕೊಂಡರೆ ನಾನೇಕೆ ರಾಜೀನಾಮೆ ನೀಡಬೇಕು. ನಾನೇ ಖುದ್ಧಾಗಿ ಕಮಿಷನ್ ಕೇಳಿದರ ಆಡಿಯೋ ಅಥವಾ ವಿಡಿಯೋ ಇದ್ದರೆ ನೈತಿಕ ಜವಾಬ್ದಾರಿ ಹೊತ್ತು ರಾಜೀನಾಮೆ ನೀಡಬೇಕಾಗುತ್ತದೆ. ಯಾರೋ ಮಾತನಾಡಿಕೊಂಡಿದ್ದಕ್ಕೆ ಅಬಕಾರಿ ಸಚಿವರನ್ನು ಹೊಣೆಗಾರರನ್ನಾಗಿ ಮಾಡುವುದರಲ್ಲಿ ಅರ್ಥವಿಲ್ಲ. ಹಾಗಾಗಿ ಅವರು ರಾಜೀನಾಮೆ ಕೊಡುವುದು ಅಗತ್ಯವಿಲ್ಲ ಎಂದು ಹೇಳಿದರು.

ಬಿಜೆಪಿಯವರು ಹೇಗಾದರು ಮಾಡಿ ಅಬಕಾರಿ ಸಚಿವರಿಂದ ರಾಜೀನಾಮೆ ಕೊಡಿಸಿ ಕಾಂಗ್ರಸ್ ಸರ್ಕಾರದ ಒಂದು ವಿಕೆಟ್ ಉರುಳಿಸಬೇಕೆಂದು ಪ್ರಯತ್ನಿಸಿದರು. ಅದರಲ್ಲಿ ಅವರು ಯಶಸ್ವಿಯಾಗಲಿಲ್ಲ. ಯಾವ ಆಧಾರವೂ ಇಲ್ಲದೆ ಸಚಿವರು ರಾಜೀನಾಮೆ ನೀಡಬೇಕೆಂದು ಕೇಳುವುದರಲ್ಲಿ ಅರ್ಥವಿಲ್ಲ. ಅಬಕಾರಿ ಸಚಿವರೇ ವಿಧಾನಸಭಾ ಅಧಿವೇಶನದಲ್ಲಿ ಸ್ಪಷ್ಟನೆಯನ್ನೂ ಕೊಟ್ಟಿದ್ದಾರೆ. ವಿಪಕ್ಷದವರು ಇರುವುದೇ ಹೋರಾಟ ಮಾಡಲು. ಅವರು ಹೋರಾಟ ಮುಂದುವರೆಸಲಿ ಎಂದು ಬಾಲಕೃಷ್ಣ ಲೇವಡಿ ಮಾಡಿದರು.-------

ವರಿಷ್ಠರು ತೀರ್ಮಾನಿಸಿದಾಗ ಡಿಕೆಶಿ ಸಿಎಂ

ಮುಖ್ಯಮಂತ್ರಿ ಬದಲಾವಣೆ ವಿಚಾರ ಸದ್ಯಕ್ಕೆ ಚರ್ಚೆಯಲ್ಲಿ ಇಲ್ಲ. ರಾಜ್ಯ ಬಜೆಟ್ ಮಂಡನೆಯಾದ ಮೇಲೆ ಮುಖ್ಯಮಂತ್ರಿ ಬದಲಾವಣೆ ಆಗುತ್ತದೆಯೋ ಇಲ್ಲವೋ ಗೊತ್ತಿಲ್ಲ. ಪಕ್ಷದ ವರಿಷ್ಠರು ಇಬ್ಬರನ್ನು ಕರೆದು ಮಾತುಕತೆ ನಡೆಸುವುದಾಗಿ ಹೇಳಿದ್ದಾರೆ . ಏನಾಗುತ್ತದೆಯೋ ಕಾದು ನೋಡೋಣ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ನಾನು ಸಿದ್ದರಾಮಯ್ಯ ಮತ್ತು ಡಿ.ಕೆ.ಶಿವಕುಮಾರ್ ಅವರೊಂದಿಗೆ ಚೆನ್ನಾಗಿದ್ದೇನೆ. ಆದರೆ, ಡಿ.ಕೆ.ಶಿವಕುಮಾರ್ ನಮ್ಮ ಜಿಲ್ಲೆಯವರು, ನಮ್ಮ ನಾಯಕರು ಮುಖ್ಯಮಂತ್ರಿ ಆಗಬೇಕೆಂಬ ಸ್ವಾರ್ಥ ಅಷ್ಟೇ. ನಮ್ಮಲ್ಲಿ ಬಹುತೇಕ ನಾಯಕರ ಅಭಿಪ್ರಾಯವೂ ಇದೇ ಆಗಿದೆ. ಕಾಂಗ್ರೆಸ್ ಪಕ್ಷವನ್ನು ಅಧಿಕಾರಕ್ಕೆ ತರಲು ಡಿ.ಕೆ.ಶಿವಕುಮಾರ್ ಅವರು ಸಾಕಷ್ಟು ಶ್ರಮ ವಹಿಸಿದ್ದಾರೆ. ಯಾವಾಗ ಮುಖ್ಯಮಂತ್ರಿ ಮಾಡಬೇಕೆಂಬುದನ್ನು ವರಿಷ್ಠರು ತೀರ್ಮಾನ ಮಾಡಬೇಕು. ಶಾಸಕರ ಕ್ಷೇತ್ರಗಳಿಗೆ ಅನುದಾನ ಹಂಚಿಕೆಯಲ್ಲಿ ಯಾವುದೇ ತಾರತಮ್ಯ ಆಗಿಲ್ಲ ಎಂದು ತಿಳಿಸಿದರು.

ಕನಕಪುರದಲ್ಲಿ ನಡೆದ ಕನಕೋತ್ಸವದಲ್ಲಿ ಕಾಂಗ್ರೆಸ್ ಶಾಸಕರನ್ನು ಆಹ್ವಾನಿಸಿ ಸನ್ಮಾನ ಮಾಡಲಾಗಿದೆ. ಇದನ್ನು ಶಕ್ತಿ ಪ್ರದರ್ಶನ ಎಂಬ ಅರ್ಥ ಕಲ್ಪಿಸುವುದು ಬೇಡ. ಡಿ.ಕೆ.ಶಿವಕುಮಾರ್ ರವರು ಎಲ್ಲ ಶಾಸಕರನ್ನು ಕನಕೋತ್ಸವಕ್ಕೆ ಆಹ್ವಾನ ನೀಡಿದ್ದರು. ಅದರಲ್ಲಿ ಕೆಲವರು ಬಂದು ಹೋಗಿದ್ದಾರೆ. ಅದನ್ನು ಶಕ್ತಿ ಪ್ರದರ್ಶನ ಅಂತ ಹೇಳುವ ಅವಶ್ಯಕತೆ ಇಲ್ಲ. ಡಿ.ಕೆ.ಶಿವಕುಮಾರ್ ರವರು ರಾಜ್ಯಕ್ಕೆ ಉಪಮುಖ್ಯಮಂತ್ರಿಗಳಾಗಿದ್ದು, ಕನಕೋತ್ಸವದಲ್ಲಿ ಪಾಲ್ಗೊಂಡು ಶಾಸಕರಿಗೆ ಗೌರವ ಸಲ್ಲಿಸಿದ್ದಾರೆ ಅಷ್ಟೇ ಎಂದು ಬಾಲಕೃಷ್ಣ ಹೇಳಿದರು.

ಬಿಡದಿ ಪುರಸಭೆ ವಿಪಕ್ಷ ನಾಯಕ ಸಿ.ಉಮೇಶ್ , ಸದಸ್ಯರಾದ ಹರಿ ಪ್ರಸಾದ್ , ಶ್ರೀನಿವಾಸ್ , ಬಿಂದ್ಯಾ, ಲೋಕೇಶ್ , ಕಾಂಗ್ರೆಸ್ ಮುಖಂಡರಾದ ಆರ್.ಸ್ವಾಮಿ, ಗೋಪಳ್ಳಿ ಗ್ರಾಪಂ ಅಧ್ಯಕ್ಷೆ ಸರೋಜಾ, ಸದಸ್ಯರಾದ ಗೋಪಾಲ್ , ರಾಧಾ ಕುಮಾರ್ ಇದ್ದರು.