ಸಾರಾಂಶ
ಚಿತ್ರದುರ್ಗ: ಮುಡಾ ಹಗರಣದಿಂದ ತಪ್ಪಿಸಿಕೊಳ್ಳುವ ಪ್ರಯತ್ನದಲ್ಲಿಯೇ ನೀವು ಮುಳುಗಿದ್ದು, ನಿಮಗೆ ರಾಜ್ಯದ ರೈತರ ಬಗ್ಗೆ ಚಿಂತೆ ಇಲ್ಲ. ಮೊದಲು ಅಧಿಕಾರ ಕೊಟ್ಟ ಜನರ ಕಣ್ಣೀರು ಒರೆಸಿ. ಯಾರನ್ನು ಓಲೈಕೆ ಮಾಡಲಿಕ್ಕೆ ಅನ್ಯಾಯ ಮಾಡುತ್ತಿದ್ದೀರಿ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯನವರನ್ನು ವಿಧಾನ ಪರಿಷತ್ ಸದಸ್ಯ ಕೆ.ಎಸ್.ನವೀನ್ ಪ್ರಶ್ನಿಸಿದರು.
ನಗರದ ಡಿಸಿ ಸರ್ಕಲ್‌ನಲ್ಲಿ ರೈತರ ಕೃಷಿ ಭೂಮಿ, ಮಠ, ಮಂದಿರ, ಜನ ಸಾಮಾನ್ಯರ ಜಮೀನುಗಳನ್ನು ವಕ್ಫ್ ಬೋರ್ಡ್ ಹೆಸರಿನಲ್ಲಿ ಅಕ್ರಮವಾಗಿ ಕಬಳಿಸುವ ಷಡ್ಯಂತ್ರದ ಜನವಿರೋಧಿ ನೀತಿ ವಿರುದ್ಧ ನಮ್ಮ ಭೂಮಿ ನಮ್ಮ ಹಕ್ಕು ಎಂಬ ಹಕ್ಕೊತ್ತಾಯದ ಅಭಿಯಾನದದಡಿ ಹಮ್ಮಿಕೊಂಡಿದ್ದ ಪ್ರತಿಭಟನೆಯಲ್ಲಿ ಅವರು ಮಾತನಾಡಿದರು.ಸಿದ್ದರಾಮಯ್ಯನವರ ಸೂಚನೆಯ ಮೇರೆಗೆ ವಕ್ಫ್ ಸಚಿವರು ಎಲ್ಲಾ ಜಿಲ್ಲೆಗಳಿಗೆ ಹೋಗಿ ವಕ್ಫ್ ಆಸ್ತಿಯನ್ನಾಗಿ ವಶಪಡಿಸಿಕೊಳ್ಳಬೇಕೆಂದು ಅಧಿಕೃತ ರೆಜ್ಯುಲೇಷನ್ ಮಾಡಿ ಮಠ ಮಾನ್ಯಗಳ, ರೈತರ, ದೇವಸ್ಥಾನದ ಆಸ್ತಿಯನ್ನು ವಕ್ಫ್ ಹೆಸರಿಗೆ ಬರುವ ಹಾಗೆ ಮಾಡಿಕೊಳ್ಳುತ್ತಿದ್ದಾರೆ. ದೇಶ ಹಾಗೂ ರಾಜ್ಯ ಯಾರ ಹೆಸರಿಗೆ ಸೇರುತ್ತಿದೆ ಎಂಬುದನ್ನು ಎಲ್ಲರೂ ಯೋಚಿಸಬೇಕು. ಈ ದೇಶವನ್ನು ಪಾಕಿಸ್ತಾನಕ್ಕೆ ಸೇರಿಸುವ ಕೆಲಸವನ್ನೇನ್ನಾದರೂ ಮಾಡುತ್ತಿದ್ದಾರೋ ಎಂದು ಪ್ರಶ್ನಿಸಿದರು.
ಸಿದ್ದರಾಮಯ್ಯನವರು ರೈತರ ಜಮೀನನ್ನು ಪಡೆದುಕೊಳ್ಳುವ ಆದೇಶವನ್ನು ಮಾಡುವುದಿಲ್ಲ ಎಂದು ಹೇಳುತ್ತಾರೆ. ಈ ಮೊದಲು ರೈತರ ಪಹಣಿಯಲ್ಲಿ ವಕ್ಫ್ ಆಸ್ತಿ ಎಂದು ಹೇಗೆ ಬಂತು ಎಂಬುದರ ಬಗ್ಗೆ ಮೊದಲು ಉತ್ತರ ಕೊಡಲಿ. ರಾಜ್ಯದ ಜನರನ್ನು ದಿಕ್ಕು ತಪ್ಪಿಸುವ ಕೆಲಸ ಮಾಡುತ್ತಿದ್ದಾರೆ ಎಂದು ದೂರಿದರು.ರಾಜ್ಯದಲ್ಲಿ ಯಾರು ಸಹ ನೆಮ್ಮದಿಯಿಂದ ಬದುಕುವುದಕ್ಕೆ ಆಗುತ್ತಿಲ್ಲ. ಇದಕ್ಕೆ ಕಾರಣ ಭ್ರಷ್ಟಾಚಾರಿ ಎಂದ ಅವರು, ರೈತರ, ಮಠ ಮಾನ್ಯಗಳ ದೇವಸ್ಥಾನದ ಭೂಮಿಯನ್ನು ಒಂದೇ ಒಂದು ಇಂಚು ಸಹ ವಕ್ಫ್ ಗೆ ಕೊಡುವ ಪ್ರಶ್ನೆಯೇ ಇಲ್ಲ. ಏನು ಮಾಡುತ್ತೀರಿ ಮಾಡಿ ಎಂದು ಆಕ್ರೋಶ ವ್ಯಕ್ತಪಡಿಸಿದರು.
ನಮ್ಮ ಜಿಲ್ಲೆಯಲ್ಲಿ ನಂದನಹೊಸೂರಿನಲ್ಲಿ ಬಹು ಸಂಖ್ಯಾತ ಹಿಂದುಗಳಿಗೆ ಕಾಲು ಎಕರೆ ರುದ್ರಭೂಮಿ ಸಹ ಇಲ್ಲ. ಆದರೆ ಸುಮಾರು ವರ್ಷಗಳ ಹಿಂದೆ ವಾಸವಾಗಿ ಹೋದ ಅಲ್ಪಸಂಖ್ಯಾತರಿಗೆ 5 ಎಕರೆ ಖಬರಸ್ಥಾನಕ್ಕೆ ನೀಡಿದ್ದಾರೆ. ಡಿಸೆಂಬರ್ ಮೊದಲ ವಾರದಲ್ಲಿ ನಮ್ಮ ನಾಯಕರ ತಂಡ ಜಿಲ್ಲೆಗೆ ಭೇಟಿ ನೀಡಿ ಪರಿಶೀಲನೆ ನಡೆಸಲಿದ್ದಾರೆ ಎಂದರು.ರಾಜ್ಯ ರೈತ ಮೋರ್ಚಾ ಕಾರ್ಯದರ್ಶಿ ಮಲ್ಲಿಕಾರ್ಜನ್ ಮಾತನಾಡಿ, ವಕ್ಫ್ ಆಸ್ತಿ ರಾಜ್ಯದಲ್ಲಿ ದೊಡ್ಡ ಸಮಸ್ಯೆ ಸೃಷ್ಟಿಸಿದೆ. ಕಾಂಗ್ರೆಸ್ ಸರ್ಕಾರದ ಒಂದು ಸಮುದಾಯದ ತುಷ್ಟೀಕರಣದ ಫಲವಾಗಿ ಸಾವಿರಾರು ಸಂಖ್ಯೆಯ ರೈತರು, ಮಠಾಧೀಶರು, ಸ್ವಾಮೀಜಿಗಳು, ನಾಗರಿಕರು ಇದು ನಮ್ಮ ಭೂಮಿ ಎಂದು ಬೀದಿಗಿಳಿದು ಹೋರಾಟ ಮಾಡಬೇಕಾದ ವಾತಾವರಣ ಸೃಷ್ಟಿಯಾಗಿದೆ. ಲ್ಯಾಂಡ್ ಜಿಹಾದ್ ಮೂಲಕ ಹಿಂದೂ ಸಮಾಜದ ಆಸ್ತಿಗಳನ್ನು ಕಬಳಿಸುವ ಹುನ್ನಾರ ನಡೆಸಿರುವ ರಾಜ್ಯ ಸರ್ಕಾರವನ್ನು ಜನರೇ ಕಿತ್ತೊಗೆಯಲಿದ್ದಾರೆ ಎಂದು ಹೇಳಿದರು.
ಪ್ರತಿ ದಿನ ಹಗರಣ, ಭ್ರಷ್ಟಾಚಾರ ನಡೆಸುತ್ತಿರುವ ಕಾಂಗ್ರೆಸ್ ಸರ್ಕಾರ ಈಗ ವಕ್ಫ್ ಕಾಯ್ದೆ ಮುಂದಿಟ್ಟು ರಾತ್ರೋರಾತ್ರಿ ಆಸ್ತಿಗಳನ್ನು ವಕ್ಫ್ ಮಂಡಳಿ ಆಸ್ತಿಯನ್ನಾಗಿ ಮಾಡುತ್ತಿದೆ ಎಂದು ಆರೋಪಿಸಿದರು.ಸರ್ಕಾರ ವಕ್ಫ್ ನೋಟಿಸ್ ರದ್ದು ಪಡಿಸುವುದಾಗಿ ಹೇಳುತ್ತಿದೆ. ನೋಟಿಸ್ ರದ್ದುಗೊಳಿಸುವ ಜೊತೆಗೆ ಪಹಣಿ ಕಾಲಂ 11ರಲ್ಲಿ ವಕ್ಫ್ ಆಸ್ತಿ ಎಂದು ನಮೂದಾಗಿರುವುದನ್ನೂ ತೆಗೆದು ಹಾಕುವ ಕೆಲಸ ಮಾಡಬೇಕು ಎಂದು ಆಗ್ರಹಿಸಿದರು.
ಈಗ ಸಾಂಕೇತಿಕವಾಗಿ ಹೋರಾಟ ನಡೆಸಲಾಗುತ್ತಿದೆ. ಸರ್ಕಾರ ವಕ್ಫ್ ಸಮಸ್ಯೆಗೆ ಶಾಶ್ವತವಾದ ಪರಿಹಾರ ಕೊಡದಿದ್ದಲ್ಲಿ ಮುಂದಿನ ದಿನಗಳಲ್ಲಿ ಉಗ್ರ ಹೋರಾಟ ನಡೆಸಲಾಗುವುದು ಎಂದು ಎಚ್ಚರಿಕೆ ನೀಡಿದರು.ಪ್ರತಿಭಟನೆಯಲ್ಲಿ ಬಿಜೆಪಿ ಜಿಲ್ಲಾಧ್ಯಕ್ಷ ಎ.ಮುರಳಿ, ಮುಖಂಡ ಎನ್.ಆರ್.ಲಕ್ಷ್ಮೀಕಾಂತ್, ಬಯಲುಸೀಮೆ ಅಭಿವೃದ್ಧಿ ಪ್ರಾಧಿಕಾರದ ಮಾಜಿ ಅಧ್ಯಕ್ಷ ಜೀವನಮೂರ್ತಿ, ರಾಜ್ಯ ರೈತ ಮೋರ್ಚಾ ಕಾರ್ಯದರ್ಶಿ ರಾಜೇಶ್, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸುರೇಶ್ ಸಿದ್ದಾಪುರ, ರಾಮದಾಸ್, ರೈತ ಮೋರ್ಚಾ ಅಧ್ಯಕ್ಷ ವೆಂಕಟೇಶ್ ಯಾದವ್, ನಗರಾಧ್ಯಕ್ಷ ನವೀನ್ ಚಾಲುಕ್ಯ, ಜಿಲ್ಲಾ ಖಂಜಾಚಿ ಮಾಧುರಿ ಗೀರೀಶ್, ಜಿಲ್ಲಾ ವಕ್ತಾರ ನಾಗರಾಜ್ ಬೇದ್ರೆ, ಯುವ ಮೋರ್ಚಾದ ಚಂದ್ರು, ರೂಪ, ವೀಣಾ, ಬಸಮ್ಮ, ಕಾoಚನ, ಕವಿತಾ, ಸುಮ, ಕಿರಣ್, ಲೋಕೇಶ್, ಯೋಗೇಶ್ ಸಹ್ಯಾದ್ರಿ, ಜಗದೀಶ್, ಹೇಮಂತ, ಕಲ್ಲಂಸೀತಾರಾಮರೆಡ್ಡಿ ಮತ್ತಿತರರಿದ್ದರು.