ರಾಜ್ಯಾಧ್ಯಕ್ಷ ವಿಜಯೇಂದ್ರ ರಾಜೀನಾಮೆ ಪ್ರಶ್ನೆಯೇ ಇಲ್ಲ: ರೇಣುಕಾಚಾರ್ಯ

| Published : Sep 30 2024, 01:15 AM IST

ರಾಜ್ಯಾಧ್ಯಕ್ಷ ವಿಜಯೇಂದ್ರ ರಾಜೀನಾಮೆ ಪ್ರಶ್ನೆಯೇ ಇಲ್ಲ: ರೇಣುಕಾಚಾರ್ಯ
Share this Article
  • FB
  • TW
  • Linkdin
  • Email

ಸಾರಾಂಶ

ಯಾರೋ ನಾಲ್ಕಾರು ಜನ ದಾರಿ, ಬೀದಿಯಲ್ಲಿ ಹೇಳಿದಾಕ್ಷಣ ಬಿಜೆಪಿ ರಾಜ್ಯಾಧ್ಯಕ್ಷ ಸ್ಥಾನಕ್ಕೆ ಬಿ.ವೈ.ವಿಜಯೇಂದ್ರ ರಾಜೀನಾಮೆ ನೀಡುವ ಪ್ರಶ್ನೆಯೇ ಇಲ್ಲ ಎಂದು ಮಾಜಿ ಸಚಿವ ಎಂ.ಪಿ.ರೇಣುಕಾಚಾರ್ಯ ಬಿಜೆಪಿ ಅತೃಪ್ತ ಗುಂಪಿಗೆ ತಿರುಗೇಟು ನೀಡಿದರು.

- ಯಡಿಯೂರಪ್ಪ ಪುತ್ರನೆಂದು ವಿಜಯೇಂದ್ರ ರಾಜ್ಯಾಧ್ಯಕ್ಷರಾಗಿಲ್ಲ: ಬಿಜೆಪಿ ಅತೃಪ್ತ ಗುಂಪಿಗೆ ತಿರುಗೇಟು

- - - ಕನ್ನಡಪ್ರಭ ವಾರ್ತೆ, ದಾವಣಗೆರೆ

ಯಾರೋ ನಾಲ್ಕಾರು ಜನ ದಾರಿ, ಬೀದಿಯಲ್ಲಿ ಹೇಳಿದಾಕ್ಷಣ ಬಿಜೆಪಿ ರಾಜ್ಯಾಧ್ಯಕ್ಷ ಸ್ಥಾನಕ್ಕೆ ಬಿ.ವೈ.ವಿಜಯೇಂದ್ರ ರಾಜೀನಾಮೆ ನೀಡುವ ಪ್ರಶ್ನೆಯೇ ಇಲ್ಲ ಎಂದು ಮಾಜಿ ಸಚಿವ ಎಂ.ಪಿ.ರೇಣುಕಾಚಾರ್ಯ ಬಿಜೆಪಿ ಅತೃಪ್ತ ಗುಂಪಿಗೆ ತಿರುಗೇಟು ನೀಡಿದರು.

ನಗರದಲ್ಲಿ ಭಾನುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬಿಜೆಪಿ ರಾಜ್ಯಾಧ್ಯಕ್ಷ ಸ್ಥಾನಕ್ಕೆ ಯಾವುದೇ ಕಾರಣಕ್ಕೂ ವಿಜಯೇಂದ್ರ ರಾಜೀನಾಮೆ ನೀಡುವುದಿಲ್ಲ. ಬಿ.ಎಸ್‌.ಯಡಿಯೂರಪ್ಪ ಪುತ್ರ ಅಂತಾ ವಿಜಯೇಂದ್ರ ರಾಜ್ಯಾಧ್ಯಕ್ಷ ಆಗಿಲ್ಲ ಎಂದರು.

ವಿಜಯೇಂದ್ರ ಪಕ್ಷ ಸಂಘಟನೆ, ಹೋರಾಟ, ಉಪ ಚುನಾವಣೆಯಲ್ಲಿ ತೋರಿಸಿದ ಸಾಧನೆ ಗುರುತಿಸಿ, ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಗೃಹ ಸಚಿವ ಅಮಿತ್ ಶಾ ಹಾಗೂ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ರಾಜ್ಯಾಧ್ಯಕ್ಷರಾಗಿ ಮಾಡಿದ್ದಾರೆ. ಇದಕ್ಕೆ ವಿರೋಧ ವ್ಯಕ್ತಪಡಿಸಿದರೆ, ಅದು ಬಿಜೆಪಿ ಕೇಂದ್ರ ನಾಯಕರಿಗೆ ಅವಮಾನಿಸಿದಂತೆ ಎಂದು ಅವರು ಹೇಳಿದರು.

ನಮ್ಮ ವರಿಷ್ಠರು ಒಂದುವೇಳೆ ಬಸವನಗೌಡ ಪಾಟೀಲ್‌ ಯತ್ನಾಳರನ್ನು ರಾಜ್ಯಾಧ್ಯಕ್ಷರಾಗಿ ನೇಮಕ ಮಾಡಿದ್ದರೆ ನಾವು ಒಪ್ಪಿಕೊಳ್ಳುತ್ತಿದ್ದೆವು. ಎಲ್ಲರ ಅಭಿಪ್ರಾಯ ಸಂಗ್ರಹಿಸಿಯೇ ಬಿ.ವೈ.ವಿಜಯೇಂದ್ರರನ್ನು ರಾಜ್ಯಾಧ್ಯಕ್ಷ ಮಾಡಲಾಗಿದೆ. ಮುಂಬರುವ ತಾಪಂ, ಜಿಪಂ, ಪುರಸಭೆ, ಪಪಂ, ಮಹಾನಗರ ಪಾಲಿಕೆ, ವಿಧಾನಸಭೆ ಚುನಾವಣೆ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ನೇತೃತ್ವದಲ್ಲೇ ಎದುರಿಸಿ, ಭರ್ಜರಿ ಜಯಭೇರಿ ಬಾರಿಸಲಿದ್ದೇವೆ ಎಂದ ಅವರು, ನಾವೂ ಸಹ ದೆಹಲಿಗೆ ನಿಯೋಗ ಹೋಗಿ, ವಿಜಯೇಂದ್ರ ರಾಜ್ಯಾಧ್ಯಕ್ಷರಾಗಿ ಮುಂದುವರಿಸುವಂತೆ ಮನವಿ ಮಾಡುತ್ತೇವೆ ಎಂದರು.

ವಿಜಯೇಂದ್ರ ಪಾದಯಾತ್ರೆ ಪರಿಣಾಮ ಮುಖ್ಯಮಂತ್ರಿ ಸಿದ್ದರಾಮಯ್ಯ ಕುರ್ಚಿಯೇ ಅಲುಗಾಡುತ್ತಿದ್ದು, ರಾಜೀನಾಮೆಗೆ ಎಲ್ಲಾ ಕಡೆಯಿಂದಲೇ ಒತ್ತಾಯ ಕೇಳಿಬರುತ್ತಿದೆ. ನಾವೆಲ್ಲರೂ ವಿಜಯೇಂದ್ರ ಪರವಾಗಿ ನಿಲ್ಲುತ್ತೇವೆ ಎಂದು ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದರು.

ಬಿಜೆಪಿ ಮುಖಂಡರಾದ ರಾಜು ವೀರಣ್ಣ, ಪಿ.ಸಿ.ಶ್ರೀನಿವಾಸ ಭಟ್, ಪ್ರವೀಣ ರಾವ್ ಜಾಧವ್‌, ಜಯರುದ್ರೇಶ, ಮಣಿಕಂಠ, ಗಾಂಧಿ ನಗರ ಮಂಜು, ಶ್ರೀನಿವಾಸ ಇತರರು ಇದ್ದರು.

- - -

ಬಾಕ್ಸ್‌

* ಕಾಂಗ್ರೆಸ್ಸಲ್ಲಿ ಸಿಎಂ ಆಗಲು ಸೂಟ್‌ ಹೊಲೆಸಿ, ಕಾಯ್ತಿದ್ದಾರೆ!ದಾವಣಗೆರೆ: ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷ ಒಡೆದ ಮನೆಯಾಗಿದ್ದು, ಮುಖ್ಯಮಂತ್ರಿಯಾಗಲು ಸೂಟ್‌ ಹೊಲೆಸಿಕೊಂಡು ಅನೇಕರು ಕಾಯುತ್ತಿದ್ದಾರೆ. ಈ ಪರಿಸ್ಥಿತಿಯಲ್ಲಿ ನಾವೆಲ್ಲರೂ ಒಗ್ಗಟ್ಟಾಗಿರಬೇಕು ಎಂದು ಬಿಜೆಪಿ ಮಾಜಿ ಸಚಿವ ಎಂ.ಪಿ. ರೇಣುಕಾಚಾರ್ಯ ಬಿಜೆಪಿ ಅತೃಪ್ತರಿಗೆ ಮನವಿ ಮಾಡಿದರು.

ನಗರದಲ್ಲಿ ಭಾನುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಚಿಕ್ಕೋಡಿ, ಮೈಸೂರು, ದಾವಣಗೆರೆ ಸೇರಿದಂತೆ ರಾಜ್ಯದ ಎಲ್ಲ ಕ್ಷೇತ್ರಗಳಿಗೆ ಟಿಕೆಟ್ ನೀಡಿದ್ದು ಪಕ್ಷದ ವರಿಷ್ಠರು. ಆದರೆ, ಬಿಜೆಪಿ ಸೋಲಲು ನಮ್ಮ ಸ್ವಯಂಕೃತಾಪರಾಧವೇ ಕಾರಣ. ಚುನಾವಣೆಯಲ್ಲಿ ಒಳಒಪ್ಪಂದ ಮಾಡಿಕೊಂಡವರು ಯಾರೇ ಆಗಿದ್ದರೂ ಅಂತಹವರ ವಿರುದ್ಧ ಕ್ರಮ ಕೈಗೊಳ್ಳಲಿ ಎಂದರು.

ವಿಜಯಪುರ ಜಿಲ್ಲೆಯಲ್ಲಿ ಸಚಿವ ಎಂ.ಬಿ.ಪಾಟೀಲ ಜೊತೆಗೆ ಹೊಂದಾಣಿಕೆ ರಾಜಕಾರಣ ಮಾಡುತ್ತಿರುವುದು ಯಾರು? ನನಗೆ ಅಲ್ಲಿನ ಮುಖಂಡರೇ ಕರೆ ಮಾಡಿ, ಮಾಹಿತಿ ನೀಡಿದ್ದಾರೆ. ಆಡಿಯೋ ರೆಕಾರ್ಡ್ ಸಹ ನನ್ನ ಬಳಿ ಇದೆ. ಕಾಂಗ್ರೆಸ್ ಪಕ್ಷದಲ್ಲಿ ಸಿಎಂ ಕುರ್ಚಿಗಾಗಿ ಟವೆಲ್‌, ಟಿಶ್ಯೂ ಪೇಪರ್ ಹಾಕಿಕೊಂಡು ಕಾಯುತ್ತಿರುವವರು ಸಾಕಷ್ಟು ಸಂಖ್ಯೆಯಲ್ಲಿದ್ದಾರೆ. 3-4 ತಿಂಗಳಿನಿಂದ ಸಿಎಂ, ಸಚಿವರು ಜನರ ಕೈಗೆ ಸಿಗುತ್ತಿಲ್ಲ. ಆಡಳಿತ ಯಂತ್ರ ಸಂಪೂರ್ಣ ಕುಸಿದಿದೆ ಎಂದು ದೂರಿದರು.

ಸಚಿವ ಜಮೀರ್ ಅಹಮ್ಮದ್ ನ್ಯಾಯಾಂಗ ನಿಂದನೆ ಮಾಡಿದರೂ ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ. ಸಚಿವ ಭೈರತಿ ಸುರೇಶ ರಾತ್ರೋರಾತ್ರಿ ವಿಶೇಷ ವಿಮಾನದಲ್ಲಿ ಮೈಸೂರಿಗೆ ತೆರಳಿ, ಮುಡಾ ಸೈಟ್‌ಗಳ ಕಡತದ ಗಂಟು ಮೂಟೆಗಳೆಲ್ಲವನ್ನೂ ಅಲ್ಲಿನ ಡಿಸಿ, ಮುಡಾ ಆಯುಕ್ತರಿಂದ ಬೆಂಗಳೂರಿಗೆ ತರುತ್ತಾರೆ. ಅಂದೇ ಸಿಎಂ ನಿವೇಶನ ಮರಳಿಸಿದ್ದರೆ ಇಂದು ಇಷ್ಟೆಲ್ಲಾ ಕಂಟಕ ಬರುತ್ತಿರಲಿಲ್ಲ ಎಂದ ರೇಣುಕಾಚಾರ್ಯ, ನೈತಿಕತೆ ಇಲ್ಲದ ಸಿದ್ದರಾಮಯ್ಯ ರಾಜೀನಾಮೆ ಕೊಟ್ಟು, ಸರ್ಕಾರವನ್ನು ವಿಸರ್ಜಿಸಿ, ಮತ್ತೊಮ್ಮೆ ಚುನಾವಣೆಗೆ ಬರಲಿ ಎಂದು ಸವಾಲು ಹಾಕಿದರು.

- - -

-29ಕೆಡಿವಿಜಿ13:

ದಾವಣಗೆರೆಯಲ್ಲಿ ಮಾಜಿ ಸಚಿವ ಎಂ.ಪಿ.ರೇಣುಕಾಚಾರ್ಯ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.