ಸವಳ್ಯಾರ ಕ್ಯಾಂಪ್‌ಗೆ ದಾರಿಯೂ ಇಲ್ಲ, ನಲ್ಲಿ ನೀರೂ ಇಲ್ಲ

| Published : Apr 06 2024, 12:46 AM IST

ಸವಳ್ಯಾರ ಕ್ಯಾಂಪ್‌ಗೆ ದಾರಿಯೂ ಇಲ್ಲ, ನಲ್ಲಿ ನೀರೂ ಇಲ್ಲ
Share this Article
  • FB
  • TW
  • Linkdin
  • Email

ಸಾರಾಂಶ

ಗಂಗಾವತಿ ತಾಲೂಕಿನ ಸವಳ್ಯಾರ್‌ ಕ್ಯಾಂಪ್‌ಗೆ ಹೋಗಲು ಸರಿಯಾದ ಮಾರ್ಗವೂ ಇಲ್ಲ, ಕುಡಿಯುವ ನೀರು ಸರಬರಾಜು, ಅಂಗನವಾಡಿ, ಶಾಲೆ ಇಲ್ಲ. ಬಾವಿಯ ನೀರನ್ನು ಸಂಗ್ರಹಿಸಿ ಕುಡಿಯುತ್ತಾರೆ.

ಸೋಮರಡ್ಡಿ ಅಳವಂಡಿ

ಕೊಪ್ಪಳ: ಈ ಊರಿಗೆ ಸರಿಯಾದ ದಾರಿ ಇಲ್ಲ. ನಾಲ್ಕು ಕಿಲೋಮೀಟರ್ ಗುಡ್ಡ ಹತ್ತಿದರೆ ಮನೆ ಸೇರಲು ಸಾಧ್ಯ. ಈ ಊರಲ್ಲಿ ಇಂದಿಗೂ ನಲ್ಲಿಯ ನೀರು ಬರುವುದಿಲ್ಲ, ತೆರೆದ ಬಾವಿಯ ನೀರೇ ಗತಿ. ಅದೂ ಕುಡಿಯಲು ಯೋಗ್ಯವಲ್ಲದ ನೀರು.

ಹೌದು, ಗಂಗಾವತಿ ತಾಲೂಕಿನ ಸವಳ್ಯಾರ ಕ್ಯಾಂಪ್ ಎನ್ನುವ ಪುಟ್ಟ ಗ್ರಾಮದ ದುಸ್ಥಿತಿ ಇದು.

ಬೇಸಿಗೆಯಲ್ಲಂತೂ ಕಲುಷಿತವಾದ ತೆರೆದ ಬಾವಿಯ ನೀರೇ ಅವರಿಗೆ ಗತಿ. ಸ್ನಾನಕ್ಕೂ ಅದೇ ನೀರು, ಕುಡಿಯಲು ಅದೇ ನೀರು. ಇಂದಿಗೂ ಇಲ್ಲಿ ಯಾವುದೇ ಮೂಲಭೂತ ಸೌಕರ್ಯಗಳು ಇಲ್ಲ.

17 ಮನೆಗಳು ಇರುವ ಈ ಗ್ರಾಮದಲ್ಲಿ ಸುಮಾರು 60-70 ಜನಸಂಖ್ಯೆ ಇದೆ. ಹತ್ತಾರು ಮಕ್ಕಳಿದ್ದಾರೆ. ಅವರಿಗೆ ಅಂಗನವಾಡಿಯೂ ಇಲ್ಲ, ಪ್ರಾಥಮಿಕ ಶಾಲೆಯೂ ಇಲ್ಲ. ಈ ಮಕ್ಕಳು ಶಾಲೆಗೆ ಬರಬೇಕು ಎಂದರೆ ಬರೋಬ್ಬರಿ ನಾಲ್ಕು ಕಿಲೋಮೀಟರ್ ನಡೆದು ಹಂಪಸದುರ್ಗ ಸೇರಬೇಕು. ಅಲ್ಲಿಗೆ ಬಂದರೆ ಮಾತ್ರ ಅವರಿಗೆ ಶಿಕ್ಷಣ.

ಕಾಡುಪ್ರಾಣಿಗಳ ಕಾಟ: ಜತೆಗೆ ಈ ಸವಳ್ಯಾರ ಕ್ಯಾಂಪ್‌ಗೆ ಕಾಡುಪ್ರಾಣಿಗಳ ಕಾಟ ವಿಪರೀತ. ಕರಡಿ ಮತ್ತು ಚಿರತೆ ಅವರನ್ನು ಕಾಡುತ್ತಲೇ ಇರುತ್ತದೆ. ದನಕರುಗಳನ್ನು ಚಿರತೆ ಒಯ್ಯುವುದು ಸಾಮಾನ್ಯ. ಆದರೆ ಈ ಗ್ರಾಮದ ಜನರು ಕರಡಿ, ಚಿರತೆಗೆ ಭಯಪಡುವುದಿಲ್ಲ, ಮಕ್ಕಳೂ ಅದಕ್ಕೆ ಹೊರತಲ್ಲ. ಕಾರಣ ಈ ವರೆಗೆ ಮನುಷ್ಯರಿಗೆ ಈ ಕಾಡುಪ್ರಾಣಿಗಳು ಹಾನಿ ಮಾಡಿಲ್ಲ ಎನ್ನುತ್ತಾರೆ ಅಲ್ಲಿಯ ನಿವಾಸಿಗಳು. ಅವು ಬಂದರೆ ನಮಗೆ ಎದುರಿಸುವುದು ಗೊತ್ತು ಎನ್ನುತ್ತಾರೆ.

ವಿದ್ಯುತ್ ಸಂಪರ್ಕವೂ ಇಲ್ಲ: ಈ ಗ್ರಾಮದ ಮನೆಗಳಿಗೆ ವಿದ್ಯುತ್ ಸಂಪರ್ಕವೂ ಇಲ್ಲ. ಈಗಲೂ ಅವರು ಕಗ್ಗತ್ತಲಲ್ಲಿಯೇ ಬದುಕುತ್ತಾರೆ. ಈಗೀಗ ಎರಡು ಸೋಲಾರ್‌ ಬೀದಿದೀಪ ಹಾಕಲಾಗಿದೆ. ಅದು ಬಿಟ್ಟರೆ ಮನೆಯಲ್ಲಿ ಇಂದಿಗೂ ದೀಪದ ಬೆಳಕೇ ಗತಿ. ಆದಿಮಾನವನ ಬದುಕು ನೋಡಬೇಕಿದ್ದರೆ ಈ ಊರಿಗೆ ಹೋಗಬೇಕು ಎನ್ನುವಂತೆ ಇದೆ ಪರಿಸ್ಥಿತಿ.ಮತದಾನ ಮಾಡಲು ಮೂರು ಕಿಮೀ ಬರಬೇಕು: ಗಂಗಾವತಿ ತಾಲೂಕಿನ ಸವಳ್ಯಾರ ಕ್ಯಾಂಪಿನ ಗ್ರಾಮಸ್ಥರು ಮತದಾನ ಮಾಡಲು ಮೂರು ಕಿಮೀ ನಡೆದುಕೊಂಡೇ ಬರಬೇಕು. ಗುಡ್ಡದ ಮೇಲಿಂದ ಕೆಳದೆ ಇರುವ ಹಂಪಸದುರ್ಗಕ್ಕೆ ಬಂದು ಮತದಾನ ಮಾಡಬೇಕು. ಅವರಿಗೊಂದು ಮತಗಟ್ಟೆಯನ್ನು ಮಾಡದೆ ಇರುವ ಬಗ್ಗೆ ಗ್ರಾಮಸ್ಥರು ಬೇಸರ ವ್ಯಕ್ತಪಡಿಸುತ್ತಾರೆ. ಇದುವರೆಗೂ ನಡೆದ ಎಲ್ಲ ಚುನಾವಣೆಯಲ್ಲಿ ಈ ಗ್ರಾಮಸ್ಥರು ಮತದಾನ ಮಾಡಿದ್ದಾರೆ. 30-40 ಮತಗಳಿದ್ದು, ಅಲ್ಲಿಯೇ ಮತಗಟ್ಟೆ ಮಾಡಿಕೊಟ್ಟರೆ ಅನುಕೂಲ ಎನ್ನುತ್ತಾರೆ.ಗುಡ್ಡದ ಮೇಲಿರುವ ಗ್ರಾಮಕ್ಕೆ ಶುದ್ಧ ಕುಡಿಯುವ ನೀರು ಪೂರೈಕೆ ಮಾಡಬೇಕು ಮತ್ತು ಮತಗಟ್ಟೆಯನ್ನು ಸ್ಥಾಪಿಸಿಕೊಡಬೇಕು ಎನ್ನುವುದು ನಮ್ಮ ಬೇಡಿಕೆಯಾಗಿದೆ ಎಂದು ಸವಳ್ಯಾರ ಕ್ಯಾಂಪ್ ನಿವಾಸಿ ಅಂಬರೀಶ ಹೇಳುತ್ತಾರೆ.