ಸಾರಾಂಶ
ಬೆಳಗಾವಿ : ಜಾತಿ ಗಣತಿ ಬಿಡುಗಡೆಯಲ್ಲಿ ಆತುರದ ಕ್ರಮವಿಲ್ಲ. ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಕ್ರಮ ಕೈಗೊಳ್ಳುತ್ತೇವೆ ಎಂದು ಡಿಸಿಎಂ ಡಿ.ಕೆ.ಶಿವಕುಮಾರ ಹೇಳಿದರು.
ನಗರದಲ್ಲಿ ಶನಿವಾರ ರಾತ್ರಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಜಾತಿಗಣತಿ ವರದಿ ಅಂಕಿ ಅಂಶ ವರದಿ ಈಗತಾನೇ ಬಿಡುಗಡೆ ಆಗಿದೆ. ಈಗ ಒಂದು ಕಾಪಿಯನ್ನು ನನಗೆ ಕಳುಹಿಸಿದ್ದಾರೆ. ನಾವೆಲ್ಲ ನೋಡುತ್ತೇವೆ. ಆತುರದ ಕ್ರಮ ಇಲ್ಲ. ಏನಾದರೂ ಲೋಪದೋಷ ಇದ್ದರೆ ಅದನ್ನು ಸರಿ ಮಾಡುತ್ತೇವೆ ಎಂದು ಹೇಳಿದರು.
ನಮ್ಮ ಪಕ್ಷದ ಮೂಲ ಸಿದ್ಧಾಂತ ಎಲ್ಲರಿಗೂ ಸಮಪಾಲು, ಸಮಬಾಳು. ನಮ್ಮದು ಬಸವಣ್ಣನ ತತ್ವದ ಮೇಲೆ ಕೆಲಸ ಮಾಡುವ ಸರ್ಕಾರ ಎಂದ ಅವರು, ವಿಪಕ್ಷದ ನಾಯಕ ಆರ್.ಅಶೋಕ ಆರೋಪಕ್ಕೆ ನಾನು ಉತ್ತರ ಕೊಡುವುದಿಲ್ಲ. ಅವರ ವಕ್ತಾರ ಆಗೋಕೆ ನನಗೆ ಇಷ್ಟ ಇಲ್ಲ. ನಮ್ಮ ಸರ್ಕಾರ ವಕ್ತಾರದ ನಾನು ಆಗುತ್ತೇನೆ ಎಂದು ತಿರುಗೇಟು ನೀಡಿದರು.ಜಾತಿ ಗಣತಿಯನ್ನು ನಾನು ಓದೇ ಇಲ್ಲ. ಚುನಾವಣೆ ಪ್ರಣಾಳಿಕೆಯಲ್ಲಿ ಸಾಮಾಜಿಕ, ಆರ್ಥಿಕ ಅಧ್ಯಯನ ವರದಿ ಜಾರಿ ಎಂದು ಹೇಳಿದ್ದೇನೆ.
ಜಾತಿ ಗಣತಿ ಮಾಡುವ ಅಧಿಕಾರ ಇರೋದು ಕೇಂದ್ರಕ್ಕೆ ಮಾತ್ರ. ಯಾರಿಗೆ ಅನ್ಯಾಯ ಆಗಿದೆ ಅವರಿಗೆ ನ್ಯಾಯ ಕೊಡಿಸುತ್ತೇವೆ. ಏನಾದರೂ ಆತಂಕ ಇದ್ದರೆ ಅದನ್ನು ಸರಿಪಡಿಸುತ್ತೇವೆ. ವಿರೋಧ ಪಕ್ಷದ ನಾಯಕರು ಏನ್ ಹೇಳಬಹುದು ಅದನ್ನು ನಾರಾಯಣಸ್ವಾಮಿ ಹೇಳಿದ್ದಾರೆ ಎಂದರು.ಬಿಜೆಪಿ ಜನಾಕ್ರೋಶ ಯಾತ್ರೆ ಹೆಸರು ಪರಿವರ್ತನೆ ಮಾಡಬೇಕು. ತಾವು ಏನೇನು ಬೆಲೆ ಏರಿಕೆ ಮಾಡಿದ್ದೀರಿ ಒಮ್ಮೆ ನೋಡಬೇಕು. ಸಿಮೆಂಟ್, ಪೆಟ್ರೋಲ್ ಸೇರಿ ಎಲ್ಲಾ ಬೆಲೆಗಳ ಏರಿಕೆ ಮಾಡಿದ್ದಿರಿ. ಚಿನ್ನ ಈಗ ಕೊಂಡುಕೊಳ್ಳಲು ಆಗದ ಪರಿಸ್ಥಿತಿ ಬಂದಿದೆ. ಎಲ್ಲ ಬೆಲೆ ಏರಿಕೆಗೆ ಬಿಜೆಪಿ ಕಾರಣ. ಏಪ್ರಿಲ್17ರಂದು ಜನಾಕ್ರೋಶ ಯಾತ್ರೆ ಮಾಡುತ್ತೇವೆ ಎಂದ ಅವರು, ಅಬಕಾರಿ ಇಲಾಖೆಯಲ್ಲಿ ಭ್ರಷ್ಟಾಚಾರ ಆರೋಪ ಯಾವುದಕ್ಕೂ ಆಧಾರ ಇಲ್ಲ. ಸತ್ಯನೂ ಅಲ್ಲ ಎಂದರು.