ನಗರದ ಲಕ್ಕವ್ವನಹಳ್ಳಿ ರಸ್ತೆಯಲ್ಲಿರುವ ಜಲ ಶುದ್ದೀಕರಣ ಘಟಕ.

ರಮೇಶ್ ಬಿದರಕೆರೆ

ಕನ್ನಡಪ್ರಭ ವಾರ್ತೆ ಹಿರಿಯೂರು

ನೆಲ ಕಾದ ಬಾಣಲಿಯಾದ ಹೊತ್ತಲ್ಲಿ ಒಂದಷ್ಟು ಮಳೆ ಉದುರಿದ್ದು ಈಗಾಗಲೇ ಗ್ರಾಮೀಣ ಭಾಗಗಳಲ್ಲಿ ಕೆಲವು ಕಡೆ ಕುಡಿಯುವ ನೀರಿನ ಸಮರ್ಪಕ ಪೂರೈಕೆಯ ಬೇಡಿಕೆ ಕೇಳಿ ಬರುತ್ತಿವೆ. ಬಿಸಿಲು ಜ್ವರ ಏರಿದಂತೆ ಏರುತ್ತಿರುವ ಈ ಹೊತ್ತಲ್ಲಿ 84 ಸಾವಿರ ಜನಸಂಖ್ಯೆ ಇರುವ ಹಿರಿಯೂರು ನಗರದಲ್ಲಿ ಕುಡಿಯುವ ನೀರಿನ ಬವಣೆ ಆಗದಂತೆ ನಗರಸಭೆ ಆಡಳಿತ ಮುನ್ನೆಚ್ಚರಿಕೆ ವಹಿಸಿದೆ. ನಗರದ 31 ವಾರ್ಡ್‌ಗಳಲ್ಲೂ ಚುನಾಯಿತ ಸದಸ್ಯರ ಅವಧಿ ಮುಗಿದಿದ್ದು ಇದೀಗ ಅಧಿಕಾರಿಗಳು ಬೇಸಿಗೆಯಲ್ಲಿ ಕುಡಿಯುವ ನೀರಿಗೆ ಹಾಹಾಕಾರವಾಗದಂತೆ ಎಲ್ಲಾ ರೀತಿಯ ಸಿದ್ಧತೆ ಮಾಡಿಕೊಂಡಿದ್ದಾರೆ. ನಗರದ ಎಲ್ಲಾ ವಾರ್ಡ್‌ಗಳಲ್ಲೂ ಯಾವುದೇ ರೀತಿಯ ಕುಡಿಯುವ ನೀರಿನ ತೊಂದರೆ ಇಲ್ಲ ಎನ್ನಲಾಗಿದೆ. ಬೋರ್‌ವೆಲ್‌ಗಳಿಂದ ಪ್ರತಿದಿನ ಎರಡೂವರೆ ಎಂಎಲ್‌ಡಿ ನೀರು ಬರುತ್ತಿದೆ.

ವಿವಿ ಸಾಗರದಿಂದ ಪ್ರತಿ ದಿನವೂ 10 ಎಂಎಲ್‌ಡಿ ನೀರು ಲಕ್ಕವ್ವನಹಳ್ಳಿ ಬಳಿಯ ಜಲ ಶುದ್ದೀಕರಣ ಘಟಕಕ್ಕೆ ಬರುತ್ತದೆ. ಅಲ್ಲಿಂದ ನೀರು ಶುದ್ಧೀಕರಣಗೊಂಡು ವಾರ್ಡ್‌ಗಳಿಗೆ ತಲುಪುತ್ತಿದೆ. ಮೊದಲೆಲ್ಲಾ 3 ದಿನಕ್ಕೊಮ್ಮೆ ನೀರು ಬಿಡುತ್ತಿದ್ದು ಇದೀಗ ಸಾಕಷ್ಟು ನೀರಿನ ಅನುಕೂಲ ಇರುವುದರಿಂದ ವಾರಕ್ಕೆ 3-4 ಬಾರಿ ಕುಡಿಯುವ ನೀರು ಒದಗಿಸಲಾಗುತ್ತಿದೆ.

ವಿವಿ ಸಾಗರ ಜಲಾಷಯ ಭರ್ತಿಯಾದ ಮೇಲೆ ಅಂತರ್ಜಲ ವೃದ್ಧಿಯಾಗಿದ್ದು ನಗರಭಾಗದ ಎಲ್ಲಾ 136 ಕೊಳವೆ ಬಾವಿಗಳು ಕಾರ್ಯ ನಿರ್ವಹಿಸುತ್ತಿವೆ. ಬೋರ್‌ವೆಲ್‌ಗಳೆಲ್ಲಾ ರೀಚಾರ್ಜ್ ಆಗಿರುವುದು ನೀರಿನ ಸಮಸ್ಯೆ ಅಷ್ಟಾಗಿ ಕಾಡುತ್ತಿಲ್ಲ. ನೆಲದಡಿಯ ಪೈಪ್‌ಲೈನ್ ಗಳೆಲ್ಲಾ ಚೆನ್ನಾಗಿದ್ದು ಎಲ್ಲಾದರೂ ಪೈಪ್ ಒಡೆದರೆ, ಸೋರಿಕೆ ಕಂಡರೆ ಮಾತ್ರ ಆಗ ಒಂದು ದಿನ ನೀರಿನ ವ್ಯತ್ಯಾಸ ವಾಗುತ್ತದೆಯೇ ಹೊರತು ನಗರದ ಭಾಗದಲ್ಲಿ ಉಳಿದಂತೆ ನೀರಿನ ಕೊರತೆ ಆಗಿಲ್ಲ. ಇದೀಗ ಸಚಿವ ಡಿ.ಸುಧಾಕರ್ ಅವರ ಕಾಳಜಿಯಿಂದಾಗಿ ಅಮೃತ್ ಸ್ಕೀಮ್ ನಲ್ಲಿ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿಯವರು 24 ಕೋಟಿ ವೆಚ್ಚದಲ್ಲಿ ನಗರದಲ್ಲಿ ಹೊಸದಾಗಿ ಪೈಪ್‌ಲೈನ್ ಕಾಮಗಾರಿ ಮಾಡುತ್ತಿದ್ದಾರೆ. ನಗರಭಾಗದಲ್ಲಿ 10 ಲಕ್ಷ ಲೀಟರ್‌ನ 6 ಟ್ಯಾoಕ್ ಹಾಗೂ 5 ಲಕ್ಷ ಲೀಟರ್‌ನ 4 ಟ್ಯಾಂಕ್‌ಗಳಿವೆ. ಮೂರು ದಿನಗಳಿಗೊಮ್ಮೆ ನೀರಿನ ಪರೀಕ್ಷೆ ಮಾಡಲಾಗುತ್ತಿದ್ದು ಶುದ್ಧ ನೀರು ನೀಡುವ ಎಲ್ಲಾ ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ.

ಪ್ರತಿಸಲ ನೀರಿನ ಪರೀಕ್ಷೆಯನ್ನು ಬೇರೆ ಬೇರೆ ಏರಿಯಾಗಳಲ್ಲಿ ನಡೆಸುತ್ತಿರುವುದರಿಂದ ಎಲ್ಲಾ ಕಡೆಯ ನೀರು ಸಹ ಪರೀಕ್ಷೆಗೆ ಒಳಪಡುತ್ತಿದೆ. ಜಲ ಶುದ್ಧೀಕರಣ ಘಟಕದಲ್ಲಿ ಜಲ ಶುದ್ಧೀಕರಣಕ್ಕೆ ಬೇಕಾದ ಎಲ್ಲಾ ರೀತಿಯ ಪೌಡರ್‌ಗಳ ಸ್ಟಾಕ್ ಇದ್ದು ಅಲ್ಲೂ ಯಾವುದೇ ರೀತಿಯ ಕೊರತೆ ಇಲ್ಲ. ಈಗಾಗಲೇ ನಗರ ಭಾಗದಲ್ಲಿ ಎಲ್ಲಾ ಕಡೆಯೂ ಕುಡಿಯುವ ನೀರಿನ ಪೈಪ್‌ಲೈನ್ ಇದ್ದು ಹೊಸದಾಗಿ ಬಡಾವಣೆಗಳು ಆಗುವ ಕಡೆಯೂ ನೀರಿನ ಪೈಪ್ ಲೈನ್ ಮಾಡಲಾಗುತ್ತಿದೆ.

ನಗರ ವ್ಯಾಪ್ತಿಯಲ್ಲಿ 5,950 ಮನೆ ನಲ್ಲಿಗಳಿದ್ದು 37 ವಾಣಿಜ್ಯ ನಲ್ಲಿಗಳಿವೆ. ಅನಧಿಕೃತ ನಲ್ಲಿಗಳ ಸಂಪರ್ಕಕ್ಕೂ ಕಡಿವಾಣ ಹಾಕಲಾಗುತ್ತಿದ್ದು ಅವುಗಳನ್ನು ಗುರುತಿಸಿ ಸಂಪರ್ಕ ಕಡಿತಗೊಳಿಸಲಾಗುತ್ತಿದೆ. ಅನಧಿಕೃತ ನಲ್ಲಿಗಳ ಪತ್ತೆಗಾಗಿಯೇ ಒಂದು ತಂಡ ರಚಿಸಲಾಗಿದ್ದು ಈಗಾಗಲೇ 750 ಅಕ್ರಮ ನಲ್ಲಿಗಳನ್ನು ಸಕ್ರಮ ಮಾಡಲಾಗಿದೆ.

ವಾಟರ್‌ ಸಪ್ಲೈ ವಿಭಾಗದಲ್ಲಿ ಗುತ್ತಿಗೆ ನೌಕರರು ಸೇರಿದಂತೆ ಒಟ್ಟು 26 ನೌಕರರು ಕೆಲಸ ಮಾಡುತ್ತಿದ್ದಾರೆ. ಇದೆಲ್ಲದರ ಜೊತೆಗೆ ನಗರ ಭಾಗದಲ್ಲಿ ಖಾಸಗಿಯಾಗಿ ನೀರು ವಿತರಿಸುವವರಿಗೆ ನೋಟೀಸ್‌ಗಳನ್ನು ನೀಡಿ ಶುದ್ಧ ಕುಡಿಯುವ ನೀರು ಮಾರಾಟ ಮಾಡಲು ಸೂಚಿಸಲಾಗಿದೆ. ಒಟ್ಟಿನಲ್ಲಿ ಬೇಸಿಗೆ ಬಂದರೂ ಸಹ ನಗರವಾಸಿಗಳಿಗೆ ಕುಡಿಯುವ ನೀರಿನ ಅಭಾವ ಸೃಷ್ಟಿಯಾಗದಂತೆ ಎಲ್ಲಾ ಮುಂಜಾಗರೂಕತೆ ವಹಿಸಲಾಗಿದೆ.ಕುಡಿಯುವ ನೀರಿನ ಅಭಾವ ಆಗಿಲ್ಲ: ಪೌರಾಯುಕ್ತ

ನಗರಸಭೆ ಪೌರಾಯುಕ್ತ ಎ.ವಾಸಿಂ ಪ್ರತಿಕ್ರಿಯಿಸಿ ಕುಡಿಯುವ ನೀರಿನ ಅಭಾವ ಆಗಿಲ್ಲ. ಅಭಾವ ಆಗುವ ಆತಂಕವೂ ಇಲ್ಲ. ಸಚಿವ ಡಿ.ಸುಧಾಕರ್ ರವರ ಹಾಗೂ ನಗರಸಭೆ ಸಿಬ್ಬಂದಿ ಸಹಕಾರದಿಂದ ವಾರ್ಡ್‌ಗಳ ಜನರಿಗೆ ಸಮರ್ಪಕವಾಗಿ ಕುಡಿಯುವ ನೀರನ್ನು ಒದಗಿಸಲಾಗುತ್ತಿದೆ. ಬೋರ್‌ವೆಲ್‌ಗಳು ರೀ ಚಾರ್ಜ್ ಆಗಿದ್ದು ಬರುವ ದಿನಗಳಲ್ಲೂ ನೀರಿನ ಅಭಾವ ಆಗಲಾರದು. ಇದೀಗ ಮತ್ತೆ ಸಚಿವರ ಮುಂದಾಲೋಚನೆಯಿಂದ ಅಮೃತ್ ಸ್ಕೀಮ್‌ನಲ್ಲಿ ನಗರ ನೀರು ಸರಬರಾಜು ಮತ್ತು ಒಳ ಚರಂಡಿ ಮಂಡಳಿಯವರು 24 ಕೋಟಿ ರು. ವೆಚ್ಚದಲ್ಲಿ ನಗರದಲ್ಲಿ 24 ಗಂಟೆಯೂ ಕುಡಿಯುವ ನೀರು ಪೂರೈಕೆಗೆ ಹೊಸದಾಗಿ ಪೈಪ್ ಲೈನ್ ಕಾಮಗಾರಿ ಮಾಡುತ್ತಿದ್ದಾರೆ. ಹಾಗಾಗಿ ನೀರಿನ ಲಭ್ಯತೆ ಮತ್ತು ಅದರ ವಿತರಣಾ ವ್ಯವಸ್ಥೆ ಸುಭದ್ರವಾಗಿದೆ ಎಂದರು.