ಗ್ರಾಪಂ ಉಪಾಧ್ಯಕ್ಷರ ಆರೋಪಗಳಲ್ಲಿ ಹುರುಳಿಲ್ಲ

| Published : Oct 11 2025, 01:00 AM IST

ಸಾರಾಂಶ

ಚನ್ನಪಟ್ಟಣ: ಅಧಿಕಾರ ದಾಹದಿಂದ ಸದಸ್ಯರಲ್ಲಿ ಒಡಕುಂಟು ಮಾಡಿ ಅಭಿವೃದ್ಧಿಗೆ ಹಿನ್ನಡೆಯುಂಟು ಮಾಡುತ್ತಿರುವ ಗ್ರಾಪಂ ಉಪಾಧ್ಯಕ್ಷರ ಆರೋಪಗಳಲ್ಲಿ ಎಳ್ಳಷ್ಟು ಹುರುಳಿಲ್ಲ, ನನ್ನ ಮತ್ತು ಪಿಡಿಒ ಮೇಲೆ ಮಾಡಿರುವ ಆರೋಪಗಳೆಲ್ಲಾ ಸತ್ಯಕ್ಕೆ ದೂರವಾದವೆಂದು ವಿರುಪಾಕ್ಷಿಪುರ ಗ್ರಾಪಂ ಅಧ್ಯಕ್ಷೆ ಉಮಾ ಸ್ಪಷ್ಟನೆ ನೀಡಿದರು.

ಚನ್ನಪಟ್ಟಣ: ಅಧಿಕಾರ ದಾಹದಿಂದ ಸದಸ್ಯರಲ್ಲಿ ಒಡಕುಂಟು ಮಾಡಿ ಅಭಿವೃದ್ಧಿಗೆ ಹಿನ್ನಡೆಯುಂಟು ಮಾಡುತ್ತಿರುವ ಗ್ರಾಪಂ ಉಪಾಧ್ಯಕ್ಷರ ಆರೋಪಗಳಲ್ಲಿ ಎಳ್ಳಷ್ಟು ಹುರುಳಿಲ್ಲ, ನನ್ನ ಮತ್ತು ಪಿಡಿಒ ಮೇಲೆ ಮಾಡಿರುವ ಆರೋಪಗಳೆಲ್ಲಾ ಸತ್ಯಕ್ಕೆ ದೂರವಾದವೆಂದು ವಿರುಪಾಕ್ಷಿಪುರ ಗ್ರಾಪಂ ಅಧ್ಯಕ್ಷೆ ಉಮಾ ಸ್ಪಷ್ಟನೆ ನೀಡಿದರು.

ಪತ್ರಿಕಾಗೊಷ್ಠಿಯಲ್ಲಿ ಮಾತನಾಡಿದ ಅವರು, ಹಿಂದುಳಿದ ವರ್ಗಕ್ಕೆ ಸೇರಿದ ನಾನು ಅಧ್ಯಕ್ಷೆಯಾಗಿರುವುದನ್ನು ಸಹಿಸಿಕೊಳ್ಳಲು ಸಾಧ್ಯವಾಗದ ಉಪಾಧ್ಯಕ್ಷರು ಹಾಗೂ ಕೆಲ ಸದಸ್ಯರು ನನ್ನ ವಿರುದ್ಧ ಇಲ್ಲಸಲ್ಲದ ಆರೋಪ ಮಾಡುತ್ತಾ ಅವಿಶ್ವಾಸ ತಂದು ಕೆಳಗಿಳಿಸುವ ಹುನ್ನಾರ ನಡೆಸುತ್ತಿದ್ದಾರೆಂದು ಆರೋಪಿಸಿದರು.

ನಾನು ಅಧಿಕಾರಕ್ಕೆ ಬಂದ ದಿನದಿಂದಲೂ ಒಂದಲ್ಲಾ ಒಂದು ರೀತಿಯಲ್ಲಿ ತೊಂದರೆ ನೀಡುತ್ತಾ ಪಂಚಾಯಿತಿಯಲ್ಲಿ ಕೆಲಸ ಮಾಡಲು ಬಿಡದೆ ವಿನಾಕಾರಣ ಅಡ್ಡಿಯುಂಟು ಮಾಡುತ್ತಿದ್ದು, ನನ್ನ ವಿರುದ್ಧ ಸದಸ್ಯರನ್ನು ಎತ್ತಿ ಕಟ್ಟುವ ಕೆಲಸ ಮಾಡುತ್ತಿದ್ದು ಇದು ಅಧ್ಯಕ್ಷ ಸ್ಥಾನಕ್ಕೆ ತೋರುತ್ತಿರುವ ಅಗೌರವವೆಂದು ತಿಳಿಸಿದರು.

ಉಪಾಧ್ಯಕ್ಷರು ನಮ್ಮ ಮೇಲೆ ಮಾಡಿರುವ ಆರೋಪಕ್ಕೆ ಸೂಕ್ತ ದಾಖಲೆಗಳಿದ್ದರೆ ದೂರು ನೀಡಿ ನಮ್ಮ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಿ ಅದನ್ನು ಬಿಟ್ಟು ಸುಖಾಸುಮ್ಮನೆ ಉರುಳಿಲ್ಲದ ಆರೋಪ ಮಾಡಿ ತೇಜೋವಧೆ ಮಾಡುವುದು ಎಷ್ಟು ಸರಿಯೆಂದು ಪ್ರಶ್ನಿಸಿದ ಅವರು, ಪಂಚಾಯಿತಿಯಲ್ಲಿನ ಪ್ರತಿ ಪೈಸೆಗೂ ಲೆಕ್ಕ ನೀಡುತ್ತಿದ್ದು, ಎಲ್ಲದಕ್ಕೂ ದಾಖಲೆಗಳಿವೆ. ಅದನ್ನು ಉಪಾಧ್ಯಕ್ಷರಿಂದ ಹಿಡಿದು ಎಲ್ಲಾ ಸದಸ್ಯರಿಗೂ ನೀಡಿದ್ದೇವೆ, ಆದರೂ ನಮ್ಮನ್ನು ಟಾರ್ಗೆಟ್ ಮಾಡುತ್ತಿರುವುದರ ಹಿಂದಿನ ಉದ್ದೇಶವಾದರೂ ಏನೆಂದು ಅರ್ಥವಾಗುತ್ತಿಲ್ಲ. ನಾವೆಲ್ಲರೂ ಒಟ್ಟಾಗಿ ಪಂಚಾಯಿತಿ ಅಭಿವೃದ್ಧಿಗೆ ದುಡಿಯೋಣ ಎಂದು ಮನವಿ ಮಾಡಿದರು. ಸಾಮಾನ್ಯ ಸಭೆಗಳಿಗೂ ಬಾರದೆ ಪಂಚಾಯಿತಿಯಲ್ಲಿ ಯಾವ ಕೆಲಸಗಳು ನಡೆಯದಂತೆ ಮಾಡುತ್ತಿದ್ದಾರೆಂದು ಬೇಸರ ವ್ಯಕ್ತಪಡಿಸಿದರು.

ಗ್ರಾಪಂ ಸದಸ್ಯ ಪತ್ರಾಪ್ ಮಾತನಾಡಿ, ಗ್ರಾಪಂ ಸದಸ್ಯರಾಗಿ ಇನ್ನೂ ಕೆಲ ತಿಂಗಳಲ್ಲಿ ನಮ್ಮ ಅಧಿಕಾರಾವಧಿ ಮುಕ್ತಾಯವಾಗಲಿದೆ. ನಮ್ಮನ್ನು ಆಯ್ಕೆ ಮಾಡಿ ಕಳುಹಿಸಿದ ಮತದಾರರಿಗೆ ಮುಖ ತೋರಿಸಲು ನಾಚಿಕೆಯಾಗುತ್ತಿದ್ದು, ಉಪಾಧ್ಯಕ್ಷ ಮಹೇಶ್‌ಗೌಡ ನನಗೂ ಕರೆ ಮಾಡಿ ಸಭೆಗಳಿಗೆ ಹೋಗದಂತೆ ಸೂಚಿಸಿದ್ದರು. ಆದರೆ, ಇದು ಸರಿಯಲ್ಲ ಎಂದು ಹೇಳಿ ಒಟ್ಟಾಗಿ ಹೋಗೊಣ ಎಂದು ಕೇಳಿಕೊಂಡರೂ ಈ ರೀತಿ ಮಾಡುತ್ತಿರುವುದು ಸರಿಯಲ್ಲ. ಉಪಾಧ್ಯಕ್ಷರಿಗೆ ಅಧಿಕಾರದ ಆಸೆ ಇದ್ದರೆ ಎಲ್ಲರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಅಧ್ಯಕ್ಷರಾಗಲಿ ಅದನ್ನು ಬಿಟ್ಟು ವಾಮ ಮಾರ್ಗದಲ್ಲಿ ಹೋಗುವುದು ಸರಿಯಲ್ಲ ಎಂದು ತಿಳಿಸಿದರು.

ಪಿಡಿಒ ವಿರುದ್ಧ ಮಾಡಿರುವ ಆರೋಪಗಳಲ್ಲಿ ಯಾವುದೇ ಸತ್ಯಾಂಶ ಇಲ್ಲ, ನಮ್ಮ ಪಂಚಾಯಿತಿ ಅಭಿವೃದ್ಧಿ ಮಾಡುವ ಉದ್ದೇಶದಿಂದ ಎಲ್ಲಾ ರೀತಿಯ ಸಹಕಾರಗಳನ್ನು ನೀಡುತ್ತಾ ನಮ್ಮ ಕೆಲಸ ಕಾರ್ಯಗಳಿಗೆ ಪ್ರೋತ್ಸಾಹ ನೀಡುತ್ತಿದ್ದಾರೆಯೇ ಹೊರತು ಬೇರೆ ಯಾವುದೇ ಅವ್ಯವಹಾರವಾಗಲಿ, ಅಕ್ರಮವಾಗಲಿ, ಭ್ರಷ್ಟಾಚಾರವನ್ನಾಗಲಿ ಮಾಡುತ್ತಿಲ್ಲವೆಂದರು.

ಪತ್ರಿಕಾಗೋಷ್ಠಿಯಲ್ಲಿ ಸದಸ್ಯರಾದ ನಟೇಶ್, ಪ್ರಮೀಳಾ ಶಿವಶಂಕರ್, ಪುಟ್ಟಸ್ವಾಮಿ, ತಿಮ್ಮಯ್ಯ ಸೇರಿದಂತೆ ಸ್ಥಳೀಯ ಮುಖಂಡರು ಹಾಜರಿದ್ದರು.

10ಕೆಆರ್ ಎಂಎನ್ 12.ಜೆಪಿಜಿ

ಗ್ರಾಪಂ ಆವರಣದಲ್ಲಿ ಅಧ್ಯಕ್ಷೆ ಹಾಗೂ ಸದಸ್ಯರು ಪತ್ರಿಕಾಗೊಷ್ಠಿಯಲ್ಲಿ ಮಾತನಾಡಿದರು.