ರನ್ನ ಸಕ್ಕರೆ ಕಾರ್ಖಾನೆ ಅವ್ಯವಹಾರ ದೂರಿನಲ್ಲಿ ಹುರುಳಿಲ್ಲ: ದಯಾನಂದ ಪಾಟೀಲ

| Published : Sep 09 2025, 01:01 AM IST

ರನ್ನ ಸಕ್ಕರೆ ಕಾರ್ಖಾನೆ ಅವ್ಯವಹಾರ ದೂರಿನಲ್ಲಿ ಹುರುಳಿಲ್ಲ: ದಯಾನಂದ ಪಾಟೀಲ
Share this Article
  • FB
  • TW
  • Linkdin
  • Email

ಸಾರಾಂಶ

ಬಾಗಲಕೋಟೆ ಜಿಲ್ಲೆಯ ರನ್ನ ರೈತರ ಸಹಕಾರಿ ಸಕ್ಕರೆ ಕಾರ್ಖಾನೆಯಲ್ಲಿ ಅವ್ಯವಹಾರವಾಗಿದೆ ಎಂದು ಲೋಕಾಯುಕ್ತಕ್ಕೆ ಸಲ್ಲಿಕೆಯಾದ ದೂರಿನಲ್ಲಿ ಯಾವುದೇ ಹುರುಳಿಲ್ಲ ಎಂದು ಕಾರ್ಖಾನೆಯ ಮಾಜಿ ನಿರ್ದೇಶಕ ದಯಾನಂದ ಪಾಟೀಲ ಸ್ಪಷ್ಟಪಸಿದ್ದಾರೆ.

ಕನ್ನಡಪ್ರಭ ವಾರ್ತೆ ಬಾಗಲಕೋಟೆ

ಜಿಲ್ಲೆಯ ರನ್ನ ರೈತರ ಸಹಕಾರಿ ಸಕ್ಕರೆ ಕಾರ್ಖಾನೆಯಲ್ಲಿ ಅವ್ಯವಹಾರವಾಗಿದೆ ಎಂದು ಲೋಕಾಯುಕ್ತಕ್ಕೆ ಸಲ್ಲಿಕೆಯಾದ ದೂರಿನಲ್ಲಿ ಯಾವುದೇ ಹುರುಳಿಲ್ಲ ಎಂದು ಕಾರ್ಖಾನೆಯ ಮಾಜಿ ನಿರ್ದೇಶಕ ದಯಾನಂದ ಪಾಟೀಲ ಸ್ಪಷ್ಟಪಸಿದ್ದಾರೆ.

ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿರುವ ಅವರು, ಈ ಆರೋಪ ಮಾಡಿರುವ ಬೆಳಗಾವಿ ಜಿಲ್ಲೆಯ ಮೂಡಲಗಿ ತಾಲೂಕಿನ ಜೋಕಾನಟ್ಟಿ ಗ್ರಾಮದ ಸಿದ್ದಾರೂಢ ಕಂಬಳಿ ಎಂಬುವರು ದೂರು ನೀಡಿದ್ದು, ಆ ದೂರಿನಲ್ಲಿ ಯಾವುದೇ ಸತ್ಯಾಂಶವಿಲ್ಲ. ಲೋಕಾಯುಕ್ತಕ್ಕೆ ತಪ್ಪು ಮಾಹಿತಿ ನೀಡಿದ್ದಾರೆ ಎಂದರು.

ರನ್ನ ಸಹಕಾರಿ ಸಕ್ಕರೆ ಕಾರ್ಖಾನೆ ಲೀಜ್ ಪಡೆದಿರುವ ಮಾಜಿ ಸಚಿವರು ಹಾಗೂ ಬೀಳಗಿ ಶುಗರ್ಸ್‌ ಮಾಲೀಕ ಎಸ್.ಆರ್.ಪಾಟೀಲ, ಸಚಿವರಾದ ಆರ್.ಬಿ. ತಿಮ್ಮಪೂರ ಹಾಗೂ ಶಿವಾನಂದ ಪಾಟೀಲರ ವಿರುದ್ಧ ಲೋಕಾಯುಕ್ತದಲ್ಲಿ ಸಲ್ಲಿಸಿರುವ ದೂರು ಅಸತ್ಯದಿಂದ ಕೂಡಿದೆ. 16-07-2024ರಂದು ಸರ್ಕಾರ ಲೀಜ್ ಗೆ ನೀಡಲು ಆದೇಶ ಹೊರಡಿಸಿತ್ತು. ಎಸ್.ಆರ್. ಪಾಟೀಲರು ₹108 ಕೋಟಿಗೆ ಬಿಡ್‌ ಮಾಡಿದ್ದರು. ₹30 ಕೋಟಿ ಮುಂಗಡ ಪಾವತಿಸಿ 30 ವರ್ಷಗಳ ಕಾಲ ಕಂತಿನ ಮೇರೆಗೆ ₹411 ಕೋಟಿ ಪಾವತಿ ಸೇರಿ ಒಟ್ಟು ₹471 ಕೋಟಿ ಮೊತ್ತ ವನ್ನು ಸರ್ಕಾರ ನಿಗದಿಪಡಿಸಿದ ನಂತರ ಕಾರ್ಖಾನೆಯನ್ನು ಲೀಜ್ ಗೆ ಪಡೆದಿದ್ದಾರೆ. ಸಹಕಾರಿ ಸಕ್ಕರೆ ಕಾರ್ಖಾನೆ ಹೆಸರು ಕೆಡಿಸಲು ಸುಳ್ಳು ದೂರಿನ ಹಿಂದೆ ಕೆಲ ಪ್ರಭಾವಿ ಶಕ್ತಿಗಳು ಇರಬಹುದು. ಸಕ್ಕರೆ ಕಾರ್ಖಾನೆ ಮುಚ್ಚಿಸಲು ನಡೆದಿರುವ ರಾಜಕೀಯ ಷಡ್ಯಂತ್ರ ಇದಾಗಿರಬಹುದು. ಇಂತಹ ಹುನ್ನಾರ ಸಹಿಸಲು ಸಾಧ್ಯವಿಲ್ಲ. ಜಿಲ್ಲೆಯಲ್ಲಿ ಏಕೈಕ ರೈತರ ಸಹಕಾರಿ ಸಕ್ಕರೆ ಕಾರ್ಖಾನೆ ಇದಾಗಿದ್ದು, ರೈತರು, ಶೇರುದಾರರು ಇಂತಹ ವದಂತಿಗಳಿಗೆ ಕಿವಿಗೊಡಬಾರದು. ಪ್ರಸಕ್ತ ಹಂಗಾಮಿನಲ್ಲಿ ಕಾರ್ಖಾನೆಗೆ ಕಬ್ಬು ಪೂರೈಸಿ ಸಂಸ್ಥೆಯನ್ನು ಉಳಿಸಬೇಕೆಂದು ರೈತರಲ್ಲಿ ಮನವಿ ಮಾಡಿದರು.

ಸುದ್ದಿಗೋಷ್ಠಿಯಲ್ಲಿ ಶೇರುದಾರ ವಿಠ್ಠಲ ತುಮ್ಮರಮಟ್ಟಿ, ಕಾರ್ಖಾನೆ ಮಾಜಿ ನಿರ್ದೇಶಕ ರಾಜುಗೌಡ ಪಾಟೀಲ, ಬೀಳಗಿ ಶುಗರ್ಸ್‌ ನಿರ್ದೇಶಕ ಎಚ್.ಎಲ್. ಪಾಟೀಲ, ಸಹಕಾರಿ ಸಕ್ಕರೆ ಕಾರ್ಖಾನೆಯ ಯೂನಿಯನ್‌ ಅಧ್ಯಕ್ಷ ಉಮೇಶ ಬಡಿಗೇರ, ಕಾರ್ಯದರ್ಶಿ ಪ್ರಕಾಶ ಕಬ್ಬೂರ ಸೇರಿದಂತೆ ಇತರರು ಉಪಸ್ಥಿತರಿದ್ದರು.

ಯಾವುದೇ ಅವ್ಯವಹಾರ ನಡೆದಿಲ್ಲ: ಬಾಗಲಕೋಟೆ: ರೈತರ ರನ್ನ ಸಹಕಾರಿ ಸಕ್ಕರೆ ಕಾರ್ಖಾನೆ ಟೆಂಡರ್ ಹಂಚಿಕೆಯಲ್ಲಿ ಯಾವುದೇ ಅವ್ಯವಹಾರ ನಡೆದಿಲ್ಲ ಎಂದು ಜಿಲ್ಲಾ ಉಸ್ತುವಾರಿ ಸಚಿವ ಆರ್.ಬಿ. ತಿಮ್ಮಾಪೂರ ಸ್ಪಷ್ಟಪಡಿಸಿದ್ದಾರೆ.

ನಗರದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು,ಕಾರ್ಖಾನೆ ವಿಯಷದಲ್ಲಿ ಭ್ರಷ್ಟಾಚಾರ ನಡೆದಿದೆ ಎಂದು ಆರೋಪಿಸಿ ಸಿದ್ಧಾರೂಢ ಕಂಬಳಿ ಅವರು ಲೋಕಾಯುಕ್ತಕ್ಕೆ ಸಲ್ಲಿಸಿದ ದೂರಿನಲ್ಲಿ ಯಾವುದೇ ಸತ್ಯಾಂಶವಿಲ್ಲ. ಕಾರ್ಖಾನೆ ಲೀಜ್ ಕೊಡುವ ವಿಷಯ ಕುರಿತು ಸಂಪುಟದಲ್ಲಿ ಸಮಗ್ರವಾಗಿ ಚರ್ಚಿಸಿ ಟೆಂಡರ್ ಮಾಡಲಾಗಿದೆ. ಸಹಕಾರಿ ಸಂಸ್ಥೆ ಉಳಿಸಲು ಸಾಕಷ್ಟು ಪ್ರಯತ್ನಪಟ್ಟು ರೈತರ ಆಶಯಕ್ಕೆ ತಕ್ಕಂತೆ ಸರ್ಕಾರ ನಡೆದುಕೊಂಡ ಪರಿಣಾಮ ಇಂದು ಕಾರ್ಖಾನೆ ಕಾರ್ಯನಿರ್ವಹಿಸುತ್ತಿದೆ ಸ್ಪಷ್ಟನೆ ನೀಡಿದ್ದಾರೆ.