ಸಾರಾಂಶ
ಕನ್ನಡಪ್ರಭ ವಾರ್ತೆ ಯಾದಗಿರಿ
ಯಾವುದೇ ಕಾರಣಕ್ಕೂ ಗುರುಮಠಕಲ್ ಮತಕ್ಷೇತ್ರ ಬಿಟ್ಟು ಹೋಗುವುದಿಲ್ಲ, ಬೇರೆ ಎಲ್ಲಿಂದಲೂ ಸ್ಪರ್ಧೆ ಮಾಡುವುದಿಲ್ಲ ಎಂದು ಗುರುಮಠಕಲ್ ಮತಕ್ಷೇತ್ರದ ಶಾಸಕ, ಜೆಡಿಎಸ್‌ನ ಶರಣಗೌಡ ಕಂದಕೂರ ಹೇಳಿದರು."ಜನರೊಂದಿಗೆ ಜನತಾದಳ- ಜೆಡಿಎಸ್ ಸದಸ್ಯತ್ವ ನೋಂದಣಿ ಅಭಿಯಾನದ ಅಂಗವಾಗಿ, ಶನಿವಾರ ನಗರದ ಸಪ್ತಪದಿ ಕಲ್ಯಾಣ ಮಂಟಪದಲ್ಲಿ ಜೆಡಿಎಸ್ ಯುವ ಘಟಕದ ಅಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಉಪಸ್ಥಿತಿಯಲ್ಲಿ ಆಯೋಜಿಸಲಾಗಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದರು. ಮುಂಬರುವ ಚುನಾವಣೆಯ ವೇಳೆ ಶಾಸಕ ಕಂದಕೂರ ಗುರುಮಠಕಲ್ ಕ್ಷೇತ್ರ ತೊರೆದು, ಯಾದಗಿರಿಯಿಂದ ಸ್ಪರ್ಧೆ ಮಾಡುತ್ತಾರೆ ಎಂಬುದಾಗಿ ಕೇಳಿಬರುತ್ತಿದ್ದ ಮಾತುಗಳಿಗೆ ಈ ಮೂಲಕ ಖುದ್ದಾಗಿ ತೆರೆ ಎಳೆದ ಅವರು, ನಮ್ಮ ತಂದೆ ಮತ್ತು ನನಗೂ ರಾಜಕೀಯ ನೆಲೆ ಒದಗಿಸಿ ಶಾಸಕರನ್ನಾಗಿ ಮಾಡಿದ ಗುರುಮಠಕಲ್ ಕ್ಷೇತ್ರದ ಜನತೆ ಋಣ ಸಾಕಷ್ಟಿದೆ. ಯಾವುದೇ ಕಾರಣಕ್ಕೂ ನಾನು ಗುರುಮಠಕಲ್ ಕ್ಷೇತ್ರ ಬಿಡುವುದಿಲ್ಲ, ಇಲ್ಲಿಯೇ ಇರುವೆ, ಇಲ್ಲಿಯೇ ಸಾಯುತ್ತೇನೆ, ಈ ಬಗ್ಗೆ ಯಾರು ತಲೆ ಕೆಡಿಸಿಕೊಳ್ಳಬಾರದು ಎಂದರು.
ರಾಜ್ಯದಲ್ಲಿ ಮತ್ತೇ ನಮ್ಮಸರ್ಕಾರ ಅಧಿಕಾರಕ್ಕೆ ಬರುತ್ತದೆ, ಕುಮಾರಣ್ಣ ಮುಖ್ಯಮಂತ್ರಿ ಆಗುತ್ತಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದ ಕಂದಕೂರ, ನಮಗೆ ಮಂತ್ರಿ ಮಾಡುವ ಬದಲು ನಮ್ಮ ಗೆಲುವಿಗೆ ಹಗಲಿರುಳು ದುಡಿದು ಏನೊಂದು ಆಸೆ ಪಡದ ಕಾರ್ಯಕರ್ತರ ಒಳಿತಿಗಾಗಿ ಸರ್ಕಾರದಿಂದ ಸಹಾಯ ಮಾಡಬೇಕು. ಸ್ಥಳಿಯವಾಗಿ ಅಧಿಕಾರ ನೀಡಬೇಕೆಂದು ಶಾಸಕ ಶರಣಗೌಡ ನಿಖಿಲ್ ಅವರಲ್ಲಿ ಮನವಿ ಮಾಡಿದರು.ಕುಮಾರಸ್ವಾಮಿ ಅವರು ಸಿಎಂ ಆಗಿದ್ದ ವೇಳೆ, ಗುರುಮಠಕಲ್ ಮತಕ್ಷೇತ್ರದ 18 ಕೆರೆಗಳಿಗೆ ನೀರು ತುಂಬಿಸುವ ಯೋಜನೆಯಡಿ 165 ಕೋಟಿ ರು.ಗಳ ಮಂಜೂರು ಮಾಡಿದ್ದರು. ಮುಂದೆ ಸರ್ಕಾರ ಬದಲಾದಾಗ ಹಣ ವಾಪಸ್ ಹೋಗಿತ್ತು. ಈ ವಿಷಯ ಕುಮಾರಸ್ವಾಮಿ ಅವರ ಗಮನಕ್ಕೆ ತಂದಾಗ, ನನ್ನನ್ನು ನೇರವಾಗಿ ಆಗಿನ ಸಿಎಂ ಬಸವರಾಜ ಬೊಮ್ಮಾಯಿ ಅವರ ಮನೆಗೆ ಕರೆದುಕೊಂಡು ಹೋಗಿ, ತಾವು ಶಾಸಕರಾಗಿದ್ದ ಚನ್ನಪಟ್ಟಣಕ್ಕೆ ಅನುದಾನ ಬೇಡ. ಗುರುಮಠಕಲ್ ಕ್ಷೇತ್ರಗಳಿಗೆ ನೀಡಿ ಎಂದು ಅನುದಾನ ಕೊಡಿಸಿದ ಪುಣ್ಯಾತ್ಮ ಎಂದು ಶಾಸಕ ಕಂದಕೂರ ಎಚ್ಡಿಕೆ ಕುರಿತು ಹೇಳಿದರು.