ಮಾರುತಿ ಶಿಡ್ಲಾಪೂರಕನ್ನಡಪ್ರಭ ವಾರ್ತೆ ಹಾನಗಲ್ಲ

ನೀರಿನ ಸೌಲಭ್ಯವಿದ್ದರೂ ೬೦ ಮನೆಗಳಿರುವ ಕಾಲ್ವೇಕಲ್ಲಾಪುರ ಗ್ರಾಮದ ಮನೋಹರ ನಗರಕ್ಕೆ ಒಂದು ಕಿಮೀ ದೂರದಿಂದ ನೀರು ಹೊತ್ತೊಯ್ಯುವ ಕರ್ಮ ತಪ್ಪಲೇ ಇಲ್ಲ. ನಳ ಇದ್ದರೂ ನೀರು ಬರುವುದಿಲ್ಲ, ನಿರ್ವಹಣೆ ವೈಫಲ್ಯಕ್ಕೆ ಜನರು ಹೈರಾಣ!ಈಗಾಗಲೇ ಹಳ್ಳಿ ಹಳ್ಳಿಗಳಲ್ಲಿ ಒಂದೊಂದಾಗಿ ನೀರಿನ ಸಮಸ್ಯೆ ಕಾಣಿಸುತ್ತಿದೆ. ಹಲವು ಹಳ್ಳಿಗಳಲ್ಲಿ ನೀರಿನ ಸೌಲಭ್ಯವಿದೆ. ಆದರೆ ನಿರ್ವಹಣೆ ದೋಷದಿಂದಾಗಿ ಗ್ರಾಮಗಳಿಗೆ ನೀರು ಪೂರೈಸುವಲ್ಲಿ ವೈಫಲ್ಯಗಳು ಕಾಣಿಸುತ್ತಿವೆ. ಇದಕ್ಕೆ ಉದಾಹರಣೆ ತಾಲೂಕಿನ ಕಾಲ್ವೇಯಲ್ಲಾಪುರ ಗ್ರಾಮದ ಮನೋಹರ ನಗರವಾಗಿದೆ.ಇಲ್ಲಿನ ಮನೋಹರ ನಗರದಕ್ಕೆಂದೇ ಅಲ್ಲಿಂದ ಒಂದು ಕಿಮೀ ದೂರದಲ್ಲಿ ಕೊಳವೆ ಬಾವಿ ಇದೆ. ಈ ಮೊದಲು ಕೊಳವೆ ಬಾವಿಯಿಂದಲೇ ಪೈಪ್‌ಲೈನ್ ಹಾಕಲಾಗಿದೆ. ಇಲ್ಲಿಂದಲೇ ಮನೋಹರ ನಗರಕ್ಕೆ ನಳದ ಮೂಲಕ ನೀರು ಹರಿಸಲಾಗಿದೆ. ಆದರೆ ೨೦೨೨ರಿಂದಲೇ ಏನು ಕಾರಣವೋ ಕೊಳವೆ ಬಾವಿಯ ಬಳಿಯೇ ನೀರು ಬೀಳುವಂತೆ ಮಾಡಿದ್ದಾರೆ. ಜಲಜೀವನ ಮಿಶನ್ ಯೋಜನೆಯಲ್ಲಿ ಇಲ್ಲಿ ನಳದ ವ್ಯವಸ್ಥೆ ಮಾಡಲಾಗಿದೆ. ಆದರೆ ನೀರು ಹರಿಸಲಾಗಲೇ ಇಲ್ಲ. ಅದೇ ಕೊಳವೆ ಬಾವಿಯಿಂದಲೇ ಈ ಮನೋಹರ ನಗರದ ಜನ ಕೊಡಪಾನ ಹೊತ್ತು, ದೂಡುವ ಗಾಡಿಯಲ್ಲಿಟ್ಟುಕೊಂಡೂ ಗುಡ್ಡ ಏರಿ ನೀರು ಒಯ್ಯಬೇಕಾಗಿದೆ. ಕೊಳವೆ ಬಾವಿಯಲ್ಲಿ ಭರಪೂರ ನೀರಿದ್ದರೂ ಕೂಡ ಸಾರ್ವಜನಿಕರು ಕೆಲಸ ಬಿಟ್ಟು ಈ ನೀರು ಹೊರುವ ಕೆಲಸಕ್ಕೆ ಮುಂದಾಗಬೇಕಾಗಿದ್ದು, ಈ ಊರಿನ ಜನ ಗ್ರಾಮ ಪಂಚಾಯತಿಗೆ ಮಾಡಿದ ಯಾವುದೇ ಮನವಿ ಫಲ ನೀಡಿಲ್ಲ.ಧರ್ಮಾ ಕಾಲುವೆಗೆ ಹೊಂದಿಕೊಂಡಿರುವ ಈ ಕೊಳವೆ ಬಾವಿಗೆ ರಸ್ತೆಯ ಇನ್ನೊಂದು ಬದಿಯಿಂದ ವಿದ್ಯುತ್ ಕೇಬಲ್ ಹಾಕಲಾಗಿದೆ. ಆದರೆ ಅದು ಸುರಕ್ಷಿತವಾಗಿಲ್ಲ. ಈ ಬಗ್ಗೆ ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿಯಾಗಲಿ, ನೀರು ಸರಬರಾಜು ಸಿಬ್ಬಂದಿ ಲಕ್ಷ್ಯವಹಿಸಿಯೇ ಇಲ್ಲ. ಈ ವಿದ್ಯುತ್ ಬೋರ್ಡ್‌ ಸಂಪೂರ್ಣವಾಗಿ ಅಸ್ತವ್ಯಸ್ತವಾಗಿದ್ದನ್ನು ಎರಡು ಮೂರು ದಿನಗಳ ಹಿಂದೆ ದುರಸ್ತಿ ಮಾಡಿದ್ದಾರೆ. ಅದು ಕೂಡ ಸುರಕ್ಷಿತ ಎನಿಸುತ್ತಿಲ್ಲ. ಇಲ್ಲಿಯೇ ಇರುವ ಒಂದು ಕೋಲಿನಿಂದ ಕೊಳವೆ ಬಾವಿಯ ಬಟನ್ ಯಾರು ಬೇಕಾದರೂ ಒತ್ತಿ ಕೊಳವೆ ಬಾವಿ ಆರಂಭಿಸುವ ಅಪಾಯಕಾರಿ ವ್ಯವಸ್ಥೆ ಇಲ್ಲಿದೆ. ಬಂದ್ ಮಾಡದಿದ್ದರೆ ವಿದ್ಯುತ್ ಸಂಪರ್ಕ ತಪ್ಪುವವರೆಗೆ ನೀರು ವ್ಯರ್ಥವಾಗಿ ಹರಿಯುತ್ತಲೇ ಇರುತ್ತದೆ. ರಸ್ತೆ ಮೇಲೆ ಕೇಬಲ್: ನಿತ್ಯ ನೂರಾರು ವಾಹನಗಳು ಓಡಾಡುವ ರಸ್ತೆಯಲ್ಲಿಯೇ ಕೊಳವೆ ಬಾವಿಗೆ ವಿದ್ಯುತ್ ಕೇಬಲ್ ಹಾಕಲಾಗಿದ್ದು ಅದು ವಾಹನಗಳ ಓಡಾಟಕ್ಕೆ ನುಜ್ಜುಗುಜ್ಜಾಗಿದೆ. ಅಲ್ಲದೆ ವಿದ್ಯುತ್ ಹರಿದು ಜನ ಜಾನುವಾರುಗಳಿಗೆ ಅಪಾಯವನ್ನೂ ತಂದೊಡ್ಡಬಲ್ಲ ಸ್ಥಿತಿಯಲ್ಲಿದೆ. ಇದನ್ನು ಆಳಕ್ಕೆ ಪೈಪ್ ಹಾಕಿ ಸುರಕ್ಷಿತವಾಗಿ ಅಳವಡಿಸುವ ತೀರ ಅಗತ್ಯವಿದೆ. ಈ ಬಡಾವಣೆಗೆ ಒಬ್ಬ ನೀರು ಸರಬರಾಜು ಸಿಬ್ಬಂದಿಯನ್ನು ತಾತ್ಕಾಲಿಕವಾಗಿ ನೇಮಿಸಲಾಗಿದ್ದು ಈಗಲಾದರೂ ಶೀಘ್ರ ಈ ಕೇಬಲ್ ದುರಸ್ತಿಯಾಗುವುದೇ ಎಂದು ಕಾದು ನೋಡಬೇಕಾಗಿದೆ.ಕಾಲ್ವೇಕಲ್ಲಾಪುರದ ಮನೋಹರ ನಗರಕ್ಕೆ ಜನ ಜಾನುವಾರುಗಳಿಗೆ ನೀರು ಪೂರೈಕೆಗೆ ಬಾಳಂಬೀಡ ಗ್ರಾಮ ಪಂಚಾಯಿತಿ ನಿಷ್ಕಾಳಜಿ ವಹಿಸಿದೆ. ಸಾಕಷ್ಟು ನೀರು ಹಾಗೂ ಎಲ್ಲ ವ್ಯವಸ್ಥೆ ಇದ್ದರೂ ನಳದಿಂದ ನೀರು ಹರಿಸಲು ಮುಂದಾಗುತ್ತಿಲ್ಲ ಎಂದು ಗ್ರಾಮಸ್ಥ ಪ್ರವೀಣ ಮರೆಕ್ಕನವರ ಹೇಳಿದರು.ನಾನು ಈ ಪಂಚಾಯಿತಿಗೆ ಬಂದು ಕೇವಲ ೨೦ ದಿನಗಳಾಗಿದೆ. ಮನೋಹರ ನಗರಕ್ಕೆ ನೀರಿನ ಸಮಸ್ಯೆ ಗಮನಕ್ಕೆ ಬಂದಿದೆ. ಅದನ್ನು ಸರಿಪಡಿಸುತ್ತೇವೆ. ಅಲ್ಲಿಗೆ ನಳದ ಮೂಲಕ ನೀರು ಬಿಡಲು ಏನು ಸಮಸ್ಯೆ ಇದೆ ಎಂದು ಪರಿಶೀಲಿಸಲಾಗುವುದು ಎಂದು ಪಿಡಿಒ ಟಿ.ಬಿ. ಮುಗಾನವರ ಹೇಳಿದರು.