ಸಾರಾಂಶ
ಮುಂಗಾರಿನಲ್ಲಿ ಬಿತ್ತನೆಗೊಂಡ ಮೆಕ್ಕೆಜೋಳ, ಸಜ್ಜೆ, ತೊಗರಿ ಸೇರಿದಂತೆ ಫಸಲಿನ ಹಂತದಲ್ಲಿದ್ದ ನಾನಾ ಬೆಳೆಗಳು ಮಳೆಯಿಲ್ಲದೆ ಬಾಡಿದ್ದವು. ಇದರಿಂದ ರೈತರು ಚಿಂತೆಗೀಡಾಗಿದ್ದರು. ಸರಿಯಾದ ಸಮಯಕ್ಕೆ ಮಳೆಯಾದ ಕಾರಣ ಬೆಳೆಗಳು ನಳನಳಿಸುತ್ತಿವೆ.
ಯಲಬುರ್ಗಾ:
ಪಟ್ಟಣ ಸೇರಿದಂತೆ ತಾಲೂಕಿನ ವಿವಿಧೆಡೆ ಬುಧವಾರ ತಡರಾತ್ರಿ ಭಾರಿ ಮಳೆಯಾಗಿದ್ದು, ಬೆಳೆಗಳು ಜಲಾವೃತವಾಗಿವೆ. ಕೃಷಿಹೊಂಡ, ಚೆಕ್‌ಡ್ಯಾಂಗಳಿಗೆ ಅಧಿಕ ಪ್ರಮಾಣದ ನೀರು ಹರಿದು ಬಂದಿದೆ.ಮುಂಗಾರಿನಲ್ಲಿ ಬಿತ್ತನೆಗೊಂಡ ಮೆಕ್ಕೆಜೋಳ, ಸಜ್ಜೆ, ತೊಗರಿ ಸೇರಿದಂತೆ ಫಸಲಿನ ಹಂತದಲ್ಲಿದ್ದ ನಾನಾ ಬೆಳೆಗಳು ಮಳೆಯಿಲ್ಲದೆ ಬಾಡಿದ್ದವು. ಇದರಿಂದ ರೈತರು ಚಿಂತೆಗೀಡಾಗಿದ್ದರು. ಸರಿಯಾದ ಸಮಯಕ್ಕೆ ಮಳೆಯಾದ ಕಾರಣ ಬೆಳೆಗಳು ನಳನಳಿಸುತ್ತಿವೆ. ಇದರಿಂದ ರೈತರು ಮೊಗದಲ್ಲಿ ಮಂದಹಾಸ ಮೂಡಿದೆ.
ತಾಲೂಕಿನ ಕಲಕಬಂಡಿ, ಹಿರೇಅರಳಿಹಳ್ಳಿ, ಪುಟಗಮರಿ, ಬುಡಕುಂಟಿ, ಜರಕುಂಟಿ, ಲಿಂಗನಬಂಡಿ, ವಜ್ರಬಂಡಿ, ಹೊಸೂರು ಸೇರಿದಂತೆ ವಿವಿಧೆಡೆ ರೈತರ ಜಮೀನಲ್ಲಿ ಬೆಳೆದ ಬೆಳೆಗಳು ಜಲಾವೃತಗೊಂಡಿವೆ. ಕೃಷಿಹೊಂಡ, ಚೆಕ್‌ಡ್ಯಾಂಗೆ ಅಧಿಕ ಪ್ರಮಾಣದ ನೀರು ಹರಿದು ಬಂದಿದೆ.ಹಿರೇಅರಳಿಹಳ್ಳಿ-ಬುಟಕುಂಟಿ ರಸ್ತೆಗೆ ಹೊಂದಿಕೊಂಡಿರುವ ಚೆಕ್ ಡ್ಯಾಂ ತುಂಬಿ ಹರಿಯುತ್ತಿದೆ. ಬಳೂಟಗಿ ಗ್ರಾಮದ ನಿವಾಸಿಗಳ ಮನೆಗೆ ನೀರು ನುಗ್ಗಿದ ಪರಿಣಾಮ ದವಸ-ಧಾನ್ಯಗಳು ನೀರು ಪಾಲಾಗಿದೆ. ಇದರಿಂದ ಜನಜೀವನ ಅಸ್ತವ್ಯಸ್ತವಾಗಿತ್ತು. ಎರಿ ಭಾಗದಲ್ಲಿ ಅಧಿಕ ಮಳೆಯಿಂದ ಹೆಸರು ಬೆಳೆ ರೋಗಕ್ಕೆ ತುತ್ತಾಗಿದ್ದು, ರೈತರು ನಷ್ಟದ ಭೀತಿಯಲ್ಲಿದ್ದಾರೆ. ಮಳೆಯಿಂದಾಗಿ ಹಾಳಾದ ಬೆಳೆಗೆ ಸರ್ಕಾರ ಬೆಳೆಹಾನಿ ಪರಿಹಾರ ನೀಡಬೇಕು ಎಂದು ರೈತರು ಒತ್ತಾಯಿಸಿದ್ದಾರೆ.