ಕನ್ನಡಪ್ರಭ ವಾರ್ತೆ ಹೊನ್ನಾವರ

ಪುಸ್ತಕಗಳಿಗೆ ನಮ್ಮನ್ನು ಹೊಸ ಮನುಷ್ಯರನ್ನಾಗಿ ಮಾಡುವ ಶಕ್ತಿಯಿದೆ. ಗ್ರಂಥಾಲಯವು ದೇವಾಲಯವಿದ್ದಂತೆ. ಮನೆಮನೆಯಲ್ಲಿ ಗ್ರಂಥಾಲಯ ಇರಬೇಕು ಎಂದು ಹಿರಿಯ ಸಾಹಿತಿ ಸುಮುಖಾನಂದ ಜಲವಳ್ಳಿ ಹೇಳಿದರು.

ತಾಲೂಕಿನ ತೊಳಸಾಣಿಯಲ್ಲಿ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು ಹಾಗೂ ತೊಳಸಾಣಿಯ ಆದಿಶಕ್ತಿ ಯುವಕ ಸಂಘದ ಆಶ್ರಯದಲ್ಲಿ ಸ್ಥಳಿಯರು ಹಾಗೂ ದಾನಿಗಳ ಸಹಕಾರದಿಂದ ಸ್ಥಾಪಿಸಿದ ನೂತನ ಗ್ರಂಥಾಲಯವನ್ನು ಉದ್ಘಾಟಿಸಿ ಮಾತನಾಡಿದರು. ಪುಸ್ತಕಗಳು ನಮ್ಮಲ್ಲಿ ವಿಚಾರಶಕ್ತಿ ಬೆಳೆಸುತ್ತವೆ. ಪುಸ್ತಕಗಳು ಮನೆಗೆ ಶೋಭೆಯನ್ನು ತರುತ್ತವೆ. ನಮ್ಮ ಸಂಪಾದನೆಯ ಸಣ್ಣ ಪ್ರಮಾಣವನ್ನು ಪುಸ್ತಕ ಖರೀದಿಗಾಗಿ ಇಡಬೇಕು ಎಂದರು.ಜಿಲ್ಲಾ ಪತ್ರಕರ್ತರ ಸಂಘದ ಉಪಾಧ್ಯಕ್ಷ ಮಾರುತಿ ನಾಯ್ಕ ಮಾತನಾಡಿ, ಪುಸ್ತಕ ಓದುವಿಕೆಯ ಆಸಕ್ತಿಯು ಕಡಿಮೆಯಾಗುತ್ತಿರುವ ಇಂದಿನ ಕಾಲದಲ್ಲಿ ತೊಳಸಾಣಿಯ ಜನರಿಂದ ನೂತನ ಗ್ರಂಥಾಲಯ ಸ್ಥಾಪನೆಯಾಗಿರುವುದು ಉತ್ತಮ ಬೆಳವಣಿಗೆ. ಗ್ರಂಥಾಲಯದಲ್ಲಿರುವ ಪುಸ್ತಕ ಮತ್ತು ಪತ್ರಿಕೆಯನ್ನು ಸ್ಥಳಿಯರು ನಿರಂತರವಾಗಿ ಓದುವ ಮೂಲಕ ಈ ಕಾರ್ಯಕ್ರಮ ಸಾರ್ಥಕತೆ ಪಡೆಯಲಿ ಎಂದರು.ತಾಪಂ ಇಒ ಪುಟ್ಟೇ ಗೌಡ ಮಾತನಾಡಿ ,ಕನ್ನಡ ಭಾಷೆಯ ಬೆಳವಣಿಗೆ ಕನ್ನಡ ಸಾಹಿತ್ಯ ಪರಿಷತ್ತು ಸಹಕಾರಿಯಾಗಿ ದುಡಿಯುತ್ತಿದೆ ಎಂದರು. ಕಸಾಪ ಅಧ್ಯಕ್ಷ ಎಸ್.ಎಚ್. ಗೌಡ ಅಧ್ಯಕ್ಷತೆ ವಹಿಸಿದ್ದರು.ಸಾಹಿತಿ ಎಚ್.ಎಸ್. ಗುನಗ, ಸಾಹಿತಿ ಸುರೇಶ ನಾಯ್ಕ, ಹಿರಿಯ ಚಿಂತಕ ಜಿ.ಆರ್. ಹೆಗಡೆ ಗುಬ್ಬು, ತಾಪಂ ಮಾಜಿ ಸದಸ್ಯೆ ಲಕ್ಷ್ಮೀ ಗೊಂಡ ಮಾತನಾಡಿದರು. ಸಾಹಿತಿ ವಿನಾಯಕ ನಾಯ್ಕ ಗ್ರಂಥಾಲಯಕ್ಕೆ ಕಪಾಟು ದೇಣಿಗೆ ನೀಡಿದರು. ಸಾಹಿತಿಗಳು, ದಾನಿಗಳು ಗ್ರಂಥಾಲಯಕ್ಕೆ ಪುಸ್ತಕ ಹಾಗೂ ಪತ್ರಿಕೆ ದೇಣಿಗೆ ನೀಡಿದರು. ಕಮಲಾ ಮರಾಠಿ ಅವರಿಗೆ ಗ್ರಂಥಾಲಯ ನಡೆಸುವ ಜವಾಬ್ದಾರಿ ನೀಡಲಾಯಿತು.

ಗ್ರಾಪಂ ಮಾಜಿ ಉಪಾಧ್ಯಕ್ಷ ಸಚಿನ್ ನಾಯ್ಕ, ಕಸಾಪ ಸದಸ್ಯರಾದ ಜನಾರ್ದನ ಕಾಣಕೋಣಕರ, ಸಾಧನಾ ಬರ್ಗಿ, ಮೀನಾ ಗೌಡ, ಜಿ.ಕೆ. ಗೌಡ, ನಾಗರಾಜ ಶೆಟ್ಟಿ, ಆದಿಶಕ್ತಿ ಯುವಕ ಸಂಘದ ಅಧ್ಯಕ್ಷ ನಾರಾಯಣ ಮರಾಠಿ ಮತ್ತು ಸಂಘದ ಸದಸ್ಯರು ಹಾಗೂ ಗ್ರಾಮಸ್ಥರು ಪಾಲ್ಗೊಂಡಿದ್ದರು. ಶಿವಾನಂದ ಮರಾಠಿ ಸ್ವಾಗತಿಸಿದರು. ಕೇಶವ ಶೆಟ್ಟಿ ವಂದಿಸಿದರು. ಮಹೇಶ ಭಂಡಾರಿ ನಿರೂಪಿಸಿದರು.