ಸಾರಾಂಶ
ಬೆಂಗಳೂರು : ಕೈಗಾರಿಕೆಗಳ ಆರಂಭಕ್ಕೆ ಅಗತ್ಯವಿರುವ ವಿವಿಧ ನೀರಾಕ್ಷೇಪಣ ಪ್ರಮಾಣಪತ್ರ ನೀಡಿಕೆ ಕಾಲಮಿತಿ ಕಡಿಮೆ ಮಾಡುವ ಸಂಬಂಧ ವಿವರವಾದ ಪ್ರಸ್ತಾವನೆ ಸಲ್ಲಿಸಬೇಕು. ಅಗತ್ಯವಿದ್ದರೆ ನಿಯಮಾವಳಿಗಳಲ್ಲಿ ಬದಲಾವಣೆ ತರಲು ಸಚಿವ ಸಂಪುಟದಲ್ಲಿ ತೀರ್ಮಾನಿಸಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದ್ದಾರೆ.
ವಿಧಾನಸೌಧದ ಸಮ್ಮೇಳನ ಸಭಾಂಗಣದಲ್ಲಿ ಶುಕ್ರವಾರ ಬಂಡವಾಳ ಹೂಡಿಕೆ ಆಕರ್ಷಣೆ ಸಭೆ ನಡೆಸಿದ ಸಿದ್ದರಾಮಯ್ಯ, ಕೈಗಾರಿಕೆಗಳ ಆರಂಭಕ್ಕೆ ಅಗತ್ಯವಿರುವ ಭೂಮಿ ಬಳಕೆ ಬದಲಾವಣೆ ಪ್ರಕ್ರಿಯೆ ಸೇರಿ ಇನ್ನಿತರ ಎನ್‌ಒಸಿ ನೀಡುವ ಕಾಲಮಿತಿ ಹೆಚ್ಚಿರುವ ಬಗ್ಗೆ ದೂರುಗಳಿವೆ. ಇದು ಕೈಗಾರಿಕಾ ಸ್ಥಾಪನೆ ಮೇಲೂ ಪರಿಣಾಮ ಬೀರುತ್ತಿದೆ. ಹೀಗಾಗಿ ಕಾಲಮಿತಿ ಕಡಿಮೆ ಮಾಡಬೇಕಿದ್ದು, ಅದಕ್ಕಾಗಿ ಪ್ರಸ್ತಾವನೆ ಸಲ್ಲಿಸಬೇಕು. ಅದರಲ್ಲಿ ಯಾವುದೇ ಕಾರಣಕ್ಕೂ ವಿಳಂಬವಾಗಬಾರದು. ಕೈಗಾರಿಕಾ ಸ್ನೇಹಿ ವ್ಯವಸ್ಥೆಯನ್ನು ಮತ್ತಷ್ಟು ಗಟ್ಟಿಗೊಳಿಸಲು ಕಾನೂನು ಮತ್ತು ನಿಯಮಗಳಲ್ಲಿ ಅಗತ್ಯ ತಿದ್ದುಪಡಿ ತರುವ ನಿಟ್ಟಿನಲ್ಲಿ ಸಚಿವ ಸಂಪುಟದಲ್ಲಿ ತೀರ್ಮಾನ ಕೈಗೊಳ್ಳಲಾಗುವುದು ಎಂದು ಹೇಳಿದರು.
ಏಕಗವಾಕ್ಷಿ ವ್ಯವಸ್ಥೆ ಅಡಿ ಅರ್ಜಿಗಳ ವಿಲೇವಾರಿಯಾಗುತ್ತಿಲ್ಲ ಎಂಬ ದೂರು
ಏಕಗವಾಕ್ಷಿ ವ್ಯವಸ್ಥೆ ಅಡಿ ಅರ್ಜಿಗಳ ವಿಲೇವಾರಿಯಾಗುತ್ತಿಲ್ಲ ಎಂಬ ದೂರುಗಳಿವೆ. ಎಲ್ಲ ಸೇವೆಗಳನ್ನು ಸಮರ್ಪಕವಾಗಿ ನೀಡಲು ಕ್ರಮ ಕೈಗೊಳ್ಳಬೇಕು. ಈಗಾಗಲೇ 115 ಸೇವೆಗಳು ವ್ಯವಸ್ಥೆಯಲ್ಲಿದ್ದು, ಇನ್ನೂ 29 ಸೇವೆಗಳು ಏಕಗವಾಕ್ಷಿ ವ್ಯವಸ್ಥೆಯಿಂದ ಹೊರಗಿವೆ. ಅವುಗಳನ್ನು ಸಹ ಅದರಡಿ ತರಬೇಕು. ಎಲ್ಲ ಅರ್ಜಿಗಳನ್ನು ಏಕಗವಾಕ್ಷಿ ವ್ಯವಸ್ಥೆ ಅಡಿ ಏಕೀಕೃತ ವಿಲೇವಾರಿಗೆ ಕ್ರಮ ಕೈಗೊಳ್ಳಬೇಕು. ಹಾಗೆಯೇ, ಮಾಲಿನ್ಯ ನಿಯಂತ್ರಣ ಮಂಡಳಿ ಮತ್ತು ಅಗ್ನಿಶಾಮಕ ಇಲಾಖೆ ಅನುಮೋದನೆಗಳು ವಿಳಂಬವಾಗುತ್ತಿವೆ. ಅದನ್ನು ತ್ವರಿತಗೊಳಿಸಬೇಕು. ಅದಕ್ಕಾಗಿ ಮಂಡಳಿಯ ನಿಯಮಾವಳಿಯಲ್ಲಿ ಅಗತ್ಯ ಬದಲಾವಣೆ ಮಾಡಬೇಕು. ಎಲ್ಲ ಇಲಾಖೆಗಳಿಗೂ ಅನುಮೋದನೆ ನೀಡುವ ಕಾಲಮಿತಿ ಮರುನಿಗದಿ ಮಾಡಬೇಕು. ಕಾಲಮಿತಿಯಲ್ಲಿ ಅನುಮೋದನೆ ನೀಡದ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಸೂಚಿಸಿದರು.
ಕಳೆದ ಜಾಗತಿಕ ಬಂಡವಾಳ ಹೂಡಿಕೆದಾರರ ಸಮಾವೇಶ
ಕಳೆದ ಜಾಗತಿಕ ಬಂಡವಾಳ ಹೂಡಿಕೆದಾರರ ಸಮಾವೇಶದಲ್ಲಿ 10.27 ಲಕ್ಷ ಕೋಟಿ ರು. ಹೂಡಿಕೆ ಆಕರ್ಷಿಸಲಾಗಿದ್ದು, ಶೇ.60ರಷ್ಟು ಹೂಡಿಕೆಗಳು ಅನುಷ್ಠಾನ ಹಂತದಲ್ಲಿವೆ. ಸುಮಾರು 1.5 ಲಕ್ಷ ಕೋಟಿ ರು.ಗೂ ಹೆಚ್ಚಿನ ಬಂಡವಾಳ ಹೂಡಿಕೆ ಪ್ರಸ್ತಾವನೆಗಳು ವಿವಿಧ ಹಂತದಲ್ಲಿವೆ. ಸುಪ್ರೀಂಕೋರ್ಟ್ ಸೇರಿ ನ್ಯಾಯಾಲಯಗಳ ಆದೇಶ, ಸೂಚನೆ ನೆಪವೊಡ್ಡಿ ಅಧಿಕಾರಿಗಳು ಕೂರಬಾರದು. ಬೇರೆ ರಾಜ್ಯಗಳಿಗಾಗದ ಸಮಸ್ಯೆ ನಮಗೆ ಮಾತ್ರ ಆಗುತ್ತದೆ ಎನ್ನುವ ನೆಪ ಹೇಳಿಕೊಂಡು ಕೂತರೆ ಕ್ರಮ ಜರುಗಿಸಲಾಗುವುದು ಎಂದು ಎಚ್ಚರಿಕೆ ನೀಡಿದರು.
ಈ ವೇಳೆ ಸಚಿವ ಪ್ರಿಯಾಂಕ್ ಖರ್ಗೆ, ತಮಿಳುನಾಡಿನಲ್ಲಿ 51 ಎಸ್‌ಇಝಡ್‌ಗಳಿದ್ದು, ಅವುಗಳಿಂದ ದೇಶದ ಉತ್ಪಾದನೆ ಮತ್ತು ಆರ್ಥಿಕತೆಗೆ ಶೇ. 8.9ರಷ್ಟು ಕೊಡುಗೆ ನೀಡಲಾಗುತ್ತಿದೆ. ಅದೇ ಕರ್ನಾಟಕದಲ್ಲಿ 37 ಎಸ್‌ಇಝಡ್‌ಗಳಿದ್ದು ಶೇ.8.2ರಷ್ಟು ಕೊಡುಗೆ ನೀಡಲಾಗುತ್ತಿದೆ. ಅದರಲ್ಲೂ ರಾಜ್ಯದ ಕೊಡುಗೆಯೇ ಹೆಚ್ಚಿದೆ. ಈ ರೀತಿಯ ಅನುಕೂಲಕರ ಪರಿಸ್ಥಿತಿಯನ್ನು ಅಧಿಕಾರಿಗಳು ಗಮನಿಸುತ್ತಿಲ್ಲ ಎಂದು ಮುಖ್ಯಮಂತ್ರಿ ಅವರ ಗಮನಕ್ಕೆ ತಂದರು.
ಅದಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು, ಕರ್ನಾಟಕ ದೇಶದಲ್ಲಿಯೇ ಪ್ರಗತಿಪರ ರಾಜ್ಯವಾಗಿದ್ದು, ಬಂಡವಾಳ ಹೂಡಿಕೆಗೆ ಇರುವ ಪೂರಕ ವಾತಾವರಣವನ್ನು ಮತ್ತಷ್ಟು ಉತ್ತಮಗೊಳಿಸಬೇಕು. ಯಾವುದೇ ಕಾರಣಕ್ಕೂ ಅನುಮೋದನೆ ನೀಡಿಕೆಯಲ್ಲಿ ವಿಳಂಬಕ್ಕೆ ಅವಕಾಶ ನೀಡಬಾರದು. ಈ ಕುರಿತು ಮುಖ್ಯ ಕಾರ್ಯದರ್ಶಿ ಅವರು ಎಲ್ಲ ಇಲಾಖೆಗಳಿಗೆ ಸೂಕ್ತ ನಿರ್ದೇಶನ ಜಾರಿಗೊಳಿಸಬೇಕು ಎಂದು ನಿರ್ದೇಶಿಸಿದರು.ಕೆಲಸದ ಅವಧಿ ಮರುನಿಗದಿ:
ಕೇಂದ್ರ ಸರ್ಕಾರ 2 ಪ್ರಮುಖ ಕಾರ್ಮಿಕ ಸುಧಾರಣೆಗಳ ಅನುಷ್ಠಾನವನ್ನು ಪ್ರಸ್ತಾಪಿಸಿದೆ. ಅದರಲ್ಲಿ ಕಾರ್ಮಿಕರ ಕೆಲಸದ ಅವಧಿ ಮರುನಿಗದಿಯ ಅಂಶವೂ ಇದೆ. ಹೀಗೆ ಕೆಲಸದ ಅವಧಿ ಮರುನಿಗದಿ ಮಾಡಬೇಕಾದ ಸಂದರ್ಭದಲ್ಲಿ ಕಾರ್ಮಿಕರ ಹಿತ ಗಮನದಲ್ಲಿಟ್ಟುಕೊಂಡು ನಿರ್ಧರಿಸಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ಸಚಿವರಾದ ಎಂ.ಬಿ. ಪಾಟೀಲ್, ಕೆ.ಜೆ.ಜಾರ್ಜ್, ಎಚ್.ಕೆ. ಪಾಟೀಲ್, ಪ್ರಿಯಾಂಕ್ ಖರ್ಗೆ, ಡಾ. ಎಂ.ಸಿ.ಸುಧಾಕರ್, ಸಂತೋಷ್ ಲಾಡ್, ಸರ್ಕಾರದ ಮುಖ್ಯ ಕಾರ್ಯದರ್ಶಿ ಡಾ.ಶಾಲಿನಿ ರಜನೀಶ್ ಇತರರಿದ್ದರು.
;Resize=(690,390))
)
;Resize=(128,128))
;Resize=(128,128))
;Resize=(128,128))
;Resize=(128,128))