ಸಾರಾಂಶ
ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ವಿವಿಧ ರೀತಿಯ ಸಬ್ಸಿಡಿ ಆಧಾರಿತ ಸಾಲ ಯೋಜನೆಗಳಿಗೆ ಸಂಬಂಧಿಸಿ ಫಲಾನುಭವಿಗಳಿಗೆ ವಿಳಂಬ ಧೋರಣೆ ಅನುಸರಿಸಬಾರದು ಎಂದು ಜಿ.ಪಂ. ಸಿಇಒ ಡಾ. ಆನಂದ್‌ರವರು ಜಿಲ್ಲೆಯ ವಿವಿಧ ಬ್ಯಾಂಕ್ ಅಧಿಕಾರಿಗಳಿಗೆ ನಿರ್ದೇಶನ ನೀಡಿದ್ದಾರೆ.
ಕನ್ನಡಪ್ರಭ ವಾರ್ತೆ ಮಂಗಳೂರು
ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ವಿವಿಧ ರೀತಿಯ ಸಬ್ಸಿಡಿ ಆಧಾರಿತ ಸಾಲ ಯೋಜನೆಗಳಿಗೆ ಸಂಬಂಧಿಸಿ ಫಲಾನುಭವಿಗಳಿಗೆ ವಿಳಂಬ ಧೋರಣೆ ಅನುಸರಿಸಬಾರದು ಎಂದು ಜಿ.ಪಂ. ಸಿಇಒ ಡಾ. ಆನಂದ್‌ರವರು ಜಿಲ್ಲೆಯ ವಿವಿಧ ಬ್ಯಾಂಕ್ ಅಧಿಕಾರಿಗಳಿಗೆ ನಿರ್ದೇಶನ ನೀಡಿದ್ದಾರೆ.ಉರ್ವಾಸ್ಟೋರ್‌ನ ಜಿಲ್ಲಾ ಪಂಚಾಯತ್‌ನ ನೇತ್ರಾವತಿ ಸಭಾಂಗಣದಲ್ಲಿ ಶನಿವಾರ ನಡೆದ ಜಿಲ್ಲಾ ಲೀಡ್ ಬ್ಯಾಂಕ್ ಸಭೆಯಲ್ಲಿ ಅವರು ವಿವಿಧ ಸರ್ಕಾರಿ ಯೋಜನೆಗಳಿಗೆ ಸಂಬಂಧಿಸಿ ಬ್ಯಾಂಕ್‌ಗಳ ಕಾರ್ಯನಿರ್ವಹಣೆಯ ವಿವರವನ್ನು ಪಡೆದುಕೊಂಡರು.ಸರ್ಕಾರದ ಸಬ್ಸಿಡಿ ಆಧಾರಿತ ಸಾಲ ಯೋಜನೆಗಳ ಮಂಜೂರಾತಿಯನ್ನು ಫಲಾನುಭವಿಗಳ ಸಿಬಿಲ್ ಸ್ಕೋರ್ ಕಾರಣದಿಂದ ವಿಳಂಬ ಅಥವಾ ತಡೆಹಿಡಿಯಲಾಗುತ್ತದೆ. ದುರ್ಬಲ ವರ್ಗಗಳಿಗೆ ನೀಡಲಾಗುವ ಈ ಸಬ್ಸಿಡಿ ಯೋಜನೆಗಳು ಇಂತಹ ಸಣ್ಣ ಪುಟ್ಟಕಾರಣಗಳಿಗಾಗಿ ಫಲಾನುಭವಿಗಳಿಂದ ವಂಚಿತವಾಗಬಾರದು. ಈ ಬಗ್ಗೆ ಬ್ಯಾಂಕ್‌ಗಳು ಗಮನ ಹರಿಸಬೇಕು ಎಂದು ಅವರು ಹೇಳಿದರು.ಮುದ್ರಾ ಯೋಜನೆಯಡಿ ಸಾಲ ವಿತರಣೆ: ಮುದ್ರಾ ಯೋಜನೆಯಡಿ 2024ರ ಏಪ್ರಿಲ್‌ನಿಂದ ಡಿಸೆಂಬರ್‌ವರೆಗೆ 47,570 ಖಾತೆಗಳಿಗೆ ಒಟ್ಟು 618.01 ಕೋಟಿ ರು. ಸಾಲ ವಿತರಿಸಲಾಗಿದೆ ಎಂದು ಲೀಡ್ ಬ್ಯಾಂಕ್ ವ್ಯವಸ್ಥಾಪಕಿ ಕವಿತಾ ಎನ್. ಶೆಟ್ಟಿ ತಿಳಿಸಿದರು.ಇದೇ ಅವಧಿಯಲ್ಲಿ ಪ್ರಧಾನ ಮಂತ್ರಿ ಜನ್‌ಧನ್ ಯೋಜನೆಯಡಿ 37,161 ಉಳಿತಾಯ ಖಾತೆಗಳನ್ನು ತೆರೆಯಲಾಗಿದೆ. ಪ್ರಧಾನ ಮಂತ್ರಿಜೀವನ್ ಜ್ಯೋತಿ ವಿಮಾ ಯೋಜನೆಯಡಿ 35,904 ಮಂದಿಯನ್ನು ನೋಂದಣಿ ಮಾಡಲಾಗಿದೆ. ಪ್ರಧಾನ ಮಂತ್ರಿ ಸುರಕ್ಷಾ ಬಿಮಾ ಯೋಜನೆಯಡಿ 90,321 ಮಂದಿಯನ್ನು ನೋಂದಣಿ ಮಾಡಲಾಗಿದೆ. ಅಟಲ್ ಪಿಂಚಣಿ ಯೋಜನೆಯಡಿ 25,272 ನೋಂದಣಿಯಾಗಿದ್ದು, ಪಿಎಂ ಸ್ವ ನಿಧಿ ಯೋಜನೆಯಡಿ ಜಿಲ್ಲೆಯಲ್ಲಿ 2025ರ ಫೆಬ್ರವರಿ 28ರವರೆಗೆ ಪ್ರಥಮ ಕಂತಿನಲ್ಲಿ 12,873, ದ್ವಿತೀಯ ಕಂತಿನಲ್ಲಿ 4,790 ಹಾಗೂ ತೃತೀಯ ಕಂತಿನಲ್ಲಿ 1,666 ಫಲಾನುಭವಿಗಳಿಗೆ ಸಾಲ ಮಂಜೂರಾತಿ ಮಾಡಲಾಗಿದೆ ಎಂದು ಅವರು ವಿವರಿಸಿದರು.ಡಿಸೆಂಬರ್ ಅಂತ್ಯಕ್ಕೆ ಜಿಲ್ಲೆಯ ಬ್ಯಾಂಕ್‌ಗಳ ಒಟ್ಟು ವ್ಯವಹಾರ 1,26,718.85 ಕೋಟಿ ರು.ಗಳಾಗಿದ್ದು, ಇದು ಶೇ. 10.58 ರಷ್ಟು ಬೆಳವಣಿಗೆ ಸಾಧಿಸಿದೆ. ಡಿಸೆಂಬರ್ ಅಂತ್ಯಕ್ಕೆ ಆದ್ಯತಾ ವಲಯ ಮತ್ತು ಅದ್ಯತೇತರ ವಲಯಗಳಲ್ಲಿ ಒಟ್ಟು 37,663.20 ಕೋಟಿ ರು. ಸಾಲ ವಿತರಿಸಲಾಗಿದೆ. ಕೃಷಿ ಕ್ಷೇತ್ರಕ್ಕೆ 8,898.58 ಕೋಟಿ ರು. ಸಾಲ ವಿತರಣೆಯಾಗಿದ್ದು, ತ್ರೈಮಾಸಿಕ ಗುರಿ 11,187.85 ಕೋಟಿ ರು.ಗಳಲ್ಲಿ ಶೇ. 79.54ರಷ್ಟು ನಿರ್ವಹಣೆ ಸಾಧಿಸಲಾಗಿದೆ. ಅತಿ ಸಣ್ಣ, ಸಣ್ಣ ಮತ್ತು ಮದ್ಯಮ ಉದ್ದಿಮೆಯಡಿ 5,627.92 ಕೋಟಿ ರು. ಸಾಲ ವಿತರಣೆಯಾಗಿದ್ದು, ತ್ರೈಮಾಸಿಕ ಗುರಿಯಾದ 6,011.79 ಕೋಟಿಯ ಶೇ. 93.61ರಷ್ಟು ನಿರ್ವಹಣೆ ಸಾಧಿಸಲಾಗಿದೆ. ಶಿಕ್ಷಣ ಸಾಲ ಕ್ಷೇತ್ರದಲ್ಲಿ 124.85 ಕೋಟಿ ರು. ಸಾಲ ವಿತರಣೆಯಾಗಿದೆ. ಗೃಹ ಸಾಲ ಕ್ಷೇತ್ರದಲ್ಲಿ 253.34 ಕೋಟಿ ರು. ಸಾಲ ವಿತರಣೆಯಾಗಿದೆ ಎಂದು ಅವರು ವಿವರಿಸಿದರು.ಆರ್‌ಬಿಐ ಬೆಂಗಳೂರಿನ ಎಜಿಎಂ ಅರುಣ್ ಕುಮಾರ್ ಪಿ., ನಬಾರ್ಡ್ ನಿರ್ದೇಶಕಿ ಸಂಗೀತಾ ಇದ್ದರು.