ಬೀಜ, ಗೊಬ್ಬರ ಪೂರೈಕೆಯಲ್ಲಿ ಸಮಸ್ಯೆ ಆಗಬಾರದು

| Published : May 25 2024, 12:46 AM IST

ಸಾರಾಂಶ

ಪ್ರತಿಯೊಂದು ಗೊಬ್ಬರದ ಬೆಲೆಗಳನ್ನು ಅಂಗಡಿಗಳ ಮುಂದೆ ದರ ಪಟ್ಟಿ ಹಾಕಿ ಪ್ರಕಟಿಸಬೇಕು. ಯಾವುದೇ ಕಾರಣಕ್ಕೂ ನಿಗದಿತ ಬೆಲೆಗಿಂತ ಹೆಚ್ಚಿನ ಬೆಲೆಗೆ ರಸಗೊಬ್ಬರಗಳನ್ನು ಮಾರಾಟ ಮಾಡಿದರೆ ಕ್ರಮ ಕೈಗೊಳ್ಳಲಾಗುವುದು

ಕನ್ನಡಪ್ರಭ ವಾರ್ತೆ ಚಿಕ್ಕಬಳ್ಳಾಪುರ

ಜಿಲ್ಲಾದ್ಯಂತ ಉತ್ತಮ ಮಳೆಯಾಗುತ್ತಿರುವ ಹಿನ್ನೆಲೆ ಎಲ್ಲೆಡೆ ಬಿತ್ತನೆಗೆ ಸಿದ್ಧತೆಗಳು ನಡೆಯುತ್ತಿದ್ದು, ಸಮರ್ಪಕವಾದ ರಸಗೊಬ್ಬರ, ಕ್ರಿಮಿನಾಶಕ ಮತ್ತು ಬಿತ್ತನೆ ಬೀಜ ಪೂರೈಕೆಗೆ ಸಂಬಂಧಿಸಿದಂತೆ ಕೃಷಿ ಇಲಾಖೆ ಜಂಟಿ ನಿರ್ದೇಶಕಿ ಜಾವಿದಾ ನಾಸೀಮಾ ಖಾನಂ ನೇತತ್ವದ ಕೃಷಿ ಇಲಾಖೆ ಅಧಿಕಾರಿಗಳು ಮಾರಾಟ ಮಳಿಗೆಗಳಿಗೆ ಭೇಟಿ ನೀಡಿ ಪರಿಶೀಲಿಸಿದರು.ಜಿಲ್ಲಾ ಕೇಂದ್ರ ಸೇರಿದಂತೆ ಹಲವೆಡೆ ಅಂಗಡಿಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ ಅಧಿಕಾರಿಗಳು ಬಿತ್ತನೆ ಸಮಯದಲ್ಲಿ ಯಾವುದೇ ಸಮಸ್ಯೆಯಾಗದಂತೆ ನಿರ್ವಹಣೆ ಮಾಡಬೇಕು. ಅಗತ್ಯಕ್ಕೆ ತಕ್ಕಂತೆ ರಸಗೊಬ್ಬರ ಮತ್ತು ಬಿತ್ತನೆ ಬೀಜಗಳನ್ನು ತರಿಸಿಕೊಂಡು ಯಾವುದೇ ಕೊರತೆ ಬಾರದಂತೆ ನೋಡಿಕೊಳ್ಳಿ ಎಂದು ಸೂಚಿಸಿದರು. ರಸಗೊಬ್ಬರ ದಾಸ್ತಾನು ಮಾಹಿತಿ

ನಂತರ ಸುದ್ದಿಗಾರರ ಜತೆ ಮಾತನಾಡಿದ ಅವರು, ಕೆಲವೇ ದಿನಗಳಲ್ಲಿ ಪೂರ್ವ ಮುಂಗಾರು ಉತ್ತಮವಾಗಿ ಆಗುತ್ತಿದ್ದು, ಬಿತ್ತನೆ ಕಾರ್ಯ ಚುರುಕುಗೊಳ್ಳುವ ಹಿನ್ನೆಲೆ ಯಾರೂ ನಿರ್ಲಕ್ಷ್ಯ ಮಾಡುವಂತಿಲ್ಲ. ಅಂಗಡಿಯಲ್ಲಿ ಲಭ್ಯವಿರುವ ರಸಗೊಬ್ಬರದ ಮಾಹಿತಿ ರೈತರಿಗೆ ನೀಡಬೇಕು. ಪ್ರತಿಯೊಂದು ಗೊಬ್ಬರದ ಬೆಲೆಗಳನ್ನು ಅಂಗಡಿಗಳ ಮುಂದೆ ದರ ಪಟ್ಟಿ ಹಾಕಿ ಪ್ರಕಟಿಸಬೇಕು. ಯಾವುದೇ ಕಾರಣಕ್ಕೂ ನಿಗದಿತ ಬೆಲೆಗಿಂತ ಹೆಚ್ಚಿನ ಬೆಲೆಗೆ ರಸಗೊಬ್ಬರಗಳನ್ನು ಮಾರಾಟ ಮಾಡಬಾರದು. ಒಂದು ವೇಳೆ ಹೆಚ್ಚಿನ ದರಕ್ಕೆ ಮಾರಿದರೆ ಅಂತಹ ಅಂಗಡಿಗಳ ಮಾಲಿಕರ ಮೇಲೆ ಕಾನೂನು ಕ್ರಮ ಜರುಗಿಸಲಾಗುವುದು ಎಂದು ಎಚ್ಚರಿಸಿದರು.ಕೃಷಿ ಇಲಾಖೆಗೆ ಮಾಹಿತಿ ನೀಡಿ

ಉತ್ತಮ ಮಳೆಯಾಗುತ್ತಿರುವ ಹಿನ್ನೆಲೆ ಬಿತ್ತನೆಗೆ ಅನುಗುಣವಾಗಿ ರಸಗೊಬ್ಬರ ಮತ್ತು ಬಿತ್ತನೆಬೀಜ ರೈತರಿಗೆ ದೊರೆಯುವಂತೆ ನೋಡಿಕೊಳ್ಳಬೇಕು. ಹೀಗಾಗಿ ರಸಗೊಬ್ಬರ ಮತ್ತು ಬಿತ್ತನೆ ಬೀಜ ನಿರ್ವಹಣೆ ಕುರಿತು ಪ್ರತಿನಿತ್ಯ ಕೃಷಿ ಇಲಾಖೆಗೆ ಮಾಹಿತಿ ನೀಡಬೇಕು. ಕೊರತೆ ಇದ್ದಲ್ಲಿ ತಕ್ಷಣ ಬೇಡಿಕೆ ಸಲ್ಲಿಸಿ ಅಗತ್ಯಕ್ಕೆ ತಕ್ಕಂತೆ ರಸಗೊಬ್ಬರ ಮತ್ತು ಬಿತ್ತನೆ ಬೀಜಗಳನ್ನು ತರಿಸಿಕೊಳ್ಳಬೇಕು. ರಸಗೊಬ್ಬರ, ಬೀಜ ಖರೀದಿಸುವ ರೈತರಿಗೆ ರಸೀದಿಯನ್ನು ತಪ್ಪದೇ ರಶೀದಿ ನೀಡಬೇಕು ಎಂದು ತಾಕೀತು ಮಾಡಿದರು.ಕಳಪೆ ಬೀಜ ನೀಡದಂತೆ ಎಚ್ಚರಿಕೆ

ಹಲವು ರಸಗೊಬ್ಬರ ಮತ್ತು ಬಿತ್ತನೆ ಬೀಜದ ಅಂಗಡಿಗಳಿಗೆ ಭೇಟಿ ನೀಡಿದ ಅಧಿಕಾರಿಗಳು ಅಂಗಡಿ ಮತ್ತು ಗೋಡೌನ್‌ನಲ್ಲಿರುವ ರಸಗೊಬ್ಬರಗಳ ಪರಿಶೀಲನೆ ನಡೆಸಿದರು. ಬಿತ್ತನೆ ಬೀಜದ ಅಂಗಡಿಗಳ ಮಾಲೀಕರಿಗೆ ಗುಣಮಟ್ಟದ ಬಿತ್ತನೆ ಬೀಜ ವಿತರಿಸಬೇಕು. ಕಳಪೆ ಬಿತ್ತನೆ ಬೀಜ ವಿತರಿಸಿ ಮುಂದೆ ಸಮಸ್ಯೆಯಾದರೆ ನಿರ್ದಾಕ್ಷಿಣ್ಯ ಕ್ರಮ ಜರುಗಿಸಲಾಗುವುದು ಎಂದು ಎಚ್ಚರಿಸಿದರು.ಪರಿಶೀಲನಾ ಸಮಿತಿಯಲ್ಲಿ ಕೃಷಿ ಇಲಾಖೆ ಉಪನಿರ್ದೇಶಕಿ ದೀಪಶ್ರೀ, ವಿಚಕ್ಷಣ ದಳದ ಪ್ರಮೋದ್, ಉಪ ನಿರ್ದೇಶಕ ಶ್ರೀನಿವಾಸ್ ಮತ್ತಿತರರು ಇದ್ದರು.ಸಿಕೆಬಿ-3 ಚಿಕ್ಕಬಳ್ಳಾಪುರದಲ್ಲಿ ಕೃಷಿ ಇಲಾಖೆ ಜಂಟಿನಿರ್ದೇಶಕಿ ಜಾವಿದಾ ನಾಸೀಮಾ ಖಾನಂ ನೇತತ್ವದಲ್ಲಿ ಇಲಾಖೆ ಅಧಿಕಾರಿಗಳು ಮಾರಾಟ ಮಳಿಗೆಗಳಿಗೆ ಭೇಟಿ ನೀಡಿ ಪರಿಶೀಲಿಸಿದರು.