ಸಾರಾಂಶ
ವ್ಯಕ್ತಿಯೊಬ್ಬರ ಕಣ್ಣಿನ ಗುಡ್ಡೆಯಲ್ಲಿ ಬೆಳೆಯುತ್ತಿದ್ದ ಸುಮಾರು 10 ಸೆಂ. ಮೀ. ಉದ್ದದ ತೆಳ್ಳನೆಯ ಜೀವಂತ ಹುಳುವನ್ನು ಅತ್ಯಂತ ಸೂಕ್ಷ್ಮ ಶಸ್ತ್ರ ಚಿಕಿತ್ಸಯೆ ಮೂಲಕ ಹೊರತೆಗೆಯಲಾಯಿತು.
ಭಾಗಮಂಡಲ ಸಮೀಪದ ಚೇರಂಬಾಣೆ ಗ್ರಾಮದ ನಿವಾಸಿ, ನಿವೃತ್ತ ಸೈನಿಕರೊಬ್ಬರಿಗೆ ಕಳೆದ ಒಂದು ತಿಂಗಳಿನಿಂದ ಕಣ್ಣಿನಲ್ಲಿ ತುರಿಕೆ ಕಾಣಿಸಿಕೊಂಡಿತ್ತು. ಈ ಸಮಸ್ಯೆ ದಿನದಿಂದ ದಿನಕ್ಕೆ ಹೆಚ್ಚಿದ್ದ ಹಿನ್ನೆಲೆಯಲ್ಲಿ ಇವರು ಇದೇ ಸೆ. 12ರಂದು ನಗರದ ಇಕ್ಷಾ ಆಸ್ಪತ್ರೆಯ ಡಾ. ಎ.ಜಿ. ಚಿಣ್ಣಪ್ಪ ಅವರನ್ನು ಸಂಪರ್ಕಿಸಿದ್ದರು. ತಪಾಸಣೆ ಸಮಯ ಕಣ್ಣಿನ ಬಿಳಿಯ ಭಾಗ ಉಬ್ಬಿಕೊಂಡಿರುವುದು ಮತ್ತು ಇದು ಪದೇ ಪದೇ ಚಲಿಸಿದಂತೆ ಭಾಸವಾಗುತ್ತಿದ್ದುದನ್ನು ವೈದ್ಯರು ಸೂಕ್ಷ್ಮವಾಗಿ ಗಮನಿಸಿದ್ದರು. ಈ ಭಾಗವನ್ನು ಸೂಕ್ಷ್ಮ ಸ್ಕ್ಯಾನ್ ಮೂಲಕ ಪರಿಶೀಲಿಸಿದಾಗ ಇಲ್ಲಿ ಜೀವಂತ ಹುಳು ಇರುವುದು ವೈದ್ಯರ ಗಮನಕ್ಕೆ ಬಂದಿತ್ತು. ಶಸ್ತ್ರಚಿಕಿತ್ಸೆ ಅನಿವಾರ್ಯವಾಗಿರುವುದನ್ನು ರೋಗಿಗೆ ವಿವರಿಸಿ ಇದನ್ನು ನೆರವೇರಿಸಿದ ತಜ್ಞ ವೈದ್ಯರಾದ ಚಿಣ್ಣಪ್ಪ, ಕಣ್ಣಿನ ಗುಡ್ಡೆಯಿಂದ ಹುಳುವನ್ನು ಹೊರತೆಗೆದಿದ್ದಾರೆ.ಕಣ್ಣಿನಿಂದ ಹೊರ ತೆಗೆದಿರುವ ಈ ಹುಳು ಆಫ್ರಿಕಾದಲ್ಲಿ ಕಂಡುಬರುವ ನೊಣದ ಮೊಟ್ಟೆಯಿಂದ ಹೊರಬರುವ ಲೋವಾ ಎನ್ನುವ ಹುಳು ಎನ್ನುವುದು ಖಚಿತವಾಗಿದೆ.