ಸಾರಾಂಶ
ಕನ್ನಡಪ್ರಭ ವಾರ್ತೆ ಮದ್ದೂರು
ಮುಖ್ಯಮಂತ್ರಿ ಹುದ್ದೆಗೆ ಯಾವುದೇ ಕುಸ್ತಿ ನಡೆದಿಲ್ಲ. ಸಿದ್ದರಾಮಯ್ಯ ಮತ್ತು ಡಿ.ಕೆ.ಶಿವಕುಮಾರ್ ಅವರು ಒಟ್ಟಿಗೆ ಕೆಲಸ ಮಾಡುತ್ತಿದ್ದಾರೆ ಎಂದು ಕೃಷಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ ತಿಳಿಸಿದರು.ಪಟ್ಟಣದ ಶಿವಪುರದ ಖಾಸಗಿ ಹೋಟೆಲ್ ನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವರು, ಸಿಎಂ - ಡಿಸಿಎಂ ಇಬ್ಬರೂ ಸರ್ಕಾರದ ಆಡಳಿತ, ಪಕ್ಷ ಸಂಘಟನೆ ಸೇರಿ ಎಲ್ಲವನ್ನೂ ಒಟ್ಟಿಗೆ ಸೇರಿ ಮಾಡುತ್ತಿದ್ದಾರೆ. ನಾನು ಹತ್ತಿರದಿಂದ ನೋಡಿದ ಮಾಹಿತಿ ಪ್ರಕಾರ ಇಬ್ಬರಲ್ಲಿಯೂ ಯಾವುದೇ ಭಿನ್ನಾಭಿಪ್ರಾಯವಿಲ್ಲ ಎಂದು ಸ್ಪಷ್ಟನೆ ನೀಡಿದರು.
ಕಾರ್ಯಕ್ರಮಗಳಲ್ಲಿ ಕೆಲವು ಆಕಸ್ಮಿಕ ಘಟನೆಗಳು ನಡೆಯುತ್ತವೆ. ಇದನ್ನೆ ಮಾಧ್ಯಮದವರು ದೊಡ್ಡದಾಗಿ ಬಿಂಬಿಸುತ್ತಿದ್ದಾರೆ. ರಾಷ್ಟ್ರೀಯ ನಾಯಕರಾದ ಮಲ್ಲಿಕಾರ್ಜುನ ಖರ್ಗೆ, ರಾಹುಲ್ ಗಾಂಧಿ, ವೇಣುಗೋಪಾಲ್, ಸುರ್ಜೇವಾಲ ಅವರು ಎಲ್ಲವನ್ನೂ ಗಮನಿಸುತ್ತಿದ್ದಾರೆ. ಪಕ್ಷ ಮತ್ತು ಸರ್ಕಾರದಲ್ಲಿ ಯಾವುದೇ ತೊಂದರೆಯಾದರೂ ಎಲ್ಲವನ್ನೂ ನಿಭಾಯಿಸುವ ಶಕ್ತಿ ಹೈಕಮಾಂಡ್ ಗಿದೆ ಎಂದರು.ಮೈಸೂರಿನಲ್ಲಿ ನಡೆದ ಸಾಧನಾ ಸಮಾವೇಶ ಮುಖ್ಯಮಂತ್ರಿಗಳ ಶಕ್ತಿ ಪ್ರದರ್ಶನವಲ್ಲ. ಸರ್ಕಾರದ 2 ವರ್ಷದ ಸಾಧನೆ, ಗ್ಯಾರಂಟಿ ಯೋಜನೆಗಳು ಹಾಗೂ ಇತರೆ ಕಾರ್ಯಕ್ರಮಗಳ ಕುರಿತು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲೂ ಕಾರ್ಯಕ್ರಮಗಳನ್ನು ನಡೆಸಲಾಗುತ್ತಿದೆ. ಕಾರ್ಯಕ್ರಮದ ಬಗ್ಗೆ ಡಿಸಿಎಂ ಡಿಕೆ ಶಿವಕುಮಾರ್ ಅವರಿಗೆ ಮಾಹಿತಿ ನೀಡಲಾಗಿತ್ತು. ಆದರೆ, ಮೈಸೂರಿನ ಕಾರ್ಯಕ್ರಮವನ್ನು ಮಾಧ್ಯಮದವರು ಶಕ್ತಿ ಪ್ರದರ್ಶನದಂತೆ ಪರಿವರ್ತನೆ ಮಾಡುತ್ತಿದ್ದಾರೆ ಎಂದು ಹೇಳಿದರು.
ರಾಜ್ಯದಲ್ಲಿ ಮುಖ್ಯಮಂತ್ರಿ ಸ್ಥಾನಕ್ಕೆ ಯಾವುದೇ ಸ್ಪರ್ಧೆ ನಡೆಯುತ್ತಿಲ್ಲ. ಇದನ್ನು ಹೈಕಮಾಂಡ್ - ನಾಯಕರು ತೀರ್ಮಾನಿಸುತ್ತಾರೆ. ಇದಕ್ಕಾಗಿ ಶಾಸಕರ ಬಲ ಪ್ರದರ್ಶನ ಮಾಡುವ ಅವಶ್ಯಕತೆ ಇಲ್ಲ ಎಂದರು.ಕಾಂಗ್ರೆಸ್ ಸರ್ಕಾರ ರಾಜ್ಯದಲ್ಲಿ 2 ವರ್ಷ ಆಡಳಿತವನ್ನು ಯಶಸ್ವಿಯಾಗಿ ಪೂರೈಸಿದೆ. 3ನೇ ವರ್ಷಕ್ಕೆ ಕಾಲಿಟ್ಟಿದೆ. ಈಗ ಮಧ್ಯಂತರ ಚುನಾವಣೆ ಇಲ್ಲ. ವಿಜಯೇಂದ್ರ ಹೇಳಿದಾಕ್ಷಣ ಚುನಾವಣೆ ಮಾಡುವುದಕ್ಕೆ ಆಗಲ್ಲ ಎಂದು ತಿರುಗೇಟು ನೀಡಿದರು.
ಬಿಜೆಪಿಯವರು ಉತ್ತಮ ಆಡಳಿತ ನೀಡದ ಕಾರಣ ರಾಜ್ಯದ ಜನರು ನಮಗೆ 139 ಸ್ಥಾನ ಕೊಟ್ಟಿದ್ದಾರೆ. ಕೇಂದ್ರದಲ್ಲಿ 10 ವರ್ಷ ಆಡಳಿತ ನಡೆಸಿದ ಬಿಜೆಪಿ ಸರ್ಕಾರದಿಂದ ಜಿಎಸ್ ಟಿ , ಟ್ಯಾಕ್ಸ್ ಪರಿಸ್ಥಿತಿ ಏನಾಗಿದೆ. ಪ್ರಧಾನಿ ನರೇಂದ್ರ ಮೋದಿಗೆ 75 ವರ್ಷ ತುಂಬಿದೆ. ವಿಜಯೇಂದ್ರರನ್ನು ರಾಜ್ಯಾಧ್ಯಕ್ಷರಾಗಿ ಮುಂದುವರಿಸುವ ಬಗ್ಗೆ ಸ್ಪಷ್ಟತೆ ಇಲ್ಲ. ಮೊದಲು ಅವರ ಪಕ್ಷದ ಸಮಸ್ಯೆ ಬಗ್ಗೆ ಉತ್ತರಿಸಲಿ. ಅಲ್ಲಿ ಅವರ ಪ್ರಭಾವ ತೋರಿಸಲಿ ಎಂದು ಸಲಹೆ ನೀಡಿದರು.ಡಿಸಿಸಿ ಬ್ಯಾಂಕ್ ಅಧ್ಯಕ್ಷ ಕೆ.ಸಿ.ಜೋಗಿಗೌಡ , ಕೊಪ್ಪ ಗ್ರಾಮಾಂತರ ಬ್ಲಾಕ್ ಅಧ್ಯಕ್ಷ ಕೆ.ಎನ್.ದಿವಾಕರ್, ಬ್ಲಾಕ್ ಕಾಂಗ್ರೆಸ್ ಮಾಜಿ ಅಧ್ಯಕ್ಷ ಕದಲೂರು ರಾಮಕೃಷ್ಣ, ಪುರಸಭೆ ಮಾಜಿ ಅಧ್ಯಕ್ಷ ಎಂ.ಪಿ.ಅಮರಬಾಬು ಹಾಗೂ ಕಾಂಗ್ರೆಸ್ ಮುಖಂಡರು ಇದ್ದರು.