- ಶಾಸಕರು ಸ್ವಂತ ದುಡ್ಡಿನಲ್ಲಿ ವಿದೇಶಕ್ಕೆ ಹೋದರೆ ಯಾರೂ ತಡೆಯೋಕೆ ಆಗಲ್ಲ: ಸಚಿವ ಹೇಳಿಕೆ
- - -ಕನ್ನಡಪ್ರಭ ವಾರ್ತೆ ದಾವಣಗೆರೆ ವಿದೇಶ ಪ್ರವಾಸವು ಪೂರ್ವನಿಗದಿ ಆಗಿತ್ತೆಂದು ಶಾಸಕರು ಹೇಳಿದ್ದು, ಸ್ವತಃ ಶಾಸಕರು ತಮ್ಮ ದುಡ್ಡಿನಲ್ಲಿ ವಿದೇಶಕ್ಕೆ ಹೋಗುತ್ತೇವೆ ಎಂದಾಗ ಯಾರೂ ತಡೆಯೋಕೆ ಆಗುವುದಿಲ್ಲ ಎಂದು ಗಣಿ ಮತ್ತು ಭೂ ವಿಜ್ಞಾನ, ತೋಟಗಾರಿಕೆ ಸಚಿವ ಎಸ್.ಎಸ್. ಮಲ್ಲಿಕಾರ್ಜುನ ಹೇಳಿದರು.
ನಗರದಲ್ಲಿ ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮುಖ್ಯಮಂತ್ರಿ ಬದಲಾವಣೆ ವಿಚಾರವಾಗಿ ನಾನು ಎಲ್ಲಿಯೂ ಮಧ್ಯ ಪ್ರವೇಶಿಸಿಲ್ಲ. ಈ ವಿಚಾರವಾಗಿ ಎಲ್ಲಿಯೂ ಮಾತನಾಡಿಲ್ಲ. ಸಚಿವ ಸ್ಥಾನಕ್ಕೆ ನಾನು ರಾಜೀನಾಮೆ ನೀಡುತ್ತೇನೆಂದು ಯಾವುದೋ ಮಾಧ್ಯಮದಲ್ಲಿ ಬಂದಿರುವುದನ್ನೇ ದೊಡ್ಡದಾಗಿ ಬಿಂಬಿಸಿದ್ದೀರಿ. ಆ ರೀತಿ ರಾಜೀನಾಮೆ ಇಲ್ಲ. ಅದೆಲ್ಲಾ ಸುಳ್ಳು ಎಂದು ಎಸ್ಸೆಸ್ಸೆಂ ಸ್ಪಷ್ಚಪಡಿಸಿದರು.ದುಗ್ಗಮ್ಮನ ಹಬ್ಬ ಆದ್ಮೆಲೆನೇ ಚುನಾವಣೆ ಮಾತು:
ನಾನು ಅವತ್ತೇ ಹೇಳಿದ್ದೆ. ಮೊದಲು ದುಗ್ಗಮ್ಮನ ಹಬ್ಬ ಮಾಡೋಣ. ಹಬ್ಬ ಮುಗಿದ ನಂತರ ಎಲ್ಲರೂ ಆರಾಮವಾಗಿ ಕುಳಿತು, ದಕ್ಷಿಣಕ್ಕೆ ಸೂಕ್ತ, ಗೆಲ್ಲುವ ಅಭ್ಯರ್ಥಿ ಯಾರೆಂದು ಚರ್ಚಿಸಿ, ನಿಲ್ಲಿಸಿ ಗೆಲ್ಲಿಸೋಣ ಎಂದು ಜಿಲ್ಲಾ ಉಸ್ತುವಾರಿ ಸಚಿವ ಎಸ್.ಎಸ್.ಮಲ್ಲಿಕಾರ್ಜುನ ಉಪ ಚುನಾವಣೆ ಬಗ್ಗೆ ತಮ್ಮ ನಿವಾಸ ಶಿವ ಪಾರ್ವತಿಯಲ್ಲಿ ಸೋಮವಾರ ಸುದ್ದಿಗಾರರಿಗೆ ಹೇಳಿದರು.
ನಮ್ಮ ಮುಖಂಡರು, ಕಾರ್ಯಕರ್ತರು ಸಹ ದುಗ್ಗಮ್ಮನ ಹಬ್ಬ ಮುಗಿಯಲಿ ಅಂತಾ ಹೇಳಿದ್ದಾರೆ. ಕಾಂಗ್ರೆಸ್ ಜಿಲ್ಲಾಧ್ಯಕ್ಷ ಎಚ್.ಬಿ.ಮಂಜಪ್ಪ ಸಹ ಹೊನ್ನಾಳಿ ಕ್ಷೇತ್ರದ ಟಿಕೆಟ್ ಕೇಳುತ್ತಾರೆ. ಎಲ್ಲ ಮುಖಂಡರು, ಕಾರ್ಯಕರ್ತರನ್ನು ಕೂಡಿಸಿಕೊಂಡು, ಸಮಾಧಾನದಿಂದ ಚರ್ಚಿಸಿ, ಮಾತನಾಡಬೇಕು. ಮೊದಲು ದುಗ್ಗಮ್ಮನ ಹಬ್ಬ ಮುಗಿಯಲಿ ಎಂದರು. ಈ ಹಿಂದೆ ಡಾ.ಪ್ರಭಾ ಮಲ್ಲಿಕಾರ್ಜುನ ಅವರನ್ನು ಚುನಾವಣೆಗೆ ನಿಲ್ಲಿಸೋದಿಲ್ಲ ಎಂದು ಹೇಳಿಕೊಂಡೇ, ಸಂಸದರಾಗಿ ಮಾಡಿದ್ದೀರಿ ಎಂಬ ಪ್ರಶ್ನೆಗೆ ಹಂಗೆ ಮತ್ತೆ, ಅದು ರಾಜಕೀಯ ಎಂದು ನಗುತ್ತಲೇ ಹೇಳಿದರು.
ದಕ್ಷಿಣ ಕ್ಷೇತ್ರದ ಉಪ ಚುನಾವಣೆ ಹಿನ್ನೆಲೆ ಕೆಲವರು ಅಲ್ಲಲ್ಲಿ ಸಭೆಗಳನ್ನು ಮಾಡುತ್ತಿರುವುದೇ ಅನಾವಶ್ಯಕ. ಅಲ್ಲಿ ಸಭೆ ಮಾಡಿದರೆಂದು ಇವರಿಗೆ, ಬೇರೆಯವರಿಗೆ ಸಭೆ ಮಾಡುವುದಕ್ಕೆ ಬರುವುದಿಲ್ಲವಾ? ಇಂತಹವೆಲ್ಲಾ ಕಾಂಗ್ರೆಸ್ ಪಕ್ಷದಲ್ಲಿ ಬಹಳ ದಿನ ನಡೆಯುವುದಿಲ್ಲ. ಏನು ವಾಸ್ತವಾಂಶ ಇದೆಯೆಂಬ ಕುರಿತು ಚರ್ಚಿಸಬೇಕು. ಹಾಗಾಗಿ ನಾವು ಸದ್ಯ ದುಗ್ಗಮ್ಮನ ಹಬ್ಬ ಮಾಡುವತ್ತ ಗಮನ ಹರಿಸೋಣ ಎಂದರು.ಈ ಸಂಧರ್ಭ ಬಯಲು ಸೀಮೆ ಅಭಿವೃದ್ಧಿ ಮಂಡಳಿ ಅಧ್ಯಕ್ಷ ಎಚ್.ಬಿ.ಮಂಜಪ್ಪ ಇತರರು ಇದ್ದರು.
- - --16ಕೆಡಿವಿಜಿ36, 37.ಜೆಪಿಜಿ: ದಾವಣಗೆರೆಯಲ್ಲಿ ಸಚಿವ ಎಸ್.ಎಸ್. ಮಲ್ಲಿಕಾರ್ಜುನ ಸುದ್ದಿಗಾರರೊಂದಿಗೆ ಮಾತನಾಡಿದರು.