ಮಹದೇವಪ್ಪ ಎಂ. ಸ್ವಾಮಿ

ಶಿರಹಟ್ಟಿ: ತಾಲೂಕಿನ ಛಬ್ಬಿ ತಾಂಡಾದ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯ ಕಥೆ ಇದು.

ಈ ಸರ್ಕಾರಿ ಶಾಲೆಯ ಐದೂ ತರಗತಿಗೂ ಒಬ್ಬರೇ ಶಿಕ್ಷಕರು. ಇವರೂ ಕೂಡ ವರವಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಿಂದ ನಿಯೋಜನೆ ಆಗಿದ್ದಾರೆ. ಪಾಠ, ಪ್ರವಚನ, ಬಿಸಿಯೂಟ, ಸಂತೆ, ಕಚೇರಿ ಮಾಹಿತಿ ಒದಗಿಸುವ ಕೆಲಸ ಸೇರಿದಂತೆ ಎಲ್ಲವನ್ನೂ ನಿಭಾಯಿಸಿ ಮಕ್ಕಳಿಗೆ ಪಾಠ ಹೇಳಲು ಹೇಗೆ ಸಾಧ್ಯ ಎಂಬುದು ಪಾಲಕರ ಪ್ರಶ್ನೆ.

ಇಲ್ಲಿನ ಮಕ್ಕಳ ಸಂಖ್ಯೆಯೂ ಅಷ್ಟೇ ಅದ್ಬುತ. ೧ನೇ ತರಗತಿಗೆ ೨, ೨ನೇ ತರಗತಿಗೆ- ೪, ೩ನೇ ತರಗತಿಗೆ-೩, ೪ನೇ ತರಗತಿಗೆ -೪, ೫ನೇ ತರಗತಿಗೆ ೧೩ ವಿದ್ಯಾರ್ಥಿಗಳು ಇದ್ದಾರೆ. ಶಾಲೆ ಪ್ರಾರಂಭವಾಗಿ ೧೫ ದಿನ ಕಳೆದರೂ ಈ ಮಕ್ಕಳಿಗೆ ವಿಷಯವಾರು ಪುಸ್ತಕಗಳೂ ಬಂದಿಲ್ಲ. ಇಲ್ಲಿ ಶೌಚಾಲಯ ಇದೆ. ಆದರೆ ಅದನ್ನು ಬಳಸುವಂತಿಲ್ಲ. ಬಳಕೆಗೆ ನೀರಿನ ವ್ಯವಸ್ಥೆ ಇಲ್ಲದೇ ಶಾಲೆಯ ಮಕ್ಕಳು ಬಯಲನ್ನೇ ಆಶ್ರಯಿಸುತ್ತಾರೆ.

ಕಾಯಂ ಬಿಇಒ ಇಲ್ಲ: ಶಿರಹಟ್ಟಿ ಮತ್ತು ಲಕ್ಷ್ಮೇಶ್ವರ ಎರಡೂ ತಾಲೂಕುಗಳಲ್ಲಿ ಒಟ್ಟು ೭೦೦ ಜನ ಶಿಕ್ಷರಿದ್ದಾರೆ. ಇಷ್ಟೊಂದು ದೊಡ್ಡ ಸಂಖ್ಯೆಯ ಶಾಲಾ ಶಿಕ್ಷಕರಿಗೆ ಶಿಕ್ಷಕರ ಮೇಲ್ವಿಚಾರಣೆ ಮಾಡುವ ಅಧಿಕಾರಿ (ಬಿಇಒ) ಇಲ್ಲ. ಸದ್ಯ ಗದಗ ಗ್ರಾಮೀಣ ಬಿಒ ವಿ.ವಿ. ನಡುವಿನಮನಿ ವಾರಕ್ಕೆ ಮೂರು ದಿನ ಬಂದು ಹೋಗುತ್ತಾರೆ.


ಅಧಿಕಾರಿಗಳಿಗೆ ಸೂಚನೆ: ತಾಲೂಕಿನ ಛಬ್ಬಿ ತಾಂಡಾದಲ್ಲಿ ಕಾಯಂ ಶಿಕ್ಷಕರಿಲ್ಲದಿರುವ ಬಗ್ಗೆ ನಮ್ಮ ಗಮನಕ್ಕೂ ಬಂದಿದೆ. ಆ ಶಾಲೆಯಲ್ಲಿ ಮಕ್ಕಳ ಹಾಜರಾತಿಗೆ ಅನುಸಾರ ಒಬ್ಬ ಕಾಯಂ ಶಿಕ್ಷಕರು ಬೇಕಾಗಿದ್ದು, ಜತೆಗೆ ಅತಿಥಿ ಶಿಕ್ಷಕರನ್ನು ನೇಮಿಸಿ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ದೊರಕುವಂತೆ ಕ್ರಮ ಕೈಗೊಳ್ಳಲು ಅಧಿಕಾರಿಗಳಿಗೆ ತಿಳಿಸಲಾಗುವುದು ಎಂದು ಶಾಸಕ ಡಾ. ಚಂದ್ರು ಕೆ. ಲಮಾಣಿ ತಿಳಿಸಿದರು.