ದಾವಣಗೆರೆ ಶಾಬನೂರು ರಸ್ತೆಯ ಉದ್ಯಾನವನ ಕಾಂಪೌಂಡ್‌ಗಳನ್ನು ಹೊಸದಾಗಿ ನಿರ್ಮಿಸುತ್ತಿದ್ದು, ಅಲ್ಲಿ ಯಾವುದೇ ಅಕ್ರಮ ನಡೆಯುತ್ತಿಲ್ಲ ಎಂದು ಪಾಲಿಕೆ ವಿಪಕ್ಷದ ಮಾಜಿ ನಾಯಕ ಜಿ.ಎಸ್. ಮಂಜುನಾಥ ಗಡಿಗುಡಾಳ್ ಹೇಳಿದ್ದಾರೆ.
- ನಾಗರೀಕ ಸಮಿತಿ, ಹಿರಿಯ ನಾಗರೀಕರ ಮನವಿ ಮೇರೆಗೆ ಕಾಮಗಾರಿ: ಮಂಜುನಾಥ - - -
ಕನ್ನಡಪ್ರಭ ವಾರ್ತೆ ದಾವಣಗೆರೆದಾವಣಗೆರೆ ಶಾಬನೂರು ರಸ್ತೆಯ ಉದ್ಯಾನವನ ಕಾಂಪೌಂಡ್‌ಗಳನ್ನು ಹೊಸದಾಗಿ ನಿರ್ಮಿಸುತ್ತಿದ್ದು, ಅಲ್ಲಿ ಯಾವುದೇ ಅಕ್ರಮ ನಡೆಯುತ್ತಿಲ್ಲ ಎಂದು ಪಾಲಿಕೆ ವಿಪಕ್ಷದ ಮಾಜಿ ನಾಯಕ ಜಿ.ಎಸ್. ಮಂಜುನಾಥ ಗಡಿಗುಡಾಳ್ ಹೇಳಿದ್ದಾರೆ.
ನಗರದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನಾಗರೀಕ ಹಿತರಕ್ಷಣಾ ಸಮಿತಿ ಹಾಗೂ ಹಿರಿಯ ನಾಗರೀಕರ ಸಂಘದವರು 2 ವರ್ಷದ ಹಿಂದೆ ಡಾ. ಎಂ.ಸಿ.ಮೋದಿ ವೃತ್ತದ ಬಳಿಯ ಪಾರ್ಕ್ ಕಾಂಪೌಂಡ್ ಶಿಥಿಲಗೊಂಡಿದ್ದು, ಪಾರ್ಕ್ ಅಭಿವೃದ್ಧಿಪಡಿಸುವಂತೆ ಪಾಲಿಕೆ ಹಾಗೂ ಜಿಲ್ಲಾ ಸಚಿವರಿಗೆ ಮನವಿ ಸಲ್ಲಿಸಿದ್ದರು ಎಂದರು.ಸಾರ್ವಜನಿಕರ ಮನವಿ ಮೇರೆಗೆ ತೋಟಗಾರಿಕೆ ಇಲಾಖೆಯಿಂದ ₹90 ಲಕ್ಷ ಅನುದಾನ ಪಡೆದು, ಪಾರ್ಕ್ ಅಭಿವೃದ್ಧಿ ಹಾಗೂ ಕಾಂಪೌಂಡ್ ನಿರ್ಮಿಸುವ ಕೆಲಸವಾಗುತ್ತಿದೆ. ಈ ಹಿಂದೆ ಬಿಜೆಪಿ ಅವಧಿಯಲ್ಲಿ ವಿಪಕ್ಷವಾಗಿದ್ದ ನಾವು ನಮ್ಮ ವಾರ್ಡ್‌ಗಳಲ್ಲಿ ಕೆಲಸ ಮಾಡಿಸಿಕೊಳ್ಳಲು ಸಚಿವರ ಮನೆ ಬಾಗಿಲಿಗೆ ಹೋಗುತ್ತಿದ್ದೆವು. ಈಗಿನ ಬಿಜೆಪಿ ಜನಪ್ರತಿನಿಧಿಗಳು, ಮುಖಂಡರು ಕಾಂಗ್ರೆಸ್ ಸಚಿವರ ಬಳಿ ಅಭಿವೃದ್ಧಿ ಬಗ್ಗೆ ಕೇಳಿದ್ದಾರಾ ಎಂದು ಪ್ರಶ್ನಿಸಿದರು.
ಸಚಿವ ಎಸ್.ಎಸ್. ಮಲ್ಲಿಕಾರ್ಜುನ ದಾವಣಗೆರೆ ಸಮಗ್ರ ಅಭಿವೃದ್ಧಿಪಡಿಸುತ್ತಿದ್ದಾರೆ. ಜಿಲ್ಲಾ ಆಸ್ಪತ್ರೆಗೆಂದು ₹193 ಕೋಟಿ ಅನುದಾನ ಕೋರಿ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿದ್ದಾರೆ. ವಿಶ್ವೇಶ್ವರಯ್ಯ ಪಾರ್ಕ್ ಅಭಿವೃದ್ಧಿಗೆ ₹13 ಕೋಟಿ ಅನುದಾನ ಒದಗಿಸಿದ್ದಾರೆ. ಹದಡಿ ರಸ್ತೆ ಕಾಮಗಾರಿ, ಒಳ ಚರಂಡಿ, ಪಾರ್ಕ್‌ಗಳ ಅಭಿವೃದ್ಧಿಯನ್ನು ಹಂತ ಹಂತವಾಗಿ ಕೈಗೊಳ್ಳಲಾಗುತ್ತಿದೆ ಎಂದು ಹೇಳಿದರು.ಕಾಂಗ್ರೆಸ್ ಯುವ ಮುಖಂಡರಾದ ವರುಣ್ ಬೆಣ್ಣೆಹಳ್ಳಿ, ಲೋಕೇಶ ನಾಯ್ಕ, ನಿಖಿಲ್ ಇತರರು ಇದ್ದರು.
- - -(ಬಾಕ್ಸ್)
* ಸೋನಿಯಾ ನಾರಂಗ್ ಮಾದರಿ ಕ್ರಮಕ್ಕೆ ಎಸ್ಪಿಗೆ ಒತ್ತಾಯ - ದಾವಣಗೆರೆಯಲ್ಲಿ ಅಶಾಂತಿ ಸೃಷ್ಟಿಗೆ ರೇಣುಕಾಚಾರ್ಯ ಪ್ರಯತ್ನ: ದಿನೇಶ ಶೆಟ್ಟಿ ಆರೋಪ ದಾವಣಗೆರೆ: ದಾವಣಗೆರೆಯಲ್ಲಿ ಬಿಜೆಪಿ ಮಾಜಿ ಸಚಿವ ಎಂ.ಪಿ.ರೇಣುಕಾಚಾರ್ಯ ಪದೇಪದೇ ಪ್ರತಿಭಟನೆ, ರಸ್ತೆ ತಡೆ, ಬಂದ್ ಮಾಡುತ್ತಾ, ಅಶಾಂತಿ ಸೃಷ್ಟಿಸುತ್ತಿದ್ದಾರೆ. ಈ ಹಿಂದೆ ಎಸ್‌ಪಿ ಆಗಿದ್ದ ಸೋನಿಯಾ ನಾರಂಗ್ ಮಾದರಿಯಲ್ಲಿ ಕಠಿಣ ಕ್ರಮವನ್ನು ಈಗಿನ ಎಸ್‌ಪಿ ಅವರು ಕೈಗೊಳ್ಳಲಿ ಎಂದು ಕಾಂಗ್ರೆಸ್ ಜಿಲ್ಲಾ ಪ್ರಧಾನ ಕಾರ್ಯದರ್ಶಿ, ದೂಡಾ ಅಧ್ಯಕ್ಷ ದಿನೇಶ ಕೆ. ಶೆಟ್ಟಿ ಒತ್ತಾಯಿಸಿದ್ದಾರೆ. ನಗರದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಅವರು, ಜಿಲ್ಲಾ ಕೇಂದ್ರದಲ್ಲಿ ವ್ಯಾಪಾರ ವಹಿವಾಟು ಚೆನ್ನಾಗಿ ನಡೆಯುತ್ತಿದೆ. ಹೋಟೆಲ್, ಅಂಗಡಿ ಮಾಲೀಕರು, ಛೇಂಬರ್ ಆಫ್ ಕಾಮರ್ಸ್‌ನವರು ವಿರೋಧಿಸಿದ್ದರೂ ರೇಣುಕಾಚಾರ್ಯ ನೇತೃತ್ವದಲ್ಲಿ ಬಂದ್ ಮಾಡಿದ್ದಾರೆ. ಸೋನಿಯಾ ನಾರಂಗ್ ಎಸ್‌ಪಿ ಆಗಿದ್ದಾಗ ಹೊನ್ನಾಳಿಯಲ್ಲಿ ಅನುಮತಿ ಇಲ್ಲದೇ ರಸ್ತೆತಡೆ ನಡೆಸಿದ್ದ ರೇಣುಕಾಚಾರ್ಯ ಅವರನ್ನು ಠಾಣೆಗೆ ಕರೆದೊಯ್ದು, ಕಠಿಣ ಕ್ರಮ ಕೈಗೊಂಡಿದ್ದರು. ಈಗಿನ ಎಸ್‌ಪಿ ಸಹ ಅದೇ ಮಾದರಿಯಲ್ಲಿ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.ಬಿಜೆಪಿಯಲ್ಲೇ ನೂರಾರು ಗುಂಪುಗಳಿವೆ. ವೀರೇಶ ಹನಗವಾಡಿ, ಚಂದ್ರಶೇಖರ ಪೂಜಾರಿ, ಬಿ.ಪಿ.ಹರೀಶ, ರೇಣುಕಾಚಾರ್ಯ ಬಣ ಸೇರಿದಂತೆ ಹಲವಾರು ಗುಂಪುಗಳಿದ್ದು, ಕೇವಲ ಪ್ರತಿಷ್ಟೆಗಾಗಿ ಪ್ರತಿಭಟನೆ, ಬಂದ್ ನಡೆಸುತ್ತಿದ್ದಾರೆ. ಇಂತಹ ನಾಯಕರಿಗೆ ಬಿಜೆಪಿ ಹೈಕಮಾಂಡ್ ಸಹ ಬೆಲೆ ಕೊಡುತ್ತಿಲ್ಲ. ಹಿಂದುತ್ವವೆಂದು ಪ್ರಚೋದಿಸುವ ಬಿಜೆಪಿಯವರ ಮಕ್ಕಳು ಯಾರೂ ಹೋರಾಟಗಳಲ್ಲಿ ಭಾಗವಹಿಸುವುದಿಲ್ಲ. ಬಿಜೆಪಿಯವರು ಯುವಕರಿಗೆ ಉದ್ಯೋಗ, ಸಾಲ ಸೌಲಭ್ಯ ಕೊಡಿಸುವ ಕೆಲಸ ಮಾಡಬೇಕು. ಕಂಡವರ ಮಕ್ಕಳನ್ನು ಬಾವಿಗೆ ತಳ್ಳುವ ಕೆಲಸ ಮಾಡಬಾರದು ಎಂದು ದಿನೇಶ ಕೆ. ಶೆಟ್ಟಿ ವಿಪಕ್ಷ ಬಿಜೆಪಿ ಮುಖಂಡರಿಗೆ ಸಲಹೆ ನೀಡಿದರು.
- - --1ಕೆಡಿವಿಜಿ13, 14:
ದಿನೇಶ ಕೆ. ಶೆಟ್ಟಿ, ಜಿ.ಎಸ್.ಮಂಜುನಾಥ ಗಡಿಗುಡಾಳ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.