ಉಡುಪಿ: ಕಳೆದ ವರ್ಷದ ಬಜೆಟ್‌ನಲ್ಲಿ ಉಡುಪಿ ಜಿಲ್ಲಾ ಕ್ರೀಡಾಂಗಣದ ಅಭಿವೃದ್ಧಿಗೆ 3 ಕೋಟಿ ರು. ಘೋಷಣೆಯಾದುದು ಬಿಟ್ಟರೆ ಜಿಲ್ಲೆಗೆಂದೇ ನಿರ್ದಿಷ್ಟ ಯಾವುದೇ ಗುರುತರ ಯೋಜನೆಗಳು ಘೋಷಣೆಯಾಗಿರಲಿಲ್ಲ. ಕರಾವಳಿಯ ಮೂರೂ ಜಿಲ್ಲೆಗೆ ಅನ್ವಯವಾಗುವಂತೆ ಪಾಲುದಾರಿಕೆಯ ಒಂದೆರಡು ಯೋಜನೆಗಳು ಘೋಷಣೆಯಾಗಿದ್ದರೂ, ಅವುಗಳ‍‍ ಲಾಭವೂ ಉಡುಪಿ ಜಿಲ್ಲೆಗೆ ಸಿಕ್ಕಿಲ್ಲ !

ಕರಾವಳಿಯ ಸಮುದ್ರ ತೀರದ ಜನರ ದಶಕಗಳ ಕಾಲದ ಬೇಡಿಕೆಯಾಗಿರುವ ಕಡಲು ಕೊರೆತ ತಡೆಗೆ, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಶೋರ್‌ಲೈನ್‌ ಮ್ಯಾನೇಜ್‌ಮೆಂಟ್ ಪ್ಲ್ಯಾನ್‌ ಜಾರಿಗೆ ಡಿಪಿಆರ್‌ ನಡೆಸಲಾಗುತ್ತದೆ ಎಂದು ಬಜೆಟ್‌ನಲ್ಲಿ ಘೋಷಿಸಿದ್ದರು, ಇದು ಸಮುದ್ರ ತೀರದ ಜನತೆಗೆ ಆಶಾದಾಯಕ ಘೋಷಣೆಯಂತೆ ಕಂಡಿತ್ತು. ಆದರೆ ಡಿಪಿಆರ್‌ (ವಿಸ್ತತ ಯೋಜನಾ ವರದಿ) ತಯಾರಿಸುವ ಘೋಷಣೆಯಷ್ಟೇ ಆಗಿತ್ತು ಹೊರತು ಅನುದಾನ ಘೋಷಣೆಯಾಗಿರಲಿಲ್ಲ. ಈ ಹಿಂದೆಯೂ ಕಡಲ್ಕೊರೆತ ತಡೆಗೆ ಹತ್ತಾರು ಡಿಪಿಆರ್‌ಗಳಾಗಿವೆ. ಅವೆಲ್ಲವೂ ವಿಧಾನಸೌಧದ ತಿಜೋರಿಗಳಲ್ಲಿ ಭದ್ರವಾಗಿದ್ದು ಬಿಟ್ಟರೆ ಜಾರಿಯಾಗಿಲ್ಲ. ಅದಕ್ಕೆ ಈಗ ಇನ್ನೊಂದು ವರದಿ ಸೇರಿದೆ. ಮಲ್ಪೆ ಬಂದರಿನಲ್ಲಿ ಮಲ್ಟಿ ಲೆವೆಲ್ ಪಾರ್ಕಿಂಗ್ ಯೋಜನೆಯನ್ನೂ ಕಳೆದ ಬಜೆಟ್‌ನಲ್ಲಿ ಘೋಷಿಸಲಾಗಿತ್ತು, ಉಡುಪಿ, ಮಣಿಪಾಲ ನಗರಗಳಲ್ಲಿ ತುರ್ತಾಗಿ ಬೇಕಾಗಿರುವ ಈ ಪಾರ್ಕಿಂಗ್ ವ್ಯವಸ್ಥೆಯನ್ನು ಮಲ್ಪೆಗೆ ಘೋಷಿಸಲಾಗಿತ್ತು, ಅದೂ ಘೋಷಣೆಯಾಗಿಯೇ ಉಳಿದಿದೆ, ಈ ಯೋಜನೆ ಬಗ್ಗೆ ಜಿಲ್ಲೆಯ ಅಧಿಕಾರಿಗಳಲ್ಲಿ ಯಾವುದೇ ಮಾಹಿತಿ ಇಲ್ಲ. ಮೀನುಗಾರಿಕಾ ಕೊಂಡಿ ರಸ್ತೆಗಳ ಅಭಿವೃದ್ಧಿಗೆ 30 ಕೋಟಿ ರು. ಘೋಷಿಸಲಾಗಿತ್ತು, ಇದು ಕರಾವಳಿಯ 3 ಜಿಲ್ಲೆಗಳಿಗೆ ಅನ್ವಯವಾಗುವ ಯೋಜನೆ, ಆದರೆ ಈ ಬಜೆಟ್‌ ಘೋಷಣೆಯಂತೆ ಉಡುಪಿ ಜಿಲ್ಲೆಯಲ್ಲಿ ಅಂತಹ ಯಾವುದೇ ರಸ್ತೆಗಳ ಅಭಿವೃದ್ಧಿಯಾಗಿಲ್ಲ. ರಾಜ್ಯಾದ್ಯಂತ ಅಡಕೆ ಬೆಳೆಯನ್ನು ಬಾಧಿಸುವ ಎಲೆ ಚುಕ್ಕೆ ರೋಗ ನಿಯಂತ್ರಣಕ್ಕೆ 62 ಕೋಟಿ ರು.ವನ್ನು ಮುಖ್ಯಮಂತ್ರಿ ಘೋಷಿಸಿದ್ದರು, ಅದರಲ್ಲಿ ಉಡುಪಿ ಜಿಲ್ಲೆಗೆ ಇಷ್ಟು ಎಂದು ನಿರ್ದಿಷ್ಟ ಮೊತ್ತ ಘೋಷಿಸಲಾಗಿರಲಿಲ್ಲ. ಆದ್ದರಿಂದ ಉಡುಪಿ ಜಿಲ್ಲೆಗೆ ಈ ಘೋಷಣೆಯಡಿ ಎಷ್ಟು ಹಣ ಬಂದಿದೆ ಎಂದು ಅಧಿಕಾರಿಗಳಿಗೂ ಗೊತ್ತಿಲ್ಲ ! ಇನ್ನು ಉಡುಪಿಯ ಮಹಾತ್ಮ ಗಾಂಧಿ ಜಿಲ್ಲಾ ಕ್ರೀಡಾಂಗಣದಲ್ಲಿ ತುರ್ತಾಗಿ ಸಿಂಥೆಟಿಕ್ ಟ್ರ್ಯಾಕ್ ದುರಸ್ತಿ ಇತ್ಯಾದಿ ಒಂದಷ್ಟು ಕಾಮಗಾರಿಗಳಾಗಬೇಕಾಗಿದೆ. ಬಜೆಟ್‌ನಲ್ಲಿ 3 ಕೋಟಿ ರು. ಘೋಷಿಸಿ ವರ್ಷ ಕಳೆದರೂ ಯಾವುದೇ ಅನುದಾನ ಬಂದಿಲ್ಲ, ಕ್ರೀಡಾಪಟುಗಳು ಅದೇ ಕಿತ್ತು ಹೋಗಿರುವ ಟ್ರ್ಯಾಕ್‌ನಲ್ಲೇ ಅನಿವಾರ್ಯವಾಗಿ ಪ್ರಾಕ್ಟೀಸ್ ಮಾಡುತಿದ್ದಾರೆ. ರಾಜ್ಯ ರಾಷ್ಟ್ರ ಮಟ್ಟದ ಕ್ರೀಡಾಕೂಟಗಳೂ ನಡೆಯುತ್ತಿವೆ.