ಕನ್ನಡಪ್ರಭ ವಾರ್ತೆ ಮೂಡಲಗಿ ಚಾಲನಾ ಪರವಾನಗಿ ಪಾಸಾಗಲು ಇನ್ನು ಮುಂದೆ ಮ್ಯಾನುವೆಲ್ ಇರುವುದಿಲ್ಲ. ಬದಲಾಗಿ ಎಲ್ಲ ಚಾಲನಾ ಪಥಗಳಲ್ಲಿ ಸೆನ್ಸಾರ್‌ಗಳನ್ನು ಅಳವಡಿಸಲಾಗುತ್ತದೆ. ಅದರಲ್ಲಿ ಪಾಸಾದರೆ ಮಾತ್ರ ಚಾಲನಾ ಪರವಾನಗಿ ನೀಡಲಾಗುತ್ತದೆ ಎಂದು ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಹೇಳಿದರು.
ಕನ್ನಡಪ್ರಭ ವಾರ್ತೆ ಮೂಡಲಗಿ
ಚಾಲನಾ ಪರವಾನಗಿ ಪಾಸಾಗಲು ಇನ್ನು ಮುಂದೆ ಮ್ಯಾನುವೆಲ್ ಇರುವುದಿಲ್ಲ. ಬದಲಾಗಿ ಎಲ್ಲ ಚಾಲನಾ ಪಥಗಳಲ್ಲಿ ಸೆನ್ಸಾರ್‌ಗಳನ್ನು ಅಳವಡಿಸಲಾಗುತ್ತದೆ. ಅದರಲ್ಲಿ ಪಾಸಾದರೆ ಮಾತ್ರ ಚಾಲನಾ ಪರವಾನಗಿ ನೀಡಲಾಗುತ್ತದೆ ಎಂದು ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಹೇಳಿದರು.ಮೂಡಲಗಿ ತಾಲೂಕಿನ ಅರಭಾವಿಯಲ್ಲಿ ಮಂಗಳವಾರ ಸಹಾಯಕ ಪ್ರಾದೇಶಿಕ ಸಾರಿಗೆ ಅಧಿಕಾರಿಗಳ ಕಚೇರಿ ನೂತನ ಕಟ್ಟಡ ಮತ್ತು ಚಾಲನಾ ಪಥವನ್ನು ಉದ್ಘಾಟಿಸಿ ಮಾತನಾಡಿದರು. ವಾಹನ ಸವಾರರ ಬಹು ದಿನಗಳ ಬೇಡಿಕೆಯಾದ ಸಹಾಯಕ ಸಾರಿಗೆ ಪ್ರಾದೇಶಿಕ ಕಚೇರಿ ಹಾಗೂ ಚಾಲನಾ ಪಥ ನಿರ್ಮಾಣ ಈಗ ಈಡೇರಿದೆ. ಇದರ ನಿರ್ಮಾಣಕ್ಕೆ ಜಾರಕಿಹೊಳಿ ಸಹೋದರರ ಶ್ರಮ ಶ್ಲಾಘನೀಯ. ಡೈವಿಂಗ್ ಟ್ರ್ಯಾಕ್‌ನಲ್ಲಿ ಮೊದಲು ಅಧಿಕಾರಿಗಳೇ ಮಾಡುತ್ತಿದ್ದರು. ಇನ್ನು ಮುಂದೆ ಹಾಗೆ ಮಾಡಲು ಬರಲ್ಲ. ಎಲ್ಲ ಟ್ರ್ಯಾಕ್‌ಗಳಲ್ಲಿ ಸೆನ್ಸಾರ್ ಅಳವಡಿಸಲಾಗಿದೆ. ಅಲ್ಲಿ ಚನ್ನಾಗಿ ಡ್ರೈವಿಂಗ್ ಮಾಡಿದರೆ ಮಾತ್ರ ಪಾಸ್ ಆಗುತ್ತಾರೆ. ಪರವಾನಗಿ ಸಿಗುತ್ತದೆ. ಇಲ್ಲವಾದರೆ ಫೇಲ್ ಆಗುತ್ತಾರೆ ಎಂದು ತಿಳಿಸಿದರು.ಬೆಮುಲ್ ಅಧ್ಯಕ್ಷ ಹಾಗೂ ಶಾಸಕ ಬಾಲಚಂದ್ರ ಜಾರಕಿಹೊಳಿ ಮಾತನಾಡಿ, ಸಾರಿಗೆ ಇಲಾಖೆ ಟೆಸ್ಟ್ ಟ್ರ್ಯಾಕ್ ಮತ್ತು ಕಚೇರಿ ಒಂದೇ ಕಡೆ ಲಭ್ಯವಿರುವಂತೆ ನಿರ್ಮಿಸಿದ್ದು, ಇದನ್ನು ಎಲ್ಲರೂ ಸದ್ಬಳಕೆ ಮಾಡಿಕೊಳ್ಳಬೇಕು ಎಂದರು.
ಸುಮಾರು 9 ಎಕರೆ ಜಮೀನಿನಲ್ಲಿ ₹10 ಕೋಟಿ ವೆಚ್ಚದಲ್ಲಿ ಅರಭಾವಿಯಲ್ಲಿ ಸಹಾಯಕ ಪ್ರಾದೇಶಿಕ ಸಾರಿಗೆ ಅಧಿಕಾರಿಗಳ ಕಟ್ಟಡ ಮತ್ತು ಚಾಲನಾ ಪಥ ನಿರ್ಮಾಣಗೊಂಡಿದೆ. ಒಂದೇ ಕಡೆ ಚಾಲನಾ ಪಥ ಮತ್ತು ಕಚೇರಿ ಬೆಳಗಾವಿ ಜಿಲ್ಲೆಯಲ್ಲಿ ಎಲ್ಲಿಯೂ ಇಲ್ಲ. ನಮ್ಮ ಕ್ಷೇತ್ರದಲ್ಲಿ ಎರಡೂ ಒಂದೇ ಕಡೆ ಇರುವುದು ಸಂತೋಷವಾಗಿದೆ ಎಂದು ಹೇಳಿದರು.ಅರಭಾವಿ ಮೊದಲು ಒಂದು ಗ್ರಾಪಂ ಸೀಮಿತವಾಗಿತ್ತು. ಇಂದು ಪಟ್ಟಣ ಪಂಚಾಯತಿ ಆಗಿದೆ. ಕಾಲೇಜು, ಮೊರಾರ್ಜಿ ದೇಸಾಯಿ ಶಾಲೆ, ಆರ್‌ಟಿಒ ಕಚೇರಿ ಪ್ರಾರಂಭವಾಗಿದೆ. ಅಧಿಕಾರಿಗಳು ಪ್ರಾಮಾಣಿಕವಾಗಿ ಕೆಲಸ ಮಾಡಬೇಕು ಎಂದು ಸಲಹೆ ನೀಡಿದರು.ಜಿಲ್ಲಾ ಉಸ್ತುವಾರಿ ಸಚಿವ ಸತೀಶ ಜಾರಕಿಹೊಳಿ ಅವರಿಗೆ ಅಭಿನಂದಿಸಬೇಕು. ಈ ಜಾಗದ ಸಲುವಾಗಿ ತಹಶೀಲ್ದಾರ್‌ಗೆ ಹೇಳಿ ಇಲ್ಲೆ ಆಗಬೇಕು ಎಂದು ಹೇಳಿದ್ದರು. ಇಲ್ಲಿ ಎಂಜಿನಿಯರಿಂಗ್ ಕಾಲೇಜು ಮಾಡುವುದಕ್ಕೆ ಪ್ರಸ್ತಾವನೆಯನ್ನು ಸಚಿವರು ಇಟ್ಟಿದ್ದು, ಇದಕ್ಕಾಗಿ ಸಚಿವರು ತಹಸೀಲ್ದಾರ್‌ಗೆ ಇನ್ನೂ 5 ಎಕರೆ ಜಮೀನು ಬೇಕೆಂದು ಹೇಳಿದ್ದಾರೆ. ಮುಂಬರುವ ದಿನಗಳಲ್ಲಿ ಗೋಕಾಕ ಒಂದು ಎಜುಕೇಷನ್ ಹಬ್ಬ ಆಗಬೇಕು. ಪ್ರಾಮಾಣಿಕವಾಗಿ ನಮ್ಮ ಮಕ್ಕಳಿಗೆ ಶಿಕ್ಷಣ ಕೊಡಬೇಕು ಎಂದು ಹೇಳಿದರು.ಉಪ್ಪಾರ ಅಭಿವೃದ್ಧಿ ನಿಗಮದ ಅಧ್ಯಕ್ಷ ಭರಮಣ್ಣ ಉಪ್ಪಾರ, ಅರಭಾವಿ ಪಪಂ ಅಧ್ಯಕ್ಷೆ ರೇಣುಕಾ ಮಾದರ, ಧಾರವಾಡ ಅಪರ್ ಸಾರಿಗೆ ಆಯುಕ್ತ ಕೆ.ಟಿ.ಹಾಲಸ್ವಾಮಿ, ಬೆಳಗಾವಿ ಜಂಟಿ ಸಾರಿಗೆ ಆಯುಕ್ತ ಸಿದ್ದಪ್ಪ ಕಲ್ಲೇರ, ಸಹಾಯಕ ಪ್ರಾದೇಶಿಕ ಸಾರಿಗೆ ಅಧಿಕಾರಿ ಶಂಕರ್ ಕುಲಕರ್ಣಿ, ಹುಬ್ಬಳ್ಳಿ ಮುಖ್ಯ ಕಾಮಗಾರಿ ಅಭಿಯಂತರ ಸೋಮಣ್ಣ ಅಂಗಡಿ, ಪ್ರಭಾ ಶುಗರ್ಸ ಅಧ್ಯಕ್ಷ ಶಿದ್ಲಿಂಗಪ್ಪ ಕಂಬಳಿ, ಆಂಜನೇಯ ಶಿಕ್ಷಣ ಸಂಸ್ಥೆ ಅಧ್ಯಕ್ಷ ಶಂಕರ ಬಿಲಕುಂದಿ, ಗೋಕಾಕ ಟಿಎಪಿಸಿಎಂಎಸ್ ನಿರ್ದೇಶಕ ಮುತ್ತೆಪ್ಪ ಜಲ್ಲಿ, ರೈತ ಮುಖಂಡ ಗಣಪತಿ ಇಳಿಗೇರ, ಬೆಮುಲ್ ನಿರ್ದೇಶಕ ಬಸವರಾಜ ಮಾಳೆದವರ, ರಮೇಶ ಸಂಪಗಾಂವಿ,
ರಮೇಶ ಮಾದರ, ಪಟ್ಟಣ ಪಂಚಾಯತಿ ಸದಸ್ಯರು ಉಪಸ್ಥಿತರಿದ್ದರು.--------ಕೋಟ್
ಹೆವಿ ವೆಹಿಕಲ್‌ಗಳಿಗೆ 3 ಎಕರೆ ಜಾಗವನ್ನು ಸಚಿವ ಸತೀಶ್ ಜಾರಕಿಹೊಳಿ, ಶಾಸಕ ಬಾಲಚಂದ್ರ ಜಾರಕಿಹೊಳಿ ಕೊಡಿಸಿದ್ದರಿಂದ ಅರಭಾವಿ ಪಟ್ಟಣದ ಪಕ್ಕದಲ್ಲಿ ಈ ಕಚೇರಿ, ಚಾಲನಾ ಪಥ ನಿರ್ಮಾಣಗೊಳ್ಳಲು ಸಾಧ್ಯವಾಗಿದೆ. ಈ ಭಾಗದ 3 ತಾಲೂಕಿನ ಜನತೆಗೆ ಬಹಳ ಅನುಕೂಲವಾಗಿದೆ. ಆರ್‌ಟಿಒ ಕಚೇರಿ, ಡ್ರೈವಿಂಗ್ ಟೆಸ್ಟ್ ರಾಜ್ಯದಲ್ಲಿ ಒಟ್ಟು 45 ಇದ್ದು, ಇದರಲ್ಲಿ 10 ಪ್ರಾರಂಭವಾಗಿವೆ. ಉಳಿದಿರುವ 35ರ ಕಾಮಕಾರಿ ಮುಗಿಯುವ ಹಂತದಲ್ಲಿವೆ. ಇವುಗಳಿಗೆ ಸಿಎಂ ಸಿದ್ದರಾಮಯ್ಯನವರೇ ಶೀಘ್ರ ಚಾಲನೆ ನೀಡಲಿದ್ದಾರೆ.ರಾಮಲಿಂಗಾರೆಡ್ಡಿ, ಸಾರಿಗೆ ಸಚಿವ