ಸಾರಾಂಶ
ಕೃಷ್ಣ ಎನ್. ಲಮಾಣಿ
ಹೊಸಪೇಟೆ: ಉತ್ತಮ ಓದು ಇದ್ದರೂ ಈ ಕುಟುಂಬದ ನಾಲ್ವರು ಸದಸ್ಯರು ಮಾನಸಿಕ ಅಸ್ವಸ್ಥತೆಯಿಂದ ಸ್ವಂತ ಬದುಕು ಸಾಗಿಸಲು ಆಗದೇ ಅತಂತ್ರರಾಗಿದ್ದಾರೆ. ಈ ಕುಟುಂಬಕ್ಕೆ ಸ್ವಂತ ಸೂರಿಲ್ಲದೇ ಬಾಡಿಗೆ ಮನೆಯಲ್ಲೇ ಕಾಲ ಕಳೆಯುತ್ತಿದ್ದಾರೆ. ಒಂದೇ ಕುಟುಂಬದ ಈ ನಾಲ್ವರು ಅಸ್ವಸ್ಥರಿಗೆ ಈಗ ಸ್ವಂತ ಮನೆಯ ಆಸರೆ ಬೇಕಿದೆ.ನಗರದ ಊರಮ್ಮನಗುಡಿ ಪ್ರದೇಶದಲ್ಲಿ ಬಾಡಿಗೆ ಮನೆಯಲ್ಲಿ ವಾಸವಾಗಿರುವ ಈ ಕುಟುಂಬದ ಯಜಮಾನಿ ಗಂಗಮ್ಮ (76) ಅವರಿಗೆ ಐವರು ಗಂಡು ಮಕ್ಕಳು, ಇಬ್ಬರು ಹೆಣ್ಣು ಮಕ್ಕಳು. ಈ ಪೈಕಿ ಇಬ್ಬರು ಗಂಡು ಮಕ್ಕಳು ಮಾನಸಿಕ ಅಸ್ವಸ್ಥತೆಯಿಂದ ಬಳಲಿ ಮೃತಪಟ್ಟಿದ್ದಾರೆ. ಈಗಿರುವ ಐವರು ಮಕ್ಕಳಲ್ಲಿ ನಾಲ್ವರು ಮಾನಸಿಕ ಅಸ್ವಸ್ಥತೆಯಿಂದ ಬಳಲುತ್ತಿದ್ದಾರೆ.ಗಂಗಮ್ಮ ಅವರ ಪುತ್ರರಾದ ಆರ್.ಎಂ. ಪ್ರಭು (45), ಆರ್.ಎಂ. ಚಂದ್ರಶೇಖರ್ (41), ಆರ್.ಎಂ. ವಿಜಯಕುಮಾರ (39) ಮತ್ತು ಪುತ್ರಿ ಜ್ಯೋತಿ (37) ಮಾನಸಿಕ ಅಸ್ವಸ್ಥರಾಗಿದ್ದಾರೆ. ಪ್ರಭು ಬಿ.ಎ. ಪಾಸಾಗಿದ್ದರೆ, ಚಂದ್ರಶೇಖರ್ ಪಿಯುಸಿಯವರೆಗೆ ಓದಿದ್ದಾರೆ. ವಿಜಯಕುಮಾರ ಒಂಬತ್ತನೇ ತರಗತಿ ವರೆಗೆ ಓದಿದ್ದು, ಜ್ಯೋತಿ ಎಸ್‌ಎಸ್‌ಎಲ್‌ಸಿ ಪಾಸಾಗಿದ್ದಾರೆ. ಮಾನಸಿಕ ಅಸ್ವಸ್ಥತೆಯಿಂದ ಸ್ವಂತ ಉದ್ಯೋಗ ಕಂಡುಕೊಳ್ಳಲಾಗದೇ ಈ ಕುಟುಂಬ ಇಡೀ ಬಡತನದಲ್ಲೇ ಕಾಲ ಕಳೆಯುವಂತಾಗಿದೆ. ಕರುಣಾಜನಕ ಕಥೆ: ಗಂಗಮ್ಮ ಅವರ ಪತಿ ಆರ್.ಎಂ. ಚನ್ನಯ್ಯ ರಾಯಚೂರಿನ ಯರಮರಸ್‌ನ ಡಯಟ್ ನಿವೃತ್ತ ಪ್ರಾಚಾರ್ಯ, 2021ರಲ್ಲಿ ಮೃತಪಟ್ಟಿದ್ದಾರೆ. ಗಂಗಮ್ಮ ಅವರಿಗೆ ₹18 ಸಾವಿರ ಪೆನ್ಷನ್ ಹಣ ಬರುತ್ತಿದೆ. ಮನೆ ಬಾಡಿಗೆ, ಮಕ್ಕಳ ಔಷಧ, ಚಿಕಿತ್ಸೆಗೆ ಹಣ ಹೊಂದಿಸಲಾಗದೇ ಗಂಗಮ್ಮ ಪರಿತಪಿಸುತ್ತಿದ್ದಾರೆ.ಮೂಲತಃ ಆಂಧ್ರಪ್ರದೇಶದ ಅನಂತಪುರ ಜಿಲ್ಲೆಯ ಗೂಳ್ಯಂ ಗ್ರಾಮದವರಾದ ಆರ್.ಎಂ. ಚನ್ನಯ್ಯ ಅವರು ಮಕ್ಕಳಿಗೆ ಚಿಕಿತ್ಸೆ ಕೊಡಿಸಿದ್ದರು. ಮಕ್ಕಳ ಚಿಕಿತ್ಸೆಗೆ ಹಣ ಹೊಂದಿಸಲಾಗದೇ ಅವರು ಅದೇ ಕೊರಗಿನಲ್ಲಿ ಹಾಸಿಗೆ ಹಿಡಿದಿದ್ದರು. ಅವರು ಮೃತಪಟ್ಟ ಬಳಿಕ ಕುಟುಂಬಕ್ಕೆ ಗಂಗಮ್ಮ ಆಸರೆಯಾಗಿದ್ದಾರೆ.ಹೊಸಪೇಟೆ ಮೂಲದವರಾದ ಗಂಗಮ್ಮ ನಾಲ್ವರು ಮಾನಸಿಕ ಅಸ್ವಸ್ಥ ಮಕ್ಕಳೊಂದಿಗೆ ತವರೂರಿಗೆ ಬಂದು ಕಡಿಮೆ ಬಾಡಿಗೆ ಮನೆಗಳನ್ನು ಹುಡುಕಿ ವಾಸ ಮಾಡುತ್ತಿದ್ದಾರೆ. ಊರಮ್ಮನಗುಡಿ ಪ್ರದೇಶಕ್ಕೆ ಬಂದಿದ್ದು, ಮನೆ ಮಾಲೀಕರು ಕೂಡ ಇವರ ಕಷ್ಟ ನೋಡಿ, ಬರೀ ನಾಲ್ಕು ಸಾವಿರ ರು.ಗೆ ದೊಡ್ಡದಾದ ಮನೆ ನೀಡಿದ್ದಾರೆ.ಈ ನಾಲ್ವರು ಅಸ್ವಸ್ಥರಿಗೆ ಮಾಸಿಕ ವೇತನ ತಲಾ ಎರಡು ಸಾವಿರ ರು. ಬರುತ್ತಿದ್ದು, ಈ ಹಣವೂ ಇವರ ಔಷಧ ಹಾಗೂ ಚಿಕಿತ್ಸೆಗೆ ಸಾಲುತ್ತಿಲ್ಲ. ಪ್ರತಿ ತಿಂಗಳು ದಾವಣಗೆರೆ ಚಿಗಟೇರಿ ಆಸ್ಪತ್ರೆಗೆ ತೆರಳಿ ತಪಾಸಣೆ ಮಾಡಬೇಕಿದ್ದು, ಔಷಧ ಹಾಗೂ ಚಿಕಿತ್ಸೆ ವೆಚ್ಚ ಭರಿಸಲು ಆಗದೇ ಕೆಲವೊಮ್ಮೆ ಔಷಧ ತೆಗೆದುಕೊಳ್ಳಲು ಹಿಂದೇಟು ಹಾಕುತ್ತಿದ್ದಾರೆ.ಗಂಗಮ್ಮ ಅವರ ಇನ್ನೊಬ್ಬ ಪುತ್ರಿ ಬಿಎ, ಬಿಎಡ್ ಓದಿದ್ದು, ಆಂಧ್ರಪ್ರದೇಶದ ಸಂಬಂಧಿಕರೊಬ್ಬರಿಗೆ ಮದುವೆ ಮಾಡಿಕೊಡಲಾಗಿದೆ. ಐವರು ಮಕ್ಕಳಲ್ಲಿ ನಾಲ್ವರು ಈಗ ಅಸ್ವಸ್ಥರಾಗಿರುವುದರಿಂದ ಒಂದೊಮ್ಮೆ ತಾನು ತೀರಿಕೊಂಡರೆ ಬೀದಿಗೆ ಬೀಳಲಿದ್ದಾರೆ ಎಂಬ ಆತಂಕ ಗಂಗಮ್ಮ ಅವರನ್ನು ಕಾಡುತ್ತಿದೆ.ಈಗ ನನಗೆ ತಿಂಗಳಿಗೆ ₹18 ಸಾವಿರ ಪೆನ್ಷನ್ ಬರುತ್ತದೆ. ಒಂದೊಮ್ಮೆ ನಾನು ತೀರಿಕೊಂಡರೆ ಈ ಹಣವೂ ನಿಲ್ಲುತ್ತದೆ. ಈಗ ನನಗೆ 76 ವಯಸ್ಸು. ನನ್ನ ಮಕ್ಕಳನ್ನು ಬೀದಿಗೆ ಬಿಟ್ಟು ಹೋದಂತೆ ಆಗುತ್ತದೆ. ನಮ್ಮ ಬಳಿ ಆಧಾರ್ ಕಾರ್ಡ್, ರೇಷನ್ ಕಾರ್ಡ್ ಸೇರಿದಂತೆ ಎಲ್ಲ ದಾಖಲಾತಿಯೂ ಇದೆ. ನಮಗೊಂದು ಆಶ್ರಯ ಮನೆ ನೀಡಿದರೆ, ಒಳ್ಳೆಯದಾಗಲಿದೆ ಎಂದು ಮನೆಯ ಯಜಮಾನಿ ಗಂಗಮ್ಮ ಹೇಳುತ್ತಾರೆ. ನಾವು ಓದಿನಲ್ಲಿ ಮುಂದಿದ್ದೇವು. ರ‍್ಯಾಂಕ್ ಬರುತ್ತಿದ್ದೆವು. ನಮ್ಮಪ್ಪ ಮೇಷ್ಟ್ರು ಆಗಿದ್ದರಿಂದ ನಮಗೂ ತಲೆಗೆ ಓದು ಹತ್ತಿತ್ತು. ಆದ್ರ್, ಬರುಬರುತ್ತಾ ನಮಗೇ ಹಿಂಗಾತು. ಎಷ್ಟೇ ಔಷಧ ನುಂಗಿದ್ರೂ ಹಾಳಾದ್ ತಲೆ ಸರಿ ಆಗವಲ್ತು. ನಾವು ನಿಮ್ಮಂಗೇ ಸರಿಯಾಗಿದ್ರ್ ಆಫೀಸರ್ ಆಗುತ್ತಿದ್ದೆವು ಎಂದು ಗಂಗಮ್ಮ ಅವರ ಪುತ್ರರಾದ ಆರ್.ಎಂ. ಪ್ರಭು, ಆರ್.ಎಂ. ಚಂದ್ರಶೇಖರ್ ಹೇಳುತ್ತಾರೆ.