ಸಾರಾಂಶ
ಕನ್ನಡಪ್ರಭ ವಾರ್ತೆ ಬೇಲೂರು ಚಿಲ್ಲರೆ ಕಾಸಿನ ಚೋರನೊಬ್ಬ ನಡುರಾತ್ರಿ ರಸ್ತೆಯ ಬದಿಯಲ್ಲಿದ್ದ ತಳ್ಳುಗಾಡಿ ಅಂಗಡಿ ಬೀಗ ಮುರಿದು ನಗದು ಹಾಗೂ ಮಸಾಲೆ ಪದಾರ್ಥಗಳನ್ನು ದೋಚಿರುವ ಘಟನೆ ಅರೇಹಳ್ಳಿಯಲ್ಲಿ ನಡೆದಿದೆ. ಕೆಲ ದಿನಗಳ ಹಿಂದೆ ಹಗಲಿನ ಸಮಯದಲ್ಲಿಯೇ ಬಾಸುರ ಗ್ರಾಮದ ಮೂರ್ನಾಲ್ಕು ಮನೆಗಳ ಬಾಗಿಲು ಮುರಿದು ಲಕ್ಷಾಂತರ ಮೌಲ್ಯದ ಚಿನ್ನಾಭರಣ ಹಾಗೂ ನಗದನ್ನು ದೋಚಿರುವ ಘಟನೆ ಮಾಸುವ ಮುನ್ನವೇ ಅರೇಹಳ್ಳಿಯಲ್ಲಿ ತಳ್ಳು ಗಾಡಿಯ ವಸ್ತುಗಳನ್ನು ದೋಚಿರುವ ಘಟನೆ ಆತಂಕ ಮೂಡಿಸಿದೆ.ತಳ್ಳುಗಾಡಿ ಇಟ್ಟು ವ್ಯಾಪಾರ ಮಾಡುತ್ತಿದ್ದ ಬಡ ಮಹಿಳೆ ನಾಗಮ್ಮ ಕಂಬನಿ ಮಿಡಿಯುತ್ತಾ ಮಾತನಾಡಿ, ಹೊಟ್ಟೆಪಾಡಿಗಾಗಿ ಸಾಲ ಮಾಡಿ ಚಿಕ್ಕದಾದ ತಳ್ಳುಗಾಡಿಯಲ್ಲಿ ಪೆಟ್ಟಿಗೆ ಅಂಗಡಿ ನಿರ್ಮಿಸಿಕೊಂಡು ಸಣ್ಣ ಪುಟ್ಟ ವಸ್ತುಗಳನ್ನು ಮಾರಿ ಜೀವನ ಸಾಗಿಸುತ್ತಿದ್ದೇನೆ. ನಿನ್ನೆ ಸಂಜೆಯಷ್ಟೇ ವ್ಯಾಪಾರಕ್ಕಾಗಿ ಸಗಟು ಮಾರಾಟ ಅಂಗಡಿಯಿಂದ ಮಸಾಲೆ ಹಾಗೂ ದಿನಸಿ ಪದಾರ್ಥಗಳನ್ನು ತಂದು ಇಟ್ಟಿದ್ದೆ ಆದರೆ ಯಾರೋ ಕಾರಿನಲ್ಲಿ ಬಂದ ಅಪರಿಚಿತ ವ್ಯಕ್ತಿ ಅದನ್ನು ದೋಚಿರುವುದಲ್ಲದೆ ಕೂಡಿಟ್ಟಿದ ಸಾವಿರಾರು ರುಪಾಯಿ ಹಣವನ್ನು ಲಪಟಾಯಿಸಿದ್ದಾನೆ. ಈ ರೀತಿ ಮುಖ್ಯ ರಸ್ತೆಯ ಬದಿಯಲ್ಲಿ ವಾಹನ ಸಂಚಾರ ಇರುವ ಸಂದರ್ಭದಲ್ಲೇ ಯಾರ ಭಯವೂ ಇಲ್ಲದೆ ದರೋಡೆ ನಡೆದಿದೆ. ಈ ರೀತಿ ನಡೆದರೆ ಇತರೆ ಅಂಗಡಿ ಮುಂಗ್ಗಟುಗಳು ಎಷ್ಟು ಸುರಕ್ಷಿತ. ಒಂದೊಂದು ರುಪಾಯಿ ಕೂಡಿಟ್ಟು ಜೀವನ ಸಾಗಿಸುವ ನಮ್ಮಂತ ಬಡವರ ಪಾಡೇನು? ಪೊಲೀಸರು ಈ ಬಗ್ಗೆ ಪರಿಶೀಲಿಸಿ ನಮಗೆ ನ್ಯಾಯ ಒದಗಿಸಬೇಕು ಎಂದು ತಮ್ಮ ಅಳಲನ್ನು ಮಾಧ್ಯಮದ ಮೂಲಕ ತೋಡಿಕೊಂಡಿದ್ದಾರೆ.