ಕನ್ನಡಪ್ರಭ ವಾರ್ತೆ ಬೈಲಹೊಂಗಲ ತಾಲೂಕಿನ ಚಿವಟಗುಂಡಿ ಗ್ರಾಮದಲ್ಲಿ ಹಾಡಹಗಲೆ ಮನೆಗೆ ನುಗ್ಗಿ ₹5.49 ಲಕ್ಷ ಮೌಲ್ಯದ ಚಿನ್ನಾಭರಣ ಕಳವು ಮಾಡಿದ್ದ ಆರೋಪಿಯನ್ನು ಬೈಲಹೊಂಗಲ ಪೊಲೀಸರು ಬಂಧಿಸಿ, ಕಳವಾಗಿದ್ದ 58 ಗ್ರಾಂ ಚಿನ್ನಾಭರಣವನ್ನು ಜಪ್ತಿ ಮಾಡಿ ನ್ಯಾಯಾಂಗ ಬಂಧನಕ್ಕೆ ಒಳಪಡಿಸಿದ್ದಾರೆ.

ಕನ್ನಡಪ್ರಭ ವಾರ್ತೆ ಬೈಲಹೊಂಗಲ

ತಾಲೂಕಿನ ಚಿವಟಗುಂಡಿ ಗ್ರಾಮದಲ್ಲಿ ಹಾಡಹಗಲೆ ಮನೆಗೆ ನುಗ್ಗಿ ₹5.49 ಲಕ್ಷ ಮೌಲ್ಯದ ಚಿನ್ನಾಭರಣ ಕಳವು ಮಾಡಿದ್ದ ಆರೋಪಿಯನ್ನು ಬೈಲಹೊಂಗಲ ಪೊಲೀಸರು ಬಂಧಿಸಿ, ಕಳವಾಗಿದ್ದ 58 ಗ್ರಾಂ ಚಿನ್ನಾಭರಣವನ್ನು ಜಪ್ತಿ ಮಾಡಿ ನ್ಯಾಯಾಂಗ ಬಂಧನಕ್ಕೆ ಒಳಪಡಿಸಿದ್ದಾರೆ. ಚಿವಟಗುಂಡಿ ಗ್ರಾಮದ ಮಹಾಂತೇಶ ಬೋಗೂರ ಎಂಬುವರು ನೀಡಿದ ದೂರಿನ ಪ್ರಕಾರ, ಜು.12ರಂದು ಬೆಳಗ್ಗೆ 10ರಿಂದ ಸಂಜೆ 6ರ ನಡುವೆ ಕುಟುಂಬದವರು ಜಮೀನಿಗೆ ತೆರಳಿದ್ದಾಗ, ಮನೆಯ ಬಾಗಿಲಿನ ಕೀಲಿ ಮುರಿದು ಒಳನುಗ್ಗಿದ ಕಳ್ಳ ತಿಜೋರಿಯಲ್ಲಿದ್ದ ₹ 5.49 ಲಕ್ಷ ಮೌಲ್ಯದ 58 ಗ್ರಾಂ ತೂಕದ ಚಿನ್ನಾಭರಣ ಹಾಗೂ ₹ 48 ಸಾವಿರ ನಗದು ಕದ್ದು ಪರಾರಿಯಾಗಿದ್ದನು.

ಮನೆ ಕಳ್ಳತನವಾಗಿರುವ ಬಗ್ಗೆ ಮಹಾಂತೇಶ ಬೋಗೂರ ಬೈಲಹೊಂಗಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿದ್ದರು. ಬಳಿಕ ಕಾರ್ಯಾಚರಣೆ ನಡೆಸಿದ ಪೊಲೀಸರು ಪ್ರಕರಣಕ್ಕೆ ಸಂಬಂಧಿಸಿದಂತೆ ಚಿವಟಗುಂಡಿ ಗ್ರಾಮದ ಪ್ರಕಾಶ ರಾಯಪ್ಪ ಮಲ್ಲೂರ(40) ಎಂಬಾತನನ್ನು ಬಂಧಿಸಿದ್ದಾರೆ. ಅಲ್ಲದೇ, ಆರೋಪಿಯಿಂದ ಕಳವು ಮಾಡಿದ್ದ ಚಿನ್ನಾಭರಣವನ್ನು ವಶಪಡಿಸಿಕೊಂಡು, ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.

ಜಿಲ್ಲಾ ಪೊಲೀಸ್ ಅಧೀಕ್ಷಕ ಕೆ.ರಾಮರಾಜನ್, ಹೆಚ್ಚುವರಿ ಪೊಲೀಸ್ ಅಧೀಕ್ಷಕ ಆರ್.ಬಿ.ಬಸರ್ಗಿ ಹಾಗೂ ಡಿವೈಎಸ್ಪಿ ಡಾ.ವೀರಯ್ಯ ಹಿರೇಮಠ ಮಾರ್ಗದರ್ಶನದಲ್ಲಿ, ಪಿಐ ಪ್ರಮೋದ ಯಲಿಗಾರ ನೇತೃತ್ವದಲ್ಲಿ ಕಾರ್ಯಾಚರಣೆ ನಡೆಸಲಾಯಿತು. ಪಿಎಸ್‌ಐ ಬಸವರಾಜ ಜಾಲಾಪೂರ, ಎಎಸ್‌ಐ ಕೆ.ಆರ್. ಇಮಾಮನವರ ಹಾಗೂ ಸಿಬ್ಬಂದಿಗಳಾದ ಚೇತನ ಬುದ್ನಿ, ಎಂ.ಬಿ.ಗಿಡಗೇರಿ, ಎಸ್.ಎನ್.ಬಡಬಡೆ, ಎಂ.ಎಸ್.ಅವರಾದಿ, ಎಸ್.ಬಿ.ಚಿಪ್ಪಲಕಟ್ಟಿ, ಕೆ.ಬಿ.ಮಾದಿನ್ನಿ, ಕಚೇರಿಯ ತಾಂತ್ರಿಕ ಸಿಬ್ಬಂದಿ ಸಚೀನ ಪಾಟೀಲ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು. ಪ್ರಕರಣ ಪತ್ತೆಹಚ್ಚಿದ ಪೊಲೀಸ್ ಅಧಿಕಾರಿ ಮತ್ತು ಸಿಬ್ಬಂದಿ ಕಾರ್ಯವನ್ನು ಹಿರಿಯ ಅಧಿಕಾರಿಗಳು ಶ್ಲಾಘಿಸಿದ್ದಾರೆ.