ಸಾರಾಂಶ
ದೂರವಾಣಿ ನಗರದಲ್ಲಿರುವ ಪಂಚಮುಖಿ ಗಣಪತಿ ದೇವಾಸ್ಥಾನದ ಬಾಗಿಲಿನ ಬೀಗ ಮುರಿದು ಒಳ ನುಗ್ಗಿರುವ ಕಳ್ಳರು, ಗರ್ಭಗುಡಿಯೊಳಗಿದ್ದ ಹುಂಡಿಯಲ್ಲಿನ ಸುಮಾರು ಒಂದು ಲಕ್ಷಕ್ಕೂ ಹೆಚ್ಚಿನ ಹಣ ದೋಚಿಕೊಂಡು ಹೋಗಿದ್ದಾರೆ.
ಹಾಸನ: ನಗರದ ಸಮೀಪ ಅರಸೀಕೆರೆ ರಸ್ತೆಯ ಬಿ. ಕಾಟಿಹಳ್ಳಿ ಬಳಿ ಇರುವ ದೂರವಾಣಿ ನಗರದ ಪಂಚಮುಖಿ ಗಣಪತಿ, ಸುಬ್ರಹ್ಮಣ್ಯ ಮತ್ತು ನವಗ್ರಹ ದೇವಾಲಯದಲ್ಲಿ ತಡರಾತ್ರಿ ದೇವಸ್ಥಾನದ ಬಾಗಿಲು ಮುರಿದು ಕಾಣಿಕೆ ಹುಂಡಿ ಒಡೆದು ಅಂದಾಜು ಒಂದು ಲಕ್ಷಕ್ಕೂ ಹೆಚ್ಚಿನ ಹಣವನ್ನು ಕಳವು ಮಾಡಿದ ಘಟನೆ ನಡೆದಿದೆ. ದೇವಾಲಯದ ಜವಾಬ್ದಾರಿ ಹೊತ್ತಿರುವ ಸಂಪತ್ ಕುಮಾರ್ ಮಾಧ್ಯಮದೊಂದಿಗೆ ಮಾತನಾಡಿ, ದೂರವಾಣಿ ನಗರದಲ್ಲಿರುವ ಪಂಚಮುಖಿ ಗಣಪತಿ ದೇವಾಸ್ಥಾನದ ಬಾಗಿಲಿನ ಬೀಗ ಮುರಿದು ಒಳ ನುಗ್ಗಿರುವ ಕಳ್ಳರು, ಗರ್ಭಗುಡಿಯೊಳಗಿದ್ದ ಹುಂಡಿಯಲ್ಲಿನ ಸುಮಾರು ಒಂದು ಲಕ್ಷಕ್ಕೂ ಹೆಚ್ಚಿನ ಹಣ ದೋಚಿಕೊಂಡು ಹೋಗಿದ್ದಾರೆ. ಕಳೆದ ವರ್ಷ ಕೂಡ ಇದೇ ದೇವಸ್ಥಾನದ ಬಾಗಿಲು ಮುರಿದು ಹುಂಡಿಯೊಳಗಿದ್ದ ಎರಡು ಲಕ್ಷ ಬೆಲೆ ಬಾಳುವ ಬೆಳ್ಳಿಯ ಆಭರಣ ಮತ್ತು ಹಣ ದೋಚಿಕೊಂಡು ಹೋಗಿದ್ದರು. ಈ ಬಗ್ಗೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಆದರೆ ಇದುವರೆಗೂ ದರೋಡೆಕೋರರ ಬಗ್ಗೆ ಯಾವ ಮಾಹಿತಿಯೂ ಸಿಕ್ಕಿಲ್ಲ ಎಂದು ದೂರಿದರು.
ಈಗ ಮೂರನೇ ಬಾರಿಗೆ ಒಂದೇ ದೇವಾಲಯದಲ್ಲಿ ಕಳ್ಳತನ ನಡೆದಿರುವುದು. ಕಳ್ಳರನ್ನು ಪತ್ತೆಹಚ್ಚಿ ದೇಗುಲದ ಒಡವೆ ಹಾಗೂ ಹಣ ವಾಪಸ್ ಕೊಡಿಸಬೇಕು ಎಂದು ಒತ್ತಾಯಿಸಿದರು. ನಗರದ ಸುತ್ತಲೂ ಹಲವಾರು ಮನೆಗಳ ಕಳ್ಳತನವಾಗಿದ್ದವು. ದೂರು ದಾಖಲಾಗಿದ್ದರೂ ಸಹ ಕಳ್ಳರ ಪತ್ತೆ ಆಗಿಲ್ಲ. ಇದರಿಂದ ಜನರು ಭಯಭೀತರಾಗಿದ್ದಾರೆ. ಪೊಲೀಸ್ ಇಲಾಖೆಯು ಸೂಕ್ತ ತನಿಖೆ ನಡೆಸಿ ನಮಗೆ ನ್ಯಾಯ ದೊರಕಿಸಿ ಕೊಡಬೇಕೆಂದು ಮನವಿ ಮಾಡಿದರು. ಹಾಸನ ನಗರ ಠಾಣೆಯಲ್ಲಿ ದೂರು ದಾಖಲಾಗಿದೆ.