ಬಿಜೆಪಿ ಉಪಾಧ್ಯಕ್ಷರ ಮನೆ ಬೀಗ ಮುರಿದ ಕಳ್ಳರು!

| Published : Aug 25 2024, 01:47 AM IST

ಸಾರಾಂಶ

ಕೊಳ್ಳೇಗಾಲದಲ್ಲಿ ಮಾಜಿ ಸಚಿವ ಮಹೇಶ್ ಅವರ ಮನೆಯಲ್ಲಿ ಕಳ್ಳತನ ಹಿನ್ನೆಲೆ ಪೊಲೀಸರು ಪರಿಶೀಲನೆ ನಡೆಸಿದರು.

ಕನ್ನಡಪ್ರಭ ವಾರ್ತೆ ಕೊಳ್ಳೇಗಾಲ

ಮಾಜಿ ಶಿಕ್ಷಣ ಸಚಿವ ಹಾಗೂ ರಾಜ್ಯ ಬಿಜೆಪಿ ಉಪಾಧ್ಯಕ್ಷ ಎನ್.ಮಹೇಶ್ ಅವರ ಕೊಳ್ಳೆಗಾಲದ ಮನೆಯಲ್ಲಿನ ಬೀಗ ಮುರಿದು ಸುಮಾರು 50 ಸಾವಿರ ರು.ಗೂ ಅಧಿಕ ನಗದನ್ನು ಕಳ್ಳರು ದೋಚಿದ್ದಾರೆ.

ಕೊಳ್ಳೇಗಾಲ ಪಟ್ಟಣದ ಆದರ್ಶ ಬಡಾವಣೆಯಲ್ಲಿ ಮಾಜಿ ಶಿಕ್ಷಣ ಸಚಿವ ಎನ್. ಮಹೇಶ್ ಅವರ ನಿವಾಸವಿದ್ದು, ಶುಕ್ರವಾರ ಸಂಜೆ ತನಕ ಮನೆಯಲ್ಲಿದ್ದ ಎನ್.ಮಹೇಶ್ ಅವರು ಅನ್ಯ ಕಾರ್ಯನಿಮಿತ್ತ ಬೆಂಗಳೂರಿಗೆ ತೆರಳಿದ್ದರು. ಈ ಬಗ್ಗೆ ಮಾಹಿತಿ ಕಲೆ ಹಾಕಿ ಹೊಂಚು ಹಾಕುತ್ತಿದ್ದ ಕಳ್ಳರು ರಾತ್ರಿ ಮನೆಗೆ‌ ನುಗ್ಗಿ ಕಳ್ಳತನ ಮಾಡಿದ್ದಾರೆ. ನೆರೆ ಮೆನೆಯವರಿಂದ ಎನ್.ಮಹೇಶ್ ಮನೆಗೆ ಕನ್ನ ಹಾಕಿರುವುದು ತಿಳಿದಿದೆ. ಸ್ಥಳಕ್ಕೆ ಕೊಳ್ಳೇಗಾಲ ಪೊಲೀಸರು ಆಗಮಿಸಿ ಸ್ಥಳ ಪರಿಶೀಲನೆ ನಡೆಸಿದ್ದಾರೆ.

ಬೆಂಗಳೂರಿನಲ್ಲಿದ್ದ ಮಹೇಶ್ ಅವರು ಶನಿವಾರ ಸಂಜೆ ಕೊಳ್ಳೇಗಾಲಕ್ಕೆ ಆಗಮಿಸಿ 50 ಸಾವಿರ ರು. ಕಳ್ಳತನವಾಗಿದೆ ಎಂದು ದೂರು ನೀಡಿದ್ದು ಪಟ್ಟಣದಲ್ಲಿ ಪೊಲೀಸ್ ವ್ಯವಸ್ಥೆ ನಿಷ್ಕ್ರಿಯವಾಗಿದೆ ಎಂದು ಆರೋಪಿಸಿದ್ದಾರೆ. ನನ್ನ ಮನೆ ಕಳ್ಳತನವಾದದ್ದಕ್ಕೆ ನಾನು ದೂರುತ್ತಿಲ್ಲ, ಕೊಳ್ಳೇಗಾಲ ಪಟ್ಟಣದಲ್ಲಿ ಒಂದೆಡೆ ಕಾನೂನು ಸುವ್ಯವಸ್ಥೆ ಸುಗಮವಾಗಿಲ್ಲ, ಅದರಲ್ಲೂ ಕಳ್ಳತನ ಪ್ರಕರಣ ಹೆಚ್ಚುತ್ತಿದೆ. ಬೀಟ್ ಪೊಲೀಸರು ಸಮರ್ಪಕ ರೀತಿ ಕರ್ತವ್ಯ ನಿರ್ವಹಿಸಿದ್ದರೆ ಕಳ್ಳತನಗಳಿಗೆ ಕಡಿವಾಣ ಹಾಕಬಹುದಿತ್ತು. ನಾನು ವಾಸವಿರುವ ಆದರ್ಶ ಬಡಾವಣೆಯಲ್ಲಿ ಅನೇಕ ಗಣ್ಯರು, ಅಧಿಕಾರಿಗಳು ಮನೆ ಮಾಡಿ ವಾಸವಿದ್ದಾರೆ, ನನ್ನ ಮನೆಯಲ್ಲಿ 50 ಸಾವಿರ ರು.ವಿತ್ತಷ್ಟೆ, ಅನ್ಯರ ಮನೆಯಲ್ಲಿ ಕಳ್ಳತನವಾಗಿದ್ದರೆ ಅವರು ಶ್ರಮಪಟ್ಟು ಮನೆ ಕಟ್ಟಲು ಕೂಡಿಸಿಟ್ಟಿದ್ದ ಹಣ ಕಳವಾಗುತ್ತಿತ್ತು, ಇನ್ನಾದರೂ ಪೊಲೀಸ್ ವ್ಯವಸ್ಥೆ ಚುರುಕಾಗಬೇಕು ಎಂದು ಆಗ್ರಹಿಸಿದರು.