ಸಾರಾಂಶ
ಕನ್ನಡಪ್ರಭ ವಾರ್ತೆ ಹನೂರು
ತರಸ್ ಲಾರಿಯನ್ನು ಕಳ್ಳತನ ಮಾಡಿ ಚಕ್ರಗಳು ಹಾಗೂ ಬ್ಯಾಟರಿಗಳನ್ನು ಕಳಚಿ ಕಳವು ಮಾಡಿರುವ ಘಟನೆ ರಾಮಪುರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ಈ ಬಗ್ಗೆ ದೂರು ಸಲ್ಲಿಸಲಾಗಿದೆ.ರಾಮಪುರ ಗ್ರಾಮದ ನಿವಾಸಿ ಲಾರಿ ಮಾಲೀಕ ಪಂಚಾಕ್ಷರಿಗೆ ಸೇರಿದ ತರಸ್ ಲಾರಿಯನ್ನು ಫೆ.1ರಂದು ಕೌದಳ್ಳಿ ಪಂಚರ್ ಅಂಗಡಿ ಬಳಿ ನಿಲ್ಲಿಸಿ ಚಾಲಕ ಮನೆಗೆ ತೆರಳಿದ್ದನು. ಈ ವೇಳೆ ನಿಂತಿದ್ದ ಲಾರಿ ನಾಪತ್ತೆಯಾಗಿದ್ದು ಮಾಲೀಕ ಪಂಚಾಕ್ಷರಿ ಹುಡುಕಾಡಿ ಸಿಗದಿದ್ದಾಗ ಹನೂರು ಪೊಲೀಸ್ ಠಾಣಾ ಸರಹದ್ದಿನ ಲೊಕ್ಕನಹಳ್ಳಿ ಮುಖ್ಯರಸ್ತೆಯಲ್ಲಿ ಲಾರಿಯ 9 ಚಕ್ರಗಳು ಸೇರಿದಂತೆ ಬ್ಯಾಟರಿಗಳನ್ನು ಕಳಚಿ ಕಳವು ಮಾಡಿ ಲಾರಿಯನ್ನು ಅಲ್ಲೇ ಬಿಟ್ಟು ಕಳ್ಳರು ಪರಾರಿಯಾಗಿದ್ದಾರೆ. ಈ ಸಂಬಂಧ ಲಾರಿ ಮಾಲಿಕ ಪಂಚಾಕ್ಷರಿ ರಾಮಪುರ ಪೊಲೀಸ್ ಠಾಣೆಗೆ ದೂರು ನೀಡಿದ್ದು ಪೊಲೀಸರು ಪ್ರಕರಣ ದಾಖಲಿಸಿ ಕೊಂಡಿದ್ದಾರೆ.
ಕಳ್ಳರ ಪತ್ತೆಗೆ ತಂಡ ರಚನೆ:ಕಳ್ಳರ ಪತ್ತೆಗೆ ರಾಮಪುರ ಪೊಲೀಸರು ಹಿರಿಯ ಅಧಿಕಾರಿಗಳ ಮಾರ್ಗದರ್ಶನದಲ್ಲಿ ಪ್ರಕರಣದ ದಾಖಲಿಸಿಕೊಂಡು ಈ ಸಂಬಂಧ ತಂಡ ರಚನೆ ಮಾಡಿ ಕಳ್ಳರ ಪತ್ತೆಗೆ ಬಲೆ ಬೀಸಿದ್ದಾರೆ.ಕ್ಷೇತ್ರದಲ್ಲಿ ಅಂದರ್ ಬಾಹರ್:
ಮಲೆಮಹದೇಶ್ವರ ಬೆಟ್ಟದಲ್ಲಿ ಭಾನುವಾರ ರಾತ್ರಿ ಅಂದರ್ ಬಾಹರ್ ಆಡುತ್ತಿರುವ ಬಗ್ಗೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಬಿ.ಟಿ.ಕವಿತಾ ಅವರಿಗೆ ದೊರೆತ ಖಚಿತ ಮಾಹಿತಿ ಮೇರೆಗೆ ಜಿಲ್ಲಾ ಅಪರಾಧ ತಂಡ ಪೊಲೀಸರು ಹಾಗೂ ಮಲೆಮಾದೇಶ್ವರ ಬೆಟ್ಟದ ಪೊಲೀಸರು ಏಕಕಾಲದಲ್ಲಿ ದಾಳಿ ನಡೆಸಿ ಮಲೆ ಮಾದೇಶ್ವರ ಬೆಟ್ಟದ ಗುರು ನಗರದಲ್ಲಿ ಬರುವ ಡಿ.ಆರ್.ಮಹದೇಶ್ ಮನೆಯಲ್ಲಿ ಇಸ್ಪೀಟ್ ಆಡುತ್ತಿದ್ದ 16 ಜನರನ್ನು ವಶಕ್ಕೆ ಪಡೆದು ಪಣಕ್ಕಿಟ್ಟಿದ್ದ 3,09,065 ರು. ಸೇರಿದಂತೆ ನಗದು ಹಾಗೂ 14 ಮೊಬೈಲ್ ಗಳನ್ನು ಪೊಲೀಸರು ದಾಳಿ ವೇಳೆಯಲ್ಲಿ ವಶಕ್ಕೆ ಪಡೆದಿದ್ದಾರೆ.ಮಲೆಮಾದೇಶ್ವರ ಬೆಟ್ಟಕ್ಕೆ ಚಾಮರಾಜನಗರ ತಾಲೂಕಿನ ಕಮರವಾಡಿ, ಬಾಣನಳ್ಳಿ ಹಾಗೂ ಮೂಡ್ಲು ಅಗ್ರಹಾರ ಸೇರಿದಂತೆ ವಿವಿಧ ಗ್ರಾಮದ 16 ಜನರು ತೆರಳಿ ಅಲ್ಲಿ ಖಾಸಗಿ ಕೊಠಡಿ ಬಾಡಿಗೆಗೆ ಪಡೆದು ಭಾನುವಾರ ರಾತ್ರಿ ಅಂದರ್ ಬಾಹರ್ ಆಡುತ್ತಿರುವ ಬಗ್ಗೆ ದೊರೆತ ಖಚಿತ ಮಾಹಿತಿಯನ್ನು ಆಧರಿಸಿ ಜಿಲ್ಲಾ ಅಪರಾಧ ದಳದ ತಂಡ ಸೇರಿದಂತೆ ಮಲೆಮಾದೇಶ್ವರ ಬೆಟ್ಟದ ಪೊಲೀಸರು ಇಸ್ಪೀಟ್ ಅಡ್ಡೆಯ ಮೇಲೆ ದಾಳಿ ನಡೆಸಿ ಹಿರಿಯ ಅಧಿಕಾರಿಗಳ ಮಾರ್ಗದರ್ಶನದಲ್ಲಿ ಪ್ರಕರಣದ ಕಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ.
ದಾಳಿಯಲ್ಲಿ ಇನ್ಸ್‌ಪೆಕ್ಟರ್ ಜಗದೀಶ್ ಪಿಎಸ್ಐ ಬಸವರಾಜ್ ಉಪ್ಪಾರದಿನ್ನಿ ಸಹಾಯಕ ಸಬ್ ಇನ್ಸ್‌ಪೆಕ್ಟರ್ ಗೋವಿಂದ್ ರಾಜ್ ಹಾಗೂ ಜಿಲ್ಲಾ ಅಪರಾಧದಳ ತಂಡ ಸಿಂಗಂ ನಾಗರಾಜ್ ಹಾಗೂ ಪೊಲೀಸರಾದ ಮಧುಕುಮಾರ್, ಬಂಗಾರು, ರಮೇಶ್ ಇನ್ನಿತರರು ದಾಳಿಯಲ್ಲಿ ಪಾಲ್ಗೊಂಡಿದ್ದರು.ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಗಳ ಸೂಚನೆಯ ಮೇರೆಗೆ ಜಿಲ್ಲಾ ಅಪರಾಧ ತಂಡ ಮಲೆಮಾದೇಶ್ವರ ಬೆಟ್ಟದ ಪೊಲೀಸರು ಕ್ರಮ ಕೈಗೊಳ್ಳುವ ನಿಟ್ಟಿನಲ್ಲಿ ಅಕ್ರಮ ಇಸ್ಪೀಟ್ ದಂಧೆಗೆ ಕಡಿವಾಣ ಹಾಕುವಲ್ಲಿ ಚಾಮರಾಜನಗರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ದಿಟ್ಟ ಕ್ರಮ ಕೈಗೊಂಡಿದ್ದಾರೆ ಎಂದು ಮಾದಪ್ಪನ ಭಕ್ತಾದಿಗಳು ತಿಳಿಸಿದ್ದಾರೆ.