ದಂಪತಿಯನ್ನು ಕಟ್ಟಿಹಾಕಿ ಚಿನ್ನಾಭರಣ, ನಗದು ದೋಚಿದ ಕಳ್ಳರು

| Published : Jun 24 2024, 01:30 AM IST

ಸಾರಾಂಶ

ಪಟ್ಟಣದ ಬೆಂಗಳೂರು ರಸ್ತೆಯ ಸಣ್ಣಲಿಂಗಪ್ಪ ಬಡಾವಣೆ ಮನೆಯೊಂದಕ್ಕೆ ಹಿಂಬಾಗಿಲಿನಿಂದ ನುಗ್ಗಿದ ಮೂವರು ಕಳ್ಳರು ಶಿಕ್ಷಕ ಬಿ.ಈರಣ್ಣ (೫೪), ಪತ್ನಿ ರಾಧ (೪೭) ದಂಪತಿ ಮೇಲೆ ಹಲ್ಲೆ ನಡೆಸಿ, ಜೀವ ಬೆದರಿಕೆಯೊಡ್ಡಿ, ಮನೆಯಲ್ಲಿದ್ದ ಚಿನ್ನಾಭರಣ, ನಗದು ದೋಚಿರುವ ಘಟನೆ ಶನಿವಾರ ರಾತ್ರಿ ೧೧.೩೦ರ ಸಮಯದಲ್ಲಿ ನಡೆದಿದೆ.

- ಸಣ್ಣಲಿಂಗಪ್ಪ ಬಡಾವಣೆ ಮನೆಯಲ್ಲಿ ಘಟನೆ । ದಂಪತಿಗೆ ಹಿಗ್ಗಾಮುಗ್ಗ ಥಳಿಸಿದ ಕಳ್ಳರು । ಪೊಲೀಸರಿಗೆ ಎಸ್‌ಪಿ ತರಾಟೆ - - - ಕನ್ನಡಪ್ರಭ ವಾರ್ತೆ ಚಳ್ಳಕೆರೆ

ಪಟ್ಟಣದ ಬೆಂಗಳೂರು ರಸ್ತೆಯ ಸಣ್ಣಲಿಂಗಪ್ಪ ಬಡಾವಣೆ ಮನೆಯೊಂದಕ್ಕೆ ಹಿಂಬಾಗಿಲಿನಿಂದ ನುಗ್ಗಿದ ಮೂವರು ಕಳ್ಳರು ಶಿಕ್ಷಕ ಬಿ.ಈರಣ್ಣ (೫೪), ಪತ್ನಿ ರಾಧ (೪೭) ದಂಪತಿ ಮೇಲೆ ಹಲ್ಲೆ ನಡೆಸಿ, ಜೀವ ಬೆದರಿಕೆಯೊಡ್ಡಿ, ಮನೆಯಲ್ಲಿದ್ದ ಚಿನ್ನಾಭರಣ, ನಗದು ದೋಚಿರುವ ಘಟನೆ ಶನಿವಾರ ರಾತ್ರಿ ೧೧.೩೦ರ ಸಮಯದಲ್ಲಿ ನಡೆದಿದೆ.

ಮನೆಗೆ ನುಗ್ಗಿದ ಕಳ್ಳರು ದಂಪತಿಯನ್ನು ಬೆದರಿಸಿ, ಅವರನ್ನು ಪಂಚೆ, ಟವಲ್‌ನಿಂದ ಕಟ್ಟಿ ಹಾಕಿದ್ದಾರೆ. ಬಳಿಕ ಕಿವಿಯಲ್ಲಿದ್ದ ಬಂಗಾರದ ಓಲೆ, ಜುಮುಕಿ, ಬೆಂಡೋಲೆ, ಕುತ್ತಿಗೆಯಲ್ಲಿದ್ದ ಮಾಂಗಲ್ಯ ಸರ, ಕೈಯಲ್ಲಿನ ಉಂಗುರ, ಬೆಳ್ಳಿ ದೀಪ, ಕುಂಕುಮದ ಬಟ್ಟಲು ಹಾಗೂ ₹೨೫ ಸಾವಿರ ನಗದು ಕಳ್ಳರು ಬಲವಂತವಾಗಿ ಪಡೆದಿದ್ದಾರೆ.

ಮನೆಯ ಹಿಂಬಾಗಿಲಿನ ಬೀಗ ಮುರಿದು ಒಳನುಗ್ಗಿದ ದರೋಡೆಕೋರರು ಮನೆಯ ಲೈಟ್ ಆಫ್ ಮಾಡಿದ್ದಾರೆ. ಬಳಿಕ ಈರಣ್ಣ ಮತ್ತು ರಾಧ ಅವರ ಮುಖಕ್ಕೆ ಮೊಬೈಲ್ ಬೆಳಕು ಹರಿಸಿ, ಚಿನ್ನಾಭರಣ, ನಗದು ಕೊಡುವಂತೆ ಹಿಂಸಿಸಿದ್ದಾರೆ. ಈರಣ್ಣ ಅವರ ಎಡಭುಜ ಹಾಗೂ ಬೆನ್ನಿನ ಮೇಲೆ ಕೋಲಿನಿಂದ ಬಲವಾಗಿ ಹಲ್ಲೆ ನಡೆಸಿದ್ದಾರೆ. ಪತ್ನಿ ರಾಧ ಅವರ ಎಡಗಾಲಿಗೂ ತೀವ್ರವಾಗಿ ಕೋಲಿನಿಂದ ಹಲ್ಲೆ ನಡೆಸಿದ್ದಾರೆ. ಅಸ್ವಸ್ಥಗೊಂಡಿರುವ ದಂಪತಿ ಸಾರ್ವಜನಿಕ ಆಸ್ಪತ್ರೆಗೆ ದಾಖಲಾಗಿ, ಚಿಕಿತ್ಸೆ ಪಡೆಯುತ್ತಿದ್ದಾರೆ.

ದರೋಡೆ ನಡೆಯುವ ಮುನ್ನವೇ ಕಾರೊಂದು ಈರಣ್ಣ ಅವರ ಮನೆ ಮುಂದೆ ಹಾದುಹೋಗಿದೆ. ಕಳವು ಕೃತ್ಯ ನಡೆಸಿದ ಎಲ್ಲರೂ ೩೦-೩೫ ವರ್ಷ ವಯಸ್ಸಿನವರು, ಕನ್ನಡದಲ್ಲೇ ಮಾತನಾಡುತ್ತಿದ್ದರು. ಕೇವಲ ೧೫-೨೦ ನಿಮಿಷ ಅವಧಿಯಲ್ಲಿ ಎಲ್ಲವನ್ನೂ ದೋಚಿದ್ದಾರೆ. ಕಳ್ಳರು ತೆರಳಿದ ಬಳಿಕ ನಾವು ಸಹಾಯಕ್ಕಾಗಿ ಕೂಗಿಕೊಂಡಾಗ ನೆರೆಹೊರೆಯವರು ನೆರವಿಗೆ ಧಾವಿಸಿ, ಆಸ್ಪತ್ರೆಗೆ ದಾಖಲಿಸಿದ್ದಾರೆ ಎಂದು ತಿಳಿಸಿದರು.

ಒಟ್ಟು ₹೩.೫೦ ಲಕ್ಷ ಬಂಗಾರದ ಆಭರಣ, ₹೨೦ ಸಾವಿರ ಮೌಲ್ಯದ ಬೆಳ್ಳಿ ಆಭರಣ ಹಾಗೂ ₹೨೫ ಸಾವಿರ ನಗದು ಕಳ್ಳರು ದೋಚಿದ್ದಾರೆ. ಹಿರಿಯ ಪೊಲೀಸ್‌ ಅಧಿಕಾರಿಗಳ ಮಾರ್ಗದರ್ಶನದಲ್ಲಿ ಪಿಎಸ್‌ಐ ಧರೆಪ್ಪಾ ಬಾಳಪ್ಪ ದೊಡ್ಡಮನಿ ಪ್ರಕರಣ ದಾಖಲಿಸಿದ್ದಾರೆ.

- - -

ಬಾಕ್ಸ್ * ಎಸ್‌ಪಿ ಭೇಟಿ- ಅಧಿಕಾರಿಗಳಿಗೆ ತರಾಟೆ: ಸುದ್ದಿ ತಿಳಿದು ಸ್ಥಳಕ್ಕೆ ಜಿಲ್ಲಾ ರಕ್ಷಣಾಧಿಕಾರಿ ಧರ್ಮೇಂದ್ರಕುಮಾರ್‌ ಮೀನಾ ಆಗಮಿಸಿದರು. ಪೊಲೀಸರು ಘಟನೆ ನಡೆದು 3 ಗಂಟೆಗಳ ನಂತರ ಸ್ಥಳಕ್ಕೆ ಧಾವಿಸಿದ್ದರು. ಈ ಬಗ್ಗೆ ತಿಳಿದು ಅಧಿಕಾರಿಗಳು ಹಾಗೂ ಪೊಲೀಸ್ ಸಿಬ್ಬಂದಿಯನ್ನು ತರಾಟೆಗೆ ತೆಗೆದುಕೊಂಡರು. ರಾತ್ರಿಯಿಡೀ ಡಿವೈಎಸ್ಪಿ ರಾಜಣ್ಣ, ಸಿಪಿಐ ರಾಜಫಕೃದ್ದೀನ್ ದೇಸಾಯಿ, ರಾಜಶೇಖರಯ್ಯ ಮತ್ತು ಸಿಬ್ಬಂದಿ ಕಳ್ಳರಿಗಾಗಿ ಶೋಧ ನಡೆಸಿದರು. ಆದರೆ, ಒಬ್ಬನೂ ಪತ್ತೆಯಾಗಲಿಲ್ಲ.

ಜಿಲ್ಲಾ ರಕ್ಷಣಾಧಿಕಾರಿ ಅವರು ರಾತ್ರಿ ವೇಳೆಯ ಪಹರೆಯನ್ನು ಇನ್ನಷ್ಟು ಬೀಗಿಗೊಳಿಸುವಂತೆ ಸೂಚನೆ ನೀಡಿದ್ದಾರೆ. ವಿಶೇಷವಾಗಿ ನಗರದ ಹೊರವಲಯದ ಹೋಟೆಲ್, ಡಾಬಾ, ಅಂಗಡಿಗಳ ಸುತ್ತಮುತ್ತಲ ಪರಿಶೀಲನೆ ನಡೆಸಲು ತಿಳಿಸಿದ್ದಾರೆ. ಪೊಲೀಸ್ ಇಲಾಖೆ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದೆ. ಘಟನೆಯಿಂದ ಸ್ಥಳೀಯರಲ್ಲಿ ಆತಂಕ ಸೃಷ್ಟಿಯಾಗಿದೆ.

- - - -೨೩ಸಿಎಲ್‌ಕೆ೦೧:

ಚಳ್ಳಕೆರೆ ನಗರದ ಹೊರವಲಯದ ಮನೆಯಲ್ಲಿ ಕಳ್ಳರಿಂದ ಹಲ್ಲೆಗೊಳಗಾಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವವರನ್ನು ದಂಪತಿಯನ್ನು ಜಿಲ್ಲಾ ರಕ್ಷಣಾಧಿಕಾರಿ ಧರ್ಮೇಂದ್ರಕುಮಾರ್‌ ಮೀನಾ ಭೇಟಿಯಾಗಿ ಆರೋಗ್ಯ ವಿಚಾರಿಸಿದರು. -೨೩ಸಿಎಲ್‌ಕೆ೧:

ಚಳ್ಳಕೆರೆ ನಗರದ ಹೊರವಲಯದ ಮನೆಯಲ್ಲಿ ಚಿನ್ನಾಭರಣ ಕಳವು ಮಾಡಿದ ಘಟನೆ ಹಿನ್ನೆಲೆ ಪೊಲೀಸರು ಮನೆಯಲ್ಲಿ ಪರಿಶೀಲನೆ ನಡೆಸಿದರು.